Nagarahole | ತಡೆಬೇಲಿ ಬ್ಯಾರಿಕೇಡ್‌ನಲ್ಲಿ ಸಿಲುಕಿದ ಕಾಡಾನೆ ರಕ್ಷಿಸಿದ ವನ್ಯಜೀವಿ ಸಿಬ್ಬಂದಿ
x
ನಾಗರಹೊಳೆ ಅಭಯಾರಣ್ಯದಲ್ಲಿ ತಡೆಬೇಲಿ ಬ್ಯಾರಿಕೇಡ್‌ನಲ್ಲಿ ಸಿಲುಕಿರುವ ಕಾಡಾನೆ

Nagarahole | ತಡೆಬೇಲಿ ಬ್ಯಾರಿಕೇಡ್‌ನಲ್ಲಿ ಸಿಲುಕಿದ ಕಾಡಾನೆ ರಕ್ಷಿಸಿದ ವನ್ಯಜೀವಿ ಸಿಬ್ಬಂದಿ

ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದ ಡಿಸಿಎಫ್ ಪಿ ಎ ಸೀಮಾ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಿ, ಯಾವುದೇ ಗಾಯವಾಗದಂತೆ ಜಾಗರೂಕತೆಯಿಂದ ಬ್ಯಾರಿಕೇಡ್ ಕಂಬ ತೆರವು ಮಾಡಿ ಕಾಡಾನೆ ರಕ್ಷಣೆ ಮಾಡಲಾಗಿದೆ.


ರೇಡಿಯೋ ಕಾಲರ್ ಕಟ್ಟಿದ ಕಾಡಾನೆಯೊಂದು ತಡೆಬೇಲಿ ಬ್ಯಾರಿಕೇಡ್‌ ದಾಟುವಾಗ ಸಿಕ್ಕಿಬಿದ್ದು ಅಪ್ಪಚ್ಚಿಯಾಗುವ ಹಂತದಲ್ಲಿ ಅರಣ್ಯ ಸಿಬ್ಬಂದಿಯ ಸಕಾಲಿಕ ಕಾರ್ಯಾಚರಣೆ ಮೂಲಕ ಅದನ್ನು ಪಾರು ಮಾಡಿದ ಅಪರೂಪದ ಘಟನೆ ನಾಗರಹೊಳೆ ಹುಲಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ನಡೆದಿದೆ.

ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ವೀರನಹೊಸಹಳ್ಳಿ ವಲಯದಲ್ಲಿ ಈ ಘಟನೆ ನಡೆದಿದ್ದು, ಅಭಯಾರಣ್ಯದ ಸಿಬ್ಬಂದಿ ಮತ್ತು ನಿರ್ದೇಶಕರ ಸಕಾಲಿಕ ಕಾರ್ಯಾಚರಣೆಯಿಂದ ರೇಡಿಯೋ ಕಾಲರ್ ಹಾಕಿದ್ದ ಒಂಟಿ ಆನೆಯ ಜೀವ ರಕ್ಷಣೆಯಾಗಿದೆ ಎಂದು ಪರಿಸರಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಅದರಲ್ಲೂ ಜೀವ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ಆನೆಯನ್ನು ಪತ್ತೆ ಮಾಡಿ, ಪಾರು ಮಾಡಲು ಅದರ ಕೊರಳಲ್ಲಿ ಇದ್ದ ರೇಡಿಯೋ ಕಾಲರ್‌ ನೆರವಾದ ಅಪರೂಪದ ಪ್ರಸಂಗ ಇದು.

ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದ ಡಿಸಿಎಫ್ ಪಿ ಎ ಸೀಮಾ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಿ, ಯಾವುದೇ ಗಾಯವಾಗದಂತೆ ಜಾಗರೂಕತೆಯಿಂದ ಬ್ಯಾರಿಕೇಡ್ ಕಂಬ ತೆರವು ಮಾಡಿ ಕಾಡಾನೆ ರಕ್ಷಣೆ ಮಾಡಲಾಗಿದೆ.

ಅಭಯಾರಣ್ಯದ ಗಡಿ ದಾಟಿ ಹೊರಬಂದು ಮತ್ತೆ ವಾಪಸ್ ಹೋಗುವಾಗ ಕಾಡಾನೆ ಧಾವಂತದಲ್ಲಿ ತಡೆಬೇಲಿ ಬ್ಯಾರಿಕೇಡ್‌ನ ಎರಡು ಸಿಮೆಂಟ್ ಕಂಬಗಳ ನಡುವೆ ಸಿಲುಕಿಕೊಂಡು ಒದ್ದಾಡುತ್ತಿರುವುದನ್ನು ಅದರ ರೇಡಿಯೋ ಕಾಲರ್‌ ಟ್ರ್ಯಾಕ್‌ ಮೂಲಕವೇ ಪತ್ತೆ ಮಾಡಿದ ಅರಣ್ಯ ಸಿಬ್ಬಂದಿ, ಆ ಬಗ್ಗೆ ಆನೆ ಸಿಲುಕಿಕೊಂಡಿದ್ದ ವಲಯದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ನಾಗರಹೊಳೆ ಅಭಯಾರಣ್ಯದಲ್ಲಿ ತಡೆಬೇಲಿ ಬ್ಯಾರಿಕೇಡ್‌ನಲ್ಲಿ ಸಿಲುಕಿರುವ ಕಾಡಾನೆ

ನಾಗರಹೊಳೆ ಅಭಯಾರಣ್ಯದಲ್ಲಿ ತಡೆಬೇಲಿ ಬ್ಯಾರಿಕೇಡ್‌ನಲ್ಲಿ ಸಿಲುಕಿರುವ ಕಾಡಾನೆ

ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ವನ್ಯಜೀವಿ ವಲಯದ ಸಿಬ್ಬಂದಿ ಕಾಡಾನೆ ರಕ್ಷಣೆಗಾಗಿ ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಿದರು. ಜೆಸಿಬಿಯಲ್ಲಿ ಆನೆ ಸಿಲುಕಿಕೊಂಡಿದ್ದ ಬ್ಯಾರಿಕೇಡ್‌ನ ಸಿಮೆಂಟ್ ಕಂಬವನ್ನು ಒಡೆದು ಅದು ಬೇಲಿ ದಾಟಿ ಪಾರಾಗಲು ಅನುವು ಮಾಡಿಕೊಡಲಾಯಿತು. ಕಂಬವನ್ನು ಒಡೆಯುತ್ತಿದ್ದಂತೆ ಕಾಡಾನೆ ಬ್ಯಾರಿಕೇಡ್ ದಾಟಿ, ಹಿಂತಿರುಗಿ ಒಮ್ಮೆ ನೋಡಿ, ಕಾಡಿನಂತೆ ಓಡಿಹೋಗಿದೆ.

ಕಾರ್ಯಾಚರಣೆ ಕುರಿತು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕರಾದ ಡಿಸಿಎಫ್ ಪಿ ಎ ಸೀಮಾ ಅವರು, “ನಮ್ಮ ಸಿಬ್ಬಂದಿ ಸಕಾಲದಲ್ಲಿ ಕಾರ್ಯಾಚರಣೆ ನಡೆಸಿ ಆನೆಯನ್ನು ರಕ್ಷಿಸಲು ಸಹಕರಿಸಿದ್ದಾರೆ. ರೇಡಿಯೋ ಕಾಲರ್ ಹಾಕಿ ಆನೆಯ ಚಲನವಲನದ ಮೇಲೆ ನಿಗಾ ಇಡಲಾಗಿತ್ತು. ಆದರೂ ಅದು ಬ್ಯಾರಿಕೇಡ್ ದಾಟಿ ಹೊರಹೋಗಿ ಬರುವಾಗ ಬ್ಯಾರಿಕೇಡ್‌ನ ಎರಡು ಕಂಬಗಳ ನಡುವೆ ಸಿಲುಕಿ ಒದ್ದಾಡುತ್ತಿತ್ತು. ಆ ವಿಷಯವನ್ನು ನಮ್ಮ ಸಿಬ್ಬಂದಿ ರೇಡಿಯೋ ಕಾಲರ್‌ ಟ್ರ್ಯಾಕಿಂಗ್‌ ಮೂಲಕ ಪತ್ತೆ ಮಾಡಿ, ಗಮನಕ್ಕೆ ತಂದಿದ್ದರು. ಬಳಿಕ ಆನೆ ಇರುವ ಜಾಗಕ್ಕೆ ಹೋಗಿ, ಅದರ ಪರಿಸ್ಥಿತಿ ಗಮನಿಸಿ ಆನೆಗೆ ಯಾವುದೇ ರೀತಿಯ ಗಾಯವಾಗಂತೆ ನಾಜೂಕಾಗಿ ಕಾರ್ಯಾಚರಣೆ ನಡೆಸಿ ಅದನ್ನು ಪಾರು ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.

ಕಾಡಾನೆ ರಕ್ಷಣೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ವೀರನಹೊಸಹಳ್ಳಿ ವನ್ಯಜೀವಿ ವಲಯ ಅರಣ್ಯಾಧಿಕಾರಿ(ಆರ್‌ಎಫ್‌ಒ) ಅಭಿಷೇಕ್‌ ಅವರು ಬಗ್ಗೆ ಮಾಹಿತಿ ನೀಡಿ, "ರೇಡಿಯೋ ಕಾಲರ್‌ ಮೂಲಕ ನಾವು ಚಲನವಲನ ಟ್ರ್ಯಾಕ್‌ ಮಾಡುತ್ತಿದ್ದ ಕಾಡಾನೆ ಒಂದು ನಿರ್ದಿಷ್ಟ ಜಾಗದಲ್ಲಿ ತಾಸುಗಟ್ಟಲೆ ಇರುವ ಬಗ್ಗೆ ಅನುಮಾನ ಬಂದು ಆ ಭಾಗದ ಸಿಬ್ಬಂದಿಗೆ ಮಾಹಿತಿ ನೀಡಿ ಸ್ಥಳ ಪರಿಶೀಲನೆ ನಡೆಸಲಾಯಿತು. ಈ ವೇಳೆ ತಡೆಬೇಲಿ ಬ್ಯಾರಿಕೇಡ್‌ನಲ್ಲಿ ಆನೆ ಸಿಲುಕಿಕೊಂಡಿರುವುದು ಗೊತ್ತಾಯಿತು. ಆದರೆ, ಎರಡು ಕ್ರಾಂಕೀಟ್‌ ಕಂಬಗಳ ನಡುವೆ ಸಿಕ್ಕಾಕಿಕೊಂಡಿದ್ದ ಆನೆಯನ್ನು ಹೇಗೆ ಪಾರು ಮಾಡುವುದು ಎಂಬುದು ನಮಗೆ ಸವಾಲಾಗಿತ್ತು. ಕ್ರೇನ್‌ ಬಳಸಿ, ಪ್ರಜ್ಞೆತಪ್ಪಿಸಿ ಅದನ್ನು ಪಾರು ಮಾಡುವ ಸಲಹೆಗಳೂ ಬಂದವು. ಆದರೆ, ಡಿಸಿಎಫ್‌ ಸೀಮಾ ಮೇಡಂ ಮತ್ತು ಇತರೆ ಅಧಿಕಾರಿಗಳ ಸಲಹೆಯಂತೆ, ಆ ಸ್ಥಳ ಮತ್ತು ಅಪಾಯದ ಪ್ರಮಾಣದ ಹಿನ್ನೆಲೆ ಮತ್ತು ಅದು ಪ್ಯಾನಿಕ್‌ ಆಗುವ ಸಾಧ್ಯತೆಗಳನ್ನು ಪರಿಗಣಿಸಿ ಆ ಆಯ್ಕೆ ಸಮಂಜಸವಲ್ಲ ಎಂದು ತೀರ್ಮಾನಿಸಿ ಜೆಸಿಬಿ ಮೂಲಕ ಕಂಬ ಒಡೆದು ಪಾರು ಮಾಡಲು ನಿರ್ಧರಿಸಿ ಬಹಳ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿದೆವು. ಆನೆ ಯಾವುದೇ ಗಾಯ ಅಥವಾ ಇನ್ನಾವುದೇ ಅಪಾಯವಿಲ್ಲದೆ ಪಾರಾಗಿ ಕಾಡು ಸೇರಿತು" ಎಂದು ವಿವರಿಸಿದರು.

ನಾಗರಹೊಳೆ ಅಭಯಾರಣ್ಯದಲ್ಲಿ ರಕ್ಷಣಾ ಕಾರ್ಯಾಚರಣೆ ಬಳಿಕ ಬಿಡುಗಡೆಯಾದ ತಡೆಬೇಲಿ ಬ್ಯಾರಿಕೇಡ್‌ನಲ್ಲಿ ಸಿಲುಕಿದ್ದ ಕಾಡಾನೆ

ನಾಗರಹೊಳೆ ಅಭಯಾರಣ್ಯದಲ್ಲಿ ರಕ್ಷಣಾ ಕಾರ್ಯಾಚರಣೆ ಬಳಿಕ ಬಿಡುಗಡೆಯಾದ ತಡೆಬೇಲಿ ಬ್ಯಾರಿಕೇಡ್‌ನಲ್ಲಿ ಸಿಲುಕಿದ್ದ ಕಾಡಾನೆ

ಅಲ್ಲದೆ, ಆನೆ ಪಾರು ಮಾಡಿ ನಾಲ್ಕು ದಿನಗಳಾಗಿದ್ದರೂ ಈಗಲೂ ಅದರ ಚಲನವಲನದ ಮೇಲೆ ವಿಶೇಷ ನಿಗಾ ಇಡಲಾಗಿದ್ದು, ಯಾವುದೇ ರೀತಿಯ ಸಮಸ್ಯೆಯಿಲ್ಲದೆ ಅದು ಆರೋಗ್ಯಕರವಾಗಿ ಓಡಾಡಿಕೊಂಡಿದೆ ಎಂದೂ ಅವರು ಮಾಹಿತಿ ನೀಡಿದರು.

ಈ ಕಾರ್ಯಾಚರಣೆಯ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಕಾಲಿಕ ಕ್ರಮವನ್ನು ಶ್ಲಾಘಿಸಿರುವ ಸಂರಕ್ಷಣಾ ತಜ್ಞ ಹಾಗೂ ಹಿರಿಯ ಪತ್ರಕರ್ತ ಜೋಸೆಫ್ ಹೂವರ್, “ರಾಜ್ಯ ಸರ್ಕಾರ ಕಾಡಾನೆ ಮತ್ತು ಮಾನವ ಸಂಘರ್ಷವನ್ನು ತಡೆಯಲು ಆನೆ ಕಾರಿಡಾರ್ ಅಂಚಿನ ಜನವಸತಿ ಮತ್ತು ಕೃಷಿ ಜಮೀನುಗಳಿಗೆ ಬ್ಯಾರಿಕೇಡ್ ನಿರ್ಮಿಸಿದೆ. ಇಂತಹ ಬ್ಯಾರಿಕೇಡ್‌ನಲ್ಲಿ ಸಿಲುಕಿಕೊಂಡು ಅಪ್ಪಚ್ಚಿಯಾಗುತ್ತಿದ್ದ ಕಾಡಾನೆಯನ್ನು ಸಕಾಲಿಕ ಕಾರ್ಯಾಚರಣೆ ಮೂಲಕ ಯಾವುದೇ ಗಾಯಗಳಿಲ್ಲದೆ ರಕ್ಷಣೆ ಮಾಡಿ ಕಾಡಿಗೆ ಕಳಿಸಿರುವ ಡಿಸಿಎಫ್ ಪಿ ಎ ಸೀಮಾ ಮತ್ತು ಅವರ ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದ ಸಿಬ್ಬಂದಿಗೆ ಕಾಳಜಿಗೆ ಅಭಿನಂದನೆಗಳು” ಎಂದು ಹೇಳಿದ್ದಾರೆ.

Read More
Next Story