ʼಹನುಮಾನ್‌ ಚಾಲೀಸʼ ಪ್ರಕರಣದಲ್ಲಿ ಕೋಮು ಬಣ್ಣ ಲೇಪನ? ಪೊಲೀಸ್‌ ತನಿಖೆಯಿಂದ ಬಹಿರಂಗ
x

ʼಹನುಮಾನ್‌ ಚಾಲೀಸʼ ಪ್ರಕರಣದಲ್ಲಿ ಕೋಮು ಬಣ್ಣ ಲೇಪನ? ಪೊಲೀಸ್‌ ತನಿಖೆಯಿಂದ ಬಹಿರಂಗ

ʼಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಲೀ ಅಥವಾ ಅಜಾನ್ ಪ್ರಾರ್ಥನೆಗೆ ಅಡ್ಡಿಯಾಗುತ್ತಿದೆ ಎಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆದಿಲ್ಲʼʼ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆರೋಪಿಗಳ ಮೇಲೆ ಆರೋಪಗಳ ಸಾಬೀತು ಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಹೇಳಿಕೆ ನೀಡಿದಂತೆಯೇ ದೂರಿನಲ್ಲಿ ಆರೋಪಗಳನ್ನು ಉಲ್ಲೇಖ ಮಾಡಿಲ್ಲ ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.


ಬೆಂಗಳೂರಿನ ನಗರ್ತಪೇಟೆಯಲ್ಲಿ ಮೊಬೈಲ್ ಅಂಗಡಿಯ ಮಾಲೀಕನ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ʼಕೋಮು ಸಂಘರ್ಷʼದ ಕಾರಣಗಳಿಲ್ಲ ಎನ್ನುವುದನ್ನು ತನಿಖೆ ನಡೆಸಿದ ಬಳಿಕ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದರೆ ಬಿಜೆಪಿ ನಾಯಕರು, ಅಂಗಡಿ ಮಾಲೀಕ ʼಹನುಮಾನ್‌ ಚಾಲೀಸಾʼ ಜೋರಾಗಿ ಹಾಕಿದ್ದಕ್ಕೆ ಮುಸ್ಲಿಂ ಸಮುದಾಯದವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರೆ, ಬಿಜೆಪಿಯವರು ಲೋಕಸಭಾ ಚುನಾವಣೆ ಹತ್ತಿರದಲ್ಲಿರುವಾಗ ಹಿಂದೂಗಳ ಮತಗಳನ್ನು ಒಟ್ಟುಗೂಡಿಸಲು ಪ್ರಕರಣಕ್ಕೆ ಕೋಮು ಬಣ್ಣ ಎರಚುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಬೆಂಗಳೂರು ನಗರದ ಜುಮಾ ಮಸೀದಿ ರಸ್ತೆಯ ಸಿದ್ದಣ್ಣ ಗಲ್ಲಿಯಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿರುವ ಮುಖೇಶ್ ಎನ್ನುವ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ. ಅವರು ದೂರಿನಲ್ಲಿ ಉಲ್ಲೇಖಿಸಿರುವಂತೆ ʼʼಮಾ.17ರಂದು ಸಂಜೆ 6.30ಕ್ಕೆ ನಾನು ಅಂಗಡಿಯಲ್ಲಿ ಇರುವಾಗ ಸುಲೇಮಾನ್, ಶಾನವಾಝ್, ರೋಹಿತ್, ಡ್ಯಾನಿಶ್, ತರುಣ್ ಹಾಗೂ ಇತರರು ನನ್ನ ಅಂಗಡಿಗೆ ಬಂದು ಏಕೆ ಲೌಡ್ ಸ್ಪೀಕರ್ ಜೋರಾಗಿ ಹಾಕಿರುವೆ, ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ನನ್ನ ಮುಖಕ್ಕೆ ಗುದ್ದಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆʼʼ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಘಟನೆ ಸಂಬಂಧ ಹೇಳಿಕೆ ನೀಡಿರುವ ಪೊಲೀಸರು, ʼʼಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಲೀ ಅಥವಾ ಅಜಾನ್ ಪ್ರಾರ್ಥನೆಗೆ ಅಡ್ಡಿಯಾಗುತ್ತಿದೆ ಎಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆದಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ. ಆರೋಪಿಗಳ ಮೇಲೆ ಆರೋಪಗಳ ಸಾಬೀತು ಪಡಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಹೇಳಿಕೆ ನೀಡಿದಂತೆಯೇ ದೂರಿನಲ್ಲಿ ಆರೋಪಗಳನ್ನು ಉಲ್ಲೇಖ ಮಾಡಿಲ್ಲ ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.

ಆದರೆ ಘಟನೆಯ ಸಿಸಿಟಿವಿ ದೃಶ್ಯಾವಳಿಯನ್ನು ಹಂಚಿಕೊಂಡಿರುವ ಬಿಜೆಪಿ 'ಕರ್ನಾಟಕ ತಾಲಿಬಾನ್ ಆಗುತ್ತಿದೆ, ಮತಾಂಧ ಕಿಡಿಗೇಡಿಗಳು ಮುಖೇಶ್ ಎಂಬ ಸಂಘ ಪರಿವಾರದ ಯುವಕನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿ ಓಡಿ ಹೋಗಿದ್ದಾರೆ. ಮುಖೇಶ್ ಸಂಜೆ ಪೂಜೆ ಸಮಯದಲ್ಲಿ ಭಕ್ತಿಗೀತೆಗಳನ್ನು ಹಾಕಿದ್ದೇ ಮತಾಂಧ ದುರುಳರು ಹಲ್ಲೆ ಮಾಡಲು ಕಾರಣ. ಹಲ್ಲೆಗೊಳಗಾದ ಮುಖೇಶ್ ಹಲಸೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದರೂ, ಪೊಲೀಸರು ದೂರು ದಾಖಲಿಸಿಕೊಳ್ಳದೆ ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಪಾ'ಕೈ'ಸ್ತಾನ್ ಸರಕಾರ ಮತಾಂಧರನ್ನು ಬಂಧಿಸಿ ಕ್ರಮಕೈಗೊಳ್ಳದೆ ಹೋದರೆ, ಉಗ್ರ ಹೋರಾಟ ಎದುರಿಸಬೇಕಾಗುತ್ತದೆʼʼ ಎಂದು ಆರೋಪಿಸಿದೆ.

ಆದರೆ, ಘಟನೆ ಮಾ.17ರ ಸಂಜೆ 6:30ರ ಸುಮಾರಿಗೆ ನಡೆದಿದ್ದು, ಅದೇ ದಿನ ರಾತ್ರಿ 10:30ಕ್ಕೆ ದೂರು ಸ್ವೀಕರಿಸಿ, ಮರುದಿನ ಮಾ.18ರ 10.30 ಗಂಟೆಗೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ ಎಂದು ಎಫ್ಐಆರ್ ವರದಿಯಲ್ಲಿ ದಾಖಲಾಗಿದೆ. ಆದರೆ, ಮಾ.18ರ 11:20ಕ್ಕೆ ಬಿಜೆಪಿಯು, 'ಎಫ್ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ' ಎಂದು ಟ್ವಿಟ್ ಮಾಡಿದೆ. ಆದರೆ, ಬಿಜೆಪಿ ಟ್ವಿಟ್ ಮಾಡುವ ಹೊತ್ತಿಗಾಗಲೇ ಎಫ್ಐಆರ್ ದಾಖಲಿಸಿ, ನ್ಯಾಯಾಲಯಕ್ಕೂ ರವಾನಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ವೈರಲ್ ಆಗಿರುವ ಸಿಸಿಟಿವಿ ದೃಶ್ಯದಲ್ಲಿ, ಮುಖೇಶ್ ಅಂಗಡಿಗೆ ಬಂದ ಯುವಕರ ಗುಂಪೊಂದು ವಾಗ್ವಾದದಲ್ಲಿ ತೊಡಗುವುದು ಕಂಡು ಬರುತ್ತದೆ. ಒಂದು ಹಂತದಲ್ಲಿ ಮುಖೇಶ್ ಹಾಗೂ ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಕೊನೆಗೆ ಗುಂಪಿನಲ್ಲಿದ್ದ ಯುವಕನೊಬ್ಬ ಮುಖೇಶ್ಗೆ ಹಲ್ಲೆ ನಡೆಸುತ್ತಾನೆ. ನಂತರ ಮತ್ತೋರ್ವ ಯುವಕನೂ ಸೇರಿ ಮುಖೇಶ್ ಮೇಲೆ ಹಲ್ಲೆ ನಡೆಸುವುದು ಕಂಡು ಬರುತ್ತದೆ. ಈ ವೇಳೆ ಅಂಗಡಿಯಿಂದ ಹೊರ ಬರುವ ಮುಖೇಶ್ ಯುವಕರ ಮೇಲೆ ಪ್ರತಿ ಹಲ್ಲೆ ನಡೆಸುವುದು ಕಂಡುಬಂದಿದೆ.

ಈ ಪ್ರಕರಣಕ್ಕೆ ಕೋಮು ಬಣ್ಣ ಬೆರಸಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಚುನಾವಣಾ ಲಾಭ ಪಡೆಯಲು ಹಿಂದು ಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಮುಂದಾಗಿದ್ದರು ಆದರೆ ಇದೀಗ ಪೊಲೀಸರು ಪ್ರತಿಭಟನೆಗೆ ಅವಕಾಶ ಕೊಟ್ಟಿಲ್ಲ.

ನಗರ್ತಪೇಟೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಲ್ಲೆ ನಡೆಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೂ, ಬಂಧನಕ್ಕೆ ಒಳಗಾದವರು ಹಲ್ಲೆ ಮಾಡಿದ ವ್ಯಕ್ತಿಗಳಲ್ಲ. ಹಲ್ಲೆ ಮಾಡಿದ ಯುವಕರನ್ನು ರಕ್ಷಿಸಲು ಬೇರೆ ಯುವಕರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯನ್ನು ತೀವ್ರಗೊಳಿಸಿದರು.

ಹಲ್ಲೆಗೊಳಗಾದ ಯುವಕ ಮುಖೇಶ್ ಅಂಗಡಿಯಿಂದ ಭಾಗವಧ್ವಜದೊಂದಿಗೆ ಹನುಮಾನ್ ಚಾಲೀಸ ಪಠಣ ಮಾಡಿಕೊಂಡು ಮೆರವಣಿಗೆ ಹಮ್ಮಿಕೊಂಡಿದ್ದರು.ಇದರಂತೆ ನೂರಾರು ಸಂಖ್ಯೆಯ ಹಿಂದೂಪರ ಕಾರ್ಯಕರ್ತರು ನಗರ್ತಪೇಟೆಯಲ್ಲಿ ಜಮಾಯಿಸಿದ್ದರು. ಈ ಮೆರವಣಿಗೆಗೆ ಬಿಜೆಪಿ ನಾಯಕರಾದ ಸುರೇಶ್ ಕುರ್ಮರ್, ಸಂಸದರಾದ ಶೋಭಾ ಕರಂದ್ಲಾಜೆ , ತೇಜಸ್ವೀ ಸೂರ್ಯ, ಪಿ.ಸಿ. ಮೋಹನ್ ಕೂಡ ಭಾಗಿಯಾಗಿದ್ದರು. ಆದರೆ, ಇದಕ್ಕೆ ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಯಿತು.

ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದಂತೆ, ಪೊಲೀಸರು ಶೋಭಾ ಕರದ್ಲಾಂಜೆ , ಸುರೇಶ್ ಕುಮಾರ್ ಅವರನ್ನು ವಶಕ್ಕೆ ಪಡೆಯಲು ಮುಂದಾದಗ ತಳ್ಳಾಟ-ನೂಕಾಟ, ಗದ್ದಲ-ಕೋಲಾಹಲ ಉಂಟಾಯಿತು.

ಕಾಂಗ್ರೆಸ್ ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

ಆದರೆ ಈ ಘಟನೆಗೆ ಸಂಬಂಧಿಸಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ʼʼಆಜಾನ್ ಸಮಯದಲ್ಲಿ ಭಜನೆಗೆ ಅವಕಾಶವಿಲ್ಲ ಎಂದು ಹಿಂದೂ ಅಂಗಡಿಯವನ ಮೇಲೆ ಸಮಾಜವಿರೋಧಿಗಳು ಹಲ್ಲೆ ನಡೆಸಿದ್ದಾರೆ ಎಂದು ಕಿಡಿಕಾರಿದ್ದಾರೆ. ʼʼಇದು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದ ನೇರ ಪರಿಣಾಮವಾಗಿದೆ. ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದವರಿಗೆ ಜಾಮೀನು ನೀಡಲಾಗಿತ್ತುʼʼ ಎಂದಿದ್ದಾರೆ.

ʼʼಜಿಹಾದಿಗಳಿಗೆ ಇಂತಹ ರಾಜಕೀಯ ಬೆಂಬಲ ದೊರೆತಿರುವುದರಿಂದ ಸಹಜವಾಗಿಯೇ ನಮ್ಮ ರಾಜ್ಯದಲ್ಲಿ ಹಿಂದೂಗಳ ವಿರುದ್ಧ ಇಂತಹ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಮೊದಲು ತಪ್ಪು ನಿದರ್ಶನ ನೀಡುವುದನ್ನು ಸಿಎಂ ನಿಲ್ಲಿಸಬೇಕು. ಈ ಪ್ರಕರಣದಲ್ಲಿ ದುಷ್ಕರ್ಮಿಗಳ ವಿರುದ್ಧ ಕ್ರಮವಾಗಬೇಕುʼʼ ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದರು.

ತೇಜಸ್ವಿ ಸೂರ್ಯನಿಂದ ದ್ವೇಷ ಹರಡುವ ಪ್ರಯತ್ನ: ದಿನೇಶ್ ಗುಂಡೂರಾವ್ ತಿರುಗೇಟು

ತೇಜಸ್ವಿ ಸೂರ್ಯ ಆರೋಪಕ್ಕೆ ತಿರುಗೇಟು ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ʼʼತೇಜಸ್ವಿ ಸೂರ್ಯ ಎಂದಿನಂತೆ ದ್ವೇಷ ಹರಡಲು ಪ್ರಯತ್ನಿಸುತ್ತಿದ್ದಾರೆ. ಹಿಂದೂ ಮತ್ತು ಮುಸ್ಲಿ ಹುಡುಗರು ಒಟ್ಟಾಗಿ ಹಲ್ಲೆ ನಡೆಸಿದ್ದಾರೆ. ಆಜಾನ್ ವಿಚಾರವಾಗಿಯೇ ಹಲ್ಲೆ ನಡೆದಿದ್ದರೆ, ಹಿಂದೂ ಅಂಗಡಿಯವನ ಮೇಲೆ ಹಿಂದೂಗಳು ಏಕೆ ದಾಳಿ ಮಾಡುತ್ತಾರೆ..? ಇನ್ನು ಹನುಮಾನ್ ಚಾಲೀಸಾ ಹಾಕಲಾಗಿತ್ತು ಎಂದು ಯಾರು ಹೇಳಿದರು? ಇದು ಆಜಾನ್ V/s ಭಜನೆ ಜಗಳ ಎಂಬ ತೀರ್ಮಾನಕ್ಕೆ ಹೇಗೆ ಬರುತ್ತೀರಿ..? ಪ್ರಕರಣ ಏನೇ ಇರಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಆದರೆ ಬಿಜೆಪಿಯ ಈ ಯುವ ನಾಯಕ ಕೆಳಮಟ್ಟದ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿʼʼ ವಾಗ್ದಾಳಿ ನಡೆಸಿದ್ದಾರೆ

Read More
Next Story