Namma Nandini Brand | ಒಂದೇ ವಾರದಲ್ಲಿ ಗ್ರಾಹಕರಿಗೆ ಅಚ್ಚುಮೆಚ್ಚಾದ ನಂದಿನಿ ದೋಸೆ, ಇಡ್ಲಿ ಹಿಟ್ಟು
ಕೆಎಂಎಫ್ ಬಿಡುಗಡೆ ಮಾಡಿದ ನಂದಿನಿ ಬ್ರ್ಯಾಂಡ್ ದೋಸೆ ಹಾಗೂ ಇಡ್ಲಿ ಹಿಟ್ಟು ಈಗ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಶೇ 5 ರಷ್ಟು ವೇ ಪ್ರೋಟಿನ್ ಮಿಶ್ರಣವಿರುವ ದೋಸೆ ಹಾಗೂ ಇಡ್ಲಿ ಹಿಟ್ಟಿಗೆ ಬೇಡಿಕೆ ದುಪ್ಪಟ್ಟಾಗಿದೆ.
ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ʼನಂದಿನಿʼ ಬ್ರ್ಯಾಂಡ್ ಎಲ್ಲೆಡೆ ಸದ್ದು ಮಾಡುತ್ತಿದೆ. ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಲಡ್ಡು ತಯಾರಿಕೆಗೆ ತುಪ್ಪ ಪೂರೈಕೆಯ ಬಳಿಕ ನಂದಿನಿ ಬ್ರ್ಯಾಂಡ್ ಖ್ಯಾತಿ ದೇಶದ ವಿವಿಧ ರಾಜ್ಯಗಳಿಗೆ ವ್ಯಾಪಿಸಿದೆ.
ತಿರುಪತಿಗೆ ತುಪ್ಪ ಪೂರೈಸಿದ ಬಳಿಕ ದೆಹಲಿ ಹಾಗೂ ರಾಜಸ್ತಾನದಲ್ಲಿ ನಂದಿನಿ ಹಾಲು, ಮೊಸರು ಮಾರಾಟ ಆರಂಭಿಸಿ, ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದ್ದ ಮದರ್ ಡೇರಿ ಹಾಗೂ ಅಮುಲ್‌ಗೆ ಪೈಫೋಟಿ ನೀಡಿತು. ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳದಲ್ಲಿ ಈಗಾಗಲೇ ನಂದಿನಿ ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸಿ, ಉತ್ತಮ ವ್ಯಾಪಾರ ಕಂಡಿವೆ. ಇದರ ಮಧ್ಯೆ, ಕೆಎಂಎಫ್ ಬಿಡುಗಡೆ ಮಾಡಿದ ನಂದಿನಿ ಬ್ರ್ಯಾಂಡ್ ದೋಸೆ ಹಾಗೂ ಇಡ್ಲಿ ಹಿಟ್ಟು ಈಗ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಶೇ 5 ರಷ್ಟು ವೇ ಪ್ರೋಟಿನ್ ಮಿಶ್ರಣವಿರುವ ದೋಸೆ ಹಾಗೂ ಇಡ್ಲಿ ಹಿಟ್ಟಿಗೆ ಬೇಡಿಕೆ ದುಪ್ಪಟ್ಟಾಗಿದೆ.
ನಿತ್ಯ ಐದು ಟನ್ ಮಾರಾಟ ಗುರಿ
ಬೆಂಗಳೂರಿನ ದಕ್ಷಿಣ ಹಾಗೂ ಪಶ್ಚಿಮ ಭಾಗದ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಮಾರಾಟ ಆರಂಭಿಸಿರುವ ನಂದಿನಿ ಬ್ರ್ಯಾಂಡ್ ದೋಸೆ ಹಾಗೂ ಇಡ್ಲಿ ಹಿಟ್ಟಿಗೆ ಭಾರೀ ಬೇಡಿಕೆ ಬಂದಿದೆ. ಬೆಂಗಳೂರಿನ ಎರಡು ಭಾಗಗಳಲ್ಲಿ ನಿತ್ಯ 2,250 ಕೆ.ಜಿ. ದೋಸೆ ಹಾಗೂ ಇಡ್ಲಿ ಹಿಟ್ಟು ಮಾರಾಟವಾಗುತ್ತಿದೆ. ಕೆಲವೇ ದಿನಗಳಲ್ಲಿ ಇದು 5000 ಕೆ.ಜಿ.ಗೆ ಮುಟ್ಟಲಿದೆ. ಬೆಂಗಳೂರಿನ ಉತ್ತರ ಹಾಗೂ ಪೂರ್ವ ಭಾಗದ ನಂದಿನಿ ಪಾರ್ಲರ್ಗಳಲ್ಲಿ ಎರಡು ಮೂರು ದಿನಗಳಲ್ಲಿ ದೋಸೆ ಹಾಗೂ ಇಡ್ಲಿ ಹಿಟ್ಟು ಮಾರಾಟ ಆರಂಭಿಸಲಾಗುವುದು. ಬೆಂಗಳೂರು ಒಂದರಲ್ಲೇ 10ರಿಂದ 20 ಸಾವಿರ ಕೆ.ಜಿ. ಹಿಟ್ಟು ಮಾರಾಟ ಮಾಡುವ ಉದ್ದೇಶವಿದೆ ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಮುಂದಿನ ತಿಂಗಳಿಂದ ರಾಜ್ಯವ್ಯಾಪಿ ಮಾರಾಟ
ಬೆಂಗಳೂರಿನಲ್ಲಿ ವೇ ಪ್ರೋಟಿನ್‌ಯುಕ್ತ ನಂದಿನಿ ಬ್ರ್ಯಾಂಡ್ ದೋಸೆ ಹಾಗೂ ಇಡ್ಲಿ ಹಿಟ್ಟಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಿಟ್ಟಿನ ಉತ್ಪಾದನೆ, ಸಂಗ್ರಹಣೆ ಹಾಗೂ ಪೂರೈಕೆಗೆ ಅಗತ್ಯವಾದ ಸಿದ್ಧತೆಗಳನ್ನು ಕೈಗೊಂಡು ರಾಜ್ಯವ್ಯಾಪಿ ಮಾರುಕಟ್ಟೆ ವಿಸ್ತರಿಸಲು ಕೆಎಂಎಫ್ ನಿರ್ಧರಿಸಿದೆ.
ಈ ಕುರಿತು ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್, ಶೇ5 ರಷ್ಟು ವೇ ಪ್ರೋಟಿನ್ ಮಿಶ್ರಣ ಇರುವುದರಿಂದ ದೋಸೆ ಹಾಗೂ ಇಡ್ಲಿ ಹಿಟ್ಟಿಗೆ ಭಾರೀ ಬೇಡಿಕೆ ಬರುತ್ತಿದೆ. ಬೆಂಗಳೂರಿನ ಎಲ್ಲ ನಂದಿನಿ ಮಿಲ್ಕ್ ಪಾರ್ಲರ್‌ಗಳಲ್ಲಿ ಮಾರಾಟ ಪೂರ್ಣಗೊಳಿಸಿದ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾರಾಟ ವಿಸ್ತರಿಸಲಾಗುವುದು. ಒಂದೆರಡು ದಿನದಲ್ಲಿ ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುವುದು. ಈಗಾಗಲೇ ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದಿಂದಲೂ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಪೂರೈಸುವಂತೆ ಜನರು ಕರೆ ಮಾಡುತ್ತಿದ್ದಾರೆ. ಕೆಎಂಎಫ್ ಅಗತ್ಯ ಸಿದ್ಧತೆ ಕೈಗೊಂಡು ರಾಜ್ಯಾದ್ಯಂತ ಮಾರಾಟಕ್ಕೆ ಮುಂದಾಗಲಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮುಂದಿನ ತಿಂಗಳಿಂದಲೇ ಮಾರಾಟ ಆರಂಭಿಸಲಾಗುವುದು ಎಂದು ತಿಳಿಸಿದರು.
ನಂದಿನಿ ಬ್ರ್ಯಾಂಡಿನ ಈ ಉತ್ಪನ್ನ ಖಾಸಗಿ ಕಂಪನಿಗಳ ಹಿಟ್ಟಿಗಿಂತ ಉತ್ಕೃಷ್ಟವಾಗಿದೆ. ವೇ ಪ್ರೋಟಿನ್ ಅಂಶ ಸೇರಿಸಿರುವುದೇ ಇದಕ್ಕೆ ಕಾರಣ ಎಂದು ವಿವರಿಸಿದರು.
ಸಾಗಣೆಗೆ ಹೆಚ್ಚುವರಿ ವಾಹನ ಖರೀದಿ
ಬೆಂಗಳೂರಿನಲ್ಲಿ ಪ್ರಸ್ತುತ 5-6 ಹವಾನಿಯಂತ್ರಿತ (ಎಸಿ ಕಂಟೇನರ್)ವಾಹನಗಳ ಮೂಲಕ ಪಾರ್ಲರ್ಗಳಿಗೆ ದೋಸೆ ಹಾಗೂ ಇಡ್ಲಿ ಹಿಟ್ಟು ಪೂರೈಸಲಾಗುತ್ತಿದೆ. ಶೀಘ್ರದಲ್ಲೇ ಹೆಚ್ಚುವರಿ 18ವಾಹನಗಳನ್ನು ಖರೀದಿಸಿ ಹಿಟ್ಟು ಪೂರೈಸಲು ಕೆಎಂಎಫ್ ಯೋಜಿಸಿದೆ.
ಬೆಂಗಳೂರಿನಲ್ಲಿ ರೆಡಿ ಟು ಕುಕ್ ಮಾದರಿಯ ಆಹಾರ ಪದಾರ್ಥಗಳಿಗೆ ಹೆಚ್ಚು ಬೇಡಿಕೆ ಇದೆ. ಮಾರುಕಟ್ಟೆ ಸಾಕಷ್ಟು ಖಾಸಗಿ ಕಂಪನಿಗಳ ದೋಸೆ ಹಾಗೂ ಇಡ್ಲಿ ಹಿಟ್ಟು ಲಭ್ಯವಿದೆ. ಆದರೆ, ನಂದಿನಿ ಬ್ರ್ಯಾಂಡ್ ದೋಸೆ ಹಾಗೂ ಇಡ್ಲಿ ಹಿಟ್ಟು ಶೇ 5 ರಷ್ಟು ವೇ ಪ್ರೋಟಿನ್ ಆಧಾರಿತವಾಗಿದ್ದು, ಖರೀದಿಗೆ ಹೆಚ್ಚು ಜನರು ಉತ್ಸಾಹ ತೋರುತ್ತಿದ್ದಾರೆ. ಇನ್ನು ಹಿಟ್ಟಿನ ಉತ್ಪಾದನೆ ಹಾಗೂ ಪ್ಯಾಕಿಂಗ್‌ಗಾಗಿ ಖಾಸಗಿ ಏಜೆನ್ಸಿಯೊಂದಿಗೆ ಕೆಎಂಎಫ್ ಒಪ್ಪಂದ ಮಾಡಿಕೊಂಡಿದೆ ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂದೇ ವಾರದಲ್ಲಿ ಗ್ರಾಹಕರ ಚಿತ್ತ ಕದ್ದ ʼನಂದಿನಿʼ
ಡಿ.25 ರಂದು ಕ್ರಿಸ್‌ಮಸ್ ದಿನ ನಂದಿನಿ ಬ್ರ್ಯಾಂಡ್ ದೋಸೆ ಹಾಗೂ ಇಡ್ಲಿ ಹಿಟ್ಟಿನ ಉತ್ಪನ್ನವನ್ನು ಸಿಎಂ ಸಿದ್ದರಾಮಯ್ಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು. ಮಾರುಕಟ್ಟೆಗೆ ಬಂದ ಒಂದೇ ವಾರದಲ್ಲಿ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಭರ್ಜರಿ ವ್ಯಾಪಾರದ ಮೂಲಕ ಯಶಸ್ಸು ಸಾಧಿಸಿದೆ.
ಇದಕ್ಕೂ ಮುನ್ನ ಅಕ್ಟೋಬರ್ ತಿಂಗಳಲ್ಲಿ ದೋಸೆ ಹಾಗೂ ಇಡ್ಲಿ ಹಿಟ್ಟಿನ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಕೆಎಂಎಫ್ ಸಿದ್ಧತೆ ನಡೆಸಿತ್ತು. ಅದಾದ ಬಳಿಕ ನ.26 ರಂದು ಉತ್ಪನ್ನಗಳ ಬಿಡುಗಡೆಗೆ ದಿನಾಂಕವನ್ನೂ ಪ್ರಕಟಿಸಿತ್ತು. ಆದರೆ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಜಗದೀಶ್ ಕುಮಾರ್ ವರ್ಗಾವಣೆ ಬಳಿಕ ಉತ್ಪನ್ನಗಳ ಬಿಡುಗಡೆ ಮುಂದೂಡಲಾಗಿತ್ತು. ನಂದಿನಿ ಬ್ರ್ಯಾಂಡ್ ಮೌಲ್ಯ ಹೆಚ್ಚಿಸುವ ಸಲುವಾಗಿ ಐಸಿಸಿ ಟಿ-20 ವಿಶ್ವಕಪ್, ಇಂಡಿಯನ್ ಸೂಪರ್ ಲೀಗ್ ಪ್ರೊ ಕಬಡ್ಡಿ ತಂಡಗಳಿಗೂ ಪ್ರಾಯೋಜಕತ್ವ ವಹಿಸಿತ್ತು.
ದೇಶದ ವಿವಿಧ ರಾಜ್ಯಗಳ ಮಾರುಕಟ್ಟೆಯಲ್ಲಿ ಈಗಾಗಲೇ ಕೆಎಂಎಫ್ ನಂದಿನಿ ಬ್ರ್ಯಾಂಡಿನಡಿ ಹಾಲು, ಬ್ರೆಡ್, ತುಪ್ಪ, ಬೆಣ್ಣೆ, ಮೊಸರು, ಚೀಸ್, ಮಜ್ಜಿಗೆ, ಐಸ್ ಕ್ರೀಮ್ ಹಾಗೂ ಸುವಾಸನೆಯಭರಿತ ಹಾಲು ಸೇರಿ ಹಲವು ಉತ್ಪನ್ನಗಳು ಮಾರಾಟವಾಗುತ್ತಿವೆ.