
ಹಳದಿ ಮಾರ್ಗದ ಮೆಟ್ರೋ
ಮೆಟ್ರೊ ಪ್ರಯಾಣಿಕರಿಗೆ ಸಿಹಿ ಸುದ್ದಿ: ಹಳದಿ ಮಾರ್ಗದಲ್ಲಿ ಆರನೇ ರೈಲು ಸರ್ವಿಸ್ ಆರಂಭ
ನಮ್ಮ ಮೆಟ್ರೊ’ ಗುಲಾಬಿ ಮಾರ್ಗದ ಮೊದಲ ರೈಲು ಕೊತ್ತನೂರು ಡಿಪೊ ತಲುಪಿದೆ. ಇದು ಬೆಮೆಲ್‌ನಿಂದ ರವಾನೆಯಾಗಿದೆ.
‘ನಮ್ಮ ಮೆಟ್ರೊ’ ಹಳದಿ ಮಾರ್ಗದಲ್ಲಿ ಆರನೇ ರೈಲು ಸಂಚಾರವು ಡಿಸೆಂಬರ್ 23ರಿಂದ ಆರಂಭಗೊಳ್ಳಲಿದೆ. ಇದರೊಂದಿಗೆ ಈ ಮಾರ್ಗದಲ್ಲಿ ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಪ್ರತಿ 13 ನಿಮಿಷಕ್ಕೊಂದು ರೈಲು ಸಂಚರಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್ (ಟಿಆರ್‌ಎಸ್‌ಎಲ್), ಪಶ್ಚಿಮ ಬಂಗಾಳದಿಂದ ರವಾನೆಯಾಗಿದ್ದ ಆರನೇ ರೈಲಿನ ಆರು ಬೋಗಿಗಳು ಡಿಸೆಂಬರ್ ಮೊದಲ ವಾರದಲ್ಲೇ ಹೆಬ್ಬಗೋಡಿ ಮೆಟ್ರೊ ಡಿಪೊಗೆ ತಲುಪಿದ್ದವು. ಇನ್‌ಸ್ಪೆಕ್ಷನ್ ಬೇ ಲೈನ್‌ನಲ್ಲಿ ಪ್ರಾಥಮಿಕ ತಾಂತ್ರಿಕ ಪರೀಕ್ಷೆಗಳು ನಡೆಯಿದ್ದು, ನಂತರ ರಾತ್ರಿ ವೇಳೆ ಪ್ರಯೋಗಾತ್ಮಕ ಸಂಚಾರ ನಡೆಸಲಾಗಿತ್ತು.
ಐಟಿ ಕಾರಿಡಾರ್‌ನಲ್ಲಿ ಪ್ರಯಾಣ ಹೆಚ್ಚಳ
ಆರ್.ವಿ. ರಸ್ತೆ–ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ಮೆಟ್ರೊ ಸಂಚಾರ ಆಗಸ್ಟ್ 11ರಂದು ಆರಂಭವಾಗಿದ್ದು, ಪ್ರಸ್ತುತ ಐದು ರೈಲುಗಳು ಪ್ರತಿ 15 ನಿಮಿಷಕ್ಕೊಂದು ಸಂಚರಿಸುತ್ತಿವೆ. ಐಟಿ ಹಬ್ ಆಗಿರುವ ಎಲೆಕ್ಟ್ರಾನಿಕ್ ಸಿಟಿ ಈ ಮಾರ್ಗದ ಮುಖ್ಯ ಭಾಗವಾಗಿರುವುದರಿಂದ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಗಿಂತ ಹೆಚ್ಚಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.
ಹೊಸ ಸೇವೆ ಆರಂಭವಾದರೂ ಆರ್.ವಿ. ರಸ್ತೆ ಹಾಗೂ ಬೊಮ್ಮಸಂದ್ರ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಮೊದಲ ಹಾಗೂ ಕೊನೆಯ ರೈಲುಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರತಿ ಭಾನುವಾರ ರೈಲು ಸಂಚಾರವು ಹಿಂದಿನಂತೆಯೇ 15 ನಿಮಿಷದ ಅಂತರದಲ್ಲಿ ಮುಂದುವರಿಯಲಿದೆ.
ಗುಲಾಬಿ ಮಾರ್ಗದಲ್ಲೂ ಚಟುವಟಿಕೆ ಹೆಚ್ಚಳ
ಅದೇ ವೇಳೆ ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದ ಮೊದಲ ರೈಲು ಕೊತ್ತನೂರು ಡಿಪೊ ತಲುಪಿದೆ. ಇದು ಬೆಮೆಲ್‌ನಿಂದ ರವಾನೆಯಾಗಿದ್ದು, ಕಾಳೇನ ಅಗ್ರಹಾರ–ನಾಗವಾರ ನಡುವಿನ ಮಾರ್ಗದ ಕಾಮಗಾರಿ ಅಂತಿಮ ಹಂತದಲ್ಲಿದೆ. ಆರಂಭಿಕ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಎತ್ತರಿಸಿದ ಮಾರ್ಗದಲ್ಲಿ ಮುಂದಿನ ಆರು ತಿಂಗಳಲ್ಲಿ ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

