
ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ಮೋಜು-ಮಸ್ತಿ: ಮತ್ತೊಂದು ವಿಡಿಯೋ ವೈರಲ್
ಹೊಸ ವಿಡಿಯೋದಲ್ಲಿ ಕೈದಿಗಳು ಪ್ಲೇಟು, ಡ್ರಮ್‌ಗಳನ್ನು ಬಡಿಯುತ್ತಾ ಭರ್ಜರಿಯಾಗಿ ಸ್ಟೆಪ್ಸ್ ಹಾಕುತ್ತಿರುವುದು ಕಂಡುಬಂದಿದೆ.
ಶಂಕಿತ ಐಸಿಸ್ ಉಗ್ರ ಶಕೀಲ್ ಮತ್ತು ವಿಕೃತಕಾಮಿ ಉಮೇಶ್ ರೆಡ್ಡಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನಲಾದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಅದೇ ಜೈಲಿನ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಕೈದಿಗಳು ಮದ್ಯ ಸೇವಿಸಿ, ಕಬಾಬ್ ತಿನ್ನುತ್ತಾ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜೈಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹೊಸ ವಿಡಿಯೋದಲ್ಲಿ ಕೈದಿಗಳು ಪ್ಲೇಟು, ಡ್ರಮ್‌ಗಳನ್ನು ಬಡಿಯುತ್ತಾ ಭರ್ಜರಿಯಾಗಿ ಸ್ಟೆಪ್ಸ್ ಹಾಕುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಜೈಲು ಅಧಿಕಾರಿಗಳು, 100ಕ್ಕೂ ಹೆಚ್ಚು ಸಿಬ್ಬಂದಿಯೊಂದಿಗೆ ಜೈಲಿನ ಬ್ಯಾರಕ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಪರಿಶೀಲನೆ ವೇಳೆ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ. ಇದರಿಂದಾಗಿ, ದಾಳಿಯ ಮಾಹಿತಿ ಮುಂಚಿತವಾಗಿಯೇ ಸೋರಿಕೆಯಾಗಿರುವ ಅನುಮಾನ ದಟ್ಟವಾಗಿದೆ.
ಸರ್ಕಾರದಿಂದ ಉನ್ನತ ಮಟ್ಟದ ತನಿಖೆಗೆ ಆದೇಶ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಉನ್ನತ ಮಟ್ಟದ ತನಿಖೆಗೆ ಮುಂದಾಗಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, "ಕೈದಿಗಳಿಗೆ ನಿಯಮಬಾಹಿರವಾಗಿ ವಿಶೇಷ ಸವಲತ್ತು ನೀಡಿರುವ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ರಾಜ್ಯದ ಕಾರಾಗೃಹಗಳಲ್ಲಿನ ಐಷಾರಾಮಿ ಜೀವನದ ಕುರಿತು ಪರಿಶೀಲನೆಗೆ ಸಮಿತಿಯೊಂದನ್ನು ರಚಿಸಿ, ವರದಿ ಬಂದ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಈ ಸಂಬಂಧ ಸೋಮವಾರ ಅಧಿಕಾರಿಗಳ ಸಭೆ ಕರೆದಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಯಾರು ಈ ಶಂಕಿತ ಉಗ್ರ ಶಕೀಲ್?
ಬೆಂಗಳೂರಿನ ತಿಲಕ್‌ನಗರ ನಿವಾಸಿಯಾದ ಜುಹಾದ್ ಹಮೀದ್ ಶಕೀಲ್, 'ಇಕ್ರಾ ಸರ್ಕಲ್' ಎಂಬ ಆನ್‌ಲೈನ್ ಗ್ರೂಪ್ ಮೂಲಕ ಮೂಲಭೂತವಾದಿ ಯುವಕರನ್ನು ಐಸಿಸ್ ಉಗ್ರ ಸಂಘಟನೆಗೆ ನೇಮಕ ಮಾಡುತ್ತಿದ್ದ ಆರೋಪ ಎದುರಿಸುತ್ತಿದ್ದಾನೆ. 2020ರಲ್ಲಿ ಸೌದಿ ಅರೇಬಿಯಾದಲ್ಲಿ ಬಂಧಿತನಾಗಿ, 2022ರಲ್ಲಿ ಭಾರತಕ್ಕೆ ಗಡೀಪಾರಾಗಿದ್ದ ಈತ, ಕಳೆದ ಮೂರು ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಶಿಕ್ಷೆಗೆ ಗುರಿಯಾಗಿರುವ ಇಂತಹ ಕೈದಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ಸಿಕ್ಕಿರುವುದು ಕಾನೂನು ಸುವ್ಯವಸ್ಥೆಯ ಬಗ್ಗೆಯೇ ಅನುಮಾನ ಮೂಡಿಸಿದೆ.

