
320 ಎಕರೆ ಸರ್ಕಾರಿ ಭೂಮಿ ಲೂಟಿ; ನಾಗಮಂಗಲ ತಾಲೂಕು ಕಚೇರಿ ಮೇಲೆ ʼಲೋಕಾʼ ದಾಳಿ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಕಚೇರಿಯಲ್ಲಿ 200 ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಲಪಟಾಯಿಸಿದ ಐವರು ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಕಚೇರಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಬುಧವಾರ ಕಾರ್ಯಾಚರಣೆ ನಡೆಸಿ ಐವರು ಸರ್ಕಾರಿ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ಸುಮಾರು 200 ಕೋಟಿ ರೂ.ಮೌಲ್ಯದ ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ನಾಗಮಂಗಲ ತಾಲೂಕಿನ ಎಚ್.ಎನ್. ಕಾವಲು, ಚಿಕ್ಕ ಜಾತಕ, ದೊಡ್ಡ ಜಾತಕ ಸೇರಿದಂತೆ ವಿವಿಧ ಗ್ರಾಮಗಳ 'ಗೋಮಾಳ' ಭೂಮಿಯನ್ನು ಅಧಿಕಾರಿಗಳು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಿದ್ದರು.
ಕಚೇರಿಯ ಮೂಲ ದಾಖಲೆ ತಿದ್ದಿ, ಹಳೆಯ ಹೆಸರುಗಳನ್ನು ಅಳಿಸಿ ಹೊಸ ಹೆಸರುಗಳನ್ನು ಸೇರಿಸುವ ಮೂಲಕ ದಂಧೆ ನಡೆಸಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಜ.12 ರಂದು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು.
ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ನೇತೃತ್ವದಲ್ಲಿ ಜ.13 ಮತ್ತು 14 ರಂದು ಸತತ ಎರಡು ದಿನಗಳ ಕಾಲ ತಾಲೂಕು ಕಚೇರಿ, ಅಧಿಕಾರಿಗಳ ಮನೆ ಹಾಗೂ ಜೆರಾಕ್ಸ್ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಗ್ರಾಮ ಸಹಾಯಕ ಯೋಗೇಶ್ ಎಂಬುವವರ ಕಾರಿನಲ್ಲಿ (KA 54 M 4459) ತಾಲೂಕು ಕಚೇರಿಗೆ ಸೇರಬೇಕಾದ ಅಸಲಿ ದಾಖಲೆಗಳು, ನಕಲಿ ಸಾಗುವಳಿ ಚೀಟಿಗಳು ಮತ್ತು ಸೀಲುಗಳು ಪತ್ತೆಯಾಗಿವೆ.
ಸುಮಾರು 320 ಎಕರೆ ಸರ್ಕಾರಿ ಭೂಮಿಯನ್ನು (ಅಂದಾಜು ಮೌಲ್ಯ 200 ಕೋಟಿ ರೂ.) ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಮಂಜೂರು ಮಾಡಲಾಗಿದೆ. ತಾಲೂಕು ಕಚೇರಿಯ ರೆಕಾರ್ಡ್ ರೂಮ್‌ನಲ್ಲಿದ್ದ ಮೂಲ ದಾಖಲೆಗಳಲ್ಲಿ ಹಳೆಯ ಫಲಾನುಭವಿಗಳ ಹೆಸರುಗಳನ್ನು ಅಳಿಸಿ, ಹೊಸಬರ ಹೆಸರನ್ನು ಸೇರಿಸಲಾಗಿದೆ.
ನಿಯಮದ ಪ್ರಕಾರ ಒಬ್ಬ ವ್ಯಕ್ತಿಗೆ ಗರಿಷ್ಠ 4 ಎಕರೆ 38 ಗುಂಟೆ ಭೂಮಿ ನೀಡಲು ಅವಕಾಶವಿದೆ. ಆದರೆ, ನಸೀಮ್ ಎಂಬುವವರಿಗೆ 9 ಎಕರೆ 27 ಗುಂಟೆ ಹಾಗೂ ಕಲೀಮ್ ಮುಲ್ಲಾ ಎಂಬುವವರಿಗೆ 11 ಎಕರೆ 23 ಗುಂಟೆ ಭೂಮಿಯನ್ನು ಅಕ್ರಮವಾಗಿ ನೀಡಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.
ಈ ಹಗರಣದಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಐವರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ಭೂದಾಖಲೆಗಳ ವಿಭಾಗದ ದ್ವಿತೀಯ ದರ್ಜೆ ಸಹಾಯಕ ಸತೀಶ್ ಎಚ್.ವಿ., ಶಿರಸ್ತೇದಾರ್ ರವಿಶಂಕರ್, ಗ್ರಾಮ ಸಹಾಯಕ ಎಸ್. ಯೋಗೇಶ್, ಶಿರಸ್ತೇದಾರ್ ಉಮೇಶ್, ರೆಕಾರ್ಡ್ ರೂಂ ದ್ವಿತೀಯ ದರ್ಜೆ ಸಹಾಯಕ ಗುರುಮೂರ್ತಿ ಅವರನ್ನು ಬಂಧಿಸಲಾಗಿದೆ. ಅಲ್ಲದೇ, ಮೈಸೂರಿನ ಜಿಲ್ಲಾ ಪತ್ರಗಾರರಾದ ಚಿನ್ನಸ್ವಾಮಿ ಹಾಗೂ ವಿಜಯಕುಮಾರ್ ಸೇರಿದಂತೆ ಇತರ ಹತ್ತು ಜನರ ವಿರುದ್ಧ ನಾಗಮಂಗಲ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

