Namma Nandini | ಕೊನೆಗೂ ಮಾರುಕಟ್ಟೆಗೆ ಲಗ್ಗೆ ಇಟ್ಟ ʼನಂದಿನಿʼ ಬ್ರ್ಯಾಂಡ್ ದೋಸೆ, ಇಡ್ಲಿ ಹಿಟ್ಟು
ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ನಂದಿನಿ ಬ್ರ್ಯಾಂಡಿನ ದೋಸೆ ಹಾಗೂ ಇಡ್ಲಿ ಹಿಟ್ಟಿನ ಪ್ಯಾಕ್ ಮಾರುಕಟ್ಟೆಗೆ ಬಿಡಲಾಗಿದೆ. 450 ಗ್ರಾಂ ತೂಕದ ಪ್ಯಾಕ್ 40 ರೂ. 900 ಗ್ರಾಂ ತೂಕದ ಪ್ಯಾಕ್ 80 ರೂ. ರಂತೆ ಗರಿಷ್ಠ ಮಾರಾಟ ಬೆಲೆ ನಿಗದಿಪಡಿಸಲಾಗಿದೆ.
ಕೆಎಂಎಫ್ ನಂದಿನಿ ಬ್ರ್ಯಾಂಡಿನ ಪ್ರೋಟಿನ್‌ಯುಕ್ತ ದೋಸೆ ಹಾಗೂ ಇಡ್ಲಿ ಹಿಟ್ಟು ಕೊನೆಗೂ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ (ಡಿ.25) ನಂದಿನಿ ಬ್ರ್ಯಾಂಡ್ ದೋಸೆ ಹಾಗೂ ಇಡ್ಲಿ ಹಿಟ್ಟನ್ನು ಬುಧವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಈ ಹಿಂದೆ ಬಿಡುಗಡೆಗೆ ದಿನಾಂಕ ನಿಗದಿಪಡಿಸಿ ಕೊನೆಯ ಕ್ಷಣದಲ್ಲಿ ಯೋಜನೆಯನ್ನೇ ಕೈಬಿಟ್ಟಿರುವುದಾಗಿ ಕೆಎಂಎಫ್ ಅಧ್ಯಕ್ಷರು ಹೇಳಿದ್ದರು.
ನಗರವಾಸಿಗಳು ಕೆಲಸ ಒತ್ತಡದಲ್ಲಿ ದೈನಂದಿನ ಆಹಾರ ತಯಾರಿಸಲು ಸಮಯದ ಅಭಾವ ಎದುರಿಸುವಂತಾಗಿದೆ. ಸಿದ್ಧ ಆಹಾರಕ್ಕಾಗಿ ಹೊರಗಡೆ ಹೋಗುವ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಇದನ್ನು ಮನಗಂಡು ಕೆಎಂಎಫ್ ಆರೋಗ್ಯಕರ ಇಡ್ಲಿ ಹಾಗೂ ದೋಸೆ ಹಿಟ್ಟನ್ನು ಗ್ರಾಹಕರಿಗೆ ಒದಗಿಸಲು ನಿರ್ಧರಿಸಿದೆ ಎಂದು ಕೆಎಂಎಫ್ ಹೇಳಿದೆ.
ನಂದಿನಿ ಬ್ರ್ಯಾಂಡಿನ ದೋಸೆ ಹಾಗೂ ಇಡ್ಲಿ ಹಿಟ್ಟಿನಲ್ಲಿ ಶೇ.5 ರಷ್ಟು ಪ್ರೋಟಿನ್ ಮಿಶ್ರಣಗೊಳಿಸಿ ವಿನೂತನ ಶೈಲಿಯ ವೇ ಪ್ರೋಟಿನ್ ಯುಕ್ತ ಹಿಟ್ಟನ್ನು ಗ್ರಾಹಕರ ಕೈಗೆಟುಕುವ ದರದಲ್ಲಿ ಒದಗಿಸಲಾಗುತ್ತಿದೆ ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ನಂದಿನಿ ಬ್ರ್ಯಾಂಡಿನ ದೋಸೆ ಹಾಗೂ ಇಡ್ಲಿ ಹಿಟ್ಟನ್ನು ಎರಡು ಪ್ಯಾಕ್‌ಗಳಲ್ಲಿ ಮಾರಾಟಕ್ಕೆ ಬಿಡಲಾಗಿದೆ. 450 ಗ್ರಾಂ ತೂಕದ ಪ್ಯಾಕ್ 40 ರೂ. ಮತ್ತು 900 ಗ್ರಾಂ ತೂಕದ ಪ್ಯಾಕ್ 80 ರೂ. ರಂತೆ ಗರಿಷ್ಠ ಮಾರಾಟ ಬೆಲೆ ನಿಗದಿಪಡಿಸಲಾಗಿದೆ. ಬೆಂಗಳೂರು ನಗರದ ಗ್ರಾಹಕರ ಪ್ರತಿಕ್ರಿಯೆ ಆಧರಿಸಿ ಇತರೆ ನಗರಗಳಿಗೂ ವಿಸ್ತರಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ.
ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಬಿಡುಗಡೆ ಸಂದರ್ಭದಲ್ಲಿ ಸಚಿವರಾದ ಕೆ. ವೆಂಕಟೇಶ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್, ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ, ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಯೋಜನೆಯನ್ನೇ ಕೈ ಬಿಟ್ಟಿದ್ದ ಕೆಎಂಎಫ್
ನಂದಿನಿಯ ಬ್ರ್ಯಾಂಡಿನ ಇಡ್ಲಿ ಮತ್ತು ದೋಸೆ ಹಿಟ್ಟಿನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೆ ಕೆಎಂಎಫ್ ಈ ಹಿಂದೆ ದಿನಾಂಕ ಘೋಷಿಸಿತ್ತು. ಆದರೆ, ಕೊನೆ ಕ್ಷಣದಲ್ಲಿ ಯೋಜನೆಯನ್ನೇ ಕೈಬಿಟ್ಟಿರುವುದಾಗಿ ಘೋಷಿಸಿತ್ತು.
ನಂದಿನಿ ಉತ್ಪನ್ನಗಳ ಬ್ರಾಂಡಿಂಗ್ ಮತ್ತು ಮಾರುಕಟ್ಟೆ ವಿಸ್ತರಣೆಯಲ್ಲಿ ಗಮನಾರ್ಹ ಕೊಡುಗೆ ಸಾಧಿಸಿದ್ದರೂ ದಿಢೀರನೇ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ನಂದಿನಿ ಹಿಟ್ಟಿನ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಹಿಟ್ಟು ಉತ್ಪನ್ನಗಳ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುವ ಗುರಿಯೊಂದಿಗೆ ರೂಪಿಸಿದ್ದ ಯೋಜನೆ ಹಿಂದೆ ಜಗದೀಶ್ ಶ್ರಮವೂ ಇತ್ತು. ಆದರೆ, ಏಕಾಏಕಿ ಅವರ ವರ್ಗಾವಣೆ ಮತ್ತು ಕೊನೇ ಕ್ಷಣದಲ್ಲಿ ಹಿಟ್ಟಿನ ಮಾರುಕಟ್ಟೆ ಪ್ರವೇಶವನ್ನು ತಡೆ ಹಿಡಿದ ಹಿನ್ನೆಲೆಯಲ್ಲಿ ಹಲವು ಅನುಮಾನಗಳು ಎದ್ದಿದ್ದವು.
ತಿರುಪತಿಗೆ ತುಪ್ಪ ಪೂರೈಕೆ, ದೆಹಲಿಯಲ್ಲಿ ನಂದಿನಿ ಹಾಲಿನ ಮಾರಾಟಕ್ಕೆ ಉತ್ತೇಜನ ನೀಡಿದ್ದ ಜಗದೀಶ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿರುವ ಹಿಂದೆ ದೋಸೆ ಹಾಗೂ ಇಡ್ಲಿ ಹಿಟ್ಟು ತಯಾರಿಕೆ ಕಂಪೆನಿಗಳ ಕೈವಾಡವಿದೆ ಎಂದು ಪ್ರತಿಪಕ್ಷ ಬಿಜೆಪಿ, ಸರ್ಕಾರದ ವಿರುದ್ಧ ಹರಿಹಾಯ್ದಿತ್ತು.