Nanjanagudu Banana| ಅಳಿವಿನಂಚಿನಲ್ಲಿ ನಂಜನಗೂಡು ರಸಬಾಳೆ; ಭೌಗೋಳಿಕ ಮಾನ್ಯತೆಯ ಹಣ್ಣಿಗೆ ಬೇಕಿದೆ ಉತ್ತೇಜನ !
x

Nanjanagudu Banana| ಅಳಿವಿನಂಚಿನಲ್ಲಿ ನಂಜನಗೂಡು ರಸಬಾಳೆ; ಭೌಗೋಳಿಕ ಮಾನ್ಯತೆಯ ಹಣ್ಣಿಗೆ ಬೇಕಿದೆ ಉತ್ತೇಜನ !

ವಿಶೇಷ ಪರಿಮಳ, ರುಚಿ ಹಾಗೂ ತಿರುಳಿನ ವಿಶಿಷ್ಟ ಸ್ವಾದದಿಂದಲೇ ಹೆಚ್ಚು ಜನಪ್ರಿಯವಾಗಿದ್ದ ಬಾಳೆಹಣ್ಣಿನ ತಳಿ ನಂಜನಗೂಡು ತಾಲೂಕಿನ ಸೀಮಿತ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.


ಅನನ್ಯ ರುಚಿ, ಸುವಾಸನೆ ಮತ್ತು ಮೃದುತ್ವದಿಂದ ಭೌಗೋಳಿಕ ಮಾನ್ಯತೆ (ಜಿಐ) ಗಳಿಸಿದ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ರಸಬಾಳೆ ಇದೀಗ ತೆರೆಮರೆಗೆ ಸರಿಯುತ್ತಿದೆ.

ಕಪಿಲಾ ನದಿ ದಂಡೆಯ ಫಲವತ್ತಾದ ಕಪ್ಪು ಮೆಕ್ಕಲು ಮಣ್ಣಿನಲ್ಲಿ ಬೆಳೆಯುವ ನಂಜನಗೂಡು ರಸಬಾಳೆ, ಅಪ್ಪಟ ದೇಸಿ ತಳಿ. ಇದು ಕೇವಲ ಹಣ್ಣಷ್ಟೇ ಅಲ್ಲ, ಪರಂಪರೆಯ ಭಾಗವೇ ಆಗಿದೆ. ಆದರೆ, ಇತ್ತೀಚೆಗೆ ಕುಟುಂಬಗಳ ವಿಘಟನೆ, ಅಸಮರ್ಪಕ ಮಾರುಕಟ್ಟೆ ವ್ಯವಸ್ಥೆ, ದೇಸಿ ತಳಿಗಳ ನಿರ್ಲಕ್ಷ್ಯ, ರಸಾಯನಿಕ ಔಷಧಗಳ ಆರ್ಭಟದಲ್ಲಿ ನಂಜನಗೂಡು ರಸಬಾಳೆ ಅಳಿವಿನ ಅಂಚಿಗೆ ಬಂದು ನಿಂತಿದೆ.

ನಂಜನಗೂಡು ವಾತಾವರಣದಲ್ಲಿ ಮಾತ್ರ ಬೆಳೆಯುವ ಈ ರಸಬಾಳೆಯನ್ನು 30 ವರ್ಷಗಳ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ರಸಬಾಳೆ ಇದೀಗ 50-60 ಹೆಕ್ಟೇರ್‌ಗೆ ಬಂದು ನಿಂತಿದೆ. ರೈತರಲ್ಲಿ ಹೆಚ್ಚುತ್ತಿರುವ ಲಾಭದ ಪ್ರವೃತ್ತಿ, ಪನಾಮ ಸೊರಗು ರೋಗ, ಕಂದುಗಳ ಅಲಭ್ಯತೆಯಿಂದ ರಸಬಾಳೆ ಬೆಳೆ ಕಡಿಮೆಯಾಗುತ್ತಿದೆ.

ಭೌಗೋಳಿಕ ಮಾನ್ಯತೆ ಪಡೆದ ಬಾಳೆ

2006 ಜ.30 ರಂದು ನಂಜನಗೂಡು ರಸಬಾಳೆಗೆ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ದೊರೆತಿದೆ. ವಿಶೇಷ ಪರಿಮಳ ಹಾಗೂ ವಿಶಿಷ್ಟ ಸ್ವಾದದ ಬಾಳೆಹಣ್ಣಿನ ತಳಿ ಇತ್ತೀಚೆಗೆ ಅಳಿವಿನಂಚಿಗೆ ಸರಿಯುತ್ತಿದೆ. ಪ್ರಸ್ತುತ, ನಂಜನಗೂಡು ತಾಲೂಕಿನ 25 ಗ್ರಾಮಗಳಲ್ಲಿ ಮಾತ್ರವೇ ರಸಬಾಳೆ ಬೆಳೆಯಲಾಗುತ್ತಿದೆ. 2005 ರಿಂದ 2023 ರ ನಡುವೆ ಬೆಳೆ ಪ್ರಮಾಣ 35 ಹೆಕ್ಟೇರ್‌ಗೆ ಕುಸಿದಿದೆ.

" ಹಿಂದೊಮ್ಮೆ ನಂಜನಗೂಡು ರಸಬಾಳೆ ಅತಿ ಹೆಚ್ಚು ಬೆಳೆಯಲಾಗುತ್ತಿತ್ತು. ನಮ್ಮ ಅಜ್ಜನ ಕಾಲದಿಂದಲೂ ಹಲವರು ರಸಬಾಳೆ ಬೆಳೆಯುತ್ತಿದ್ದರು. ಆದರೆ, ಇತ್ತೀಚೆಗೆ ರಸಬಾಳೆ ಬೆಳೆಯುವುದು ಕಡಿಮೆಯಾಗುತ್ತಿದೆ. ಭೌಗೋಳಿಕ ಮಾನ್ಯತೆ ಪಡೆದಿರುವ ನಂಜುನಗೂಡು ರಸಬಾಳೆ ಅಳಿವಿನ ಅಂಚಿಕೆ ಹೋಗುತ್ತಿರುವ ಕಾರಣ ನಾವು ಈ ವರ್ಷದಿಂದ ರಸಬಾಳೆ ಬೆಳೆಯಲು ಶುರು ಮಾಡಿದ್ದೇವೆ" ಎಂದು ನಂಜನಗೂಡು ತಾಲೂಕಿನ ಹಳ್ಳಿಕೆರೆ ಹುಂಡಿಯಲ್ಲಿ ರಸಬಾಳೆ ಬೆಳೆಯುತ್ತಿರುವ ಟಿ.ನರಸೀಪುರ ತಾಲೂಕಿನ ತುಂಬಳ ಗ್ರಾಮದ ರೈತ ಎಚ್‌.ಎಸ್‌. ಶಂಭು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಮಾರುಕಟ್ಟೆಯಲ್ಲಿ ನಂಜನಗೂಡು ರಸಬಾಳೆಗೆ ಕನಿಷ್ಠ 60 ರಿಂದ 80 ರೂ. ಇರಲಿದೆ. ನಾವು ಈ ವರ್ಷ 1000 ಗಿಡ ನಾಟಿ ಮಾಡಿದ್ದು, ಮೊದಲ ಕೊಯ್ಲು ಬಂದಿದೆ. 80 ರೂ. ವರೆಗೆ ಬೆಲೆ ಸಿಕ್ಕಿದ್ದರಿಂದ ಅನುಕೂಲವಾಗಿದೆ. ಕಳೆದ ಆಗಸ್ಟ್‌ ತಿಂಗಳಲ್ಲಿ ಒಂದು ಗೊನೆಗೆ 2000 ರೂ. ದಂತೆ ಮಾರಾಟವಾಯಿತು ಎಂದು ವಿವರಿಸಿದರು.

ರಸಬಾಳೆ ಫಸಲನ್ನು ಎಳಸು ಇದ್ದಾಗಲೇ ಅಂದರೆ 15-20 ದಿನದ ಮೊದಲೇ ಕಟಾವು ಮಾಡಬೇಕು. ಇಲ್ಲವಾದರೆ ರಸಬಾಳೆಯ ಹಣ್ಣುಗಳು ಸಿಪ್ಪೆ ಸುಲಿದಂತಾಗಲಿವೆ. ಹಾಗಾಗಿ ಎಚ್ಚರಿಕೆಯಿಂದ ಬೆಳೆ ಕೊಯ್ಲು ಮಾಡಬೇಕು. ಇತ್ತೀಚೆಗೆ ತೋಟಗಾರಿಕಾ ಇಲಾಖೆ ಕೈಗೊಂಡ ಬೆಳೆ ಸಂರಕ್ಷಣೆ ಉಪಕ್ರಮಗಳಿಂದ ರಸಬಾಳೆ ಬೆಳೆಯುವವರು ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದೆ. ನನ್ನ ಬಳಿಯೇ ಮೂರ್ನಾಲ್ಕು ರೈತರು ಕಂದುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.

ನಂಜನಗೂಡು ರಸಬಾಳೆ ತೂಕ ಕಡಿಮೆ ಬರಲಿದೆ. ರುಚಿ ಮಾತ್ರ ಅದ್ಭುತವಾಗಿರಲಿದೆ. ಈ ಬೆಳೆಯನ್ನು ಸಂರಕ್ಷಿಸಲು ಸರ್ಕಾರಗಳು ಮಾರುಕಟ್ಟೆ ಒದಗಿಸಬೇಕು. ಪ್ರಸ್ತುತ, ಮೈಸೂರಿನಲ್ಲಷ್ಟೇ ರಸಬಾಳೆ ಸಿಗುತ್ತಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಹಾಪ್‌ಕಾಮ್ಸ್‌ ಮೂಲಕ ಮಾರಾಟ ಮಾಡಬೇಕು. ರೈತರಿಂದ ರಸಬಾಳೆಯನ್ನು ಖರೀದಿಸಲು ಮುಂದಾದರೆ ಕ್ರಮೇಣ ಬೆಳೆ ಪ್ರಮಾಣವೂ ಹೆಚ್ಚಲಿದೆ. ಈಗ ತೋಟಗಾರಿಕೆ ಇಲಾಖೆಯವರು ಸಣ್ಣ ರೈತರಿಗಷ್ಟೇ ಸಬ್ಸಿಡಿ ನೀಡುತ್ತಿದ್ದಾರೆ. ಬೆಳೆ ಸಂರಕ್ಷಣೆ ಸಲುವಾಗಿ ದೊಡ್ಡ ರೈತರಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ನಾವು ಮೈಸೂರು ಆರ್ಗಾನಿಕ್‌ ನರ್ಸರಿಯಲ್ಲಿ ಟಿಶ್ಯುಲ್‌ ಕಲ್ಚರ್‌ ಮೂಲಕ ಗಿಡಗಳನ್ನು ಬೆಳೆಸಿ ನಾಟಿ ಮಾಡಿದ್ದೇವೆ. ಟಿಶ್ಯು ಕಲ್ಚರ್‌ ಕ್ರಮದಿಂದ ರೋಗ ಹರಡುವಿಕೆ ತಡೆಯಬಹುದು ಎಂದು ಶಂಭು ಅಭಿಪ್ರಾಯಪಟ್ಟರು.

ರಸಬಾಳೆ ಕ್ಷೀಣಿಸಲು ಕಾರಣವೇನು?

ರಸಬಾಳೆಯು ಸೂಕ್ಷ್ಮತರರ ಬೆಳೆಯಾಗಿದೆ. ಈ ಬೆಳೆಯನ್ನು ಪ್ರಮುಖವಾಗಿ ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ, ಕೋಡಿನರಸೀಪುರ, ವೀರದೇವರಪುರ, ತಾಂಡವಪುರ, ಹಗಿನವಾಳು, ಹಳೇಪುರ, ಅಂಬಳೆ, ಕೂಗಲೂರು, ಕುರಹಟ್ಟಿ, ದೇವಿರಮ್ಮನಹಳ್ಳಿ, ಸಿದ್ದಯ್ಯನಹುಂಡಿ, ಹೆಡತಲೆ, ಹಳೇಪುರ, ಚಿನ್ನಂಬಳ್ಳಿ, ಹೆಮ್ಮರಗಾಲ, ಹಂಪಾಪುರ, ಅಂಬಳೆ, ಕಾರ್ಯ, ಕಾರಾಪುರ, ಚುಂಚನಹಳ್ಳಿ ಹರದನಹಳ್ಳಿ, ಹನುಮನಪುರ, ಸಿಂಧುವಳ್ಳಿ ಮತ್ತು ಮಾಡ್ರಹಳ್ಳಿ ಗ್ರಾಮಗಳಲ್ಲಿ ಬೆಳೆಯಲಾಗುತ್ತದೆ. ಆದರೆ, ಇತ್ತೀಚೆಗೆ ರಸಬಾಳೆಗೆ ಪನಾಮ ಸೊರಗು ರೋಗ ಕಾಣಿಸಿಕೊಳ್ಳುತ್ತಿರುವುದರಿಂದ ಬೆಳೆ ಪ್ರಮಾಣ ಕುಸಿಯುತ್ತಿದೆ. ರೋಗ ಮುಕ್ತ ಕಂದುಗಳ ಅಲಭ್ಯತೆ, ಅಸಮರ್ಪಕವಾದ ನೀರು ನಿರ್ವಹಣೆ ಕ್ರಮಗಳು, ಹೆಚ್ಚು ಇಳುವರಿ ಕೊಡುವ ಬಾಳೆ ತಳಿಗಳಾದ ಪಚ್ಚಬಾಳೆ ಮತ್ತು ಏಲಕ್ಕಿ ಬಾಳೆಗಳತ್ತ ರೈತರು ಒಲವು ತೋರುತ್ತಿರುವುದು ರಸಬಾಳೆ ಕ್ಷೀಣಿಸಲು ಕಾರಣವಾಗಿದೆ.

ನಂಜನಗೂಡು ರಸಬಾಳೆ ಬೆಳೆ ಕ್ಷೀಣಿಸಲು ಕಾರಣವಾದ ಅಂಶಗಳನ್ನು ರೈತ ಮುಖಂಡರು ಮೂರು ಆಯಾಮಗಳಲ್ಲಿ ವಿಶ್ಲೇಷಿಸಿದ್ದಾರೆ. ʼದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿದ ಸಾಮೂಹಿಕ ನಾಯಕತ್ವಕ್ಕಾಗಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮಂಜು ಕಿರಣ್‌ ಅವರು, ಒಂದನೆಯದಾಗಿ ಪಾರಂಪರಿಕ ಕೃಷಿ ಪದ್ಧತಿ ಹೆಚ್ಚು ಶ್ರಮವನ್ನು ಬೇಡುತ್ತದೆ. ಈಗ ಕುಟುಂಬಗಳು ಛಿದ್ರವಾದಂತೆ ಭೂಮಿಯೂ ತುಂಡು ತುಂಡುಗಳಾಗಿವೆ. ಜಾನುವಾರು ಗೊಬ್ಬರ ಬಳಕೆ ಕಡಿಮೆಯಾಗಿರುವ ಕಾರಣ ಬೆಳೆ ಪ್ರಮಾಣ ಕ್ಷೀಣಿಸಿದೆ. ಎರಡನೆಯದಾಗಿ ರಸಾಯನಿಕ ಔಷಧ ಸಿಂಪಡಿಸಿ ಬೆಳೆದರೂ, ನೈಸರ್ಗಿಕವಾಗಿ ಬೆಳೆದರೂ ಬೆಲೆ ಒಂದೇ ಇರುತ್ತದೆ. ಹೀಗಿರಬೇಕಾದರೆ ಹೆಚ್ಚು ಶ್ರಮ ಹಾಕುವುದೇಕೆ ಎಂಬ ಆಲಸ್ಯವೂ ಕಾರಣ. ಮೂರನೇಯದಾಗಿ ವ್ಯವಸ್ಥಿತವಾಗಿ ದೇಸಿ ತಳಿಗಳನ್ನು ರಸಾಯನಿಕ ಕಂಪೆನಿಗಳು ನಿಯಂತ್ರಿಸುತ್ತಿವೆ. ಬೆಳೆಗೆ ಸೂಕ್ತ ಬೆಲೆ, ಮಾರುಕಟ್ಟೆ ವ್ಯವಸ್ಥೆ ಸಿಗದಂತೆ ಮಾಡುವುದು, ಕೃಷಿಯಿಂದ ನಿಧಾನವಾಗಿ ರೈತರನ್ನು ವಿಮುಖಗೊಳಿಸುವುದು, ಕಾಲ ಕ್ರಮೇಶನ ಕೃಷಿಯನ್ನು ಕೈಗಾರಿಕಾ ಕ್ಷೇತ್ರವನ್ನಾಗಿ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಈ ಎಲ್ಲಾ ಕಾರಣಗಳಿಂದ ನಂಜನಗೂಡು ರಸಬಾಳೆ ಅಳಿವಿನಂಚಿಗೆ ಸರಿಯುತ್ತಿದೆ ಎಂದು ವಿಶ್ಲೇಷಿಸಿದರು.

ಜಾಗತಿಕ ಮಟ್ಟದಲ್ಲಿ ರಸಾಯನಿಕ ಕಂಪೆನಿಗಳು ದೇಸಿ ತಳಿಗಳನ್ನು ಕೊಲ್ಲುತ್ತಿವೆ. ಸರಿಯಾದ ಬಿತ್ತನೆ ಸಿಗದಂತೆ ನೋಡಿಕೊಳ್ಳುತ್ತಿವೆ. ನಂಜನಗೂಡು ರಸಬಾಳೆಗೆ ಭೌಗೋಳಿಕ ಮಾನ್ಯತೆ ದೊರೆತರೂ ಅದನ್ನು ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ಬಂದಿದೆ ಎಂದು ದೂರಿದರು.

ರಸಬಾಳೆ ಸಂರಕ್ಷಣೆಗೆ ಕ್ರಮ

ಪಾರಂಪರಿಕವಾದ ನಂಜನಗೂಡು ರಸಬಾಳೆಗೆ ತಗುಲುವ ರೋಗಗಳ ನಿಯಂತ್ರಣ, ಉತ್ತಮ ಇಳುವರಿಗೆ ಅಗತ್ಯ ಪ್ರೋತ್ಸಾಹ ನೀಡುವ ಸಲುವಾಗಿ ತೋಟಗಾರಿಕೆ ಇಲಾಖೆ ಹಲವು ಉಪಕ್ರಮಗಳನ್ನು ಕೈಗೊಂಡಿದೆ.

2023-24 ನೇ ಸಾಲಿನಿಂದ 2028-29 ನೇ ಸಾಲಿನವರೆಗೆ ಒಟ್ಟು 6 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಬೆಳೆ ಸಂರಕ್ಷಣೆ, ಬೆಳೆ ಪ್ರದೇಶ ವಿಸ್ತರಣೆ, ಕೋಯ್ಲೋತ್ತರ ನಿರ್ವಹಣೆ ಮತ್ತು ಮಾರುಕಟ್ಟೆಗೆ ಸಂಬಂಧಿಸಿದ ಕ್ರಿಯಾ ಯೋಜನೆ ರೂಪಿಸಲಾಗಿದೆ.

ಮಣ್ಣಿನ ಸವಕಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೀಗ ತೋಟಗಾರಿಕಾ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳೇ ನೈಸರ್ಗಿಕ ಕೃಷಿಯತ್ತ ಮುಖ ಮಾಡಿವೆ. ರಸಗೊಬ್ಬರ, ಕೀಟನಾಶಕಗಳ ಬಳಕೆಯಿಂದ ಆಗಿರುವ ಅನಾಹುತಗಳನ್ನು ಮನಗಂಡು ಪಾರಂಪರಿಕ ಕೃಷಿ ವಿಧಾನಗಳ ಮೊರೆ ಹೋಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಮಂಜು ಕಿರಣ್‌ ವಿವರಿಸಿದರು.

ತೋಟಗಾರಿಕಾ ಇಲಾಖೆ, ತೋಟಗಾರಿಕಾ ಮಹಾವಿದ್ಯಾಲಯ, ICAR- KVK ಮತ್ತು JSS ಸುತ್ತೂರು ಸಂಸ್ಥೆಗಳ ತಜ್ಞರನ್ನು ಒಳಗೊಂಡ ತಾಂತ್ರಿಕ ಸಮಿತಿ ಸೂಚನೆಯಂತೆ ರೈತರಿಗೆ ಅಗತ್ಯ ತರಬೇತಿ, ಪ್ರಾತ್ಯಕ್ಷತೆ ಹಾಗೂ ಪನಾಮ ರೋಗ ಹತೋಟಿ ಕುರಿತು ಸಲಹೆ ಸೂಚನೆ ನೀಡುತ್ತಿವೆ. ಕೆಲವೊಮ್ಮೆ ಈ ಉಪಕ್ರಮಗಳನ್ನು ಕೇವಲ ದಾಖಲೆಗಳಿಗಷ್ಟೇ ಮಾಡಲಾಗುತ್ತದೆ. ಈ ಹಿಂದೆ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಭತ್ತ ಬೆಳೆಯಲಾಗಿತ್ತು. ಉತ್ತಮ ಇಳುವರಿ ಕೂಡ ಬಂದಿತ್ತು. ಆದರೆ, ತಾಕಿನ ಪ್ರಾತ್ಯಕ್ಷತೆ ನೀಡಲು ಕೃಷಿ ವಿಜ್ಞಾನ ಕೇಂದ್ರಗಳೇ ಹಿಂದೇಟು ಹಾಕಿದವು. ಈ ನಡೆ ರೈತರ ಪರವಾದ ಕಾಳಜಿಗೆ ಸಾಕ್ಷಿಯಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಸಬಾಳೆಯನ್ನು ಸಂರಕ್ಷಿಸಿ, ಉತ್ತೇಜಿಸಬೇಕಾದರೆ ಉತ್ತಮ ಮಾರುಕಟ್ಟೆ ವ್ಯವಸ್ಥೆ, ಪ್ರೋತ್ಸಾಹಧನ, ರೈತರಲ್ಲಿ ವಿಶ್ವಾಸ ತುಂಬಿಸುವ ಕೆಲಸಗಳು ಆಗಬೇಕು. ರೋಗ ಮುಕ್ತ ಕಂದುಗಳನ್ನು ಕೃಷಿ ವಿಜ್ಞಾನ ಕೇಂದ್ರ ಹಾಗೂ ಭಾರತೀಯ ತೋಟಗಾರಿಕಾ ಇಲಾಖೆಗಳು ಪೂರೈಸಬೇಕು. ಫಸಲನ್ನೂ ಖರೀದಿಸುವ ಭರವಸೆ ನೀಡಬೇಕು. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟವನ್ನು ಪ್ರಚಾರ ಮಾಡಬೇಕು ಎಂದು ಮಂಜು ಕಿರಣ್‌ ಅವರು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಅವರು ʼದ ಫೆಡರಲ್‌ ಕರ್ನಾಟಕʼದ ಜೊತೆ ಮಾತನಾಡಿ, ನಂಜನಗೂಡು ರಸಬಾಳೆಯಲ್ಲಿ ಸಾಕಷ್ಟು ಪೌಷ್ಠಿಕಾಂಶಗಳಿವೆ. ಆದರೆ, ಇತ್ತೀಚೆಗೆ ಅಪ್ಪಟ ದೇಸಿ ತಳಿಯಾದ ರಸಬಾಳೆ ಬೆಳೆಯುವ ಪ್ರಮಾಣ ಕಡಿಮೆಯಾಗಿದೆ. ರೈತರು ಲಾಭದತ್ತ ಮುಖ ಮಾಡಿದ್ದು, ಏಲಕ್ಕಿ ಹಾಗೂ ಪಚ್ಚಬಾಳೆ ಬೆಳೆಯುತ್ತಿದ್ದಾರೆ. ಹಾಗಾಗಿ ಬೆಳೆ ಪ್ರಮಾಣ ಕ್ಷೀಣಿಸುತ್ತಿದೆ ಎಂದು ತಿಳಿಸಿದರು.

ನಂಜನಗೂಡು ರಸಬಾಳೆಯ ಇಳುವರಿ ಪ್ರಮಾಣ ಕಡಿಮೆ ಇದೆ. ಇದರಿಂದ ರೈತರಿಗೆ ಯಾವುದೇ ಅನುಕೂಲವಾಗುತ್ತಿಲ್ಲ. ಸರ್ಕಾರಗಳು ರಸಬಾಳೆಯನ್ನು ಉಳಿಸಬೇಕಾದರೆ ವಿಶೇಷ ಪ್ರೋತ್ಸಾಹ ನೀಡಬೇಕು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ನಿಗದಿ ಮಾಡಬೇಕು. ಆಗ ಮಾತ್ರ ರೈತರು ರಸಬಾಳೆ ಬೆಳೆಯಲು ಮುಂದಾಗಲಿದ್ದಾರೆ ಎಂದು ಹೇಳಿದರು.

ರಸಬಾಳೆ ಬೆಳೆಯಲು ಪ್ರೋತ್ಸಾಹಧನ

ನಂಜನಗೂಡು ರಸಬಾಳೆ ಪ್ರದೇಶ ವಿಸ್ತರಣೆಯನ್ನು ಪ್ರೋತ್ಸಾಹಿಸಲು ತೋಟಗಾರಿಕಾ ಇಲಾಖೆಯು ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ಅರ್ಧ ಎಕರೆಗೆ ಶೇ 90 ರಷ್ಟು ಅಂದರೆ 67,311 ರೂ., ಸಾಮಾನ್ಯ ವರ್ಗದ ರೈತರಿಗೆ ಶೇ 75 ರಂತೆ ಅಂದರೆ 56,093 ರೂ. ಪ್ರೋತ್ಸಾಹಧನ ನೀಡುತ್ತಿದೆ.

2023-24 ನೇ ಸಾಲಿನಲ್ಲಿ 49 ರೈತರಿಗೆ 9.08 ಹೆಕ್ಟೇರ್ ಪ್ರದೇಶ ವಿಸ್ತರಣೆಗಾಗಿ 16.83 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗಿದೆ. 2024-25 ನೇ ಸಾಲಿನಲ್ಲಿ 20.10 ಹೆಕ್ಟೇರ್ ಪ್ರದೇಶ ವಿಸ್ತರಣೆಗಾಗಿ 106 ರೈತರಿಗೆ 35.71 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗಿದೆ.

ಸುಧಾರಿತಾ ಬೇಸಾಯ ಕ್ರಮಗಳ ಬಗ್ಗೆ 2023-24 ನೇ ಸಾಲಿನಿಂದ ಇಲ್ಲಿಯವರೆಗೆ 340 ರೈತರಿಗೆ ತರಬೇತಿ ನೀಡಲಾಗಿದೆ. 2025-26 ನೇ ಸಾಲಿನಲ್ಲಿ ರೈತರ ತಾಕಿನಲ್ಲಿ 10.59 ಹೆಕ್ಟೇರ್ ಪ್ರದೇಶ ವಿಸ್ತರಣೆಗೆ 35.59 ಲಕ್ಷ ರೂ. ಅನುದಾನ ನಿಗದಿ ಮಾಡಲಾಗಿದೆ ಎಂದು ತೋಟಗಾರಿಕಾ ಇಲಾಖೆ ಹೇಳಿದೆ.

ಪಾರಂಪರಿಕವಾದ ನಂಜನಗೂಡು ರಸಬಾಳೆಯನ್ನು ಭವಿಷ್ಯದಲ್ಲಿ ಉಳಿಸಿಕೊಳ್ಳಲು ಮತ್ತು ರೈತರಿಗೆ ಈ ರಸಬಾಳೆ ಬೆಳೆಯಲು ಉತ್ತೇಜನ ನೀಡಲು ಇಲಾಖೆ ಬದ್ಧವಾಗಿದೆ. ಈಗ ರಸಬಾಳೆ ಬೆಳೆ ಪ್ರಮಾಣವು ಸುಮಾರು ಎಕರೆಗೆ ವಿಸ್ತರಿಸಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

Read More
Next Story