
ಸಕ್ರೆಬೈಲಿನ ದಸರಾ ಆನೆ 'ಬಾಲಣ್ಣ'ನಿಗೆ ಚಿಕಿತ್ಸೆ ವೇಳೆ ನಿರ್ಲಕ್ಷ್ಯ: ತನಿಖೆಗೆ ಈಶ್ವರ ಖಂಡ್ರೆ ಆದೇಶ
ಸಕ್ರೆಬೈಲು ಆನೆ ಶಿಬಿರದ 35 ವರ್ಷದ 'ಬಾಲಣ್ಣ' ಆನೆಯನ್ನು ಇತ್ತೀಚೆಗೆ ನಡೆದ ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಕಳುಹಿಸಲಾಗಿತ್ತು. ಅಲ್ಲದೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಆನೆಗೆ ಸೋಂಕು ತಗುಲಿದೆ.
ಶಿವಮೊಗ್ಗ ದಸರಾ ಮಹೋತ್ಸವದಲ್ಲಿ ಭಾಗವಹಿಸಿ ಗಾಯಗೊಂಡಿದ್ದ ಸಕ್ರೆಬೈಲು ಶಿಬಿರದ 'ಬಾಲಣ್ಣ' ಎಂಬ ಆನೆಗೆ ಚಿಕಿತ್ಸೆ ನೀಡುವಲ್ಲಿ ತೀವ್ರ ನಿರ್ಲಕ್ಷ್ಯ ತೋರಲಾಗಿದ್ದು, ಇದರಿಂದ ಆನೆಗೆ ಸೋಂಕು ತಗುಲಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ, ಘಟನೆಗೆ ಕಾರಣರಾದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಒಂದು ವಾರದೊಳಗೆ ಶಿಸ್ತು ಕ್ರಮದ ಶಿಫಾರಸಿನೊಂದಿಗೆ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ
ಸಕ್ರೆಬೈಲು ಆನೆ ಶಿಬಿರದ 35 ವರ್ಷದ 'ಬಾಲಣ್ಣ' ಆನೆಯನ್ನು ಇತ್ತೀಚೆಗೆ ನಡೆದ ಶಿವಮೊಗ್ಗ ದಸರಾ ಮಹೋತ್ಸವಕ್ಕೆ ಕಳುಹಿಸಲಾಗಿತ್ತು. ಆ ಸಂದರ್ಭದಲ್ಲಿ ಗಾಯಗೊಂಡಿದ್ದ ಆನೆಗೆ ಚಿಕಿತ್ಸೆಗಾಗಿ ಚುಚ್ಚುಮದ್ದು ನೀಡುವಾಗ ತೋರಿದ ನಿರ್ಲಕ್ಷ್ಯದಿಂದಾಗಿ ಆನೆಗೆ ಸೋಂಕು ತಗುಲಿ ಅದು ನರಳುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಜೊತೆಗೆ, 'ಸಾಗರ್' ಎಂಬ ಮತ್ತೊಂದು ಆನೆ ಸೇರಿದಂತೆ ಶಿಬಿರದ ಒಟ್ಟು ನಾಲ್ಕು ಆನೆಗಳು ಗಾಯಗಳಿಂದ ಬಳಲುತ್ತಿವೆ ಮತ್ತು ಶಿಬಿರದಲ್ಲಿ ಪಶುವೈದ್ಯರ ಕೊರತೆ ಇದೆ ಎಂದು ವರದಿಗಳು ಬೆಳಕು ಚೆಲ್ಲಿದ್ದವು.
ಸಚಿವರ ಸೂಚನೆಯಲ್ಲಿ ಏನಿದೆ?
"ಈ ವಿಷಯವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಬಾಲಣ್ಣ ಆನೆಗೆ ಚುಚ್ಚುಮದ್ದು ನೀಡುವ ವೇಳೆ ವೈದ್ಯಾಧಿಕಾರಿ, ಅಧಿಕಾರಿ ಮತ್ತು ಸಿಬ್ಬಂದಿಯಿಂದ ನಿರ್ಲಕ್ಷ್ಯ ಆಗಿದ್ದರೆ, ಅವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಿ ಒಂದು ವಾರದೊಳಗೆ ಸಮಗ್ರ ವರದಿಯನ್ನು ಈ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕು," ಎಂದು ಸಚಿವರು ಆದೇಶಿಸಿದ್ದಾರ.
ರಾಜ್ಯದ ಯಾವುದೇ ಆನೆ ಶಿಬಿರಗಳು ಮತ್ತು ಮೃಗಾಲಯಗಳಲ್ಲಿ ಸಮರ್ಪಿತ ವೈದ್ಯಾಧಿಕಾರಿಗಳು ಇರಲೇಬೇಕು. ವೈದ್ಯರ ಕೊರತೆ ಇದ್ದರೆ ಗುತ್ತಿಗೆ ಆಧಾರದ ಮೇಲೆ ಅಥವಾ ನಿಯೋಜನೆಯ ಮೂಲಕ ತಕ್ಷಣವೇ ನೇಮಕ ಮಾಡಿಕೊಳ್ಳಬೇಕೆಂದು ಈ ಹಿಂದೆ ನಡೆದ ಹಲವು ಸಭೆಗಳಲ್ಲಿ ತಾನು ಸೂಚಿಸಿದ್ದನ್ನು ಸಚಿವರು ಆದೇಶದಲ್ಲಿ ಹೇಳಿದ್ದಾರೆ.