ಲೋಕ ಅದಾಲತ್:  ರಾಜ್ಯದ 1.04 ಕೋಟಿಗೂ ಹೆಚ್ಚು ಬಾಕಿ ಪ್ರಕರಣಗಳು ಒಂದೇ ದಿನ ಇತ್ಯರ್ಥ
x

ಲೋಕ ಅದಾಲತ್: ರಾಜ್ಯದ 1.04 ಕೋಟಿಗೂ ಹೆಚ್ಚು ಬಾಕಿ ಪ್ರಕರಣಗಳು ಒಂದೇ ದಿನ ಇತ್ಯರ್ಥ

ಲೋಕ್ ಅದಾಲತ್‌ನಲ್ಲಿ ಒಟ್ಟು 1.04 ಕೋಟಿ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಒಟ್ಟು ಪರಿಹಾರದ ಮೊತ್ತವು 3,103 ಕೋಟಿ ರೂ. ಗಳಷ್ಟಿದೆ. ವಿವಾಹ, ಆಸ್ತಿ ಸಂಬಂಧ ವ್ಯಾಜ್ಯಗಳಿಗೆ ಮುಕ್ತಿ ನೀಡಲಾಗಿದೆ.


Click the Play button to hear this message in audio format

ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಡಿ.13ರಂದು ನಡೆಸಲಾದ ರಾಷ್ಟ್ರೀಯ ಲೋಕ್ ಅದಾಲತ್ ಅಭೂತಪೂರ್ವ ಯಶಸ್ಸು ಕಂಡಿದೆ. ಒಂದೇ ದಿನ ಬರೋಬ್ಬರಿ 1 ಕೋಟಿಗೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಲಾಗಿದೆ.

ಈ ಬಾರಿ ನಡೆದ ಲೋಕ್ ಅದಾಲತ್‌ನಲ್ಲಿ ಒಟ್ಟು 1.04 ಕೋಟಿ (1,04,66,237 ) ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಒಟ್ಟು ಪರಿಹಾರದ ಮೊತ್ತವು 3,103 ಕೋಟಿ ರೂ. ಗಳಷ್ಟಿದೆ. ಲೋಕ ಅದಾಲತ್‌ನಲ್ಲಿ ವಿವಾಹ ಸಂಬಂಧಿತ ವ್ಯಾಜ್ಯಗಳು, ಆಸ್ತಿ ವಿಭಾಗ ಮತ್ತು ವಾಹನ ಅಪಘಾತ ಪರಿಹಾರಕ್ಕೆ ಸಂಬಂಧಿಸಿದಂತಹ ಪ್ರಕರಣಗಳಿಗೆ ಮುಕ್ತಿ ನೀಡಲಾಗಿದೆ.

ಲೋಕ ಅದಾಲತ್‌ ಯಶಸ್ವಿ ಕುರಿತು ಹೈಕೋರ್ಟ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾ. ಅನು ಸಿವರಾಮನ್ ಮಾಹಿತಿ ನೀಡಿದರು. ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ದಾಖಲಾಗಿದ್ದ ಒಟ್ಟು 2,469 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಪ್ರಕರಣಗಳಲ್ಲಿ ಒಟ್ಟು 8,14,33,139 ರೂ. (ಸುಮಾರು 8 ಕೋಟಿ ರೂ.) ಮೊತ್ತವನ್ನು ಇತ್ಯರ್ಥಪಡಿಸಲಾಗಿದೆ. ಕೌಟುಂಬಿಕ ಆಸ್ತಿ ಪಾಲು ಸಂಬಂಧ 3,673 ಸಿವಿಲ್ ದಾವೆಗಳನ್ನು ಬಗೆಹರಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 43,02,85,899 ರೂ. (ಸುಮಾರು 43 ಕೋಟಿ ರೂ.) ಮೌಲ್ಯದ ಮೊತ್ತವನ್ನು ಇತ್ಯರ್ಥಪಡಿಸಲಾಗಿದೆ. ಅತಿ ಹೆಚ್ಚು ಹಣಕಾಸಿನ ಮೊತ್ತ ಒಳಗೊಂಡಿರುವ ಮೋಟಾರು ವಾಹನ ಅಪಘಾತ ಪರಿಹಾರಕ್ಕೆ ಸಂಬಂಧಿಸಿದ 4,660 ಪ್ರಕರಣಗಳು ಇತ್ಯರ್ಥಗೊಂಡಿವೆ. ಸಂತ್ರಸ್ತರಿಗೆ ಒಟ್ಟು 297,04,85,184 ರೂ. (ಸುಮಾರು 297 ಕೋಟಿ ರೂ.) ಪರಿಹಾರವನ್ನು ಒದಗಿಸಲಾಗಿದೆ ಎಂದು ಹೇಳಿದರು.

ಇತ್ತೀಚೆಗೆ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಕೇವಲ ವೈವಾಹಿಕ ಅಥವಾ ಕೌಟುಂಬಿಕ ವ್ಯಾಜ್ಯಗಳಷ್ಟೇ ಅಲ್ಲದೆ, ಚೆಕ್ ಬೌನ್ಸ್ ಹಾಗೂ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ಇತ್ಯರ್ಥದಲ್ಲೂ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. 13,517 ಚೆಕ್ ಬೌನ್ಸ್ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಬರೋಬ್ಬರಿ 633 ಕೋಟಿ ರೂ. ಮೊತ್ತದ ವಿವಾದ ಬಗೆಹರಿದಿದೆ. ಭೂಸ್ವಾಧೀನ ಜಾರಿ ಪ್ರಕರಣಗಳಲ್ಲಿ 121 ಕೋಟಿ ರೂ. ಹಾಗೂ ಇತರೆ ಜಾರಿ ಪ್ರಕರಣಗಳಲ್ಲಿ 264 ಕೋಟಿ ರೂ. ಮೊತ್ತವನ್ನು ಇತ್ಯರ್ಥಪಡಿಸುವ ಮೂಲಕ ಕಕ್ಷಿದಾರರಿಗೆ ನೆಮ್ಮದಿ ನೀಡಲಾಗಿದೆ ಎಂದರು.

ಟ್ರಾಫಿಕ್ ದಂಡಕ್ಕೆ ಶೇ.50 ರಿಯಾಯಿತಿ: ಭರ್ಜರಿ ಸ್ಪಂದನೆ

ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮನವಿಯ ಮೇರೆಗೆ ರಾಜ್ಯ ಸರ್ಕಾರವು 1990 ರಿಂದ 2020 ರವರೆಗಿನ ಬಾಕಿ ಪ್ರಕರಣಗಳಿಗೆ ಶೇ.50ರಷ್ಟು ರಿಯಾಯಿತಿ ನೀಡಿತ್ತು. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯಾದ್ಯಂತ ಒಂದೇ ದಿನ 24,29,461 (ಸುಮಾರು 24.29 ಲಕ್ಷ) ಸಂಚಾರ ಚಲನ್ ಪ್ರಕರಣಗಳು ಇತ್ಯರ್ಥಗೊಂಡಿವೆ. ಇದರಿಂದ ಸರ್ಕಾರಕ್ಕೆ 56 ಕೋಟಿ ರೂ. ಗೂ ಹೆಚ್ಚಿನ ದಂಡದ ಮೊತ್ತ ಸಂಗ್ರಹವಾಗಿದೆ. ಇದಲ್ಲದೆ ಸಾರಿಗೆ ಇಲಾಖೆಗೆ ಸಂಬಂಧಿಸಿದ 902 ಪ್ರಕರಣಗಳು ಇತ್ಯರ್ಥಗೊಂಡು 29 ಲಕ್ಷ ರೂ. ದಂಡ ವಸೂಲಿಯಾಗಿದೆ ಎಂದು ಮಾಹಿತಿ ನೀಡಿದರು.

ಮಾನವೀಯ ನೆಲೆಗಟ್ಟಿನಲ್ಲಿಯೂ ಇತ್ಯರ್ಥ

ಇತ್ತೀಚೆಗೆ ನಡೆದ ರಾಷ್ಟ್ರೀಯ ಲೋಕ್ ಅದಾಲತ್ ಕೇವಲ ಅಂಕಿ-ಅಂಶಗಳ ಸಾಧನೆಯಾಗಷ್ಟೇ ಉಳಿಯದೆ, ಮಾನವೀಯ ನೆಲೆಗಟ್ಟಿನಲ್ಲಿ ಹಲವು ವಿಶೇಷ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ದಶಕಗಳಷ್ಟು ಹಳೆಯದಾದ ಪ್ರಕರಣಗಳು, ಹಿರಿಯ ನಾಗರಿಕರ ಸಂಕಷ್ಟಗಳು ಮತ್ತು ಸೆಲೆಬ್ರಿಟಿಗಳ ವ್ಯಾಜ್ಯಗಳಿಗೂ ಈ ಅದಾಲತ್ ಮುಕ್ತಿ ನೀಡಿದೆ.

ನ್ಯಾಯಾಲಯಗಳಲ್ಲಿ ಧೂಳು ಹಿಡಿಯುತ್ತಿದ್ದ ಸಾವಿರಾರು ಹಳೆಯ ಕಡತಗಳಿಗೆ ಈ ಬಾರಿ ಜೀವ ಸಿಕ್ಕಿದೆ. ಒಟ್ಟು 2,675 ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದರಲ್ಲಿ 5 ವರ್ಷಕ್ಕಿಂತ ಹಳೆಯದಾದ 2,268 ಪ್ರಕರಣಗಳು, 10 ವರ್ಷಕ್ಕಿಂತ ಹಳೆಯದಾದ 351 ಪ್ರಕರಣಗಳು ಹಾಗೂ 15 ವರ್ಷಕ್ಕೂ ಹಳೆಯದಾದ 56 ಪ್ರಕರಣಗಳು ಸೇರಿವೆ. ಬೆಂಗಳೂರು ಗ್ರಾಮಾಂತರದ ನ್ಯಾಯಾಲಯದಲ್ಲಿ ಬಾಕಿ ಇದ್ದ 19 ವರ್ಷಗಳಷ್ಟು ಹಳೆಯದಾದ ಪಾಲು ವಿಭಾಗ ದಾವೆಯೊಂದನ್ನು ಬಗೆಹರಿಸಿರುವುದು ವಿಶೇಷವಾಗಿದೆ ಎಂದು ವಿವರಿಸಿದರು.

ಹಿರಿಯ ನಾಗರಿಕರಿಗೆ ಆಸರೆ ಮತ್ತು ತಂತ್ರಜ್ಞಾನದ ಬಳಕೆ

ಈ ಬಾರಿಯ ಅದಾಲತ್‌ನಲ್ಲಿ 2,144 ಹಿರಿಯ ನಾಗರಿಕರು ತಮ್ಮ ಇಳಿವಯಸ್ಸಿನ ಅಲೆದಾಟವನ್ನು ತಪ್ಪಿಸಿಕೊಂಡು ನೆಮ್ಮದಿ ಕಂಡುಕೊಂಡಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ರಾಮನಗರದಲ್ಲಿ 92 ವರ್ಷದ ಇಳಿ ವಯಸ್ಸಿನ ಮಹಿಳೆಯೊಬ್ಬರ ಆಸ್ತಿ ವಿವಾದವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಇತ್ಯರ್ಥಪಡಿಸಲಾಗಿದೆ. ಈ ಪ್ರಕರಣದಲ್ಲಿ ಎದುರು ಪಕ್ಷದವರಾದ ಅರ್ಜಿದಾರರ ಮಗ ಲಂಡನ್‌ನಲ್ಲಿದ್ದರೂ, ತಂತ್ರಜ್ಞಾನದ ಮೂಲಕ ಸಂಪರ್ಕಿಸಿ ರಾಜಿ ಮಾಡಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಆಧುನೀಕರಣಕ್ಕೆ ಸಾಕ್ಷಿಯಾಗಿದೆ. ಕೌಟುಂಬಿಕ ಕಲಹಗಳಿಂದ ದೂರವಾಗಿದ್ದ ದಂಪತಿಗಳನ್ನು ಒಂದುಗೂಡಿಸುವಲ್ಲಿಯೂ ಲೋಕಅದಾಲತ್ ಯಶಸ್ವಿಯಾಗಿದೆ. ಸುಮಾರು 367 ದಂಪತಿಗಳು ರಾಜೀ ಸಂಧಾನದ ಮೂಲಕ ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಮತ್ತೆ ಒಂದಾಗಿ ಬಾಳಲು ನಿರ್ಧರಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸದಾನಂದ ವಿಶ್ವನಾಥ್‌ ಅವರು ತಮ್ಮ ಅಪಾರ್ಟ್‌ಮೆಂಟ್‌ ವಿವಾದಕ್ಕೆ ಸಂಬಂಧಿಸಿದ ಪ್ರಕರಣವನ್ನು ಲೋಕಅದಾಲತ್‌ ಮೂಲಕ ಇತ್ಯರ್ಥ ಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಮುಂದಿನ ಲೋಕ ಅದಾಲತ್ ದಿನಾಂಕ ಪ್ರಕಟ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, 2026ನೇ ಸಾಲಿನ ಮೊದಲನೇ ರಾಷ್ಟ್ರೀಯ ಲೋಕಅದಾಲತ್ ಅನ್ನು ಮಾರ್ಚ್ 14, 2026 ರಂದು ನಡೆಸಲು ನಿಗದಿಪಡಿಸಲಾಗಿದೆ. ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳಿಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಮತ್ತು ಕಕ್ಷಿದಾರರ ಅನುಕೂಲಕ್ಕಾಗಿ ಲೋಕ ಅದಾಲತ್‌ನ ಪ್ರಯೋಜನಗಳನ್ನು ಹೆಚ್ಚು ಜನಪ್ರಿಯಗೊಳಿಸುವುದು ಅತ್ಯಗತ್ಯ ಎಂದು ತಿಳಿಸಿದರು.

ಜಾಗೃತಿ ಅಭಿಯಾನ

ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಎರಡು ಪ್ರಮುಖ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ರಸ್ತೆ ಸುರಕ್ಷತೆ ಮತ್ತು ಬಾಲ್ಯ ವಿವಾಹ ನಿರ್ಮೂಲನೆಗೆ ಸಂಬಂಧಿಸಿದಂತೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಪಘಾತಗಳನ್ನು ತಡೆಗಟ್ಟುವ ಮತ್ತು ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ, ಹೊಸ ವರ್ಷದ ಆರಂಭದಲ್ಲೇ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳ ಸಹಯೋಗದೊಂದಿಗೆ ಜನವರಿ 1 ರಿಂದ 31 ರವರೆಗೆ ಒಂದು ತಿಂಗಳ ಕಾಲ 'ರಸ್ತೆ ಸುರಕ್ಷತಾ ವಿಶೇಷ ಅಭಿಯಾನ' ನಡೆಯಲಿದೆ ಎಂದು ವಿವರಿಸಿದರು.

ಬಾಲ್ಯ ವಿವಾಹ ಮುಕ್ತ ಭಾರತ- 100 ದಿನಗಳ ಅಭಿಯಾನ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ, ಬಾಲ್ಯ ವಿವಾಹ ನಿರ್ಮೂಲನೆಗಾಗಿ ಕ್ರಾಂತಿಕಾರಿ ಹೆಜ್ಜೆಯನ್ನಿಡಲಾಗಿದೆ. 'ಆಶಾ' -(ಜಾಗೃತಿ, ಬೆಂಬಲ, ಸಹಾಯ ಮತ್ತು ಕ್ರಮ) ಎಂಬ ಮಾನದಂಡದ ಅಡಿಯಲ್ಲಿ ಈ ಅಭಿಯಾನ ನಡೆಯಲಿದೆ. 'ಬಾಲ್ಯ ವಿವಾಹ ಮುಕ್ತ ಭಾರತ' ನಿರ್ಮಾಣದ ಗುರಿಯೊಂದಿಗೆ, ಡಿ.4ರಿಂದ ಆರಂಭಗೊಂಡಿದ್ದು, ಮಾರ್ಚ್ 8ರವರೆಗೆ ಒಟ್ಟು 100 ದಿನಗಳ ತೀವ್ರ ಜಾಗೃತಿ ಅಭಿಯಾನವನ್ನು ನಿಗದಿಪಡಿಸಲಾಗಿದೆ. ಸಮಾಜದಲ್ಲಿ ಬದಲಾವಣೆ ತರಲು ಉದ್ದೇಶಿಸಿರುವ ಈ ಎರಡೂ ಅಭಿಯಾನಗಳ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.

Read More
Next Story