
Nandini Milk | ನಂದಿನಿ ಹಾಲು ದರ ಹೆಚ್ಚಳ: ಕೆಎಂಎಫ್ ಅಧ್ಯಕ್ಷರು ಏನೆಂದರು?
ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಂದಿನಿ ಹಾಲಿನ ದರ ಏರಿಕೆಯ ಕುರಿತು ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಕೇಳಿಬರುತ್ತಿರುವ ನಂದಿನಿ ಹಾಲಿನ ದರ ಏರಿಕೆಯ ವಿಷಯ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಜ್ಯ ಬಜೆಟ್ ಬಳಿಕ ಪ್ರತಿ ಲೀಟರ್ ಹಾಲಿನ ದರದಲ್ಲಿ ಐದು ರೂ. ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ಮೊದಲು ಸ್ವತಃ ಮುಖ್ಯಮಂತ್ರಿಗಳೂ ಹಾಲಿನ ದರ ಏರಿಕೆಯ ಮೂಲಕ ರಾಜ್ಯದ ಹೈನುಗಾರರಿಗೆ ಇನ್ನಷ್ಟು ಅನುಕೂಲ ಮಾಡಿಕೊಡಲಾಗುವುದು ಎಂಬ ಹೇಳಿಕೆ ನೀಡಿದ್ದರು. ಆ ಬಳಿಕ ಹಾಲಿನ ದರ ಏರಿಕೆಯ ವಿಷಯ ಸಾಕಷ್ಟು ಬಾರಿ ಸುದ್ದಿಯಾಗಿತ್ತು. ಆದರೆ, ಕರ್ನಾಟಕ ಹಾಲು ಮಹಾಮಂಡಲ(ಕೆಎಂಎಫ್) ದರ ಏರಿಕೆಯ ಪ್ರಸ್ತಾಪದ ಕುರಿತು ಸ್ಪಷ್ಟನೆಯನ್ನೂ ನೀಡಿತ್ತು.
ಇದೀಗ ಮತ್ತೊಮ್ಮೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಂದಿನಿ ಹಾಲಿನ ದರ ಏರಿಕೆಯ ಕುರಿತು ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.
ಆದರೆ, ದರ ಹೆಚ್ಚಳ ಮಾಡುವಂತೆ ಒಕ್ಕೂಟಗಳು ಮತ್ತು ಹಾಲು ಉತ್ಪಾದಕರ ಬೇಡಿಕೆ ಇದೆ. ಪಶುಪಾಲನೆ ಮತ್ತು ಹೈನುಗಾರಿಕೆ ಇಲಾಖೆಯಿಂದಲೂ ದರ ಹೆಚ್ಚಳದ ಬಗ್ಗೆ ಒತ್ತಡ ಇದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ಸಂಬಂಧಿಸಿದ ಒಕ್ಕೂಟಗಳ ಸಭೆ ಕರೆದು ಚರ್ಚಿಸಲಾಗಿದೆ. ಸಭೆಯಲ್ಲಿ ಲೀಟರಿಗೆ ಐದು ರೂ. ದರ ಹೆಚ್ಚಳಕ್ಕೆ ಸಹಮತ ವ್ಯಕ್ತವಾಗಿದೆ. ಆ ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಬೇಕು ಎಂಬುದೂ ಚರ್ಚೆಯಾಗಿದೆ. ಆ ವಿಷಯವನ್ನು ಈಗಾಗಲೇ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಭೀಮಾ ನಾಯ್ಕ್ ಹೇಳಿದ್ದಾರೆ.
ಆದರೆ, ರಾಜ್ಯ ಸರ್ಕಾರ ಈವರೆಗೆ ದರ ಹೆಚ್ಚಳದ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಿರುವ ಅವರು, ದರ ಹೆಚ್ಚಳ ಸದ್ಯಕ್ಕೆ ಇಲ್ಲ ಎಂಬ ಸೂಚನೆ ನೀಡಿದ್ದಾರೆ.
ಆದರೆ, ಹಾಲು ಒಕ್ಕೂಟಗಳು ಮತ್ತು ಹಾಲು ಉತ್ಪಾದಕ ರೈತರು ಲೀಟರಿಗೆ ಐದು ರೂಪಾಯಿ ದರ ಹೆಚ್ಚಳ ಮಾಡಿ, ಆ ಹೆಚ್ಚುವರಿ ದರವನ್ನು ಒಕ್ಕೂಟಗಳು ಉಳಿಸಿಕೊಳ್ಳದೆ ನೇರವಾಗಿ ರೈತರಿಗೆ ವರ್ಗಾಯಿಸಬೇಕು ಎಂದು ಕೂಡ ಹೇಳಿದ್ದಾರೆ. ಈ ಹಿಂದೆ ದರ ಹೆಚ್ಚಳದ ಕುರಿತು ಪಶುಪಾಲನೆ ಮತ್ತು ಹೈನುಗಾರಿಕೆ ಇಲಾಖೆ ಸಚಿವರು ಕೂಡ ಹಾಲು ಒಕ್ಕೂಟಗಳೊಂದಿಗೆ ಸಭೆ ನಡೆಸಿ ದರ ಹೆಚ್ಚಳದ ಕುರಿತು ಚರ್ಚಿಸಿದ್ದರು. ಆ ವೇಳೆ ಕೂಡ ಹೆಚ್ಚುತ್ತಿರುವ ವೆಚ್ಚಗಳ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಳ ಅನಿವಾರ್ಯ ಎಂದು ಒಕ್ಕೂಟಗಳು ಹೇಳಿದ್ದವು.