Naxals Surrender | ನಕ್ಸಲ್ ಶರಣಾಗತಿ ಸ್ಥಳ ದಿಢೀರ್‌ ಬದಲಾವಣೆ; ಬೆಂಗಳೂರಿನಲ್ಲಿ ಸಿಎಂ ಎದುರೇ ಶರಣಾಗತಿ!
x
ನಕ್ಸಲ್‌ ಶರಣಾಗತ ಸಮಿತಿ ಸದಸ್ಯರನ್ನು ನಕ್ಸಲ್‌ ಮುಖಂಡರು ಸ್ವಾಗತಿಸಿದರು

Naxals Surrender | ನಕ್ಸಲ್ ಶರಣಾಗತಿ ಸ್ಥಳ ದಿಢೀರ್‌ ಬದಲಾವಣೆ; ಬೆಂಗಳೂರಿನಲ್ಲಿ ಸಿಎಂ ಎದುರೇ ಶರಣಾಗತಿ!

ಮುಂಡಗಾರು ಲತಾ ಸೇರಿದಂತೆ ಆರು ಮಂದಿ ನಕ್ಸಲರನ್ನು ಬೆಂಗಳೂರಿಗೆ ಕರೆತರುತ್ತಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಸಮ್ಮುಖದಲ್ಲಿ ಶರಣಾಗತಿ ಪ್ರಕ್ರಿಯೆ ನಡೆಸಲು ಕೊನೇ ಕ್ಷಣದಲ್ಲಿ ನಿರ್ಧರಿಸಲಾಗಿದೆ.


ಚಿಕ್ಕಮಗಳೂರಿನ ಜಿಲ್ಲಾಡಳಿತದ ಕಚೇರಿಯಲ್ಲಿ ನಿಗಧಿಯಾಗಿದ್ದ ನಕ್ಸಲರ ಶರಣಾಗತಿ ಪ್ರಕ್ರಿಯೆ ಕೊನೇ ಕ್ಷಣದಲ್ಲಿ ಬದಲಾವಣೆಯಾಗಿದೆ. ಮುಂಡಗಾರು ಲತಾ ಸೇರಿದಂತೆ ಆರು ಜನ ನಕ್ಸಲರನ್ನು ಬಿಗಿಭದ್ರತೆಯೊಂದಿಗೆ ಬೆಂಗಳೂರಿಗೆ ಕರೆತರುತ್ತಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಸಮ್ಮುಖದಲ್ಲಿ ಶರಣಾಗತಿ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.

ಈಗಾಗಲೇ ನಕ್ಸಲ್‌ ನಿಗ್ರಹ ಪಡೆಯ ಐಜಿಪಿ ಅಮಿತ್‌ ಸಿಂಗ್‌, ಚಿಕ್ಕಮಗಳೂರು ಪೊಲೀಸ್‌ ವರಿಷ್ಠಾಧಿಕಾರಿ ವಿಕ್ರಂ ಆಮ್ಟೆ ಬಿಗಿ ಭದ್ರತೆಯಲ್ಲಿ ನಕ್ಸಲರನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ. ಚಿಕ್ಕಮಗಳೂರಿನಲ್ಲಿ ನಕ್ಸಲರು ಶರಣಾಗುವ ಮಾಹಿತಿ ಹಿನ್ನೆಲೆಯಲ್ಲಿ ನಕ್ಸಲರ ಸಂಬಂಧಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ದಿಢೀರ್‌ ಸ್ಥಳ ಬದಲಾವಣೆಯಾಗಿದೆ.

ಮಧ್ಯಾಹ್ನ ಸಿಎಂ ಅಧಿಕೃತ ನಿವಾಸ ಕೃಷ್ಣಾದಲ್ಲಿ ನಕ್ಸಲರ ಶರಣಾಗತಿ ಪ್ರಕ್ರಿಯೆ ಸಿಎಂ ಎದುರಲ್ಲೇ ನಡೆಯಲಿದೆ. ನಕ್ಸಲರ ಸಂಬಂಧಿಕರಿಗೆ ಬೆಂಗಳೂರಿಗೆ ಬರಲು ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಶಾಂತಿಗಾಗಿ ನಾಗರಿಕರೆ ವೇದಿಕೆಯ ಅಶೋಕ್‌ ತಿಳಿಸಿದ್ದಾರೆ.

ಇನ್ನು ಸಿಎಂ ನಿವಾಸದಲ್ಲಿ ನಕ್ಸಲರ ಶರಣಾಗತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ನಕ್ಸಲ್‌ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯೊಂದಿಗೆ ನಕ್ಸಲರು ಬೆಂಗಳೂರಿನತ್ತ ಬರುತ್ತಿದ್ದಾರೆ.

ಈ ಮಧ್ಯೆ, ನಕ್ಸಲರ ಶರಣಾಗತಿ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ನಕ್ಸಲರ ವಿರುದ್ಧ ಹಲವು ಗಂಭೀರ ಪ್ರಕರಣಗಳಿವೆ. ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.

ವಿಕ್ರಂ ಗೌಡ ಎನ್ಕೌಂಟರ್ ವೇಳೆ ನಕ್ಸಲರಿಗೆ ಶರಣಾಗಲು ಸರ್ಕಾರ ಕರೆ ನೀಡಿತ್ತು. ಕಾಡಿನಲ್ಲಿರುವ ನಕ್ಸಲರಿಗೆ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಆಹ್ವಾನ ನೀಡಿದ್ದೆವು. ಈಗ ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ನಕ್ಸಲರ ಮನವೊಲಿಸಿ ಮುಖ್ಯವಾಹಿನಿಗೆ ಕರೆತರುತ್ತಿದೆ. ಶರಣಾಗತಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

Read More
Next Story