ನ್ಯಾಷನಲ್ ಹೆರಾಲ್ಡ್ ಪ್ರಕರಣ: ದೆಹಲಿ ಪೊಲೀಸ್ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೋರುವೆ: ಡಿಕೆಶಿ
x

ಡಿ. ಕೆ ಶಿವಕುಮಾರ್‌ 

ನ್ಯಾಷನಲ್ ಹೆರಾಲ್ಡ್ ಪ್ರಕರಣ: ದೆಹಲಿ ಪೊಲೀಸ್ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೋರುವೆ: ಡಿಕೆಶಿ

ಪ್ರಸ್ತುತ ನಡೆಯುತ್ತಿರುವ ಅಧಿವೇಶನ ಮತ್ತು ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ಕಾರಣಗಳಿಂದಾಗಿ ತಕ್ಷಣವೇ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.


Click the Play button to hear this message in audio format

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನೀಡಿರುವ ನೋಟಿಸ್‌ಗೆ ಉತ್ತರಿಸಲು ಹೆಚ್ಚಿನ ಕಾಲಾವಕಾಶ ಕೋರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿರುವ ಅಧಿವೇಶನ ಮತ್ತು ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದ ಕಾರಣಗಳಿಂದಾಗಿ ತಕ್ಷಣವೇ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಅಧಿವೇಶನದ ಬಳಿಕ ವಿಚಾರಣೆಗೆ ಹಾಜರು

"ವಾಸ್ತವವಾಗಿ ಸೋಮವಾರವೇ ದೆಹಲಿ ಪೊಲೀಸರಿಗೆ ಉತ್ತರ ನೀಡಲು ತೀರ್ಮಾನಿಸಿದ್ದೆ. ಆದರೆ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಅನಿರೀಕ್ಷಿತ ನಿಧನದ ಹಿನ್ನೆಲೆಯಲ್ಲಿ ನಾನು ತುರ್ತಾಗಿ ವಿಶೇಷ ವಿಮಾನದ ಮೂಲಕ ದಾವಣಗೆರೆಗೆ ತೆರಳಬೇಕಿದೆ. ಹೀಗಾಗಿ, ಬೆಳಗಾವಿ ಅಧಿವೇಶನ ಮುಗಿದ ನಂತರ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡುವಂತೆ ಪೊಲೀಸರಿಗೆ ಮನವಿ ಮಾಡುತ್ತೇನೆ," ಎಂದು ಡಿಸಿಎಂ ಹೇಳಿದರು.

ಎಫ್‌ಐಆರ್ ಪ್ರತಿಯಿಲ್ಲದ ನೋಟಿಸ್

ಪೊಲೀಸರ ನಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಪೊಲೀಸರು ಕೇವಲ ನೋಟಿಸ್ ನೀಡಿದ್ದಾರೆಯೇ ಹೊರತು, ಅದರೊಂದಿಗೆ ಎಫ್‌ಐಆರ್ ಪ್ರತಿಯನ್ನು ಲಗತ್ತಿಸಿಲ್ಲ. ಎಫ್‌ಐಆರ್‌ನಲ್ಲಿ ಏನಿದೆ ಎಂಬುದನ್ನು ನಾನು ಓದಿಲ್ಲ. ಹೀಗಾಗಿ, ಎಫ್‌ಐಆರ್ ಪ್ರತಿಯನ್ನು ನೀಡುವಂತೆ ಕೇಳುತ್ತೇನೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಈಗಾಗಲೇ ಉತ್ತರ ನೀಡಿದ್ದೇವೆ. ನಾನು ಪೊಲೀಸರಿಗೆ ನೀಡುವ ಉತ್ತರದ ಪ್ರತಿಯನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡುತ್ತೇನೆ," ಎಂದು ತಿಳಿಸಿದರು.

ಹೈಕಮಾಂಡ್ ನಾಯಕರ ಭೇಟಿ

ದೆಹಲಿ ಭೇಟಿಯ ವೇಳೆ ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾದ ಬಗ್ಗೆ ಮಾಹಿತಿ ನೀಡಿದ ಡಿ.ಕೆ. ಶಿವಕುಮಾರ್, "ದೆಹಲಿಗೆ ಬಂದಾಗ ಪಕ್ಷದ ನಾಯಕರನ್ನು ಭೇಟಿ ಮಾಡುವುದು ಸಹಜ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ಭೇಟಿ ಮಾಡಿದ್ದೇನೆ. ಭಾನುವಾರ ಇಂದಿರಾ ಭವನದಲ್ಲಿ ನಡೆದ ಔತಣಕೂಟದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನೂ ಭೇಟಿಯಾಗಿದ್ದೆ," ಎಂದರು.

ಇಂದು ಖರ್ಗೆ ಅವರೊಂದಿಗೆ ದಾವಣಗೆರೆಗೆ ತೆರಳುತ್ತಿರುವುದರಿಂದ ಪ್ರತ್ಯೇಕ ಭೇಟಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, "ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ನಾಯಕರೊಂದಿಗೆ ಮಾತುಕತೆ ಇದ್ದೇ ಇರುತ್ತದೆ, ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ," ಎಂದು ಮಾರ್ಮಿಕವಾಗಿ ನುಡಿದರು.

ದೆಹಲಿಯಲ್ಲಿ ದಟ್ಟ ಮಂಜು ಕವಿದ ವಾತಾವರಣವಿದ್ದ ಕಾರಣ ವಿಮಾನಯಾನ ವಿಳಂಬವಾಯಿತು ಎಂದೂ ಅವರು ಇದೇ ವೇಳೆ ಮಾಹಿತಿ ನೀಡಿದರು.

Read More
Next Story