Naxal-Free Karnataka | ರಕ್ತ ಚರಿತೆಯಲಿ ಮುಳುಗಿದವರು ʼಚೋಮನ ಮಕ್ಕಳುʼ
ಮಲೆನಾಡಿನ ನಕ್ಸಲ್ ಚರಿತ್ರೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಯುವಕ-ಯುವತಿಯರ ಪಟ್ಟಿಯ ಮೇಲೆ ಕಣ್ಣಾಡಿಸಿದರೂ ಒಬ್ಬಿಬ್ಬರನ್ನು ಹೊರತುಪಡಿಸಿ ಬಹುತೇಕ ಎಲ್ಲರೂ ಗೌಡ್ಲು, ಬಿಲ್ಲವ, ನೇಕಾರ, ಮುಸ್ಲಿಂ ಮುಂತಾದ ಸಮುದಾಯಗಳ ʼಚೋಮನ ಮಕ್ಕಳೇʼ ಜೀವ ತೆತ್ತಿರುವುದು ಕಣ್ಣಿಗೆ ರಾಚುತ್ತದೆ
ಬುಧವಾರ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಆರು ಮಂದಿ ನಕ್ಸಲರು ಶಸ್ತ್ರ ತ್ಯಜಿಸಿ ಶರಣಾಗುವ ಮೂಲಕ ಕರ್ನಾಟಕದ ʼರಕ್ತಸಿಕ್ತʼ ನಕ್ಸಲ್ ಚರಿತ್ರೆಗೆ ತೆರೆಬಿದ್ದಿದೆ.
ಮೂರು ದಶಕಗಳ ಕಾಲ ರಾಜ್ಯದ ಮಲೆನಾಡಿನ ಹಚ್ಚಹಸಿರಿನ ಕಣಿವೆಯ ತಣ್ಣನೆಯ ಬದುಕಿಗೆ ಸಂಘರ್ಷದ ಬೆಂಕಿ ಹಚ್ಚಿದ್ದ ನಕ್ಸಲ್ ಚಳವಳಿಯ ʼರಕ್ತ ಚರಿತ್ರೆʼ ಮಾವೋವಾದಿಗಳು, ಪೊಲೀಸರು ಹಾಗೂ ನಾಗರಿಕರು ಸೇರಿದಂತೆ 25ಕ್ಕೂ ಹೆಚ್ಚು ಮಂದಿಯ ಜೀವಬಲಿ ತೆಗೆದುಕೊಂಡಿದೆ. ನೂರಾರು ಕುಟುಂಬಗಳು ಬೀದಿಪಾಲಾಗಿವೆ.
ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿ ಪ್ಯಾಕೇಜ್‌ನಂತಹ ಸರ್ಕಾರದ ಅನುದಾನಗಳಿಂದ ಮಲೆನಾಡಿನ ಕುಗ್ರಾಮಗಳು ಕನಿಷ್ಟ ಮೂಲಸೌಕರ್ಯಗಳನ್ನು ಪಡೆದವು ಎಂಬುದು ಮಲೆನಾಡಿಗರಿಗೆ ನಕ್ಸಲ್ ಚಳವಳಿಯಿಂದ ಆದ ಅನುಕೂಲ ಎಂಬ ವಾದವಿದೆ. ಅದೇ ಹೊತ್ತಿಗೆ, ಎಂಬತ್ತು- ತೊಂಬತ್ತರ ದಶಕದಲ್ಲಿ ಆಗ ತಾನೆ ಶಿಕ್ಷಣಕ್ಕೆ ತೆರೆದುಕೊಂಡಿದ್ದ ಮಲೆನಾಡಿನ ಆದಿವಾಸಿಗಳು, ಬುಡಕಟ್ಟು ಸಮುದಾಯ, ದಲಿತರು ಮತ್ತು ಕುಗ್ರಾಮಗಳ ಹಿಂದುಳಿದ ಸಮುದಾಯಗಳ ಪ್ರತಿಭಾವಂತ ಯುವಕ- ಯುವತಿಯರನ್ನು ಈ ಚಳವಳಿ ಹೆಸರಲ್ಲಿ ದಿಕ್ಕುತಪ್ಪಿಸಿ, ಜನಪರ ಕಾಳಜಿಯ ಅವರ ಮನಸ್ಥಿತಿಯನ್ನೇ ಬಳಸಿಕೊಂಡು ಕೈಗೆ ಬಂದೂಕು ಕೊಟ್ಟು ವ್ಯವಸ್ಥೆಯ ವಿರುದ್ಧ ಬಂಡಾಯ ಸಾರಲಾಯಿತು ಎಂಬುದು ಕೂಡ ತಳ್ಳಿಹಾಕಲಾಗದ ವಾಸ್ತವ.
ಅದರಲ್ಲೂ “ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಿಂದಾಗಿ ತಮ್ಮ ಆಸ್ತಿ- ಮನೆ ಕಳೆದುಕೊಂಡು ಎತ್ತಂಗಡಿಯಾಗುವ ಆತಂಕದಲ್ಲಿದ್ದ ಚಿಕ್ಕಮಗಳೂರು, ಉಡುಪಿ, ದಕ್ಷಿಣಕನ್ನಡ ಜಿಲ್ಲೆಗಳ ಉದ್ಯಾನವನ ವ್ಯಾಪ್ತಿಯ ಆದಿವಾಸಿಗಳು, ದಲಿತರು ಮತ್ತು ಶೂದ್ರ ವರ್ಗಗಳ ಯುವಕ- ಯುವತಿಯರಿಗೆ ಸರ್ಕಾರದ ಧೋರಣೆಯ ವಿರುದ್ಧ ತಮ್ಮ ಪ್ರತಿರೋಧ ತೋರಲು ನಾಗರಿಕ ಹೋರಾಟದ, ಪ್ರತಿಭಟನೆಯ ಅವಕಾಶಗಳಿದ್ದರೂ, ನಕ್ಸಲ್ ಹೋರಾಟಗಾರರು ಅಂತಹ ಅವಕಾಶಗಳ ಬಾಗಿಲು ಮುಚ್ಚಿ ಶಸಸ್ತ್ರ ಹೋರಾಟವೊಂದೇ ಸಮಸ್ಯೆಗೆ ಪರಿಹಾರ ಎಂಬ ತೀವ್ರಗಾಮಿ ಯೋಚನೆಗಳನ್ನು ಬಿತ್ತಿದರು. ಆ ಮೂಲಕ ಮಲೆನಾಡಿನಲ್ಲಿ ತಮ್ಮ ನೆಲೆ ಕಂಡುಕೊಂಡರು” ಎನ್ನುತ್ತಾರೆ ಶಿವಮೊಗ್ಗದ ಹಿರಿಯ ಪತ್ರಕರ್ತರೊಬ್ಬರು.
ಹಾಗೆ ನೋಡಿದರೆ, ಮಲೆನಾಡಿನ ನಕ್ಸಲ್ ಚರಿತ್ರೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಯುವಕ-ಯುವತಿಯರ ಪಟ್ಟಿಯ ಮೇಲೆ ಕಣ್ಣಾಡಿಸಿದರೂ ಒಬ್ಬಿಬ್ಬರನ್ನು ಹೊರತುಪಡಿಸಿ ಬಹುತೇಕ ಎಲ್ಲರೂ ಗೌಡ್ಲು, ಬಿಲ್ಲವ, ನೇಕಾರ, ಮುಸ್ಲಿಂ ಮುಂತಾದ ಸಮುದಾಯಗಳ ʼಚೋಮನ ಮಕ್ಕಳೇʼ ಜೀವ ತೆತ್ತಿರುವುದು ಕಣ್ಣಿಗೆ ರಾಚುತ್ತದೆ.
ಮಲೆನಾಡಿನಲ್ಲಿ ಈವರೆಗೆ 15 ಮಂದಿ ನಕ್ಸಲರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. 2003ರಿಂದ 2024ರವರೆಗೆ ಬರೋಬ್ಬರಿ ಇಪ್ಪತ್ತು ವರ್ಷಗಳ ಕಾಲ ಮಲೆನಾಡಿನ ಕಣಿವೆಗಳಲ್ಲಿ ನಡೆದ ಈ ಗುಂಡಿನ ಮೊರೆತಕ್ಕೆ ಗುಂಡಿಗೆಯೊಡ್ಡಿದವರು ಅಮಾಯಕ ಸಮುದಾಯಗಳ ಮಕ್ಕಳೇ. ಪಾರ್ವತಿ, ಹಾಜಿಮಾರಿಂದ ಆರಂಭವಾಗಿ ಮೊನ್ನೆಮೊನ್ನೆಯ ವಿಕ್ರಂ ಗೌಡ್ಲು ವರೆಗೆ ರಕ್ತ ಕ್ರಾಂತಿ ಎಂಬ ಮೇಲ್ಜಾತಿ, ಬುದ್ಧಿಜೀವಿ ಮುಖಂಡರ ಬೋಧೆಗಳಿಗೆ ಬಲಿಯಾದವರು ಶೋಷಿತ ಸಮುದಾಯಗಳ ಹುಡುಗ- ಹುಡುಗಿಯರೇ ಎಂಬುದನ್ನೂ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಹಿರಿಯ ಪತ್ರಕರ್ತರು ಬೊಟ್ಟು ಮಾಡುತ್ತಾರೆ.
ಅವರ ಹೇಳಿಕೆಯಂತೆ, ಕಳೆದ ಇಪ್ಪತ್ತು ವರ್ಷಗಳ ನಕ್ಸಲ್ ಎನ್‌ಕೌಂಟರ್ ಇತಿಹಾಸದಲ್ಲಿ ಈವರೆಗೆ ಪಾರ್ವತಿ, ಹಾಜಿಮಾ, ಸಾಕೇತ್ ರಾಜನ್, ಶಿವಲಿಂಗು, ಅಜಿತ್ ಕುಸುಬಿ, ಸುಂದರೇಶ್, ಗೌತಮ್, ಪರಮೇಶ್ವರ್, ಯಲ್ಲಪ್ಪ, ನಾರಾವಿ ದಿನಕರ್, ಉಮೇಶ್ ಬಣಕಲ್, ವಸಂತ್ ಗೌಡ್ಲು, ಮನೋಹರ್, ನವೀನ್, ಅಭಿಲಾಶ್ ಮತ್ತು ವಿಕ್ರಂ ಗೌಡ ಜೀವ ಕಳೆದುಕೊಂಡಿದ್ದಾರೆ.
ಆ ಪೈಕಿ ಸಾಕೇತ್ ರಾಜನ್ ಮತ್ತು ಮನೋಹರ್ ಹೊರತುಪಡಿಸಿ ಉಳಿದವರೆಲ್ಲರೂ ದಲಿತ, ಆದಿವಾಸಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದವರೇ. ಅದರಲ್ಲೂ ಆದಿವಾಸಿ ಗೌಡ್ಲು, ದಲಿತ ಸಮುದಾಯದ ʼಚೋಮನ ಮಕ್ಕಳುʼ ಸಿದ್ಧಾಂತದ ಅಮಲಿಗೆ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.
ಎನ್‌ಕೌಂಟರ್ ಆದವರ ಪೈಕಿ ಸಾಕೇತ್ ರಾಜನ್ ಬ್ರಾಹ್ಮಣರಾದರೆ, ಮನೋಹರ್ ಲಿಂಗಾಯರ ಸಮುದಾಯಕ್ಕೆ ಸೇರಿದವರು. ಪಾರ್ವತಿ ಬಿಲ್ಲವ ಸಮುದಾಯದವರಾದರೆ, ಹಾಜಿಮಾ ಅಲ್ಪಸಂಖ್ಯಾತ ಸಮುದಾಯದವರು. ಇನ್ನು ವಿಕ್ರಂ ಗೌಡ, ವಸಂತ್ ಗೌಡ್ಲು ಸೇರಿದಂತೆ ಐದಕ್ಕೂ ಹೆಚ್ಚು ಮಂದಿ ಆದಿವಾಸಿ ಸಮುದಾಯಕ್ಕೆ ಸೇರಿದವರು. ಉಳಿದ ಯುವಕರು ನೇಕಾರ ಮತ್ತಿತರ ಹಿಂದುಳಿದ ಸಮುದಾಯಕ್ಕೆ ಸೇರಿದವರು.
ವಿಪರ್ಯಾಸವೆಂದರೆ, “ಈ ತಳ ಸಮುದಾಯದ ಅಮಾಯಕ ಹುಡುಗ- ಹುಡುಗಿಯರ ತಲೆಗೆ ಸಿದ್ಧಾಂತದ ಅಮಲೇರಿಸಿ, ಹಾದಿ ತಪ್ಪಿಸಿ ಪ್ರಜಾಸತ್ತಾತ್ಮಕ ಹೋರಾಟಗಳ ಅವಕಾಶಗಳಿದ್ದರೂ ಅವರ ಕೈಗೆ ಬಂದೂಕು ಕೊಟ್ಟು ಹಾದಿ ತಪ್ಪಿಸಿದವರು ಬಹುತೇಕ ಮೇಲ್ಜಾತಿ ಮತ್ತು ಮೇಲ್ವರ್ಗದವರೇ. ಆದರೆ, ಈಗ ಅವರಲ್ಲಿ ಬಹುತೇಕರು ಬಹಳ ಆಯಕಟ್ಟಿನ ವಲಯದಲ್ಲಿ, ತಮ್ಮ ಜಾತಿಯ ಸಾಮಾಜಿಕ ಬಂಡವಾಳದೊಂದಿಗೆ ಒಳ್ಳೆಯ ಆರ್ಥಿಕ ಲಾಭ, ಸ್ಥಾನಮಾನಗಳನ್ನು ಗಿಟ್ಟಿಸಿಕೊಂಡು ʼಸುಧಾರಣೆʼಯಾಗಿದ್ದಾರೆ. ಬಡವರ ಅಮಾಯಕ ಮಕ್ಕಳು ಜೀವ ಕಳೆದುಕೊಂಡು, ಕುಟುಂಬಕ್ಕೆ ಆಸರೆಯಾಗಬಹುದಾಗಿದ್ದ ವಯಸ್ಸಿಗೆ ಬಂದ ವಿದ್ಯಾವಂತ ಮಕ್ಕಳನ್ನು ಕಳೆದುಕೊಂಡ ಅವರ ಕುಟುಂಬಗಳು ಅಕ್ಷರಶಃ ಬೀದಿಪಾಲಾಗಿವೆ. ಅಳಿದುಳಿದವರು ಹೀಗೆ ಪರದೇಸಿಗಳಂತೆ ಸರ್ಕಾರದ ಮುಂದೆ ಪ್ರಾಣಭಿಕ್ಷೆ ಬೇಡಿ ಶರಣಾಗುತ್ತಿದ್ದಾರೆ. ಇದು ಕರ್ನಾಟಕ, ಅದರಲ್ಲೂ ಮಲೆನಾಡಿನ ಮಟ್ಟಿಗೆ ಮಹಾ ವಂಚನೆಯ ರಕ್ತ ಚರಿತ್ರೆ. ಮೇಲ್ಜಾತಿ ಜನಗಳ ಸಿದ್ಧಾಂತ ಮತ್ತು ಶೋಕಿಯ ಅಮಲಿಗಾಗಿ ಮಲೆನಾಡಿನ ಚರಿತ್ರೆಯನ್ನೇ ಬದಲಿಸಬಲ್ಲ ತಾಕತ್ತು, ಪ್ರತಿಭೆ ಇದ್ದ ತಳ ಸಮುದಾಯಗಳ ಪ್ರತಿಭೆಗಳು ಮಣ್ಣಾಗಿದ್ದು, ಮಲೆನಾಡಿಗೇ ಆದ ದೊಡ್ಡ ಅನ್ಯಾಯ ಕೂಡ” ಎಂದೂ ಅವರು ಮೌನಕ್ಕೆ ಜಾರಿದರು.
"ಮಲೆನಾಡನ್ನೇ ಬದಲಾಯಿಸುವುದಾಗಿ ಹೇಳಿಕೊಂಡು ಬಂದಿದ್ದ ನಕ್ಸಲ್ ಚಳವಳಿ, ಇದೀಗ ಮೂವತ್ತು ವರ್ಷಗಳಲ್ಲಿ ಅಲ್ಲಿನ ಆದಿವಾಸಿಗಳ, ದಲಿತರ, ತಳ ಸಮುದಾಯಗಳ ಬದುಕಿನ ಮೇಲೆ ಅಳಿಸಲಾಗದ ಬದಲಾವಣೆಯ ʼಬರೆʼ ಎಳೆದಿದೆ. ಅದೇ ಹೊತ್ತಿಗೆ ಆ ಅಮಾಯಕ ಸಮುದಾಯಗಳನ್ನು ಬಳಸಿಕೊಂಡ ಸಿದ್ಧಾಂತಿಗಳ ಬದುಕನ್ನೂ ಸಾಕಷ್ಟು ʼಬದಲಾಯಿಸಿದೆʼ, ಬೆತ್ತಲಾಗಿಸಿದೆ" ಎಂದು ಅವರು ಮಾತು ಮುಗಿಸಿದರು.
ಅವರ ಮಾತಿನ ಕೊನೆಯ ಮೌನ ಮಲೆನಾಡಿನಲ್ಲಿ ಸಿದ್ದಾಂತ, ಚಳವಳಿಯ ಹೆಸರಲ್ಲಿ ನಡೆದ ಚಾರಿತ್ರಿಕ ದುರಂತಗಾಥೆಗೆ ಇಡೀ ಮಲೆನಾಡಿನ ಪ್ರತಿಕ್ರಿಯೆಯಂತಿತ್ತು!