
ಸಾಂದರ್ಭಿಕ ಚಿತ್ರ
ಮೈಸೂರು ಹನಿಟ್ರ್ಯಾಪ್ ಕಿಂಗ್‌ಪಿನ್‌ಗಳು ಕೇರಳ ಲಾಡ್ಜ್‌ನಲ್ಲಿ ಅಂದರ್
ಬಟ್ಟೆ ಅಂಗಡಿ ಮಾಲೀಕ ದಿನೇಶ್ ಕುಮಾರ್ ಅವರನ್ನು ಕವನ ಹಾಗೂ ಸೈಫ್ ಜೋಡಿ ಹನಿಟ್ರ್ಯಾಪ್ ಬಲೆಗೆ ಬೀಳಿಸಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಂಪಲಾಪುರದ ಬಟ್ಟೆ ಅಂಗಡಿ ಮಾಲೀಕ ದಿನೇಶ್ ಕುಮಾರ್ ಎಂಬವರಿಗೆ ಹನಿಟ್ರ್ಯಾಪ್ ಮಾಡಿ ಪರಾರಿಯಾಗಿದ್ದ ಜೋಡಿಯನ್ನು ಕೇರಳದ ಕಣ್ಣೂರಿನ ಲಾಡ್ಜ್ವೊಂದರಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಕಂಪಲಾಪುರದ ಬಟ್ಟೆ ಅಂಗಡಿ ಮಾಲೀಕ ದಿನೇಶ್ ಕುಮಾರ್ ಅವರನ್ನು ಕವನ ಹಾಗೂ ಸೈಫ್ ಜೋಡಿ ಹನಿಟ್ರ್ಯಾಪ್ ಬಲೆಗೆ ಬೀಳಿಸಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ದಿನೇಶ್ ಕುಮಾರ್ ಬೈಲಕುಪ್ಪೆ ಠಾಣೆಗೆ ದೂರು ನೀಡಿದ್ದರು. ಬಳಿಕ ಕಾರ್ಯಚರಣೆ ನಡೆಸಿದ ಪೊಲೀಸರು, ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಪೊಲೀಸ್ ಪೇದೆ ಶಿವಣ್ಣ, ಆನಂದ್ ಹಾಗೂ ಮೂರ್ತಿಯನ್ನು ಬಂಧಿಸಿದ್ದರು. ಆದರೆ ಹನಿಟ್ರ್ಯಾಪ್ ನ ಕಿಂಗ್ ಪಿನ್ ಗಳಾಗಿದ್ದ ಕವನ, ಸೈಫ್ ತಲೆಮರೆಸಿಕೊಂಡಿದ್ದರು.
ಇದೀಗ ಪೊಲೀಸರ ಕಣ್ಣು ತಪ್ಪಿಸಿ ಓಡಾಡಿಕೊಂಡಿದ್ದ ಕವನ ಮತ್ತು ಸೈಫ್ ಆರೋಪಿಗಳನ್ನು ಕೇರಳದಲ್ಲಿ ಬಂಧಿಸಲಾಗಿದೆ. ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಬೈಲಕುಪ್ಪೆ ಪಿಎಸ್ಐ ರವಿಕುಮಾರ್, ಸಿಬ್ಬಂದಿಗಳಾದ ವಿಜಯ ಪವರ್, ಮುದ್ದುರಾಜ್, ಮಹಿಳಾ ಪೊಲೀಸ್ ಪೇದೆ ಅಶ್ವಿತಾ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
ಸದ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೈಲಕುಪ್ಪೆ ವ್ಯಾಪ್ತಿಯಲ್ಲಿ ಹನಿ ಟ್ರ್ಯಾಪ್ ಮಾಡಿದ ಸ್ಥಳಗಳಿಗೆ ಆರೋಪಿಗಳನ್ನು ಬೈಲಿಕುಪ್ಪೆ ಪೊಲೀಸರು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.