
"ನನ್ನ ಭೂಮಿ" ಅಭಿಯಾನಕ್ಕೆ ಭಾರೀ ಯಶಸ್ಸು: ಡಿಸೆಂಬರ್ ಒಳಗೆ 2 ಲಕ್ಷ ಜಮೀನುಗಳಿಗೆ ಪೋಡಿ: ಸಚಿವ ಕೃಷ್ಣ ಬೈರೇಗೌಡ
ಸರ್ಕಾರವೇ ರೈತರ ಮನೆ ಬಾಗಿಲಿಗೆ ತೆರಳಿ ಪೋಡಿ ಮಾಡಿಕೊಟ್ಟು, ಭೂ ಮಾಲೀಕತ್ವಕ್ಕೆ ಗ್ಯಾರಂಟಿ ನೀಡುತ್ತಿದೆ. ಇದರಿಂದ ಕನಿಷ್ಠ 7 ಲಕ್ಷ ಕುಟುಂಬಗಳ 30 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವರು ವಿವರಿಸಿದರು.
ರೈತರಿಗೆ ದಶಕಗಳಿಂದ ಇದ್ದ ಪೋಡಿ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ, ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ "ನನ್ನ ಭೂಮಿ" ಸರಳೀಕೃತ ದರ್ಖಾಸ್ತು ಪೋಡಿ ಅಭಿಯಾನವು ನಿರೀಕ್ಷೆಗೂ ಮೀರಿ ಯಶಸ್ಸು ಕಾಣುತ್ತಿದೆ. ಕಳೆದ 8 ತಿಂಗಳಲ್ಲಿ 1.09 ಲಕ್ಷ ಜಮೀನುಗಳ ಅಳತೆ ಕಾರ್ಯ ಪೂರ್ಣಗೊಂಡಿದ್ದು, ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ 2 ಲಕ್ಷ ಜಮೀನುಗಳಿಗೆ ಪೋಡಿ ಮಾಡಿಕೊಡುವ ಗುರಿ ಹೊಂದಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ಹಿಂದಿನ ಸರ್ಕಾರದ ಮೂರು ವರ್ಷಗಳ ಅವಧಿಯಲ್ಲಿ ಕೇವಲ 5,801 ಪೋಡಿ ಪ್ರಕರಣಗಳನ್ನು ಮಾತ್ರ ಇತ್ಯರ್ಥಪಡಿಸಲಾಗಿತ್ತು, ಆದರೆ ನಮ್ಮ ಸರ್ಕಾರವು ಕಳೆದ ಡಿಸೆಂಬರ್ನಲ್ಲಿ "ನನ್ನ ಭೂಮಿ" ಅಭಿಯಾನ ಆರಂಭಿಸಿದ ನಂತರ, ಕೇವಲ 8 ತಿಂಗಳಲ್ಲಿ 1.09 ಲಕ್ಷ ಜಮೀನುಗಳ ಅಳತೆ ಕಾರ್ಯ ಪೂರ್ಣಗೊಳಿಸಿದೆ ಎಂದು ಹೇಳಿದರು. ಈ ಅಭಿಯಾನದ ಅಡಿಯಲ್ಲಿ, ಜನರ ಅರ್ಜಿಗೆ ಕಾಯದೆ, ಮಧ್ಯವರ್ತಿಗಳ ಹಾವಳಿಯಿಲ್ಲದೆ, ಸರ್ಕಾರವೇ ರೈತರ ಮನೆ ಬಾಗಿಲಿಗೆ ತೆರಳಿ ಪೋಡಿ ಮಾಡಿಕೊಟ್ಟು, ಭೂ ಮಾಲೀಕತ್ವಕ್ಕೆ ಗ್ಯಾರಂಟಿ ನೀಡುತ್ತಿದೆ. ಇದರಿಂದ ಕನಿಷ್ಠ 7 ಲಕ್ಷ ಕುಟುಂಬಗಳ 30 ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವರು ವಿವರಿಸಿದರು.
ಜನಪರ ಯೋಜನೆಗಳ ಮಾಹಿತಿ
ಇದೇ ಸಂದರ್ಭದಲ್ಲಿ, ಕಂದಾಯ ಇಲಾಖೆಯ ಇತರ ಜನಪರ ಯೋಜನೆಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು. ದಶಕಗಳಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದ ಹಾಡಿ, ಹಟ್ಟಿ, ತಾಂಡಾ, ಮತ್ತು ಮಜರೆ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಅಭಿಯಾನಕ್ಕೆ ವೇಗ ನೀಡಲಾಗಿದ್ದು, ಶೀಘ್ರದಲ್ಲೇ 1.62 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು. ರಾಜ್ಯದಲ್ಲಿ ಮೃತರ ಹೆಸರಿನಲ್ಲಿರುವ 52 ಲಕ್ಷ ಜಮೀನುಗಳನ್ನು ಅವರ ವಾರಸುದಾರರ ಹೆಸರಿಗೆ ವರ್ಗಾಯಿಸಲು "ಫೌತಿ ಖಾತೆ ಆಂದೋಲನ"ಕ್ಕೆ ಚಾಲನೆ ನೀಡಲಾಗಿದ್ದು, ಈವರೆಗೆ 2.30 ಲಕ್ಷ ಜಮೀನುಗಳನ್ನು ವರ್ಗಾಯಿಸಲಾಗಿದೆ ಎಂದು ತಿಳಿಸಿದರು.
ಇಲಾಖೆಯ ಆಡಳಿತವನ್ನು ಡಿಜಿಟಲೀಕರಣಗೊಳಿಸುವ ನಿಟ್ಟಿನಲ್ಲಿ, ದಶಕಗಳಿಂದ ಕಚೇರಿಯೇ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ 7,405 ಗ್ರಾಮ ಆಡಳಿತ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಕಚೇರಿ ಸೌಲಭ್ಯ ಒದಗಿಸಲಾಗಿದೆ. ಅಲ್ಲದೆ, 4,000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಈಗಾಗಲೇ ಲ್ಯಾಪ್ಟಾಪ್ ವಿತರಿಸಲಾಗಿದ್ದು, ಉಳಿದವರಿಗೂ ಶೀಘ್ರದಲ್ಲೇ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸಭೆಯ ಕೊನೆಯಲ್ಲಿ, ರಾಜ್ಯದ ಜಲಾಶಯಗಳ ನಿರ್ವಹಣೆ ಕುರಿತು ಜಿಲ್ಲಾಧಿಕಾರಿಗಳಿಗೆ ಕಿವಿಮಾತು ಹೇಳಿದ ಸಚಿವರು, ಪ್ರಸ್ತುತ ಜಲಾಶಯಗಳಿಗೆ ಉತ್ತಮ ಒಳಹರಿವಿದ್ದರೂ, ಮುಂದಿನ ತಿಂಗಳುಗಳ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲವಾದ್ದರಿಂದ, ನೀರಿನ ಬಳಕೆಯ ಮೇಲೆ ಹೆಚ್ಚು ನಿಗಾ ವಹಿಸಿ, ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.