
ಎನ್‌ಸಿಆರ್‌ಬಿ ವರದಿ| ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ: ಬಿಜೆಪಿ ಜಾಹೀರಾತು ಮೂಲಕ ವ್ಯಂಗ್ಯ
ರಾಜ್ಯದಲ್ಲಿ ಜನವರಿಯಿಂದ ಏಪ್ರಿಲ್ 30ರವರೆಗೆ ಸುಮಾರು 430 ಕೊಲೆಗಳು ಹಾಗೂ 198 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಅಂಕಿ-ಅಂಶಗಳಿಂದ ಗೊತ್ತಾಗುತ್ತಿದೆ. ಇದು ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗಿದೆ.
ಈ ವಿಚಾರವಾಗಿ ರಾಜ್ಯ ಬಿಜೆಪಿ ಫೇಸ್‌ಬುಕ್‌ನಲ್ಲಿ ಸರಣಿ ಪೋಸ್ಟ್ ಮಾಡುತ್ತಿದ್ದು, ʻʻಕರುನಾಡಿನ ಶಾಂತಿಗೆ ಬೆಂಕಿ ಬಿದ್ದಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರು, ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡುವುದಕ್ಕೆ ಗ್ಯಾರಂಟಿ ಕೊಡುವ ದಕ್ಷ ಗೃಹ ಸಚಿವರು ಬೇಕಾಗಿದ್ದಾರೆʼʼ ಎಂದು ಬರೆದು ಖಾಲಿ ಚೇರ್‌ವೊಂದನ್ನು ಪೋಸ್ಟ್ ಮಾಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ʻʻಅಪರಾಧಿಗಳಿಗೆ ಶ್ರೀರಕ್ಷೆ - ಅಮಾಯಕರಿಗೆ ಶಿಕ್ಷೆ. ಇದೇ ಕಾಂಗ್ರೆಸ್ ಸರ್ಕಾರದ ಆಡಳಿತ ಧ್ಯೇಯ. ರಕ್ತ ಸಿಕ್ತ "ಕೈ"ನಿಂದ ಕರ್ನಾಟಕದ ಕಾನೂನು ಸುವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಅಪರಾಧ ಕೃತ್ಯಗಳು ಜರುಗಿವೆʼʼ ಎಂದು ಪೋಸ್ಟ್ ಮಾಡಿದ್ದಾರೆ.