ಬಾಬ್ರಿ ಮಸೀದಿ ಮರು ನಿರ್ಮಿಸಲು ಮುಂದಾಗಿದ್ದ ನೆಹರು; ರಕ್ಷಣಾ ಸಚಿವರ ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು
x

ರಾಜನಾಥ ಸಿಂಗ್‌, ಜವಾಹಾರ್‌ ಲಾಲ್‌ ನೆಹರು

ಬಾಬ್ರಿ ಮಸೀದಿ ಮರು ನಿರ್ಮಿಸಲು ಮುಂದಾಗಿದ್ದ ನೆಹರು; ರಕ್ಷಣಾ ಸಚಿವರ ಆರೋಪಕ್ಕೆ ಕಾಂಗ್ರೆಸ್‌ ತಿರುಗೇಟು

ಡಿ.2ರಂದು ವಡೋದರದಲ್ಲಿ ಸರ್ದಾರ್ ಪಟೇಲ್ ಅವರ 150ನೇ ಜನುಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ 'ಏಕತಾ ಪಥ ಸಂಚಲನʼ ಕಾರ್ಯಕ್ರಮದಲ್ಲಿ ರಾಜನಾಥ್‌ ಸಿಂಗ್ ಈ ಆರೋಪ ಮಾಡಿದ್ದರು. ಇದಕ್ಕೆ ಡಿ.3 ರಂದು ಕಾಂಗ್ರೆಸ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.


ಅಯೋಧ್ಯೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ 33 ವರ್ಷ ತುಂಬುತ್ತಿರುವ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತದ ಪ್ರಥಮ ಪ್ರಧಾನಿ ಜವಹಾರ್ ಲಾಲ್ ನೆಹರು ವಿರುದ್ಧ ಗಂಭೀರ ಆರೋಪ ಹೊರಿಸಿದ್ದು, ರಾಜಕೀಯ ಕೋಲಾಹಲ ಸೃಷ್ಟಿಸಿದೆ.

ಜವಹಾರ್‌ ಲಾಲ್‌ ನೆಹರು ಅವರು ಶಿಥಿಲಾವಸ್ಥೆಯಲ್ಲಿದ್ದ ಬಾಬ್ರಿ ಮಸೀದಿಯನ್ನು ನವೀಕರಿಸಲು ಅಥವಾ ಮರು ನಿರ್ಮಿಸಲು ಸಾರ್ವಜನಿಕ‌ ನಿಧಿ ಸಂಗ್ರಹಕ್ಕೆ ಮುಂದಾಗಿದ್ದರು. ಆದರೆ, ಅಂದಿನ ಉಪಪ್ರಧಾನಿಯೂ ಆಗಿದ್ದ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅದನ್ನು ತಡೆದಿದ್ದರು ಎಂದು ರಾಜನಾಥ್‌ ಸಿಂಗ್‌ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ರಾಜನಾಥ್‌ ಸಿಂಗ್ ಮಾಡಿರುವ ಆರೋಪಕ್ಕೆ ಯಾವುದೇ ಆಧಾರ ಅಥವಾ ದಾಖಲೆಗಳಿಲ್ಲ ಎಂದು ಪ್ರತಿಕ್ರಿಯಿಸಿದೆ. ಡಿ.2ರಂದು ವಡೋದರದಲ್ಲಿ ಸರ್ದಾರ್ ಪಟೇಲ್ ಅವರ 150ನೇ ಜನುಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ 'ಏಕತಾ ಪಥ ಸಂಚಲನʼ ಕಾರ್ಯಕ್ರಮದಲ್ಲಿ ರಾಜನಾಥ್‌ ಸಿಂಗ್ ಈ ಆರೋಪ ಮಾಡಿದ್ದರು. ಇದಕ್ಕೆ ಡಿ.3 ರಂದು ಕಾಂಗ್ರೆಸ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

ರಾಜನಾಥ್‌ ಸಿಂಗ್‌ ಹೇಳಿದ್ದೇನು?

“ಪಂಡಿತ್ ಜವಾಹರಲಾಲ್ ನೆಹರು ಅವರು ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಸಾರ್ವಜನಿಕ ದೇಣಿಗೆ ಸಂಗ್ರಹಿಸಿ ಮರು ನಿರ್ಮಿಸಲು ಬಯಸಿದ್ದರು. ಇದಕ್ಕೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಾರ್ವಜನಿಕ ದೇಣಿಗೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡಿರಲಿಲ್ಲ” ಎಂದು ಆರೋಪ ಮಾಡಿದ್ದರು.

ನೆಹರು ಅವರು ಸೋಮನಾಥ ದೇವಾಲಯದ ಪುನರ್‌ ನಿರ್ಮಾಣದ ವಿಷಯ ಪ್ರಸ್ತಾಪಿಸಿದಾಗ ಪಟೇಲ್‌ ಅವರು ಖಡಕ್‌ ಉತ್ತರ ನೀಡಿದ್ದರು. ಅಯೋಧ್ಯೆಯ ವಿಷಯವೇ ಬೇರೆ, ಸೋಮನಾಥ ದೇವಾಲಯದ್ದೇ ಬೇರೆ. ಸೋಮನಾಥ ದೇವಾಲಯಕ್ಕಾಗಿ ಭಕ್ತರೇ 30ಲಕ್ಷ ರೂ. ದೇಣಿಗೆ ನೀಡಿದ್ದರು. ಒಂದು ಒಂದು ಪೈಸೆಯನ್ನು ಸರ್ಕಾರದಿಂದ ಪಡೆದಿರಲಿಲ್ಲ. ದೇವಾಲಯ ಮರು ನಿರ್ಮಾಣಕ್ಕಾಗಿ ಟ್ರಸ್ಟ್ ಸ್ಥಾಪಿಸಲಾಗಿತ್ತು. ಅದೇ ರೀತಿ, ಅಯೋಧ್ಯೆಯ ರಾಮ ಮಂದಿರಕ್ಕೂ ಸರ್ಕಾರದಿಂದ ಒಂದು ರೂ. ನೆರವು ಪಡೆದಿಲ್ಲ. ಅದರ ಸಂಪೂರ್ಣ ವೆಚ್ಚವನ್ನು ದೇಶದ ಜನರೇ ವಹಿಸಿಕೊಂಡಿದ್ದರು. ಇದೇ ನಿಜವಾದ ಧರ್ಮನಿರಪೇಕ್ಷತೆ ಎಂದು ರಾಜನಾಥ್ ಸಿಂಗ್ ಹೇಳಿದ್ದರು.

ಮೊಘಲ್ ದೊರೆ ಬಾಬರ್ 16ನೇ ಶತಮಾನದಲ್ಲಿ ನಿರ್ಮಿಸಿದ ಈ ಮಸೀದಿಯನ್ನು 1992ರ ಡಿ.6ರಂದು ಸಂಘ ಪರಿವಾರ ಹಾಗೂ ಹಿಂದೂ ಕಾರ್ಯಕರ್ತರು ಧ್ವಂಸ ಮಾಡಿದ್ದರು. ಸಾಕಷ್ಟು ಕಾನೂನು ಹೋರಾಟಗಳ ಬಳಿಕ ಅಯೋಧ್ಯೆ ರಾಮಮಂದಿರ ನಿರ್ಮಾಣ ಆರಂಭವಾಯಿತು. 2024 ಜನವರಿ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ರಾಮಮಂದಿರ ಲೋಕಾರ್ಪಣೆ ಮಾಡಿತು.

ಯಾವುದೇ ದಾಖಲೆ, ಆಧಾರ ಇಲ್ಲ: ಕಾಂಗ್ರೆಸ್

ಕಾಂಗ್ರೆಸ್ ಪಕ್ಷದ ತಮಿಳುನಾಡು ಸಂಸದ ಮಾನಿಕ್ಕಂ ಠಾಕೂರ್ ಅವರು ಬುಧವಾರ ಎಕ್ಸ್‌ ಖಾತೆಯಲ್ಲಿ ರಾಜನಾಥ್‌ ಸಿಂಗ್‌ ಹೇಳಿಕೆಯನ್ನು ಖಂಡಿಸಿದ್ದಾರೆ. ರಕ್ಷಣಾ ಸಚಿವರ ಆರೋಪಕ್ಕೆ ಯಾವುದೇ ದಾಖಲೆಯಾಗಲಿ, ಆಧಾರವಾಗಲಿ ಇಲ್ಲ ಅವರು ಕಿಡಿಕಾರಿದ್ದಾರೆ.

"ನೆಹರು ಅವರು ಕೂಡ ಸರ್ಕಾರದ ಹಣವನ್ನು ದೇವಾಲಯಗಳ ಪುನರ್ನಿರ್ಮಾಣ, ಜೀರ್ಣೋದ್ಧಾರಕ್ಕೆ ಬಳಸುವುದನ್ನು ಸ್ಪಷ್ಟವಾಗಿ ವಿರೋಧಿಸಿದ್ದರು. ಇಂತಹ ಕೆಲಸಗಳನ್ನು ಸಾರ್ವಜನಿಕ ದೇಣಿಗೆಗಳಿಂದಲೇ ಮಾಡಬೇಕು ಎಂಬ ನಿಲುವು ಹೊಂದಿದ್ದರು ಎಂದು ಹೇಳಿದ್ದಾರೆ.

"ನೆಹರು ಅವರು ಸೋಮನಾಥ ದೇವಾಲಯಕ್ಕೆ ಸಾರ್ವಜನಿಕರ ದೇಣಿಗೆ ಬಳಸುವುದನ್ನು ನಿರಾಕರಿಸಿದ್ದರೆ ಬಾಬ್ರಿ ಮಸೀದಿಗೆ ತೆರಿಗೆದಾರರ ಹಣ ಬಳಸಲು ಹೇಗೆ ಒಪ್ಪುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.

ರಾಜನಾಥ್ ಸಿಂಗ್ ಅವರ ಹೇಳಿಕೆಯು ಇತಿಹಾಸಕ್ಕಿಂತ ರಾಜಕೀಯಕ್ಕೆ ಸಂಬಂಧಿಸಿದೆ. ಸಮಾಜವನ್ನು ವಿಭಜಿಸಲು ಭೂತಕಾಲವನ್ನು ಮರು ಬರೆಯುವ ಪ್ರಯತ್ನ ನಡೆಸಿದ್ದಾರೆ. ಇಡೀ ಬಿಜೆಪಿ ಪಕ್ಷದ ತಂತ್ರವೇ ದೇಶಕ್ಕಾಗಿ ಹೋರಾಡಿದವರನ್ನು ಅವಹೇಳನ ಮಾಡುವುದು, ಸುಳ್ಳು ಹೇಳುವುದು ಮತ್ತು ಧ್ರುವೀಕರಣಕ್ಕೆ ಉತ್ತೇಜಿಸುವುದು ಎಂದು ಠಾಕೂರ್‌ ಆರೋಪಿಸಿದ್ದಾರೆ.

ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರು 1950ರಲ್ಲಿ ನಿಧನರಾದ ನಂತರ ಅವರ ಸ್ಮಾರಕ ನಿರ್ಮಾಣಕ್ಕೆ ಸಂಗ್ರಹಿಸಿದ ಹಣವನ್ನು ನೆಹರು ಅವರು ರಸ್ತೆ, ಬಾವಿ ಮೊದಲಾದ ಸಾರ್ವಜನಿಕ ಕಾಮಗಾರಿಗಳಿಗೆ ಬಳಸಲು ಬಯಸಿದ್ದರು ಎಂಬ ರಾಜನಾಥ್‌ ಸಿಂಗ್ ಆರೋಪವನ್ನು ಠಾಕೂರ್‌ ತಳ್ಳಿ ಹಾಕಿದ್ದಾರೆ.

ನೆಹರು ಹಾಗೂ ಪಟೇಲ್ ನಡುವೆ ಸ್ನೇಹಪೂರ್ಣ ಸಂಬಂಧವಿತ್ತು. ಧಾರ್ಮಿಕ ಸ್ಥಳಗಳಿಗಾಗಿ ಸಾರ್ವಜನಿಕರ ಹಣ ಬಳಸಬಾರದು ಎಂಬುದು ನೆಹರು ಅವರ ಸ್ಪಷ್ಟ ನಿಲುವಾಗಿತ್ತು ಎಂದಿದ್ದಾರೆ.

Read More
Next Story