ಬಿಜೆಪಿ-ಜೆಡಿಎಸ್‌ 19 ಸಂಸದರಿಗೆ ಅಭಿನಂದನೆ
x

ಬಿಜೆಪಿ-ಜೆಡಿಎಸ್‌ 19 ಸಂಸದರಿಗೆ ಅಭಿನಂದನೆ


ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಗೆದ್ದ ಬಿಜೆಪಿ-ಜೆಡಿಎಸ್‌ ಮೈತ್ರಿಯ ಎನ್‌ಡಿಎ ಕೂಟದ 19 ಜನ ಸಂಸದರಿಗೆ ಬಿಜೆಪಿ-ಜೆಡಿಎಸ್‌ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿರುವ ಪ್ರಲ್ಹಾದ ಜೋಷಿ, ಎಚ್‌.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಸೇರಿದಂತೆ ಎಲ್ಲಾ ಸಂಸದರಿಗೆ ಅಭಿನಂದನೆ ಸಲ್ಲಿಸಲಾಯಿತು.

ದಕ್ಷಿಣ ಭಾರತದಲ್ಲಿ ಕರ್ನಾಟಕವು ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಬಿಜೆಪಿ- ಜೆಡಿಎಸ್ ಒಟ್ಟಾಗಿರುವುದಕ್ಕೆ ರಾಜ್ಯದ ಜನರ ಆಶೀರ್ವಾದ ಲಭಿಸಿದೆ. ರಾಜ್ಯದಲ್ಲಿ 19 ಜನ ಎನ್‍ಡಿಎ ಸಂಸದರ ಆಯ್ಕೆಗೆ ಕಾರಣಕರ್ತರಾದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಕಾಂಗ್ರೆಸ್ ಪಕ್ಷದ ಸಾಕಷ್ಟು ಅಪಪ್ರಚಾರದ ನಡುವೆ, ಆಮಿಷಗಳ ನಡುವೆ ರಾಜ್ಯದ ಜನತೆ ಬಿಜೆಪಿ- ಜೆಡಿಎಸ್ ಮೈತ್ರಿಕೂಟಕ್ಕೆ ಆಶೀರ್ವಾದ ಮಾಡಿದ್ದಾರೆ. ರಾಜ್ಯದ ನೂತನ ಸಂಸದರಿಗೆ ಅಭಿನಂದನೆಗಳು ಎಂದು ಹೇಳಿದರು.

ಹಿಂದೆ ಒಂದು ಸ್ಥಾನ ಗೆದ್ದ ಕಾಂಗ್ರೆಸ್ ಪಕ್ಷ ಈಗ 9 ಸ್ಥಾನ ಗೆದ್ದಿರಬಹುದು. ಆದರೆ, ಮತ್ತೊಂದು ಕಡೆ ರಾಜ್ಯದಲ್ಲಿ 145ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುನ್ನಡೆ ಸಾಧಿಸಿವೆ. ಕಾಂಗ್ರೆಸ್ ಸಚಿವರಿರುವ ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿಗಳು ಲೀಡ್ ಪಡೆದಿದ್ದಾರೆ ಎಂದು ವಿವರಿಸಿದರು.

ಮುಂದಿನ 4 ವರ್ಷ ರಾಜ್ಯದ ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧ ನಾವು ಹೋರಾಟ ಮಾಡಬೇಕಾಗಿದೆ. ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕರ್ನಾಟಕವು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿತ್ತು. ಆದರೆ, ಕಳೆದ ಒಂದು ವರ್ಷದ ಕಾಂಗ್ರೆಸ್ ದುರಾಡಳಿತದಲ್ಲಿ ರಾಜ್ಯವು ಎಲ್ಲ ಕ್ಷೇತ್ರಗಳಲ್ಲೂ ಹಿನ್ನಡೆ ಸಾಧಿಸುವಂತಾಗಿದೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು.

ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳು ವೈಫಲ್ಯವನ್ನು ಮುಚ್ಚಿಡಲು ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ ಎಂದು ವಿವರಿಸಿದರು. ಕಾಂಗ್ರೆಸ್ ಶಾಸಕ ನಾಡಗೌಡರು ಅಭಿವೃದ್ಧಿ ಇಲ್ಲದ ಕಾರಣಕ್ಕೆ ನಿವೃತ್ತಿ ಪಡೆಯುವ ಮಾತನಾಡಿದ್ದಾರೆ ಎಂದರು.

ಗ್ಯಾರಂಟಿ ನೆಪದಲ್ಲಿ ಆದಾಯ ಮೂಲ ಹೆಚ್ಚಿಸಲು ಬೆಲೆ ಏರಿಕೆ ಮಾಡುತ್ತಿದ್ದಾರೆ. ರೈತರು ಬರಗಾಲದಿಂದ ಸಂಕಷ್ಟದಲ್ಲಿದ್ದರೂ, ಕೇಂದ್ರದಿಂದ 3,500 ಕೋಟಿ ಬರ ಪರಿಹಾರ ಕೊಟ್ಟರೂ ಸಹ ರಾಜ್ಯ ಸರಕಾರವು ರೈತರಿಗೆ ಸ್ಪಂದಿಸಿಲ್ಲ ಎಂದು ಟೀಕಿಸಿದರು. ಆಸ್ತಿ ತೆರಿಗೆ ಹೆಚ್ಚಳ, ನೋಂದಣಿ ಶುಲ್ಕ ಏರಿಕೆ, ಮೋಟಾರು ವಾಹನ ತೆರಿಗೆ ಏರಿಕೆ, ವಿದ್ಯುತ್ ದರ ಹೆಚ್ಚಳ ಮಾಡಿದ್ದಾರೆ. ಹಾಲಿನ ದರ ಜಾಸ್ತಿ ಮಾಡಿದ್ದಾರೆ. ಪೆಟ್ರೋಲ್- ಡೀಸೆಲ್ ದರ ಏರಿಸಿದ್ದಾರೆ. ಕಾಂಗ್ರೆಸ್ ಸರಕಾರ ಬಡವರ ವಿರೋಧಿ, ರೈತ ವಿರೋಧಿ, ಜನಸಾಮಾನ್ಯರಿಗೆ ಬರೆ ಎಳೆಯುವ ಸರಕಾರ ಇದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮುಂದೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬರಲಿದೆ. ಇದು ಕಾರ್ಯಕರ್ತರಿಗೆ ಶಕ್ತಿ ತುಂಬುವ ಚುನಾವಣೆ. ಇದನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕಿದೆ. ಎಲ್ಲರೂ ಶ್ರಮ ಹಾಕೋಣ. ವಿಧಾನಸಭಾ ಅಧಿವೇಶನದಲ್ಲೂ ನಾವು ಒಟ್ಟಾಗಿ, ಒಂದಾಗಿ ಕಾಂಗ್ರೆಸ್ ಸೊಕ್ಕನ್ನು ಮುರಿಯುತ್ತೇವೆ ಎಂದು ವಿಜಯೇಂದ್ರ ಅವರು ತಿಳಿಸಿದರು.

ಅಧಿವೇಶನದ ಬಳಿಕ ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಭೇಟಿ ಕೊಡಲು ಪ್ರವಾಸ ಮಾಡಲಿದ್ದೇವೆ ಎಂದು ತಿಳಿಸಿದರು. ಈ ಗೆಲುವಿಗಾಗಿ ಕಾರ್ಯಕರ್ತರಿಗೆ ಅಭಿನಂದನೆಗಳು ಎಂದರು. ನರೇಂದ್ರ ಮೋದಿಜೀ ಅವರು ರಾಜ್ಯಕ್ಕೆ 5 ಕೇಂದ್ರದ ಸಚಿವ ಸ್ಥಾನ ನೀಡಿದ್ದು, ಸಚಿವರು, ಸಂಸದರಿಂದ ರಾಜ್ಯಕ್ಕೆ ಆಗಬೇಕಾದ ಕಾರ್ಯಗಳ ಕಡೆ ಗಮನ ಕೊಡಲಾಗುವುದು ಎಂದು ತಿಳಿಸಿದರು.

ಯಡಿಯೂರಪ್ಪ ವಾಗ್ದಾಳಿ

ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾತನಾಡಿ, ಕಾಂಗ್ರೆಸ್ ಎಂದರೆ ಸುಳ್ಳು ಗ್ಯಾರಂಟಿ, ಭ್ರಷ್ಟಾಚಾರ, ದುರಾಡಳಿತ ಮತ್ತು ಅಭಿವೃದ್ಧಿಶೂನ್ಯತೆ ಎಂಬುದನ್ನು ಜನರಿಗೆ ಮನವರಿಕೆ ಮಾಡಲು ಮನವಿ ಮಾಡಿದರು.

ಸದ್ಯವೇ ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ. ನಾವು ಜೆಡಿಎಸ್ ಪಕ್ಷದ ಜೊತೆಗೂಡಿ ಇವುಗಳಲ್ಲಿ ಗೆಲುವು ಸಾಧಿಸಿ ನಮ್ಮ ಶಕ್ತಿಯನ್ನು ತೋರಿಸಬೇಕು ಎಂದು ತಿಳಿಸಿದರು. ಕಾರ್ಯಕರ್ತರ ಪರಿಶ್ರಮದಿಂದ ಈ ದೊಡ್ಡ ಸಂಖ್ಯೆಯಲ್ಲಿ ಸಂಸದರು ಆಯ್ಕೆಯಾಗಿದ್ದಾರೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಬಿಜೆಪಿ- ಜೆಡಿಎಸ್ ಹೊಂದಾಣಿಕೆಯಿಂದ ಕರ್ನಾಟಕದಲ್ಲಿ ಅಭೂತಪೂರ್ವ ಜಯವನ್ನು ಸಾಧಿಸಲಾಗಿದೆ. 20 ಸ್ಥಾನ ಗೆಲ್ಲುವುದಾಗಿ ಕಾಂಗ್ರೆಸ್ ಪಕ್ಷವು ಹೇಳುತ್ತಿತ್ತು. ಆದರೆ, ಕಾಂಗ್ರೆಸ್ ಪಕ್ಷವನ್ನು ಜನರು ಕಸದ ಬುಟ್ಟಿಗೆ ಎಸೆದಿದ್ದು, ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಪೆಟ್ರೋಲ್- ಡೀಸೆಲ್ ದರ ಏರಿಸಿದ ಕಾಂಗ್ರೆಸ್ಸಿಗೆ ಈಗ ಕೇಡುಗಾಲ ಬಂದಿದೆ ಎಂದು ಹೇಳಿದರು.

ಕೇಂದ್ರದ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ವಿಧಾನಸಭೆ ಚುನಾವಣೆ ನಡೆದು ಕೇವಲ ಒಂದು ವರ್ಷದೊಳಗೆ ಕಾಂಗ್ರೆಸ್ ಪಕ್ಷ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಅಹಂಕಾರಕ್ಕೆ ಜನರು ಸ್ಪಷ್ಟವಾದ ಕಪಾಳಮೋಕ್ಷ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು. ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಇದರಲ್ಲಿ ಕಾರ್ಯಕರ್ತರ ಪರಿಶ್ರಮಕ್ಕೆ ಧನ್ಯವಾದಗಳು ಎಂದರು. ವಾಲ್ಮೀಕಿ ನಿಗಮದ ಹಗರಣ ಸಂಬಂಧ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ರಾಜೀನಾಮೆ ಕೊಡಬೇಕಿತ್ತು ಎಂದು ತಿಳಿಸಿದರು. ಭ್ರಷ್ಟ, ಹಿಂದೂ ವಿರೋಧಿ, ಬೆಲೆ ಏರಿಕೆಗಳ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಲು ನಾವು ಶ್ರಮಿಸಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್ ಅಪಪ್ರಚಾರದ ಅಬ್ಬರದಲ್ಲೂ ಎನ್‍ಡಿಎ ಪ್ರಚಂಡ ವಿಜಯ ಸಾಧಿಸಿದೆ. ನೆಹರೂ ಅವರ ಬಳಿಕ ಸತತ ಮೂರನೇ ಬಾರಿಗೆ ಪ್ರಧಾನಿಯಾದ ವ್ಯಕ್ತಿ ನರೇಂದ್ರ ಮೋದಿಯವರು ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು. ಕೇರಳ, ಪಶ್ಚಿಮ ಬಂಗಾಲ, ದೆಹಲಿ ಮತ್ತಿತರ ಕಡೆ ಪರಸ್ಪರ ವಿರುದ್ಧ ಬಡಿದಾಡುವ ಪಕ್ಷಗಳ ಇಡೀ ಇಂಡಿ ಒಕ್ಕೂಟ ಸೇರಿ 230 ಸೀಟು ಪಡೆದಿವೆ. ಬಿಜೆಪಿಯೊಂದೇ 240 ಸ್ಥಾನಗಳನ್ನು ಪಡೆದಿದೆ ಎಂದು ವಿವರಿಸಿದರು.

ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಎಲ್ಲ ಪ್ರಭಾವ, ಹಣದ ಹೊಳೆ, ಎಲ್ಲ ಆಮಿಷಗಳ ನಡುವೆ ರಾಜ್ಯದ ಜನರು ನಮ್ಮನ್ನು ಗೆಲ್ಲಿಸಿದ್ದಾರೆ. ಮೋದಿಯವರ ನೇತೃತ್ವದಲ್ಲಿ ಸರಕಾರ ರಚನೆ ಆಗಬಾರದೆಂದು ದೇಶೀಯ ಶಕ್ತಿಗಳು ಮಾತ್ರವಲ್ಲದೆ, ವಿದೇಶೀಯ ಶಕ್ತಿಗಳೂ ಕೆಲಸ ಮಾಡಿದ್ದವು ಎಂದು ಆರೋಪಿಸಿದರು. ಅತ್ಯುತ್ಸಾಹದಿಂದ ಕೆಲಸ ಮಾಡಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು. ರಾಜ್ಯ ಸರಕಾರದ ಒಂದು ವಿಕೆಟ್ ಬಿದ್ದಿದೆ. ವಾಲ್ಮೀಕಿ ನಿಗಮದ ಹಗರಣ ಸಂಬಂಧ ಸಿಎಂ, ಡಿಸಿಎಂ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸಚಿವ ವಿ.ಸೋಮಣ್ಣ ಅವರು ಮಾತನಾಡಿ, ಈ ಗೆಲುವಿಗೆ ಬಿಜೆಪಿ ಕೊಡುಗೆ ಮಾತ್ರವಲ್ಲದೆ, ಜೆಡಿಎಸ್ ಮುಖಂಡರು, ಕಾರ್ಯಕರ್ತರ ಕೊಡುಗೆಯೂ ಇದೆ ಎಂದರು. ಸದಾ ವಂಚನೆ ಮಾಡುತ್ತಿರುವ ಕಾಂಗ್ರೆಸ್ಸಿನ ನಡೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ, ಎರಡೂ ಪಕ್ಷಗಳ ಕಾರ್ಯಕರ್ತರ ಶ್ರಮ, ನಾಡಿನ ಜನತೆಯ ಆಶೀರ್ವಾದಕ್ಕೆ ಧನ್ಯವಾದಗಳನ್ನು ತಿಳಿಸಿದರು. ನಾನು (ಕುಮಾರಸ್ವಾಮಿ) ಜನರಿಗೆ ಪರಿಚಯವಾಗಲು 2006ರಲ್ಲಿ ನನಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದ ಯಡಿಯೂರಪ್ಪನವರೇ ಕಾರಣ ಎಂದು ವಿಶ್ಲೇಷಿಸಿದರು.

ಜೆಡಿಎಸ್- ಬಿಜೆಪಿ ಮೈತ್ರಿ ಅತ್ಯಂತ ಸಹಜವಾದುದು ಎಂದು ನುಡಿದ ಅವರು, ರಾಜ್ಯದ ಜನತೆ ಬಿಜೆಪಿ- ಜೆಡಿಎಸ್ ಹೊಂದಾಣಿಕೆಯನ್ನು ಮುಕ್ತ ಮನಸ್ಸಿನಿಂದ ಒಪ್ಪಿ ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು. ವಿಶ್ವದಲ್ಲೇ ಮೋದಿಯವರ ಬಗ್ಗೆ ಅತ್ಯಂತ ಗೌರವ- ವಿಶ್ವಾಸದ ಭಾವನೆ ಇದೆ ಎಂದು ವಿವರಿಸಿದರು. ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ ಎಂಬಂತೆ ಕಾಂಗ್ರೆಸ್ ಸರಕಾರ ವರ್ತಿಸುತ್ತಿದೆ ಎಂದು ಟೀಕಿಸಿದರು.

Read More
Next Story