ಅಕ್ಷರ ಪ್ರಿಯರ ಲಕ್ಷ್ಯ ಕೇಂದ್ರ ʻನಾಗಶ್ರೀ ಬುಕ್ ಹೌಸ್ʼ ನಾಳೆಯಿಂದ ಕಾಲಕೋಶದೊಳಕ್ಕೆ...
ಕಳೆದ 48 ವರ್ಷಗಳಿಂದ ಅಕ್ಷರ ಹಾಗೂ ಜ್ಞಾನದ ಹಸಿವನ್ನು ತಣಿಸಿದ ಬೆಂಗಳೂರು ದಕ್ಷಿಣದ ಅತಿ ಮುಖ್ಯ ಪುಸ್ತಕದ ಕೇಂದ್ರ ನಾಗಶ್ರೀ ಬುಕ್ ಹೌಸ್ ನಾಳೆಯಿಂದ ಕಾಲಕೋಶದೊಳಕ್ಕೆ ಇಳಿಯುತ್ತದೆ. ಪುಸ್ತಕ ಪ್ರಿಯರಿಗೆ ನಾಳೆಯಿಂದ ನಾಗಶ್ರೀ ಕೇವಲ ಒಂದು ಅಕ್ಷರ ನೆನಪು..
ಕಳೆದ ವರ್ಷ ದ್ರಾವಿಡ ಭಾಷೆಯ ನೂರಾರು ಟೊಂಗೆಗಳಲ್ಲಿ ಒಂದಾದ ಕರ್ನಾಟಕದ ಕರಾವಳಿ ಭಾಗದ ಬೇಳಾರ ಭಾಷೆಯನ್ನು ಮಾತನಾಡುವ ಎಂಭತ್ನಾಲ್ಕು ವರ್ಷದ ಸಿದ್ದ ಬೇಳಾರ ಕಣ್ಣು ಮುಚ್ಚಿದ. ಸಿದ್ದು ಜೊತೆಯಲ್ಲಿ ಬೇಳಾರ ಭಾಷೆ ಹಾಗೂ ಅದರ ಸತ್ವವಾದ ಬೇಳಾರ ಸಂಸ್ಕೃತಿ ಎರಡೂ ಕಣ್ಮರೆಯಾದವು.
ಏಕೆ ಈ ಬೇಳಾರ ಭಾಷೆಯ ಬಗ್ಗೆ ಈಗ ಪ್ರಸ್ತಾಪ? ಕಾರಣ ಇಷ್ಟೇ. ಒಂದು ಸಂಸ್ಕೃತಿಯ ಭಾಗವಾದ ಭಾಷೆ ಅಳಿದಂತೆ, ಒಂದು ಪುಸ್ತಕದ ಅಂಗಡಿ ಇನ್ನು ಕಣ್ಣು ತೆರೆಯುವುದಿಲ್ಲ ಎಂದಾಗಲೂ ಅದೇ ಭಾವ ಅಕ್ಷರವನ್ನು ಪ್ರೀತಿಸುವ ಮಂದಿ ಹಾಗೂ ಪುಸ್ತಕವನ್ನು ಅರಾಧಿಸುವ ಮಂದಿಗೂ ಕಾಡುತ್ತದೆ.
ಕಾಡುವ ಅನಾಥ ಭಾವ
ಹಾಗೊಂದು ಅನಾಥ ಭಾವ ಕಾಡಲು ಆರಂಭವಾದದ್ದು, ಬೆಂಗಳೂರಿನ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ನಲವತ್ತೆಂಟು ವರ್ಷಗಳ ಹಿಂದೆ ಆರಂಭವಾದ ನಾಗಶ್ರೀ ಪುಸ್ತಕದ ಅಂಗಡಿ ನಾಳೆಯಿಂದ ತೆರೆದಿರುವುದಿಲ್ಲ ಎಂಬ ಸಂಗತಿ ಅಂತರಾಳಕ್ಕೆ ಇಳಿದಾಗ. ನಾಗಶ್ರೀ ಪುಸ್ತಕದ ʻಅಂಗಡಿʼ ಹೌದಾದರೂ, ಪುಸ್ತಕವನ್ನು ಅವರು ಮಾರುತ್ತಿದ್ದರೂ, ಏಕೋ ನಾಗಶ್ರೀಯನ್ನು ಪುಸ್ತಕದ ʻಅಂಗಡಿʼ ಎನ್ನಲು ಮನಸ್ಸಾಗುವುದಿಲ್ಲ. ನಾಗಶ್ರೀ ಪ್ರವೇಶಿಸುತ್ತಿದ್ದಂತೆ, ಆ ಪುಸ್ತಕ ಪ್ರಿಯರನ್ನು ಗುರುತಿಸಿ, ಮಾತನಾಡಿಸಿ, ಅವರಿಗಿಷ್ಟವಾದ ಪುಸ್ತಕಗಳು ಇತ್ತೀಚೆಗಷ್ಟೇ ಬಂದಿವೆ ಎಂದು ಅವುಗಳನ್ನು ಕಪಾಟಿನಿಂದ ಒಂದೊಂದಾಗಿ ಅವರ ಮುಂದೆ ಹರವಿ, ಕಣ್ಣಂಚಿನಲ್ಲಿ ನಗು ಮಿಂಚಿಸುವ ವೆಂಕಟೇಶ್ ಮತ್ತು ಪ್ರಸಾದ್ ಸೋದರರ ಚಿತ್ರ ಕಣ್ಣಿಗೆ ಕಟ್ಟದೇ ಇರುವುದಿಲ್ಲ.
ಪುಸ್ತಕ ಓದಿ ಮುಗಿಸಿದ ಭಾವ
ಒಂದರ್ಥದಲ್ಲಿ, ಸುಮಾರು ಐವತ್ತು ವರ್ಷಗಳ ಹಿಂದೆ ಪ್ರಕಟವಾದ ಕಾರಂತರದೋ, ಅಡಿಗರದೋ, ಕುವೆಂಪು ಅವರದೋ, ಬೇಂದ್ರೆ ಅವರದದೋ ಭೈರಪ್ಪನವರದೋ, ಕೃತಿಯನ್ನು ಓದಿ ಮುಗಿಸಿ, ದಿಗಂತದತ್ತ ದೃಷ್ಟಿ ನೆಟ್ಟು ಮತ್ತೆ ಮೊದಲ ಪುಟವನ್ನು ಅದರಲ್ಲಿ ಮಾಡಿಕೊಂಡ ಅಂಚಿನ (margin) ಟಿಪ್ಪಣಿಯನ್ನೋ ಮತ್ತೊಮ್ಮೆ ಓದಿಕೊಂಡ ಅನುಭವ, ನಲವತ್ತೆಂಟು ವರ್ಷಗಳ ಹಿಂದಕ್ಕೆ ನೆನಪು ಜಾರಿದಾಗ.
ಜಯನಗರ ನಾಲ್ಕನೇ ಬ್ಲಾಕ್ ಬಸ್ ನಿಲ್ದಾಣದೆದುರಿನ ವಾಣಿಜ್ಯ ಸಂಕೀರ್ಣದ ನೆಲ ಭಾಗದ ಮಳಿಗೆಗಳಲ್ಲಿ ಪುಸ್ತಕ ಪ್ರಿಯರನ್ನು ಆಕರ್ಷಿಸುವುದು ನಾಗಶ್ರೀ ಬುಕ್ ಹೌಸ್. ದಕ್ಷಿಣ ಬೆಂಗಳೂರಿನ ಪ್ರಪ್ರಥಮ ಪುಸ್ತಕ ಮಳಿಗೆ ಇದು. ಇದೊಂದು ರೀತಿಯಲ್ಲಿ ಸಾಂಸ್ಕೃತಿಕ ಜಗತ್ತಿನ ಕೇಂದ್ರಬಿಂದು ಕೂಡ. “ನಾಗಶ್ರೀ ಹತ್ತಿರ ಬನ್ನಿ ಪುಸ್ತಕ ಕೊಂಡು ನಂತರ ಕಾಫಿ ಕುಡಿಯುತ್ತಾ ಮಾತನಾಡೋಣ” ಎಂಬುದು ಬರಹಗಾರರು, ಪುಸ್ತಕ ಪ್ರಿಯರ, ಸಿನಿಮಾ, ನಾಟಕದ ಮಂದಿಗೆ ನಡುವೆ ತೊಂಭತ್ತರ ದಶಕದಲ್ಲಿ ಸಹಜವಾಗಿಯೇ ನಡೆಯುತ್ತಿದ್ದ ಮಾತುಕತೆ. “ಎಲ್ಲಿಯೂ ಸಿಗದ ಪುಸ್ತಕಗಳು ಇಲ್ಲಿ ಸಿಗುತ್ತಿತ್ತು. ವಿಶೇಷವಾಗಿ, ಸಾಮಾಜಿಕ ಚಿಂತನೆಯ, ಕಥನೇತರ (non fiction), ಮಾನವೀಕ ಚರ್ಚೆಗಳ ಕುರಿತಾದ ಪುಸ್ತಕಗಳಿಗಾಗಿ ಓದುಗರು ನಾಗಶ್ರೀಗೆ ಬರುತ್ತಿದ್ದರು”, ಇನ್ನು ಅವುಗಳನ್ನು ಹುಡುಕಿಕೊಂಡು ಹೋಗುವುದಾದರೂ ಎಲ್ಲಿಗೆ” ಎಂದು ಪ್ರಶ್ನಿಸುತ್ತಾರೆ, ʻ ಆಕೃತಿʼ ಪ್ರಕಾಶನದ ಗುರುಪ್ರಸಾದ್. ಹೀಗೆ ಹೇಳುವಾಗ ಗುರುಪ್ರಸಾದ್ ಸಹಜವಾಗಿಯೇ ಭಾವುಕರಾಗಿದ್ದರು.
ಮುಚ್ಚುತ್ತಿರುವ ಪುಸ್ತಕದ ಅಂಗಡಿಗಳು
“ಇತ್ತೀಚೆಗೆ ಶ್ರೀನಗರದ ʼಓಂಕಾರ್ʼ ಪುಸ್ತಕದಂಗಡಿ, ಧಾರವಾಡದ ʼಸಂಗಾತʼ ಪುಸ್ತಕದಂಗಡಿ, ಕೆಲವು ವರ್ಷಗಳ ಹಿಂದೆ ಮಂಗಳೂರಿನ ʻಅತ್ರಿʼ ಪುಸ್ತಕದಂಗಡಿ ಬಾಗಿಲು ಮುಚ್ಚಿದಾಗಲೂ, ನಮಗೆ, ನಮ್ಮ ಸಂಸ್ಕೃತಿಯ ಭಾಗವೊಂದು ಕಳಚಿದಂತಾಗಿತ್ತು…” ಎಂದಾಗ ಗುರುಪ್ರಸಾದ್ ಮುಖದಲ್ಲಿ ಮೂಡಿದ್ದು ವಿಷಾದದ ನಗೆ. ಈ ಹಿಂದೆ ಮಹಾತ್ಮಾ ಗಾಂಧಿ ರಸ್ತೆಯ ಅಂಚಿನಲ್ಲಿ ಅಕ್ಷರದ ಮನಸ್ಸುಗಳನ್ನು ತನ್ನತ್ತ ಸೆಳೆಯುತ್ತಿದ್ದ, ಶಾನುಭಾಗ್ ಅವರ ಪುಸ್ತಕದಂಗಡಿ ಮುಚ್ಚಿದಾಗ, ಲಕ್ಷಾಂತರ ಕಣ್ಣುಗಳು ತೇವಗೊಂಡಿದ್ದು ನೆನಪಾಗುತ್ತಿದೆ. ಪ್ರಸಿದ್ಧ ಲೇಖಕರಾರ ರಾಮಚಂದ್ರ ಗುಹಾ, ಚಂದನ್ ಗೌಡ, ವಿವೇಕ್ ಶಾನುಭಾಗ್, ಜಯಂತ ಕಾಯ್ಕಿಣಿ, ಟಿಜೆಎಸ್ ಜಾರ್ಜ್ ಮುಂತಾದವರು ಬರೆದ ʻ ಚರಮಗೀತೆʼಯಂಥ ಬರಹಗಳು, ಇಂಥ ಪುಸ್ತಕದಂಗಡಿಯೊಂದು ʻಕಣ್ ʻಮುಚ್ಚುವುದರಿಂದ ಆಗುವ ಸಂಕಟವನ್ನು ನೆನಪಿಸುತ್ತವೆ. “ಗಿರೀಶ್ ಕಾರ್ನಾಡ್, ಶಶಿ ದೇಶಪಾಂಡೆ, ಅರುಂಧತಿ ನಾಗ್, ಅನಂತ್ ನಾಗ್ ಅವರುಗಳಿಗೆ ನಾಗಶ್ರೀ ನಂಟು ಹಿರಿದು. ಕೆಲವೊಮ್ಮೆ ಅವರು ಹೇಳಿದ ಪುಸ್ತಕಗಳನ್ನು ಅವರ ಮನೆಗಳಿಗೆ ತಲುಪಿಸಿದ್ದೂ ಇದೆ. ಇನ್ಫೋಸಿಸ್ ನ ನಾರಾಯಣ ಮೂರ್ತಿ ಹಾಗೂ ಅವರ ಮಕ್ಕಳಿಗೆ ನಮ್ಮ ಅಂಗಡಿಯ ಬಗ್ಗೆ ಅಕ್ಕರೆ. ಇಲ್ಲಿಗೆ ಬಂದು ಪುಸ್ತಕ ಕೊಳ್ಳುತ್ತಿದ್ದರು” ಎನ್ನುತ್ತಾರೆ ವೆಂಕಟೇಶ್.
ನಿಘಂಟಿನಲ್ಲಿ ಶಬ್ದದ ಅರ್ಥ ಹುಡುಕಿದಂತೆ
ತೊಂಭತ್ತರ ದಶಕದ ಕೋನೆಯ ಭಾಗದಲ್ಲಿ ಹಾಗೂ, ನವ ಶತಮಾನದ ಆದಿ ಭಾಗದಲ್ಲಿ ಬೆಂಗಳೂರಿನ ಪುಸ್ತಕ ಪ್ರೇಮಿಗಳಿಗೆ ನಾಗಶ್ರೀ ಒಂದು ರೀತಿಯಲ್ಲಿ ʻತಮ್ಮದೇʼ ಎನ್ನುವ ಭಾವನೆ. ಕನ್ನಡ, ಇಂಗ್ಲಿಷ್ ನ ಎಲ್ಲ ರೀತಿಯ, ಎಲ್ಲ ಜ್ಞಾನ ಶಾಖೆಗಳಿಗೆ ಸೇರಿದ ಪುಸ್ತಕಗಳನ್ನು ಇಡಿಕಿರಿದಂತೆ ಜೋಡಿಸಿಟ್ಟಿದ್ದ ಕಪಾಟುಗಳ ನಡುವೆ ಹುಡುಕುವುದೇ ಒಂದು ಸುಖದ ಅನುಭವ. ನಿಘಂಟಿನಲ್ಲಿ ಬೇಕಿದ್ದ ಶಬ್ದವೊಂದನ್ನು ಹುಡುಕಿದಂತೆ. ಬೇಕಾದ ಪುಸ್ತಕ ಸಿಕ್ಕಿದಾಗ ಎಲ್ಲವನ್ನೂ ಕೊಂಡುಕೊಳ್ಳಬೇಕೆಂಬ ಹಪಾಹಪಿತನ. ಆದರೆ ಜೇಬಿನಲ್ಲಿರುವುದು ಸಾಲದೆಂಬ ಎಚ್ಚರದ ನಡುವೆಯೇ ಆಯ್ಕೆ. ಈ ತೋಳಲಾಟನ್ನು ಕಂಡೂ ಕಾಣದಂತೆ ಗಮನಿಸುತ್ತಾ, ಮರುಕಪಟ್ಟರರೂ, ಪುಸ್ತಕ ವ್ಯಾಪಾರಿಯ ಎಚ್ಚರವೊಂದು ಎಚ್ಚರಿಸಿದಾಗ, ಅಂಗಡಿಯ ಹೊರಗೆ ನಿಟ್ಟಿಸುವ ವೆಂಕಟೇಶ್… ಇದು ಕಣ್ಣಿಗೆ ಕಟ್ಟಿದಂತಿರುವ ಚೌಕಟ್ಟಿನಲ್ಲಿ ಬಂಧಿಸಿದ ಚಿತ್ರ. ವೆಂಕಟೇಶ್ ಅವರಿಗೂ, ಪುಸ್ತಕದಂಗಡಿ ಮುಚ್ಚುವ ನಿರ್ಧಾರದಿಂದ, ಅವರ ಬದುಕಿನ ಒಂದು ಭಾಗದ ಅಂತ್ಯದಂತೆನ್ನಿಸುತ್ತಿದೆ. ಆದರೆ, ಅವರಿಗಿದು ಬದುಕಿನ ಅನಿವಾರ್ಯ ಕೂಡ. ಹಾಗೆಂದು ಅವರು ಅಲವೊತ್ತುಕೊಳ್ಳುತ್ತಾರೆ.
ಕಪಾಟುಗಳು ಕಾಲಿ, ಚೀಲ ಭರ್ತಿ
“ನಮಗೂ ವಯಸ್ಸಾಗುತ್ತಿದೆ. ನಮ್ಮ ಕುಟುಂಬದೊಂದಿಗೆ ಹೆಚ್ಚು ಕಾಲ ಕಳೆಯುವುದು ನ್ಯಾಯ ಕೂಡ ಅಲ್ಲವೇ? ನಮ್ಮ ಮಕ್ಕಳಿಗೆ ಪುಸ್ತಕದ ವ್ಯವಹಾರದಲ್ಲಿ ಆಸಕ್ತಿ ಇಲ್ಲ. ನಿಜ, ನಾಗಶ್ರೀ ಇನ್ನು ತೆರೆದಿರುವುದಿಲ್ಲ ಎಂದು ಹೇಳಲು ನಮಗೂ ಸಂಕಟವಾಗುತ್ತಿದೆ. ನೀವೇ ನೋಡಿ, ಅಕ್ಷರ ʻತಜ್ಞʼರು ಹೇಗೆ ಬಂದು ತಮಗಿಷ್ಟವಾದ ಪುಸ್ತಕಗಳನ್ನು ಚೀಲಗಳಲ್ಲಿ ತುಂಬಿಸಿಕೊಳ್ಳುತ್ತಿದ್ದಾರೆ. ಇವರ ಅಕ್ಷರದ ಅಕ್ಕರೆಗೆ, ನಾನು ಏನು ತಾನೇ ಹಿಂದಿರುಗಿಸಿಕೊಡಬಲ್ಲೆ?” ಎಂದು ಕಪಾಟುಗಳಿಂದ ತಮ್ಮ ಚೀಲಗಳನ್ನು ತುಂಬಿಸಿಕೊಳ್ಳುತ್ತಿದ್ದ ಪುಸ್ತಕ ಪ್ರಿಯರತ್ತ ನಿಟ್ಟಿಸಿ ನೊಡಿ ವೆಂಕಟೇಶ್ ನಿಟ್ಟುಸಿರಿಟ್ಟಾಗ ಸಂಕಟವಾಗದೇ ಇರಲಿಲ್ಲ.
1996ರಲ್ಲಿ ಪುಸ್ತಕದ ಜತೆ ಸಖ್ಯ ಬೆಳೆಸಿದಾಗ ವೆಂಕಟೇಶ್ ಅವರಿಗೆ ಕೇವಲ 22 ವರ್ಷವಂತೆ. ಈಗವರ ತಲೆ ಕೂದಲು ನೆರೆತಿದೆ ಹಾಗಾಗಿ 70 ವರ್ಷವಂತೆ. ಆದರೆ 22ರ ಉತ್ಸಾಹ ಇನ್ನೂ ಇದೆ. ಆದರೆ ದೈಹಿಕವಾಗಿ, ಮಾನಸಿಕವಾಗಿ ಅವರ ನೆರವಿಗೆ ನಿಂತಂತೆ ಕಾಣುತ್ತಿಲ್ಲ.
ಕಲ್ಲರಳಿ ಹೂವಾಗಿ, ಎಲ್ಲರಿಗೂ ಬೇಕಾಗಿ
“ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಆರಂಭವಾದಾಗ ನನ್ನ ಚಿಕ್ಕಪ್ಪ ನನ್ನನ್ನು ಈ ಪುಸ್ತಕ ಮಾರಾಟಕ್ಕೆ ಪರಿಚಯಿಸಿದರು. ಇಲ್ಲಿ ಅಂಗಡಿ ಆರಂಭಿಸಿದ ಕೆಲವೇ ಮಂದಿಯಲ್ಲಿ ನಾವು ಮೊದಲಿಗರು. ಅಂಗಡಿ ಮುಂದೆ ಆಗ ಲೈಟ್ ಕೂಡ ಇರಲಿಲ್ಲ. ನಮ್ಮದೇ ಟ್ಯೂಬ್ ಲೈಟ್ ಹಾಕಿದ್ದೆವು” ಎಂದು ʻಆʼ ದಿನಗಳನ್ನು ಪ್ರಸಾದ್ ನೆನಪಿಸಿಕೊಳ್ಳುತ್ತಾರೆ. ಹಾಗೆ ಚಿಗುರಿದ ಈ ಅಕ್ಷರ ಪ್ರೀತಿಯ ಅಂಗಡಿ ನಿಧಾನವಾಗಿ ಬೆಳೆಯಿತು. ಜಯನಗರ ನಾಲ್ಕನೇ ಬ್ಲಾಕಿನ ಆಲದ ಮರವಾಗಿ, ಮರದ ಎಲೆಗಳಲ್ಲಿ ಪುಸ್ತಕಗಳನು ಸಿಕ್ಕಿಸಿದಂತೆ ಕಾಣುವ ಕಾಲವದು, ಎಂದು ಅಂದಿನ ದಿನಗಳಲ್ಲಿ ಪ್ರೊಫೇಸರ್ ಆಗಿದ್ದ ತಮ್ಮ ತಂದೆಯ ಬೆರಳು ಹಿಡಿದು ಪುಸ್ತಕದಂಗಡಿಗೆ ಬರುತ್ತಿದ್ದ ಹಿನ್ನೆಲೆ ಸಂಗೀತ ನಿರ್ದೇಶಕ ಮತ್ತು ಪತ್ರಕರ್ತ ಎಸ್. ಆರ್. ರಾಮಕೃಷ್ಣ ನೆನಪಿಸಿಕೊಳ್ಳುತ್ತಾರೆ.
9ನೇ ಬ್ಲಾಕ್ ನಲ್ಲಿ ಮತ್ತೊಂದು ನಾಗಶ್ರೀ
ವೆಂಕಟೇಶ್ ಮತ್ತು ಪ್ರಸಾದ್ ಹೊಸ ಶತಮಾನದಲ್ಲಿ ಪುಸ್ತಕ ಪ್ರೀತಿಯನ್ನು ಮುಂದುವರಿಸಿದರು. “ಜಯನಗರದ ೯ನೇ ಬ್ಲಾಕ್ ನಲ್ಲಿ ೮೦೦ ಚದುರಡಿಯ ಅಂಗಡಿಯೊಂದನ್ನು ತೆರೆದೆವು. ಪುಸ್ತಕ ಸಿಡಿ ಕೊಳ್ಳುವವರು ಹೆಚ್ಚಿದ್ದರು. ಆದರೆ, ನಿಧಾನವಾಗಿ ಬೇಡಿಕೆ ಇಳಿಮುಖವಾಗಿ ಅದನ್ನು ಮುಚ್ಚಿ ಕೇವಲ ೪ನೇ ಬ್ಲಾಕ್ ನ ಮುಖ್ಯ ಅಂಗಡಿಯ ಮೇಲೆ ನಮ್ಮ ಗಮನ ಕೇಂದ್ರೀಕರಿಸಿದೆವು” ಎನ್ನುತ್ತಾರೆ ಪ್ರಸಾದ್. ಯಾವುದಾದರೂ ಪುಸ್ತಕ ಬಿಡುಗಡೆಯ ದಿನ ನಾಗಶೀ ಮುಂದೆ ನಿಲ್ಲುತ್ತಿದ್ದ ಜನ ಇಂದೂ ಕೂಡ ಕೊನೆಯ ದಿನವನ್ನು ಕಾಣಲು ಬಂದಿದ್ದರು. “ಹ್ಯಾರಿ ಪಾಟರ್ ಬಿಡುಗಡೆಯಾದ ದಿನವಂತೂ ನೂಕು ನುಗ್ಗಲು, ನನ್ನ ಮಗನಿಗಾಗಿ ಪುಸ್ತಕ ಕೊಂಡುಕೊಳ್ಳಲು ಹರಸಾಹಸ ಪಡಬೇಕಾಯಿತು” ಎಂದು ಆರ್. ವಿ. ವಿಶ್ವವಿದ್ಯಾಲಯದ ಜ್ಯೋತಿ ನೆನಪಿಸಿಕೊಂಡರು.
ಓದಿದೆವು, ಓದಿಸಿದೆವು
``ಈ ರೀತಿ ಪುಸ್ತಕವನ್ನು ಮಾರುಕಟ್ಟೆ ಮಾಡಲು ನಾವೂ ಸಾಕಷ್ಟು ಓದಬೇಕು. ಓದದೇ ಇರುವವರು ಪುಸ್ತಕವನ್ನು ಪ್ರೀತಿಸದವರು ಈ ವೃತ್ತಿಯಲ್ಲಿರಲು ಸಾಧ್ಯವೇ ಇಲ್ಲ. ಪುಸ್ತಕವನ್ನು Curate ಮಾಡುವುದು ಸುಲಭದ ಕೆಲಸವಲ್ಲ. ಕೆಲವು niched ಓದುಗರಿರುತ್ತಾರೆ. ಒಮ್ಮೆ ಅವರಿಗೆ ಬೇಕಾದ ಪುಸ್ತಕ ನಮ್ಮಲ್ಲಿದೆ ಎಂದು ಗೊತ್ತಾದರೆ ಅವರು ನಮ್ಮಲ್ಲಿಗೇ ಬರುತ್ತಾರೆ. ಓದುಗರೊಂದಿಗೆ ನಾವು ಓದಿದೆವು, ಬೆಳೆದೆವು'' ಎಂದು ವೆಂಕಟೇಶ್ ಹೃದಯಪೂರ್ವಕವಾಗಿ ಒಪ್ಪಿಕೊಳ್ಳುತ್ತಾರೆ.
ನಾಗಶ್ರೀ ಮುಂದೆ ಓದುಗರ ಜಾತ್ರೆ
ಹಾಗೆಂದು online ಪುಸ್ತಕದ ವ್ಯಾಪರವನ್ನು, ಅದನ್ನು ಅವಲಂಬಿಸಿದ ಅಕ್ಷರ ಪ್ರಿಯರನ್ನು ಅವರು ದೂರುವುದಿಲ್ಲ. ಕಾಲಕಾಲಕ್ಕೆ ಜಗತ್ತು, ಸಮಾಜ ಬದಲಾಗುತ್ತೆ. ಅದಕ್ಕೆ ಹೊಂದಿಕೊಳ್ಳಬೇಕು, ಇಲ್ಲ, ಗೌರವದಿಂದ ದೂರ ಸರಿಯಬೇಕು. “ಆದರೆ ಒಂದು ಮಾತು ಹೇಳಲೇ ಬೇಕು. ಅಂಗಡಿಗಳಲ್ಲಿ ಕಪಾಟುಗಳನ್ನು ತಡಕಾಡಿ, ನಮಗೆ ಬೇಕಾದ ಪುಸ್ತಕಗಳನ್ನು ಆಯ್ದುಕೊಳ್ಳುವ ಹಾಗೂ ಅವುಗಳ Hard bound ಸವರಿ ಅಕ್ಷರಗಳತ್ತ ನೋಡಿ ಆನಂದಿಸುವುದಿದೆಯಲ್ಲ. ಅದಕ್ಕೆ ಸಮನಾದುದಲ್ಲ ಈ online ಕೊಳ್ಳುವಿಕೆ. ನಾವು ಅದನ್ನೇ ಮಾಡುತ್ತಿದ್ದೇವೆ” ಎಂದು ಪ್ರಸಾದ್ ಪುಸ್ತಕ ಕೊಳ್ಳುತ್ತಿದ್ದ ಮಕ್ಕಳತ್ತ ನೋಡುತ್ತಾ ಹೇಳಿದರು. ಇಂದು ನಾಗಶ್ರೀ ಕೊನೆಯ ದಿನ ಎಂದು ಗೊತ್ತಾಗುತ್ತಿದ್ದಂತೆ ಅಂಗಡಿಯ ಮುಂದೆ ಜನ ಜಾತ್ರೆ. ಕೊನೆಯ ದಿನವಾದ ಇಂದು ತೀರುವಳಿ ಮಾರಾಟದ ಸಲುವಾಗಿ ಪುಸ್ತಕಗಳ ಮೇಲೆ ಶೇ 50 ರಷ್ಟು ಡಿಸ್ಕೌಂಟ್ ಇತ್ತು. ಹಾಗಾಗೇ ಜನ ಮಳೆಯನ್ನೂ ಲೆಕ್ಕಿಸದೆ ಅಂಗಡಿಯ ಮುಂದೆ ನಿಂತಿದ್ದರು. ಏಕೆಂದರೆ, ಅಂಗಡಿ ಚಿಕ್ಕದು. ಅದರೊಳಗೆ ಜಾಗವಿರಲಿಲ್ಲ.
ಪುಸ್ತಕದ ಅಂಗಡಿಗಳು ಮುಚ್ಚುತ್ತಿರುವ ಈ ಪರಿಗೆ ಕಾರಣವೇನು? ಎಂದು ಕೇಳಿದರೆ, ವೆಂಕಟೇಶ್ ಸ್ಥಿತಪ್ರಜ್ಞರಂತೆ; online ಮಾರಾಟದ ಪರಂಪರೆಯಿಂದ ಮಾರಾಟ ಮತ್ತು ಆದಾಯದಲ್ಲಿ ಇಳಿಮುಖ, ನಿರ್ವಹಣ ವೆಚ್ಚದ ಹೆಚ್ಚಳ, ಜನರಲ್ಲಿ ಬದಲಾಗುತ್ತಿರುವ ಓದಿನ ಅಭಿರುಚಿ. ಇ-ಪುಸ್ತಕಗಳ, ಕೇಳು ಪುಸ್ತಕಗಳ ಆಗಮನ” ಎಂದು ಹೇಳುತ್ತಾರೆ.
ಹಾಗಾದರೆ, ಪುಸ್ತಕದಂಗಡಿಗಳನ್ನು ಉಳಿಸಲು ಅನ್ಯಮಾರ್ಗವಿಲ್ಲವೇ? “ಇದೆ. ಸ್ಥಳೀಯ ಆಡಳಿತಗಳಿಗೆ ಪುಸ್ತಕದಂಗಡಿಯ ಅಗತ್ಯ ಮನದಟ್ಟಾಗಬೇಕು, ಪುಸ್ತಕದಂಗಡಿಗಳೊಂದಿಗೆ ದೊಡ್ಡ ಮನಸ್ಸಿನ, ಅರಿವಿನ ಹಸಿವಿರುವ ಶಿಕ್ಷಣ ಸಂಸ್ಥೆಗಳು ಕೈ ಜೋಡಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಭಾಷಾ ಲೇಖಕರು ಹೆಗಲು ನೀಡಬೇಕು. ಪುಸ್ತಕ ಸಂಸ್ಕೃತಿ ಬೆಳೆಸಲು ಇದರ ಅಗತ್ಯ ಬಹಳ ಇದೆ. “ಬೆಂಗಳೂರು ಮತ್ತೊಂದು ಪಾರಂಪರಿಕ ಪುಸ್ತಕದ ಆಸ್ತಿಯನ್ನು ಕಳೆದುಕೊಂಡಂತಾಗಿದೆ” ಎಂದರು ಲೇಖಕ ಮೋಹನರಾಜ್. “ಒಮ್ಮೆ ಯಾರ ಜೊತೆಗೋ ಬಂದವರು, ಯಾರಿಗಾಗಿಯೋ ಈ ಪುಸ್ತಕದ ಅಂಗಡಿಗೆ ಬಂದವರು, ನಂತರ ಈ ಅಕ್ಷರ ಕುಟುಂಬದ ಸದಸ್ಯರಾದರು. ತಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನು ಕರೆತರುತ್ತಿದ್ದಾರೆ” ಎಂದರು ಪ್ರಸಾದ್. ಆದರೆ ನಾಳೆಯಿಂದ ಅವರ ಮರಿಮಕ್ಕಳ ಪಾಲಿಗೆ ನಾಗಶ್ರೀ ಕಾಲಕೋಶದೊಳಗೆ ಭದ್ರವಾಗಿರುವ ಒಂದು ಅಕ್ಷರದ ನೆನಪು ಮಾತ್ರ.