CM Meeting |ಮಲೈ ಮಹದೇಶ್ವರ ಲಾಡು ತಯಾರಿಕೆಗೆ ನಂದಿನಿ ತುಪ್ಪ; ಬೆಟ್ಟದಲ್ಲಿ ಮದ್ಯ ಸೇವನೆ ನಿಷಿದ್ಧ- ಸಿ.ಎಂ ಘೋಷಣೆ
x

CM Meeting |ಮಲೈ ಮಹದೇಶ್ವರ ಲಾಡು ತಯಾರಿಕೆಗೆ ನಂದಿನಿ ತುಪ್ಪ; ಬೆಟ್ಟದಲ್ಲಿ ಮದ್ಯ ಸೇವನೆ ನಿಷಿದ್ಧ- ಸಿ.ಎಂ ಘೋಷಣೆ

ಇಲ್ಲಿಯವರೆಗೂ ಬೆಟ್ಟದಲ್ಲಿ ಮದ್ಯ, ತಂಬಾಕು ಮಾರಾಟ ಮುಕ್ತವಾಗಿತ್ತು. ಇನ್ನು ಮುಂದೆ ಹೊರಗಿನಿಂದ ತರುವುದಕ್ಕೂ ತಡೆ ಹಾಕಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.


ಮಲೈ ಮಹದೇಶ್ವರ ಬೆಟ್ಟದಲ್ಲಿ ಇನ್ನು ಮುಂದೆ ಮದ್ಯ, ತಂಬಾಕು ಸೇವನೆಯನ್ನು ಸಂಪೂರ್ಣ ನಿರ್ಬಂಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

ಸಚಿವ ಸಂಪುಟದ ಬಳಿಕ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೂ ಬೆಟ್ಟದಲ್ಲಿ ಮದ್ಯ, ತಂಬಾಕು ಮಾರಾಟ ಮುಕ್ತವಾಗಿತ್ತು. ಇನ್ನು ಮುಂದೆ ಹೊರಗಿನಿಂದ ತರುವುದಕ್ಕೂ ತಡೆ ಹಾಕಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಕ್ರಮ ಮದ್ಯ ಮಾರಾಟ ತಡೆಯಬೇಕು. ಮದ್ಯ ವ್ಯಾಪಾರದ ಚಾಳಿಗೆ ಬಿದ್ದ ಆರೋಪಿಯೊಬ್ಬ ಗಡಿಪಾರಾದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಅಧಿಕಾರಿಗಳಿಂದ ತಿಳಿದ ಸಿಎಂ ಅವರು, ತಕ್ಷಣ ಕಠಿಣ ಕಾನೂನಿನ ಅಡಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ನಿರ್ಣಯ ಜಾರಿದ ಮಾಡದವರ ವಿರುದ್ಧ ಆಕ್ರೋಶ

ಈ ಹಿಂದೆ ನಡೆದ ಮಲೈ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಒಂದೂವರೆ ವರ್ಷದಿಂದ ಜಾರಿ ಆಗದೇ ಇರುವುದಕ್ಕೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯನ್ನು ಸಿಎಂ ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡರು.

ಪ್ರಾಧಿಕಾರದ ಕೆಲಸ ಕಾರ್ಯಗಳು, ಕಾಮಗಾರಿಗಳು ವೇಗವಾಗಿ ನಡೆಯಲು ಒಬ್ಬ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌(ಎಇಇ) ಪ್ರಾಧಿಕಾರಕ್ಕೆ ನೇಮಿಸಲು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ್ ಅವರಿಗೆ ಸೂಚಿಸಿದರು.

ಹಿಂದಿನ‌ ಸಭೆಯ ನಿರ್ಣಯದಂತೆ ಪ್ರವಾಸಿಗರ ವಿಶ್ರಾಂತಿ ತಾಣ ಮತ್ತು ಶೌಚಾಲಯಗಳ ಕಾಮಗಾರಿ ಪೂರ್ಣಗೊಳ್ಳದ ಬಗ್ಗೆಯೂ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಪ್ರಾಧಿಕಾರ ಮತ್ತು ಮಹದೇಶ್ವರ ಬೆಟ್ಟಕ್ಕೆ ಸೇರಿದ ಜಾಗದಲ್ಲಿ ನೆಲೆಸಿರುವ 13 ಕುಟುಂಬಗಳಿಗೆ ಪರ್ಯಾಯ ಸ್ಥಳ ಒದಗಿಸಿ ಸ್ಥಳಾಂತರಿಸುವ ಮತ್ತು ಉಳಿದಿರುವವರನ್ನು ಹಾಗೇ ಉಳಿಸಿ, ಹೊಸದಾಗಿ ವಾಣಿಜ್ಯ ಉದ್ದೇಶದ ನಿರ್ಮಾಣಗಳಿಗೆ ಅವಕಾಶ ಆಗದಂತೆ ಖಚಿತವಾಗಿ ತಡೆಯುವ ಬಗ್ಗೆ ಚರ್ಚೆ ನಡೆಸಲಾಯಿತು.

ಪ್ರಾಧಿಕಾರದಲ್ಲಿ ಕೆಲಸ ಮಾಡುವ 66 ಕಾರ್ಮಿಕ ಕುಟುಂಬಗಳಿಗೆ ತಲಾ 20 ಲಕ್ಷ ವೆಚ್ಚದಲ್ಲಿ ಒಟ್ಟು 12-13 ಕೋಟಿ ರೂ. ವೆಚ್ಚದಲ್ಲಿ ಆದಷ್ಟು ಬೇಗ ನೂತನ ಮನೆ ಕಟ್ಟಿ ಕೊಡಲು ಸಭೆ ನಿರ್ಣಯಿಸಿತು.

ಲಾಡು ತಯಾರಿಕೆಗೆ ನಂದಿನಿ ತುಪ್ಪ ಬಳಕೆ

ಮಲೈ ಮಹದೇಶ್ವರ ಬೆಟ್ಟದಲ್ಲಿ ಪ್ರಸಾದ ಹಾಗೂ ಲಾಡು ತಯಾರಿಕೆಗೆ ತಿರುಪತಿ ದೇವಸ್ಥಾನದ ಮಾದರಿಯಲ್ಲಿ ನಂದಿನಿ ತುಪ್ಪ ಬಳಸಿ, ಪ್ರಸಾದದ ಗುಣಮಟ್ಟ ಉನ್ನತೀಕರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ದಿನಗಳಲ್ಲಿ 100 ಗ್ರಾಂ ತೂಕದ ಪ್ರಸಾದ ಲಾಡುವನ್ನು ಕೇವಲ 35 ರೂ.ಗೆ ವಿತರಿಸುವ ಬಗ್ಗೆ ಸಭೆ ನಿರ್ಣಯಿಸಿತು.

Read More
Next Story