Namma Metro Fare Hike | ಮೆಟ್ರೋ ದರ ಏರಿಕೆ: ಕೊಚ್ಚೆಯಲ್ಲಿ ಮೀನು ಹಿಡಿಯಲು ನಾಯಕರ ಪೈಪೋಟಿ!
x

Namma Metro Fare Hike | ಮೆಟ್ರೋ ದರ ಏರಿಕೆ: ಕೊಚ್ಚೆಯಲ್ಲಿ ಮೀನು ಹಿಡಿಯಲು ನಾಯಕರ ಪೈಪೋಟಿ!

ಪ್ರಯಾಣ ದರದ ವಿಷಯದಲ್ಲಿ ರಾಜ್ಯದ ರಾಜಕೀಯ ಪಕ್ಷಗಳು ಬೆಲೆ ಏರಿಕೆಯ ಹಿಂದಿನ ಲೆಕ್ಕಾಚಾರವೇನು? ದುಪ್ಪಟ್ಟಿಗಿಂತ ಅಧಿಕ ದರ ಏರಿಕೆಯ ಅನಿವಾರ್ಯತೆ ಏನು? ಏಕಾಏಕಿ ಹೀಗೆ ದರ ಏರಿಸುವುದರಿಂದ ನಮ್ಮ ಮೆಟ್ರೋ ನಿರ್ಮಾಣದ ಉದ್ದೇಶವನ್ನೇ ತಲೆಕೆಳಗು ಮಾಡಿದಂತೆ ಆಗುವುದಿಲ್ಲವೆ? ಎಂಬ ಮೂಲ ಪ್ರಶ್ನೆಗಳ ಬದಲಾಗಿ, ದರ ಏರಿಕೆಗೆ ನೀವು ಕಾರಣ, ನಾವು ಕಾರಣವಲ್ಲ ಎಂಬ ಕ್ಷುಲ್ಲಕ ಕೆಸರೆರಚಾಟದಲ್ಲಿ ಮುಳುಗಿವೆ.


ಬೆಂಗಳೂರು ಮಹಾನಗರದ ಜೀವನಾಡಿ ಎಂದೇ ಕರೆಸಿಕೊಳ್ಳುವ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏಕಾಏಕಿ ಶೇ.40ರಿಂದ ಶೇ.120ರಷ್ಟು ಏರಿಕೆ ಮಾಡಿರುವ ಬಿಎಂಆರ್‌ಸಿಎಲ್‌ ಕ್ರಮ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರಿನ ಸಂಚಾರ ದಟ್ಟಣೆ, ವಾಯು ಮಾಲಿನ್ಯ ಮತ್ತು ನಿತ್ಯ ಪ್ರಯಾಣಿಸುವ ಜನರ ಹಣಕಾಸಿನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಪರ್ಯಾಯವಾಗಿ ಒದಗಿಸುವ ಮೂಲಕ ಜಗತ್ತಿನಲ್ಲೇ ಕುಖ್ಯಾತಿ ಗಳಿಸಿರುವ ಬೆಂಗಳೂರಿನ ಸಾರಿಗೆ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳುವುದು ನಮ್ಮ ಮೆಟ್ರೋ ಯೋಜನೆಯ ಗುರಿಯಾಗಿತ್ತು.

ಮೆಟ್ರೋ ಸೇವೆ ಆರಂಭವಾಗಿ ಹದಿಮೂರು ವರ್ಷಗಳ ಅವಧಿಯಲ್ಲಿ ದುಬಾರಿ ದರ ವಿಧಿಸದೇ ಬೆಂಗಳೂರು ಪ್ರಯಾಣಿಕರ ಪಾಲಿಗೆ ಸಮಾಧಾನಕರ ಸೇವೆ ನೀಡುತ್ತಿದ್ದ ʼನಮ್ಮ ಮೆಟ್ರೋʼ ಇದೀಗ ದಿಢೀರನೇ ದುಬಾರಿ ದರ ಏರಿಕೆ ಮಾಡಿರುವುದು ಸಹಜವಾಗೇ ಪ್ರಯಾಣಿಕರಿಗೆ ಆತಂಕ ಮೂಡಿಸಿದೆ. ಅಲ್ಲದೆ, ಸಾರ್ವಜನಿಕ ಸಂಚಾರ ವ್ಯವಸ್ಥೆಯ ಬಳಕೆಯನ್ನು ಪ್ರೋತ್ಸಾಹಿಸಿ ಖಾಸಗಿ ವಾಹನ ಬಳಕೆಯನ್ನು ತಗ್ಗಿಸುವ ಮೂಲಕ ಬೆಂಗಳೂರಿನ ಸಂಚಾರ ದಟ್ಟಣೆಯ ಸಂಕಷ್ಟ ಕಡಿಮೆ ಮಾಡುವ ಸರ್ಕಾರದ ಮೂಲ ಉದ್ದೇಶವನ್ನೇ ಈ ಭಾರೀ ದರ ಏರಿಕೆ ಬುಡಮೇಲು ಮಾಡುತ್ತಿದೆ ಎಂದು ಪ್ರಯಾಣಿಕರು ರೊಚ್ಚಿಗೆದ್ದಿದ್ದಾರೆ.

ನಿತ್ಯ ಸುಮಾರು 8 ಲಕ್ಷ ಮಂದಿ ಪ್ರಯಾಣಿಸುವ ಮತ್ತು ವರ್ಷಕ್ಕೆ ಸುಮಾರು 25 ಕೋಟಿ ಮಂದಿಯ ಪ್ರಯಾಣಕ್ಕೆ ಆಸರೆಯಾಗಿರುವ ನಮ್ಮ ಮೆಟ್ರೋ, ಇದೀಗ ಭಾರೀ ದರ ಏರಿಕೆಯ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದೆ.

ಆದರೆ, ಕೋಟ್ಯಂತರ ಜನರ ನಿತ್ಯದ ಅಗತ್ಯ ವೆಚ್ಚದ ಪ್ರಶ್ನೆಯಾದ ಮೆಟ್ರೋ ದರ ಏರಿಕೆಯ ಕುರಿತು ಆಡಳಿತ ಪಕ್ಷದ ನಾಯಕರು ಬಹುತೇಕ ಜಾಣಮೌನಕ್ಕೆ ಜಾರಿದ್ದರೆ, ಪ್ರತಿಪಕ್ಷಗಳ ನಾಯಕರು ಜನರ ಸಂಕಷ್ಟದ ವಿಷಯದಲ್ಲಿಯೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪೈಪೋಟಿಗೆ ಇಳಿದಿದ್ದಾರೆ. ಹಾಗಾಗಿ ಪ್ರಯಾಣದ ದರ ಏರಿಕೆಯಿಂದ ಜನರಿಗೆ ಆಗುತ್ತಿರುವ ತೊಂದರೆಗಿಂತ ರಾಜಕೀಯ ವಲಯದಲ್ಲಿ ಈ ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣವೋ? ಕೇಂದ್ರ ಸರ್ಕಾರ ಕಾರಣವೋ? ಎಂಬ ರಾಜಕೀಯ ಕೆಸರೆರಚಾಟವೇ ಕಾವೇರಿದೆ.

ಜೆಡಿಎಸ್ ನಾಯಕ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಎಂದಿನ ಸಿದ್ಧ ಮಾದರಿಯಲ್ಲಿ ಮೆಟ್ರೋ ದರ ಏರಿಕೆಯನ್ನೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿಗೆ ಬಳಸಿಕೊಂಡಿದ್ದಾರೆ.

“ಒಂದು ಕಡೆ ಗ್ಯಾರಂಟಿ ಕೊಡುತ್ತೇವೆ ಎಂದು ಜನರ ಕಣ್ಣೊರೆಸುವ ನಾಟಕ ಆಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ; ಇನ್ನೊಂದು ಕಡೆ ಜನರಿಂದ ದರ ಏರಿಸಿ ಸುಲಿಗೆ ಮಾಡುತ್ತಿದೆ, ಅಧಿಕಾರಕ್ಕೆ ಬಂದ ಮೇಲೆ ಒಂದಾದ ಮೇಲೆ ಒಂದರಂತೆ ಗ್ಯಾರಂಟಿಗಳನ್ನೇನೋ ರಾಜ್ಯ ಸರ್ಕಾರ ಕೊಟ್ಟಿದೆ. ಆದರೆ, ಗ್ಯಾರಂಟಿ ಹಣವನ್ನು ಜನರಿಂದಲೇ ವಸೂಲಿ ಮಾಡಿ ಖಜಾನೆ ತುಂಬಿಸಿಕೊಳ್ಳುತ್ತಿದೆ. ಮುದ್ರಾಂಕ ಶುಲ್ಕ, ಮಾರ್ಗದರ್ಶಿ ಮೌಲ್ಯ ಏರಿಕೆ, ಮದ್ಯದ ದರ ಏರಿಕೆ, ಬಸ್ ದರ ಏರಿಕೆ ಸೇರಿದಂತೆ ಸಿಕ್ಕ ಸಿಕ್ಕ ಕಡೆಯೆಲ್ಲಾ ಸರಕಾರ ದರ ಏರಿಕೆ ದಂಡ ಪ್ರಯೋಗ ಮಾಡುತ್ತಿದೆ. ಈಗ ಬೆಂಗಳೂರು ನಗರದ ಮೆಟ್ರೋ ರೈಲು ಪ್ರಯಾಣ ದರವನ್ನು ಜನರೇ ಬೆಚ್ಚಿ ಬೀಳುವಷ್ಟರ ಮಟ್ಟಿಗೆ ಶೇ.40ರಿಂದ 50ರಷ್ಟು ಏರಿಕೆ ಮಾಡಿದೆ ಎಂದು ಎಚ್ಡಿಕೆ ಟೀಕಿಸಿದ್ದಾರೆ.

ಬಿಜೆಪಿ ಮುಖಂಡರಾದ ವಿಧಾನಸಭಾ ಪ್ರತಿಪಕ್ಷ ನಾಯಕ ಆರ್ ಅಶೋಕ ಅವರು ಕೂಡ ಮೆಟ್ರೋ ದರ ಏರಿಕೆಗೆ ಕರ್ನಾಟಕ ರಾಜ್ಯ ಸರ್ಕಾರವೇ ಹೊಣೆ ಎಂಬ ಹೇಳಿಕೆ ನೀಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶದ ರಾಜಕೀಯ ಲಾಭ ಬಾಚುವ ಯತ್ನ ಮಾಡಿದ್ದಾರೆ.

“ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ಮೆಟ್ರೋ ದರ 50% ಏರಿಕೆ ಮಾಡಿರುವುದರಿಂದ ಅನೇಕ ಜನಸಾಮಾನ್ಯರಿಗೆ ಈಗ ಮೆಟ್ರೋ ಸಂಚಾರ ಕೈಗೆಟುಕದ ಪರಿಸ್ಥಿತಿ ಎದುರಾಗಿದ್ದು, ಮೆಟ್ರೋ ಪ್ರಯಾಣಕ್ಕಿಂತ ಸ್ವಂತ ಸ್ಕೂಟರ್, ಬೈಕಿನ ಪ್ರಯಾಣ ಜೇಬಿಗೆ ಹಿತ ಎನ್ನುವಂತಾಗಿದೆ. ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಪರಿಸರ ಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ, ಜನರನ್ನು ಮೆಟ್ರೋದಿಂದ ವಿಮುಖರಾಗುವಂತೆ ಮಾಡುತ್ತಿದೆ. ಈ ಕೊಡಲೇ ಮೆಟ್ರೋ ದರ ಏರಿಕೆಯ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸುತ್ತೇನೆ” ಎಂದು ಆರ್ ಅಶೋಕ್ ತಮ್ಮ ಸಾಮಾಜಿಕ ಜಾಲತಾಣ ʼಎಕ್ʼನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಿಜೆಪಿಯ ಸಂಸದ ತೇಜಸ್ವಿ ಸೂರ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತಿತರ ಪ್ರತಿಪಕ್ಷ ನಾಯಕರು ಕೂಡ ರಾಜ್ಯ ಸರ್ಕಾರವನ್ನೇ ದರ ಏರಿಕೆಗೆ ಹೊಣೆ ಮಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಹಣಕಾಸಿನ ಬಿಕ್ಕಟ್ಟಿನ ಜೊತೆ ದರ ಏರಿಕೆಯನ್ನು ತಳಕು ಹಾಕಿ, ಸರ್ಕಾರ ತನ್ನ ಜನಪ್ರಿಯ ಉಚಿತ (ಫ್ರೀ ಬೀ) ಯೋಜನೆಗಳಿಂದ ಖಜಾನೆ ಬರಿದುಮಾಡಿಕೊಂಡಿದ್ದು, ಖಾಲಿಯಾಗಿರುವ ಖಜಾನೆ ತುಂಬಿಸಲು ಮೆಟ್ರೋ ದರ ಏರಿಕೆಯಂತಹ ಹೊರೆಯನ್ನು ಜನರ ಮೇಲೆ ಹಾಕಿದೆ ಎಂದು ಹೇಳಿದ್ದಾರೆ.

ಈ ನಡುವೆ ಆಡಳಿತ ಪಕ್ಷದ ಮುಖಂಡರು ತಡವಾಗಿ ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ದರ ಏರಿಕೆಗೂ ರಾಜ್ಯ ಸರ್ಕಾರಕ್ಕೂ ಸಂಬಂಧವೇ ಇಲ್ಲ. ದರ ಏರಿಕೆಗೆ ಅನುಮತಿ ನೀಡಿರುವುದು ಕೇಂದ್ರದ ಬಿಜೆಪಿ ಸರ್ಕಾರವೇ ಎಂದು ತಿರುಗೇಟು ನೀಡಿದ್ದಾರೆ.

“ಮೆಟ್ರೋ ದರ ಏರಿಕೆ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವ ಅಜ್ಞಾನಿ ಬಿ.ಜೆ.ಪಿ ಅವರೇ, ಅಲ್ಪ ಜ್ಞಾನ ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದರ ಬಗ್ಗೆ ಅರಿವಿರಲಿ. ಮೆಟ್ರೋ ಕಾಯಿದೆ ಪ್ರಕಾರ ದರ ಏರಿಕೆ ಮಾಡಲು ಒಂದು ಸಮಿತಿ ಇರುತ್ತದೆ. ಸಮಿತಿಯ ಶಿಫಾರಸನ್ನು ಮೆಟ್ರೋ ಮಂಡಳಿ ಸಭೆಯಲ್ಲಿ ಮಂಡಿಸುತ್ತಾರೆ. ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿಗಳೇ ಮಂಡಳಿಯ ಅಧ್ಯಕ್ಷರಿದ್ದು, ಅವರು ದರ ಏರಿಕೆಯನ್ನು ಅಂತಿಮಗೊಳಿಸುತ್ತಾರೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನೂ ಇರುವುದಿಲ್ಲ” ಎಂದು ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಕೂಡ ಸೋಮವಾರ ಬೆಳಿಗ್ಗೆ ಬಿಜೆಪಿ ಮತ್ತು ಜೆಡಿಎಸ್ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, “ಮೆಟ್ರೋ ದರ ಏರಿಕೆಗೆ ನಮ್ಮ ಸರ್ಕಾರ ಕಾರಣವಲ್ಲ. ದರ ನಿಗದಿ ಕಮಿಟಿಯನ್ನು ರಚಿಸಿದ್ದು ಕೇಂದ್ರ ಸರ್ಕಾರ. ಹಾಗಾಗಿ ಪ್ರಧಾನಿ ಮೋದಿ ಪರವಾಗಿ ರಾಜ್ಯ ಬಿಜೆಪಿ ಮುಖಂಡರು ಜನರ ಕ್ಷಮೆ ಕೇಳಲಿ. ಅಥವಾ ಮೆಟ್ರೋ ಸ್ಟೇಷನ್ಗೆ ಹೋಗಿ ಕ್ಷಮೆ ಕೇಳಲಿ. ನಾವೇ ಬಿಜೆಪಿಯವರಿಗೆ ಗುಲಾಬಿ ಹೂ ನೀಡುತ್ತೇವೆ. ಅವರು ಮೋದಿ ಪರವಾಗಿ ಪ್ರಯಾಣಿಕರ ಬಳಿ ಗುಲಾಬಿ ನೀಡಿ ಕ್ಷಮೆ ಕೇಳಲ್ವಾ? ಎಂದು ಹೇಳಿದ್ದಾರೆ.

ಒಟ್ಟಾರೆ, ವಾರ್ಷಿಕ 130 ಕೋಟಿ ರೂ. ಲಾಭ ಗಳಿಸುತ್ತಿರುವ ನಮ್ಮ ಮೆಟ್ರೋ, ತನ್ನ ಲಾಭಾಂಶವನ್ನು ಮೂರು ಪಟ್ಟು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಏರಿಕೆ ಮಾಡಿರುವ ಪ್ರಯಾಣ ದರದ ವಿಷಯದಲ್ಲಿ ರಾಜ್ಯದ ರಾಜಕೀಯ ಪಕ್ಷಗಳು ಬೆಲೆ ಏರಿಕೆಯ ಹಿಂದಿನ ಲೆಕ್ಕಾಚಾರವೇನು? ದುಪ್ಪಟ್ಟಿಗಿಂತ ಅಧಿಕ ದರ ಏರಿಕೆಯ ಅನಿವಾರ್ಯತೆ ಏನು? ಏಕಾಏಕಿ ಹೀಗೆ ದರ ಏರಿಸುವುದರಿಂದ ನಮ್ಮ ಮೆಟ್ರೋ ನಿರ್ಮಾಣದ ಉದ್ದೇಶವನ್ನೇ ತಲೆಕೆಳಗು ಮಾಡಿದಂತೆ ಆಗುವುದಿಲ್ಲವೆ? ಎಂಬ ಮೂಲ ಪ್ರಶ್ನೆಗಳ ಬದಲಾಗಿ, ದರ ಏರಿಕೆಗೆ ನೀವು ಕಾರಣ, ನಾವು ಕಾರಣವಲ್ಲ ಎಂಬ ಕ್ಷುಲ್ಲಕ ಕೆಸರೆರಚಾಟದಲ್ಲಿ ಮುಳುಗಿವೆ.

ಅಂತಿಮವಾಗಿ ಮೆಟ್ರೋ ಪ್ರಯಾಣಿಕರ ತಲೆ ಮೇಲೆ ದರ ಏರಿಕೆಗೆ ಚಪ್ಪಡಿ ಕಲ್ಲು ಬಿದ್ದಿದೆ. ಚಪ್ಪಡಿಯನ್ನು ಬದಿಗೊತ್ತಿ ಪ್ರಯಾಣಿಕರನ್ನು ಬದುಕಿಸಬೇಕಾಗಿದ್ದ ಜನಪ್ರತಿನಿಧಿಗಳು, ಕಲ್ಲು ಬೀಳಿಸಿದ್ದು ಯಾರು ಎಂಬ ಚರ್ಚೆಯಲ್ಲಿ ಮುಳುಗಿ ದರ ಏರಿಕೆಯ ಕೊಚ್ಚೆಯಲ್ಲಿ ಮೀನು ಹಿಡಿಯಲು ಹಪಾಹಪಿಸುತ್ತಿದ್ದಾರೆ.

Read More
Next Story