ನೇಹಾ ಹತ್ಯೆ ಪ್ರಕರಣ: 483 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ
x

ನೇಹಾ ಹತ್ಯೆ ಪ್ರಕರಣ: 483 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ


ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನಯ್ಯ ಹಿರೇಮಠ ಎಂಬವರ ಪುತ್ರಿ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಮತ್ತು 3ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ 483 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಏ.18ರಂದು ಹುಬ್ಬಳ್ಳಿಯ ವಿದ್ಯಾನಗರದ ಪ್ರತಿಷ್ಠಿತ ಕಾಲೇಜಿನ ಆವರಣದಲ್ಲಿ ಸವದತ್ತಿ ಮೂಲದ ಫಯಾಜ್ ಎಂಬಾತ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಚಾಕುವಿನಿಂದ ನೇಹಾಗೆ ಇರಿದು ಕೊಲೆ ಮಾಡಿದ್ದನು. ವಿದ್ಯಾನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಆರೋಪಿ ಫಯಾಜ್‌ ಪೊಲೀಸ್ ವಿಚಾರಣೆಯ ವೇಳೆ ಪ್ರೀತಿ ನಿರಾಕರಿಸಿದ್ದರಿಂದ ಸಿಟ್ಟಾಗಿ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದನು. ಈ ಘಟನೆಯನ್ನು ಖಂಡಿಸಿ ಸಾರ್ವಜನಿಕರು, ವಿವಿಧ ಸಂಘಟನೆಗಳು ಹಾಗೂ ಬಿಜೆಪಿಯಿಂದ ತೀವ್ರ ಪ್ರತಿಭಟನೆ ನಡೆದಿತ್ತು. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಸೇರಿದಂತೆ ಕೊಲೆಯಾದ ನೇಹಾಳ ತಂದೆ ಒತ್ತಾಯಿಸಿದ್ದರು.

ರಾಜ್ಯ ಸರ್ಕಾರವು ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಸಿಐಡಿ ಎಸ್‌ಪಿ ಎನ್.ವೆಂಕಟೇಶ ನೇತೃತ್ವದಲ್ಲಿ ಸುಮಾರು 2 ತಿಂಗಳು 20 ದಿನಗಳವರೆಗೆ ತನಿಖೆ ನಡೆದಿದೆ. ಇದೀಗ ಡಿವೈಎಸ್‌ಪಿ ಎನ್.ಎಚ್.ಪೈಕ್ ಅವರು ಸ್ಥಳೀಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

Read More
Next Story