ಮೈಸೂರು ಕ್ರೀಡಾ ಹಾಸ್ಟೆಲ್ ಅವ್ಯವಸ್ಥೆಯ ಆಗರ : ಉಪ ಲೋಕಾಯುಕ್ತರ ದಿಢೀರ್ ಭೇಟಿ
x

ಮೈಸೂರು ಕ್ರೀಡಾ ಹಾಸ್ಟೆಲ್ ಅವ್ಯವಸ್ಥೆಯ ಆಗರ : ಉಪ ಲೋಕಾಯುಕ್ತರ ದಿಢೀರ್ ಭೇಟಿ

ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯನ್ನು ಕಂಡ ನ್ಯಾ.ಕೆ.ಎನ್‌.ಫಣೀಂದ್ರ ಅವರು ಅಧಿಕಾರಿಗಳ ವಿರುದ್ಧ ಕೆಂಡಮಂಡಲರಾಗಿದ್ದು, ತನಿಖೆಗೆ ಆದೇಶ ನೀಡಿದ್ದಾರೆ.


ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ನಿಲಯದ ಬಾಲಕಿಯರ ವಿಭಾಗಕ್ಕೆ ಉಪ ಲೋಕಾಯುಕ್ತ ನ್ಯಾ.ಕೆ.ಎನ್. ಫಣೀಂದ್ರ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹಾಸ್ಟೆಲ್‌ನ ನಿರ್ವಹಣೆಯಲ್ಲಿನ ಅಸಮರ್ಪಕತೆ ಮತ್ತು ತೀವ್ರ ನಿರ್ಲಕ್ಷ್ಯ ಬಯಲಾಗಿದೆ. ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯನ್ನು ಕಂಡ ನ್ಯಾ.ಕೆ.ಎನ್‌.ಫಣೀಂದ್ರ ಅವರು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾಗಿದ್ದು, ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ.

ಉಪಲೋಕಾಯುಕ್ತರ ಪರಿಶೀಲನೆ ವೇಳೆ ಹಾಸ್ಟೆಲ್ ಅಕ್ಷರಶಃ ಅವ್ಯವಸ್ಥೆಯ ಆಗರವಾಗಿರುವುದು ಕಂಡುಬಂದಿದೆ. ವಿದ್ಯಾರ್ಥಿನಿಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡುಬಂದಿದೆ. ಸ್ವಚ್ಛತೆ ಮತ್ತು ಸುರಕ್ಷತೆಗೆ ಸಂಪೂರ್ಣ ತಿಲಾಂಜಲಿ ಇಡಲಾಗಿದೆ. ಹಾಸ್ಟೆಲ್ ಕಟ್ಟಡ ಮತ್ತು ಸುತ್ತಮುತ್ತಲಿನ ಪರಿಸರ ಅತ್ಯಂತ ಅವ್ಯವಸ್ಥೆಯಿಂದ ಕೂಡಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ಕಂಡುಬಂದಿತು. ವಿಷಜಂತುಗಳು ಮತ್ತು ಹಾವುಗಳು ಹಾಸ್ಟೆಲ್ ಆವರಣದಲ್ಲಿ ಓಡಾಡುತ್ತಿದ್ದು, ಕೊಠಡಿಗಳ ಕಿಟಕಿಗಳಿಗೆ ಮೆಶ್ ಅಳವಡಿಸದ ಕಾರಣ, ಹಾವುಗಳು ಕೊಠಡಿಯೊಳಗೆ ಬಂದಿರುವ ಘಟನೆಗಳ ಬಗ್ಗೆ ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ.

ಗಲೀಜು ತುಂಬಿದ ನೀರಿನ ಸಂಪ್​

ಸ್ನಾನದ ಕೋಣೆ ಮತ್ತು ಶೌಚಾಲಯಗಳು ಸ್ವಚ್ಛತೆ ಇಲ್ಲದೆ ಕಂಡುಬಂದಿವೆ. ಬಾಗಿಲಿನ ಚಿಲಕಗಳು ಸಹ ಮುರಿದು ಹೋಗಿವೆ. ಕುಡಿಯುವ ನೀರಿನ ಸಂಪ್ ಸಹ ತೀವ್ರವಾಗಿ ಗಲೀಜಾಗಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಿತ್ತು. ಊಟದಲ್ಲಿ ತಾರತಮ್ಯ, ಕಳಪೆ ಆಹಾರ ಕಂಡುಬಂದಿದ್ದು, ವಿದ್ಯಾರ್ಥಿನಿಯರಿಗೆ ರುಚಿಕರವಲ್ಲದ ಮತ್ತು ಕಳಪೆ ಗುಣಮಟ್ಟದ ಊಟ ನೀಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಅದರಲ್ಲೂ, ಹಿರಿಯ ಮತ್ತು ಕಿರಿಯ ವಿದ್ಯಾರ್ಥಿನಿಯರ ನಡುವೆ ತಾರತಮ್ಯ ಮಾಡಲಾಗುತ್ತಿದ್ದು, ಹಿರಿಯರಿಗೆ ಉತ್ತಮ ಮೊಟ್ಟೆಗಳನ್ನು ಮತ್ತು ಕಿರಿಯರಿಗೆ ಕೆಟ್ಟುಹೋದ ಮೊಟ್ಟೆಗಳನ್ನು ನೀಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಸೌಲಭ್ಯಗಳ ದುರ್ಬಳಕೆ ಮತ್ತು ನಿರ್ಲಕ್ಷ್ಯ ಹೇರಳವಾಗಿವೆ. ಒಳಾಂಗಣ ಕ್ರೀಡಾಂಗಣವನ್ನು ಬೇರೆ ಕಾರ್ಯಕ್ರಮಗಳಿಗೆ ಬಾಡಿಗೆಗೆ ನೀಡಲಾಗುತ್ತಿದ್ದು, ಕಾರ್ಯಕ್ರಮ ಮುಗಿದ ನಂತರ ಸ್ವಚ್ಛಗೊಳಿಸದಿದ್ದಲ್ಲಿ, ವಿದ್ಯಾರ್ಥಿನಿಯರಿಂದಲೇ ಅದನ್ನು ಸ್ವಚ್ಛಗೊಳಿಸುವಂತೆ ಒತ್ತಾಯಿಸಲಾಗುತ್ತಿದೆ. ಗ್ರಂಥಾಲಯದಲ್ಲಿ ವಿದ್ಯಾರ್ಥಿನಿಯರ ಓದಿಗೆ ಪೂರಕವಾದ ಪುಸ್ತಕಗಳೇ ಇಲ್ಲ. ಅಲ್ಲಿದ್ದ ನಾಲ್ಕು ಕಂಪ್ಯೂಟರ್‌ಗಳು ಹಲವು ವರ್ಷಗಳಿಂದ ಕೆಟ್ಟುನಿಂತಿವೆ. ಎರಡು ಹಾಸ್ಟೆಲ್‌ಗಳ ನಡುವೆ ಇದ್ದ ಜನರೇಟರ್ ಕಳೆದ ಎರಡು ವರ್ಷಗಳಿಂದ ದುರಸ್ತಿಯಾಗದೆ ಮೂಲೆಗುಂಪಾಗಿದೆ. ಹಾಸ್ಟೆಲ್ ಎದುರಿನ ವಾಲಿಬಾಲ್ ಅಂಕಣ ಸಂಪೂರ್ಣ ಹಾಳಾಗಿದ್ದು, ಎಲ್ಲೆಂದರಲ್ಲಿ ಹುಲ್ಲು ಬೆಳೆದು ಆಟ ಆಡಲು ಯೋಗ್ಯವಾಗಿಲ್ಲ ಎಂಬುದನ್ನು ಉಪಲೋಕಾಯುಕ್ತರು ಗಮನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಾನಸಿಕ ಬೆಳವಣಿಗೆಗೆ ಪೂರಕವಲ್ಲ

ವಿದ್ಯಾರ್ಥಿನಿಯರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಪೂರಕವಾದ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಹಾಸ್ಟೆಲ್ ವಾರ್ಡನ್ ಶ್ರೀಮತಿ ನೇತ್ರಾ ಅವರು ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದು, ಅವರನ್ನು ಬದಲಾಯಿಸಿ ಕಾಯಂ ನೌಕರರನ್ನು ನೇಮಿಸುವಂತೆ ಉಪಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ. ಇದೇ ವೇಳೆ, "ನನ್ನ ಸೇವಾವಧಿಯಲ್ಲಿ ಇಂತಹ ಅವ್ಯವಸ್ಥೆ ಇರುವ ವಿದ್ಯಾರ್ಥಿನಿಲಯವನ್ನು ನಾನೆಂದೂ ನೋಡಿಲ್ಲ. ಇಲ್ಲಿನ ಅಧಿಕಾರಿಗಳು ಮತ್ತು ವಾರ್ಡನ್ ಕೇವಲ ಹೆಸರಿಗಷ್ಟೇ ಕೆಲಸ ಮಾಡುತ್ತಿದ್ದಾರೆ. ಇಂತಹವರು ಸಂಸ್ಥೆಗೆ ಅಪಾಯಕಾರಿಯೇ ಹೊರತು ಉಪಯುಕ್ತರಲ್ಲ. ಸೌಂದರ್ಯ, ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಹೆಸರುವಾಸಿಯಾದ ಮೈಸೂರಿನಲ್ಲಿ ಇಂತಹ ನಿರ್ಲಕ್ಷ್ಯ ನಾಚಿಕೆಗೇಡಿನ ಸಂಗತಿ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವ ಮತ್ತು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದ ಉಪಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ರಾಜ್ಯಾದ್ಯಂತ ಇದೇ ರೀತಿ ಅಸಮರ್ಪಕವಾಗಿ ನಿರ್ವಹಣೆಯಾಗುತ್ತಿರುವ ಎಲ್ಲಾ ವಿದ್ಯಾರ್ಥಿನಿಲಯಗಳನ್ನು ಗುರುತಿಸಿ, ಅವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಗಮನ ಸೆಳೆಯುವುದಾಗಿಯೂ ತಿಳಿಸಿದ್ದಾರೆ.

Read More
Next Story