
Namma Metro | ಹೊಸ ವರ್ಷಾಚರಣೆ: ನಮ್ಮ ಮೆಟ್ರೋಗೆ ಬರೋಬ್ಬರಿ 2 ಕೋಟಿ ರೂ. ಆದಾಯ
ಮಂಗಳವಾರ ಒಂದೇ ದಿನ ಪಿಂಕ್ ಲೈನ್ನಲ್ಲಿ ಒಟ್ಟು 4,00,583, ಗ್ರೀನ್ ಲೈನ್ನಲ್ಲಿ 2,90,530 ಸೇರಿ ಒಟ್ಟು 8,59,467 ಮಂದಿ ಪ್ರಯಾಣಿಸಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಮಂಗಳವಾರ ʻನಮ್ಮ ಮೆಟ್ರೋʼ ರೈಲು ಸೇವೆಯನ್ನು ತಡರಾತ್ರಿ ಎರಡು ಗಂಟೆವರೆಗೂ ವಿಸ್ತರಿಸಲಾಗಿತ್ತು. ಇದರಿಂದಾಗಿ ಮಂಗಳವಾರ ಒಂದೇ ದಿನ ನಮ್ಮ ಮೆಟ್ರೋಗೆ 2 ಕೋಟಿ 7 ಲಕ್ಷದ 52 ಸಾವಿರ ರೂ. ಆದಾಯ ಹರಿದು ಬಂದಿದೆ.
ಹೊಸ ವರ್ಷ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದ ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇತ್ತು. ಹಾಗಾಗಿ ನಮ್ಮ ಮೆಟ್ರೋ ರೈಲು ಸೇವೆಯನ್ನು ತಡರಾತ್ರಿ ಎರಡು ಗಂಟೆವರೆಗೂ ವಿಸ್ತರಿಸಲಾಗಿತ್ತು.
ಮಂಗಳವಾರ ಬೆಳಿಗ್ಗೆ 5ರಿಂದ ಮಧ್ಯರಾತ್ರಿ 2.45ರವರೆಗೆ ಮೆಟ್ರೋ ರೈಲುಗಳು ಸಂಚಾರ ಮಾಡಿವೆ. ಮಂಗಳವಾರ ಒಂದೇ ದಿನ ಪಿಂಕ್ ಲೈನ್ನಲ್ಲಿ ಒಟ್ಟು 4,00,583, ಗ್ರೀನ್ ಲೈನ್ನಲ್ಲಿ 2,90,530, ಪಿಂಕ್ ಮತ್ತು ಗ್ರೀನ್ ಮಾರ್ಗ ಎರಡೂ ಸೇರಿ ಒಟ್ಟು 8,59,467 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಪೇಪರ್ ಟಿಕೆಟ್ ಮೂಲಕ ಮೆಟ್ರೋದಲ್ಲಿ 5,423 ಮತ್ತು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ 1,62,931 ಜನರು ಪ್ರಯಾಣ ಮಾಡಿದ್ದಾರೆ. ಆ ಮೂಲಕ ನಮ್ಮ ಮೆಟ್ರೋಗೆ 2 ಕೋಟಿ 7 ಲಕ್ಷದ 52 ಸಾವಿರ ರೂ. ಆದಾಯ ಬಂದಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್) 2025ರ ಹೊಸ ವರ್ಷದ ಮುನ್ನಾ ದಿನದಂದು ಪಿಂಕ್ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲು ಸೇವೆಗಳನ್ನು ವಿಸ್ತರಣೆ ಮಾಡಿತ್ತು. ಎಂ.ಜಿ ರಸ್ತೆಯಲ್ಲಿ ಜನಸಂದಣಿ ಹಿನ್ನೆಲೆಯಲ್ಲಿ ಡಿಸೆಂಬರ್ 31, 2024 ರಂದು ರಾತ್ರಿ 11:00 ಗಂಟೆಯಿಂದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಬಂದ್ ಮಾಡಲಾಗಿತ್ತು. ಪ್ರಯಾಣಿಕರ ಬಳಕೆಗಾಗಿ ಹತ್ತಿರದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್‌ನಲ್ಲಿ ರೈಲುಗಳನ್ನು ಏರಲು ಮತ್ತು ಇಳಿಯಲು ಅವಕಾಶ ನೀಡಲಾಗಿತ್ತು.
ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಂದ ಯಾವುದೇ ನಿಲ್ದಾಣಕ್ಕೆ ರಾತ್ರಿ 11:00 ಗಂಟೆಯ ನಂತರ ಪ್ರಯಾಣಿಸುವ ಪ್ರಯಾಣಿಕರಿಗೆ 50 ಬೆಲೆಯ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಅನ್ನು ನೀಡಲಾಗಿತ್ತು. ಈ ಕಾಗದದ ಟಿಕೆಟ್ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ 31ನೇ ಡಿಸೆಂಬರ್ 2024ರ ಬೆಳಗ್ಗೆ 8:00 ರಿಂದ ಮುಂಗಡವಾಗಿ ಖರೀದಿಸಬಹುದಾಗಿತ್ತು.