Namma Metro | ಈ ಭಾನುವಾರ ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ
x
ನಮ್ಮ ಮೆಟ್ರೋ

Namma Metro | ಈ ಭಾನುವಾರ ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇಮಕಾತಿ ಪರೀಕ್ಷೆಗೆ ಹಾಜರಾಗುವವರಿಗೆ ಅನುಕೂಲವಾಗುವಂತೆ 'ನಮ್ಮ ಮೆಟ್ರೊ' ರೈಲು ಸಂಚಾರವನ್ನು ಬೆಳಿಗ್ಗೆ 5.30ಕ್ಕೆ ಆರಂಭಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.


Click the Play button to hear this message in audio format

ಡಿಸೆಂಬರ್‌ 8ರಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನೇಮಕಾತಿ ಪರೀಕ್ಷೆ ನಡೆಯಲಿದ್ದು, ಇದಕ್ಕಾಗಿ ಭಾನುವಾರದ ಮೆಟ್ರೋ ಸೇವೆ ಅವಧಿಯನ್ನು ಬದಲಾಯಿಸಲಾಗಿದೆ.

ಕರ್ನಾಟಕ ಲೋಕಸೇವಾ ಆಯೋಗವು ಡಿ.8ರಂದು ನಡೆಸಲಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇಮಕಾತಿ ಪರೀಕ್ಷೆಗೆ ಹಾಜರಾಗುವವರಿಗೆ ಅನುಕೂಲವಾಗುವಂತೆ 'ನಮ್ಮ ಮೆಟ್ರೊ' ರೈಲು ಸಂಚಾರವನ್ನು ಅಂದು ಬೆಳಿಗ್ಗೆ 5.30ಕ್ಕೆ ಆರಂಭಿಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ.

ನಾಲ್ಕು ಟರ್ಮಿನಲ್‌ಗಳಾದ ಮಾದಾವರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ, ವೈಟ್ ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳಿಂದ ಹಾಗೂ ಮೆಜೆಸ್ಟಿಕ್‌ನಿಂದ ಎಲ್ಲ ನಾಲ್ಕು ಟರ್ಮಿನಲ್ ಕಡೆಗೆ ಭಾನುವಾರ ಬೆಳಿಗ್ಗೆ 5.30ಕ್ಕೆ ರೈಲು ಸಂಚಾರ ಆರಂಭಗೊಳ್ಳಲಿದೆ. ಬೆಳಿಗ್ಗೆ 7ರವರೆಗೆ ಪ್ರತಿ 30 ನಿಮಿಷದ ಆವರ್ತನದಲ್ಲಿ ಮೆಟ್ರೊ ರೈಲು ಚಲಿಸಲಿದೆ. 7 ಗಂಟೆಯ ಬಳಿಕ ಎಂದಿನಂತೆ ರೈಲು ಸಂಚಾರ ಇರಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.ನ

ಸಾಮಾನ್ಯ ದಿನಗಳಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ 7ಕ್ಕೆ ಮೆಟ್ರೊ ರೈಲು ಸಂಚಾರ ಆರಂಭವಾಗುತ್ತಿತ್ತು. ಆದರೆ ಪಿಡಿಒ ಪರೀಕ್ಷೆಗಳಿಗೆ ರಾಜ್ಯದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಹಾಜರಾಗುತ್ತಾರೆ. ವಿದ್ಯಾರ್ಥಿಗಳಿಗೆ ಸಂಚಾರದಲ್ಲಿ ತೊಂದರೆ ಆಗಬಾರದು ಹಾಗೂ ಸುಗಮವಾಗಿ ಪರೀಕ್ಷಾ ಕೇಂದ್ರಗಳನ್ನು ತಲುಪಬೇಕು ಎನ್ನುವ ಉದ್ದೇಶದಿಂದ ನಮ್ಮ ಮೆಟ್ರೋ ಈ ನಿರ್ಧಾರ ತೆಗೆದುಕೊಂಡಿದೆ. ಭಾನುವಾರ ವಿಶೇಷ ಸೇವೆಯನ್ನು ನೀಡುತ್ತಿರುವ ಮೆಟ್ರೋ ನಗದು ರಹಿತ ಪಾವತಿಗಳನ್ನು ಉತ್ತೇಜಿಸಲು QR ಟಿಕೆಟ್‌ಗಳ ಮೂಲಕ ಟಿಕೆಟ್ ಗಳನ್ನು ಖರೀದಿಸುವಂತೆ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ. 7 ಮತ್ತು 8ರಂದು ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) 150 ಉಳಿಕೆ ಮೂಲ ವೃಂದದ ಗ್ರೂಪ್-‘ಸಿ’ ಹುದ್ದೆಗಳ ನೇಮಕಾತಿಗಳಿಗೆ ಪರೀಕ್ಷೆ ನಡೆಸಲಿದೆ. ಡಿ.7 ರಂದು ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದ್ದು, ಡಿ.8 ರಂದು ಬೆಳಗ್ಗೆ 10 ರಿಂದ 11.30 ರವರೆಗೆ ಪತ್ರಿಕೆ-1 ಸಾಮಾನ್ಯ ಜ್ಞಾನ, ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಪತ್ರಿಕೆ-2, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಕಂಪ್ಯೂಟರ್ ಜ್ಞಾನ ವಿಷಯದ ಕುರಿತು ಪರೀಕ್ಷೆ ನಡೆಯಲಿದೆ. ಪರೀಕ್ಷೆಗಳು ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಈಗಾಗಲೇ ಆದೇಶ ನೀಡಲಾಗಿದೆ.

Read More
Next Story