Namma Nandini | ನಂದಿನಿ ಹಾಲಿನ ದರ ಹೆಚ್ಚಳ ಸೂಚನೆ ನೀಡಿದ ಕೆಎಂಎಫ್
x

Namma Nandini | ನಂದಿನಿ ಹಾಲಿನ ದರ ಹೆಚ್ಚಳ ಸೂಚನೆ ನೀಡಿದ ಕೆಎಂಎಫ್


ಹೊಸ ವರ್ಷಕ್ಕೆ ನಂದಿನಿ ಹಾಲಿನ ದರ ಹೆಚ್ಚಳ ಮಾಡಲು ಕೆಎಂಎಫ್(ಕರ್ನಾಟಕ ಹಾಲು ಒಕ್ಕೂಟ) ಮುಂದಾಗಿದೆ.

ಪ್ರತಿ ಲೀಟರ್ ಹಾಲಿನ ದರವನ್ನು 5 ರೂ. ಏರಿಕೆ ಮಾಡುವಂತೆ ಬುಧವಾರ ನಡೆದ ಹಾಲು ಒಕ್ಕೂಟದ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿರುವ ಭೀಮಾ ನಾಯ್ಕ್ ಅವರು, ಹಾಲಿನ ದರ ಏರಿಕೆಯ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದೆ. ಆ ಬಗ್ಗೆ ಪರಿಶೀಲನೆ ಮಾಡಲಾಗುವುದು. ಆದರೆ, ದರ ಏರಿಕೆಯ ಹಣ ಈ ಬಾರಿ ರೈತರ ಕೈಸೇರಲಿದೆ ಎಂದೂ ಹೇಳಿದ್ದಾರೆ.

ಕಳೆದ ವರ್ಷ ಸರ್ಕಾರ ಪ್ರತಿ ಪ್ಯಾಕ್ನಲ್ಲಿ 50 ಮಿಲಿ ಹಾಲು ಹೆಚ್ಚಳ ಮಾಡಿ ತಲಾ ಎರಡು ರೂಪಾಯಿ ದರವನ್ನೂ ಹೆಚ್ಚಳ ಮಾಡಿತ್ತು. ಇದೀಗ ಅದರ ಬೆನ್ನಲ್ಲೇ ಮತ್ತೊಮ್ಮೆ 5 ರೂ. ದರ ಹೆಚ್ಚಳಕ್ಕೆ ಮುಂದಾಗಿರುವುದು ಸಹಜವಾಗೇ ಗ್ರಾಹಕರ ವಿರೋಧ ವ್ಯಕ್ತವಾಗಿದೆ.

ಇದೀಗ ಹೆಚ್ಚುವರಿ ಹಾಲು ಸೇರಿಸುವುದನ್ನು ಕೈಬಿಟ್ಟು, ಪ್ಯಾಕೆಟ್ ಮೇಲೆ ತಲಾ 5 ರೂ. ಹೆಚ್ಚಳಕ್ಕೆ ಪ್ರಸ್ತಾಪ ಬಂದಿದೆ. ಆದರೆ, ಈ ಹೆಚ್ಚುವರಿ ಹಣವನ್ನು ನೇರವಾಗಿ ಹಾಲು ಉತ್ಪಾದಕರ ರೈತರಿಗೆ ವರ್ಗಾಯಿಸಲು ಕೂಡ ಯೋಚಿಸಲಾಗಿದೆ. ಆದರೆ, ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ತೀರ್ಮಾನಕ್ಕೆ ಮುನ್ನ ಆ ಬಗ್ಗೆ ಚರ್ಚಿಸಿ ಸಾಧಕ- ಬಾಧಕ ನೋಡಿಕೊಂಡು ಜಾರಿಗೆ ತರಲಾಗಿದೆ ಎಂದೂ ಅವರು ಹೇಳಿದ್ದಾರೆ.

ಕೆಎಂಎಫ್ ಕಳೆದ, ನಂದಿನಿ ಹಾಲಿನ ಅರ್ಧ ಮತ್ತು ಒಂದು ಲೀಟರ್ ಹಾಲಿನ ಪ್ರತಿ ಪ್ಯಾಕೆಟ್ನಲ್ಲಿ ಹೆಚ್ಚುವರಿಯಾಗಿ 50 ಎಂಎಲ್ ನೀಡಿ 2 ರೂಪಾಯಿ ಏರಿಕೆ ಮಾಡಿತ್ತು. ಇದರಿಂದ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ದರ 22ರಿಂದ 24 ರೂ.ಗೆ ಏರಿಕೆಯಾಗಿತ್ತು. ಒಂದು ಲೀಟರ್ ಹಾಲಿನ ದರ ಏರಿಕೆ 42 ರಿಂದ 44 ರೂ.ಗೆ ಏರಿಕೆಯಾಗಿತ್ತು. ಇದೀಗ ಮತ್ತೆ ಬೆಲೆ ಏರಿಕೆಯಾದರೆ ಅರ್ಧ ಲೀಟರ್ ಪ್ಯಾಕಿನ ಬೆಲೆ 24ರಿಂದ 29ಕ್ಕೆ ಮತ್ತು ಒಂದು ಲೀಟರ್ ಪ್ಯಾಕಿನ ಬೆಲೆ 44 ರಿಂದ 49 ರೂ.ಗೆ ಏರಿಕೆಯಾಗಲಿದೆ.

ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ

ಈ ನಡುವೆ, ಕೆಎಂಎಫ್, ನಂದಿನಿ ಬ್ರಾಂಡಿನಡಿ ಹೊಸದಾಗಿ ದೋಸೆ ಮತ್ತು ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ತುಪ್ಪ, ಬೆಣ್ಣೆ, ಪೇಡಾ, ಮೈಸೂರು ಪಾಕ್, ಬ್ರೆಡ್, ಬನ್, ಚಾಕೊಲೇಟ್ ಸೇರಿದಂತೆ ವಿವಿಧ ಉತ್ಪನ್ನಗಳ ಜೊತೆಗೆ ಇದೀಗ ಹಿಟ್ಟಿನ ಉತ್ಪನ್ನಗಳನ್ನೂ ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯ ಗ್ರಾಹಕರಿಂದ ಹಿಟ್ಟಿನ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ಇದೆ ಎನ್ನಲಾಗಿದೆ.

Read More
Next Story