
ನಮ್ಮ ಮೆಟ್ರೋದ ಹಳದಿ ಮಾರ್ಗದ ನಾಲ್ಕನೇ ರೈಲು ಬೋಗಿಗಳ ಆಗಮನ
ಹಳದಿ ಮಾರ್ಗದಲ್ಲಿ ಸದ್ಯ ಮೂರು ರೈಲುಗಳು ಸಂಚರಿಸುತ್ತಿವೆ. ನಾಲ್ಕನೇ ರೈಲಿನ ಎರಡು ಬೋಗಿಗಳನ್ನು ಟಿಟಾಗಢದಿಂದ ಜುಲೈ 28ರಂದು ರಾತ್ರಿ ಕಳುಹಿಸಲಾಗಿತ್ತು.
`ನಮ್ಮ ಮೆಟ್ರೋ'ದ ಹಳದಿ ಮಾರ್ಗದ ನಾಲ್ಕನೇ ರೈಲಿನ ಒಂದು ಬೋಗಿ ಬುಧವಾರ ಬೆಂಗಳೂರಿಗೆ ತಲುಪಿದೆ. ಇನ್ನುಳಿದ ಐದು ಬೋಗಿಗಳು ಎರಡು ದಿನಗಳಲ್ಲಿ ತಲುಪಲಿವೆ.
ಪಶ್ಚಿಮ ಬಂಗಾಳದ ಟಿಟಾಗಢದಿಂದ ಎರಡು ವಾರಗಳ ಹಿಂದೆ ರವಾನೆಯಾಗಿತ್ತು. ಮಳೆಯಿಂದಾಗಿ ನಗರಕ್ಕೆ ತಲುಪುವುದು ತಡವಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಹಳದಿ ಮಾರ್ಗದಲ್ಲಿ ಸದ್ಯ ಮೂರು ರೈಲುಗಳು ಸಂಚರಿಸುತ್ತಿವೆ. ನಾಲ್ಕನೇ ರೈಲಿನ ಎರಡು ಬೋಗಿಗಳನ್ನು ಟಿಟಾಗಢದಿಂದ ಜುಲೈ 28ರಂದು ರಾತ್ರಿ ಕಳುಹಿಸಲಾಗಿತ್ತು. ಉಳಿದ ನಾಲ್ಕು ಬೋಗಿಗಳನ್ನು ಆಗಸ್ಟ್ 1ರಂದು ಕಳುಹಿಸಲಾಗಿತ್ತು. ಆಗಸ್ಟ್ 10ರ ಒಳಗೆ ಎಲ್ಲ ಬೋಗಿಗಳು ತಲುಪುವ ನಿರೀಕ್ಷೆ ಇತ್ತು ಎಂದು ಮಾಹಿತಿ ನೀಡಿದ್ದಾರೆ.
ಎಲ್ಲಾ ಆರು ಬೋಗಿಗಳು ತಲುಪಿದ ನಂತರ, ಹಳದಿ ಮಾರ್ಗದಲ್ಲಿ ಪ್ರಸ್ತುತ ವಾಣಿಜ್ಯ ಸಂಚಾರ ನಡೆಯುತ್ತಿರುವುದರಿಂದ, ರಾತ್ರಿ ವೇಳೆ ಪರೀಕ್ಷೆಗಳನ್ನು ನಡೆಸಲಾಗುವುದು. ಈ ಪರೀಕ್ಷೆಗಳ ಬಳಿಕ ಮುಂದಿನ ತಿಂಗಳಿಂದ ನಾಲ್ಕನೇ ರೈಲು ವಾಣಿಜ್ಯ ಸಂಚಾರಕ್ಕೆ ಲಭ್ಯವಾಗಲಿದೆ ಎಂದು BMRCL ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ರಾಗಿಗುಡ್ಡದಿಂದ ಬೊಮ್ಮಸಂದ್ರದವರೆಗೆ ಹಳದಿ ಮಾರ್ಗದ ಮೆಟ್ರೋ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಹಳದಿ ಮಾರ್ಗದಲ್ಲಿ ಒಟ್ಟು ಮೂರು ರೈಲುಗಳು ಸಂಚರಿಸಲಿದ್ದು, ಪ್ರತಿ 20 ನಿಮಿಷಕ್ಕೊಮ್ಮೆ ಪ್ರಯಾಣಿಕರನ್ನು ಕರೆದೊಯ್ಯತ್ತಿವೆ.
ಹಳದಿ ಮೆಟ್ರೋದಲ್ಲಿ ಕನಿಷ್ಠ ದರ 10 ರೂ. ಆಗಿದ್ದು, ಗರಿಷ್ಠ ದರ - 60 ರೂ. ಇರಲಿದೆ. ಟೋಕನ್ -60 ರೂ. ಮತ್ತು ಸ್ಮಾರ್ಟ್ ಕಾರ್ಡ್- 57 ರೂ., ಸ್ಮಾರ್ಟ್‌ಕಾರ್ಡ್ (ನಾನ್‌ಪೀಕವರ್)- 54 ರೂ. ಮತ್ತು ಗುಂಪು ಟಿಕೆಟ್ -51 ರೂ. ನಿಗದಿ ಮಾಡಲಾಗಿದೆ. ಆರ್ ವಿ ರಸ್ತೆಯಿಂದ ರಾಗಿಗುಡ್ಡದ ವರೆಗೆ 10 ರೂಪಾಯಿ.
ಆರ್.ವಿ.ರಸ್ತೆಯಿಂದ ಜಯದೇವ ಆಸ್ಪತ್ರೆವರೆಗೆ 10 ರೂ., ಆರ್.ವಿ ರಸ್ತೆಯಿಂದ ಬಿಟಿಎಂ ಲೇಔಟ್ ವರೆಗೆ 20 ರೂ., ಆರ್.ವಿ.ರಸ್ತೆ -ಬೊಮ್ಮನಹಳ್ಳಿ 30 ರೂ., ಆರ್.ವಿ.ರಸ್ತೆ -ಕೂಡ್ಲು ಗೇಟ್ 40 ರೂ., ಆರ್.ವಿ.ರಸ್ತೆ -ಸಿಂಗಸಂದ್ರ 50 ರೂ., ಆರ್.ವಿ.ರಸ್ತೆ -ಎಲೆಕ್ಟ್ರಾನಿಕ್ ಸಿಟಿ 60 ರೂ., ಆರ್.ವಿ.ರಸ್ತೆ -ಬೊಮ್ಮಸಂದ್ರ 60 ರೂ., ಸಿಲ್ಕ್ ಬೋರ್ಡ್- ಬೊಮ್ಮಸಂದ್ರದವರೆಗೆ 60 ರೂ. ಪ್ರಯಾಣ ಶುಲ್ಕ ನಿಗದಿ ಮಾಡಲಾಗಿದೆ.
ಇನ್ಫೋಸಿಸ್ ಹಾಗೂ ಬಯೋಕಾನ್ ಸಂಸ್ಥೆಗೆ ತೆರಳುವ ಸಾವಿರಾರು ಉದ್ಯೋಗಿಗಳಿಗೆ ಹಳದಿ ಮೆಟ್ರೊ ಸಂಚಾರ ಸುಲಭವಾಗಲಿದೆ. ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿಗೆ ತೆರಳುವವರಿಗೂ ಅನುಕೂಲವಾಗಲಿದೆ.