
ನಗರತ್ಪೇಟೆ ಅಗ್ನಿ ದುರಂತ: ಶಾರ್ಟ್‌ಸರ್ಕ್ಯೂಟ್ ಪ್ರಾಥಮಿಕ ಶಂಕೆ, ಮೃತರ ಕುಟುಂಬಕ್ಕೆ ಪರಿಹಾರ: ಗೃಹ ಸಚಿವ
ವಿಧಿವಿಜ್ಞಾನ ಪ್ರಯೋಗಾಲಯ (FSL) ತಂಡದವರು ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದ್ದು, ಅವರ ವರದಿ ಬಂದ ನಂತರವೇ ಘಟನೆಗೆ ನಿಖರ ಕಾರಣ ತಿಳಿಯಲಿದೆ," ಎಂದು ಗೃಹ ಸಚಿವರು ಹೇಳಿದ್ದಾರೆ.
ನಗರದ ನಗರತ್ಪೇಟೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಐವರು ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ ಘಟನೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
"ಮೇಲ್ನೋಟಕ್ಕೆ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರುವಂತೆ ಕಾಣುತ್ತಿದೆ. ವಿಧಿವಿಜ್ಞಾನ ಪ್ರಯೋಗಾಲಯ (FSL) ತಂಡದವರು ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿದ್ದು, ಅವರ ವರದಿ ಬಂದ ನಂತರವೇ ಘಟನೆಗೆ ನಿಖರ ಕಾರಣ ತಿಳಿಯಲಿದೆ," ಎಂದು ಗೃಹ ಸಚಿವರು ಹೇಳಿದರು.
ದುರಂತ ನಡೆದಿದ್ದು ಹೇಗೆ?
ಘಟನೆಯ ಬಗ್ಗೆ ವಿವರಿಸಿದ ಸಚಿವರು, "ಬೆಂಕಿ ಮೊದಲು ಕಟ್ಟಡದ ನೆಲಮಹಡಿಯಲ್ಲಿ ಕಾಣಿಸಿಕೊಂಡಿದೆ. ಅಲ್ಲಿ ಪ್ಲಾಸ್ಟಿಕ್ ವಸ್ತುಗಳು, ರಬ್ಬರ್ ಮ್ಯಾಟ್‌ಗಳಂತಹ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರಿಂದ, ಬೆಂಕಿ ವೇಗವಾಗಿ ಎರಡನೇ ಮತ್ತು ಮೂರನೇ ಮಹಡಿಗಳಿಗೂ ಹಬ್ಬಿದೆ. ದುರಂತವೆಂದರೆ, ಕೆಳಮಹಡಿಯಲ್ಲಿದ್ದ ಮದನ್ ಎಂಬಾತ ಮೇಲ್ಮಹಡಿಯಲ್ಲಿರುವ ತನ್ನ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಬಂದಿದ್ದ. ಇದರಿಂದಾಗಿ ಮೇಲೆ ವಾಸವಿದ್ದವರು ಹೊರಬರಲು ಸಾಧ್ಯವಾಗದೆ, ಹೊಗೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಒಟ್ಟು ಐವರು ಮೃತಪಟ್ಟಿದ್ದಾರೆ. ತನಿಖೆಯ ನಂತರ ಘಟನೆಯ ಸಂಪೂರ್ಣ ಚಿತ್ರಣ ಲಭ್ಯವಾಗಲಿದೆ," ಎಂದರು.
ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ
ಈ ಭಾಗದಲ್ಲಿನ ಕಟ್ಟಡಗಳ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಗೃಹ ಸಚಿವರು, "ಇಂತಹ ಚಿಕ್ಕ ಜಾಗಗಳಲ್ಲಿ ನಾಲ್ಕೈದು ಮಹಡಿಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಇದೇ ರೀತಿಯ ಸಾವಿರಾರು ಕಟ್ಟಡಗಳಿವೆ. ಬಹುತೇಕರು ಕಟ್ಟಡಗಳನ್ನು ಗೋಡೌನ್‌ಗಳನ್ನಾಗಿ ಬಳಸಿಕೊಂಡು, ಅಲ್ಲೇ ವಾಸವಾಗಿದ್ದಾರೆ. ವ್ಯಾಪಾರ ಪರವಾನಗಿ (ಟ್ರೇಡ್ ಲೈಸೆನ್ಸ್) ನೀಡುವ ಬಿಬಿಎಂಪಿಯವರು ಈ ಬಗ್ಗೆ ಹೆಚ್ಚು ಗಮನಹರಿಸಬೇಕು. ಇಂತಹ ಅವಘಡಗಳು ನಡೆದಾಗ ಮಾತ್ರ ನಮಗೆ ಇವುಗಳ ಬಗ್ಗೆ ತಿಳಿಯುತ್ತದೆ. ಇದು ಹೀಗೆ ಆಗಬಾರದಾಗಿತ್ತು," ಎಂದು ಬೇಸರ ವ್ಯಕ್ತಪಡಿಸಿದರು.