ಸಿಗಂದೂರು ಸೇತುವೆಗೆ ಯಡಿಯೂರಪ್ಪ ಹೆಸರಿಡಲು ಅರ್ಜಿ : ಕೇಂದ್ರ, ರಾಜ್ಯಕ್ಕೆ ನೋಟಿಸ್​
x

ಸಿಗಂದೂರು ಸೇತುವೆಗೆ ಯಡಿಯೂರಪ್ಪ ಹೆಸರಿಡಲು ಅರ್ಜಿ : ಕೇಂದ್ರ, ರಾಜ್ಯಕ್ಕೆ ನೋಟಿಸ್​

ಶಿವಮೊಗ್ಗದ ಬಿದರೆ ಗ್ರಾಮದ ನಿವಾಸಿ ಕೆ. ಹರನಾಥ್ ರಾವ್ ಅವರು ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್ತ ಯಾದವ್ ಅವರ ಏಕಸದಸ್ಯ ಪೀಠ ನಡೆಸಿತು


ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶರಾವತಿ ಹಿನ್ನೀರಿನ ತೂಗು ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಿಡುವಂತೆ ಸಲ್ಲಿಸಲಾಗಿರುವ ಅರ್ಜಿಯ ವಿಚಾರವಾಗಿ ಕರ್ನಾಟಕ ಹೈಕೋರ್ಟ್‌ ಗುರುವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿದೆ. ಸೇತುವೆ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇರುವಾಗ ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.

ಶಿವಮೊಗ್ಗದ ಬಿದರೆ ಗ್ರಾಮದ ನಿವಾಸಿ ಕೆ. ಹರನಾಥ್ ರಾವ್ ಅವರು ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್ತ ಯಾದವ್ ಅವರ ಏಕಸದಸ್ಯ ಪೀಠ ನಡೆಸಿತು. ಅರ್ಜಿದಾರರ ವಾದ ಆಲಿಸಿದ ನಂತರ, ನ್ಯಾಯಾಲಯವು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಇಲಾಖೆ ಹಾಗೂ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆಗೆ ನೋಟಿಸ್ ಜಾರಿಗೊಳಿಸಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿತು.

ಶರಾವತಿ ನದಿಯ ಹಿನ್ನೀರಿನ ಮೇಲೆ ಅಂಬಾರಗೋಡ್ಲು ಮತ್ತು ಕಳಸವಳ್ಳಿ ನಡುವೆ ಸುಮಾರು 2.4 ಕಿಲೋಮೀಟರ್ ಉದ್ದದ ಈ ತೂಗು ಸೇತುವೆ ನಿರ್ಮಾಣವಾಗಿದೆ. 'ಸಿಗಂದೂರು ಸೇತುವೆ' ಎಂದೂ ಕರೆಯಲ್ಪಡುವ ಈ ಯೋಜನೆಗೆ ಅಂದಾಜು 450 ಕೋಟಿ ರೂಪಾಯಿ ವೆಚ್ಚವಾಗಿದೆ ಎನ್ನಲಾಗಿದೆ. ಜುಲೈ 14ರಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಈ ಸೇತುವೆ ಉದ್ಘಾಟಿಸಲು ಸಿದ್ಧತೆ ನಡೆದಿದೆ.

ಅರ್ಜಿದಾರ ಹರನಾಥ್ ರಾವ್ ಅವರು, ಸೇತುವೆ ನಿರ್ಮಾಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೊಡುಗೆ ಮಹತ್ವದ್ದಾಗಿದ್ದು, ಸಾಗರ ತಾಲೂಕಿನ ಜನರ ಭಾವನೆ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಿ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಸೇತುವೆಗೆ ಅವರ ಹೆಸರಿಡಬೇಕು ಎಂದು ಜುಲೈ 7ರಂದೇ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಈ ಮನವಿಗೆ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಸೇತುವೆ ಉದ್ಘಾಟನೆ ಸಮೀಪಿಸುತ್ತಿರುವುದರಿಂದ, ಅರ್ಜಿದಾರರು ಮಧ್ಯಂತರ ಮನವಿ ಸಲ್ಲಿಸಿದ್ದು, ಸೇತುವೆ ಉದ್ಘಾಟನೆಗೊಂಡರೂ ಅದರ ನಾಮಕರಣದ ವಿಚಾರವನ್ನು ಯಥಾಸ್ಥಿತಿಯಲ್ಲಿಡಲು ನ್ಯಾಯಾಲಯವು ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ. ಈ ಮೂಲಕ ಸೇತುವೆ ಉದ್ಘಾಟನೆಯ ಸಂಭ್ರಮದ ನಡುವೆಯೇ ಅದರ ಹೆಸರಿನ ಕುರಿತ ವಿವಾದ ಹೈಕೋರ್ಟ್ ಅಂಗಳ ತಲುಪಿದೆ.

Read More
Next Story