
ನೇಹಾ ಕೊಲೆ ಪ್ರಕರಣ | ತನಿಖೆ ದಿಕ್ಕು ತಪ್ಪುತ್ತಿದೆ ಎಂದಿದ್ದ ತಂದೆ ಕ್ಷಮೆಯಾಚನೆ
'ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಭಾವಿಸಿ, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಕಮಿಷನರ್ ವಿರುದ್ಧ ಮಾತನಾಡಿದ್ದೆ. ನನ್ನಿಂದಾದ ತಪ್ಪಿಗೆ ಕ್ಷಮೆ ಕೇಳುತ್ತಿದ್ದೇನೆ' ನಿರಂಜನಯ್ಯ ಹಿರೇಮಠ ಹೇಳಿದ್ದಾರೆ.
ಹುಬ್ಬಳ್ಳಿ: ಮಗಳು ನೇಹಾಳ ಹತ್ಯೆ ಪ್ರಕರಣದ ತನಿಖೆಯ ದಾರಿ ತಪ್ಪಿಸುವ ಕೆಲಸ ಆಡಳಿತ ಪಕ್ಷದವರಿಂದಲೇ ನಡೆಯುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದ ಮೃತ ಯುವತಿಯ ತಂದೆ ನಿರಂಜನಯ್ಯ ಹಿರೇಮಠ ಅವರು, ತಮ್ಮ ಹೇಳಿಕೆಗಾಗಿ ಇದೀಗ ಕ್ಷಮೆಯಾಚಿಸಿದ್ದಾರೆ.
'ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಭಾವಿಸಿ, ರಾಜ್ಯ ಸರ್ಕಾರ ಹಾಗೂ ಪೊಲೀಸ್ ಕಮಿಷನರ್ ವಿರುದ್ಧ ಮಾತನಾಡಿದ್ದೆ. ನನ್ನಿಂದಾದ ತಪ್ಪಿಗೆ ಕ್ಷಮೆ ಕೇಳುತ್ತಿದ್ದೇನೆ' ನಿರಂಜನಯ್ಯ ಹಿರೇಮಠ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮಗಳು ಕೊಲೆಯಾದ ನಂತರ ನಾನು ದುಃಖದಲ್ಲಿ ಇದ್ದೆ. ಮಗಳ ಅಂತ್ಯಕ್ರಿಯೆವರೆಗೂ ನನ್ನ ಜೊತೆಯಲ್ಲಿದ್ದ ನನ್ನವರು, ನಂತರ ಕಂಡಿರಲಿಲ್ಲ. ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದು ಭಾವಿಸಿ, ಮಾಹಿತಿಯ ಕೊರತೆಯಿಂದ ಸರ್ಕಾರದ ವಿರುದ್ಧ ಮಾತನಾಡಿದ್ದೆ. ಪ್ರಕರಣ ಕುರಿತು ಎಲ್ಲ ಮಾಹಿತಿಯನ್ನು ನಮ್ಮ ಪಕ್ಷದವರೇ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಒದಗಿಸಿದ್ದಾರೆ ಎಂದು ಸೋಮವಾರ (ಏ.22) ತಿಳಿಯಿತು. ನನ್ನಿಂದ ತಪ್ಪಾಗಿದೆ ಕ್ಷಮಿಸಿ' ಎಂದಿದ್ದಾರೆ.
'ನಮ್ಮ ಪಕ್ಷದವರು ತೆರೆಮರೆಯಲ್ಲಿ ನನ್ನ ಮಗಳಿಗೆ ನ್ಯಾಯ ಕೊಡಿಸುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಪ್ರಕರಣ ಸಿಐಡಿಗೆ ವಹಿಸುವಲ್ಲಿಯೂ ಅವರ ಪಾತ್ರ ಪ್ರಮುಖವಾಗಿದೆ. ಪೊಲೀಸ್ ಕಮಿಷನರ್ ಅವರು ಸಹ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಅವರ ವಿರುದ್ಧವೂ ನಾನು ಅಸಮಾಧಾನ ವ್ಯಕ್ತಪಡಿಸಿದ್ದೆ. ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದ ನಾನು ಏನೇ ತಪ್ಪು ಮಾತನಾಡಿದರೂ ಅನ್ಯಥಾ ಭಾವಿಸಬಾರದು. ನನ್ನಿಂದಾದ ತಪ್ಪಿಗೆ ಎಲ್ಲರಿಂದಲೂ ಕ್ಷಮೆ ಕೇಳುತ್ತಿದ್ದೇನೆ' ಎಂದು ಹೇಳಿದರು.
ಸಚಿವ ಎಚ್.ಕೆ. ಪಾಟೀಲ, ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಶಾಸಕ ಪ್ರಸಾದ ಅಬ್ಬಯ್ಯ ಮತ್ತು ಮಹೇಂದ್ರ ಸಿಂಘಿ ಇದ್ದರು.