
ಗೆಳತಿ ಭೇಟಿಗೆ ಬಂದು ಬೆಂಗಳೂರಿನಲ್ಲಿ ಅಂದರ್ ಆದ ನಕ್ಸಲ್ ಅನಿರುದ್ಧ್
ಬೆಂಗಳೂರು ನಗರದಲ್ಲಿ ಗುರುವಾರ ಹರ್ಯಾಣ ಮೂಲದ ನಕ್ಸಲ್ ಪ್ರಮುಖನೊಬ್ಬನನ್ನು ಬಂಧಿಸಲಾಗಿದೆ.
ತನ್ನ ಗೆಳತಿಯನ್ನು ಭೇಟಿ ಮಾಡಲು ನಗರಕ್ಕೆ ಆಗಮಿಸಿದ್ದ ಆತ, ಗುರುವಾರ ಬೆಳಿಗ್ಗೆ ಇಲ್ಲಿಂದ ಚೆನ್ನೈಗೆ ತೆರಳಲು ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದಾಗ ಆತನ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ಅಪರಾಧ ವಿಭಾಗದ ಎಟಿಸಿ ತಂಡ ವಶಕ್ಕೆ ಪಡೆದಿದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತನನ್ನು ಅನಿರುದ್ಧ್ ರಾಜನ್ ಎಂದು ಗುರುತಿಸಲಾಗಿದೆ. ಆತ ನಿಷೇಧಿತ ಸಿಪಿಐ (ಮಾವೋವಾದಿ) ಎಂಬ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. ನಿಷೇಧಿತ ಬರಹಗಳನ್ನು ಪ್ರಸಾರ ಮಾಡುತ್ತಿದ್ದ. ಆತನ ಬಂಧನಕ್ಕಾಗಿ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದರು.
ಆತ ತನ್ನ ಗೆಳತಿಯನ್ನು ನೋಡಲು ಮೂರ್ನಾಲ್ಕು ದಿನಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದ. ಆಗಿನಿಂದಲೂ ಕೇಂದ್ರ ಅಪರಾಧ ವಿಭಾಗದ ಎಟಿಸಿ ತಂಡ, ಕೊನೆಗೂ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖೆಯ ವೇಳೆ, ನಕ್ಸಲ್ ಚಟುವಟಿಕೆಗಾಗಿ ಆತನ ಹಣ ಸಂಗ್ರಹ ಮಾಡಿರುವುದು ಮತ್ತು ಗುಪ್ತ ಸಭೆಗಳನ್ನು ನಡೆಸಿರುವುದು ಪತ್ತೆಯಾಗಿದೆ. ವಿಕಾಸ್ ಘಾಟ್ಗೆ ಎಂಬ ಹೆಸರಿನಲ್ಲಿ ಆಧಾರ್ ಕೂಡ ಪಡೆದಿರುವ ಅನಿರುದ್ಧ್ ಸಂಪರ್ಕದಲ್ಲಿರುವವರ ಮಾಹಿತಿಯನ್ನು ಕಲೆ ಹಾಕಿರುವ ತನಿಖಾ ತಂಡ, ತನಿಖೆ ಮುಂದುವರಿಸಿದೆ.
ಆರೋಪಿಯಿಂದ ಎರಡು ಬ್ಯಾಗ್, ಪೆನ್ಡ್ರೈವ್, ಟ್ಯಾಬ್ ವಶಕ್ಕೆ ಪಡೆಯಲಾಗಿದೆ. ಅನಿರುದ್ದ ರಾಜನ್ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿಯನ್ನ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.