Mysore Sandal Soap | ನಕಲಿ ಮೈಸೂರು ಸ್ಯಾಂಡಲ್‌ ಸೋಪ್‌ ತಯಾರಿಕೆಗೆ ಇನ್ನೂ ಬಿದ್ದಿಲ್ಲ ಕಡಿವಾಣ
x

Mysore Sandal Soap | ನಕಲಿ ಮೈಸೂರು ಸ್ಯಾಂಡಲ್‌ ಸೋಪ್‌ ತಯಾರಿಕೆಗೆ ಇನ್ನೂ ಬಿದ್ದಿಲ್ಲ ಕಡಿವಾಣ

ಹೈದರಾಬಾದ್‌ನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕವನ್ನು ಪತ್ತೆ ಹಚ್ಚಿ ಕಡಿವಾಣ ಹಾಕಿದ ಬಳಿಕವೂ ಹಲವೆಡೆ ನಕಲಿ ಉತ್ಪನ್ನಗಳ ತಯಾರಿಕೆ ನಡೆಯುತ್ತಿರುವ ಮಾಹಿತಿ ಕೆಎಸ್‌ಡಿಎಲ್‌ ಗಮನಕ್ಕೆ ಬಂದಿದೆ. ಅವುಗಳ ಜಾಡು ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.


ಮೈಸೂರು ಸ್ಯಾಂಡಲ್ ಸೋಪ್ ಹಾಗೂ ಅದರ ಉತ್ಪನ್ನಗಳ ಕಂಪು ಗಡಿಯಾಚೆಗೂ ಪಸರಿಸಿದೆ. ಶ್ರೀಗಂಧದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿರುವಂತೆ ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಯೂ ಹೆಚ್ಚಾಗಿ ನಡೆಯುತ್ತಿರುವುದು ಕಂಡು ಬಂದಿದೆ.

ಹೈದರಾಬಾದ್‌ನಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕವನ್ನು ಪತ್ತೆ ಹಚ್ಚಿ ಕಡಿವಾಣ ಹಾಕಿದ ಬಳಿಕವೂ ಹಲವೆಡೆ ನಕಲಿ ಉತ್ಪನ್ನಗಳ ತಯಾರಿಕೆ ನಡೆಯುತ್ತಿರುವ ಮಾಹಿತಿ ಕೆಎಸ್‌ಡಿಎಲ್‌ ಗಮನಕ್ಕೆ ಬಂದಿದೆ. ಅವುಗಳ ಜಾಡು ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ನಕಲಿ ಉತ್ಪನ್ನಗಳ ತಯಾರಿಕೆಗೆ ಕಡಿವಾಣ ಹಾಕಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಹೈದರಾಬಾದ್‌ನಲ್ಲಿತ್ತು ನಕಲಿ ಘಟಕ

2024 ಜನವರಿಯಲ್ಲಿ ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆ ಘಟಕ ಹೈದರಾಬಾದ್‌ನಲ್ಲಿ ತಲೆ ಎತ್ತಿದ್ದ ಕುರಿತ ಮಾಹಿತಿ ಆಧರಿಸಿ ಕೆಎಸ್‌ಡಿಎಲ್‌ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಸಂಕ್ರಾಂತಿ ಹಬ್ಬದ ಅಂಗವಾಗಿ ನಕಲಿ ಸೋಪ್ ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ಸುಮಾರು 2 ಕೋಟಿ ರೂ. ಮೌಲ್ಯದ ಸಾಮಗ್ರಿ ವಶಪಡಿಸಿಕೊಂಡಿದ್ದರು. ಈ ಸಂಬಂಧ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ಎಂಬುವರನ್ನು ಬಂಧಿಸಿ, ಮಾಲಕಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮಾಡಾಳ್‌ ಅವ್ಯವಹಾರದ ವೇಳೆ ಮೌನವಾಗಿದ್ದೇಕೆ?

ಕೆಎಸ್‌ಡಿಎಲ್‌ ಸಂಸ್ಥೆಯ ವಿಚಾರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಕನ್ನಡ ಅಸ್ಮಿತೆಯ ಬಗ್ಗೆ ಮಾತನಾಡಿರುವುದಕ್ಕೆ ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದ್ದಾರೆ.

ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಸ್ಥೆಯ ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವ್ಯವಹಾರ ನಡೆಸಿ ಜೈಲಿಗೆ ಹೋಗಿದ್ದರು. ಆಗ ತೆಪ್ಪಗಿದ್ದ ವಿಜಯೇಂದ್ರ ಅವರಿಗೂ, ಮಾಡಾಳ್ ಗೂ ವ್ಯವಹಾರ ಇತ್ತೇ ಎಂದು ಪ್ರಶ್ನಿಸಿರುವ ಅವರು, ವಿಜಯೇಂದ್ರ ಅವರಿಗೆ ಆಗ ಕನ್ನಡ ಅಸ್ಮಿತೆ ನೆನಪಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮನ್ನಾ ನೇಮಕದ ಹಿಂದೆ ವಾಣಿಜ್ಯದ ಉದ್ದೇಶ

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಕೆಎಸ್ಡಿಎಲ್ ಸಾರ್ವಕಾಲಿಕ ಉತ್ಪಾದನೆ, ವಹಿವಾಟು ಮತ್ತು ಲಾಭ ಗಳಿಸಿದೆ. ಇದನ್ನು ನಾನು ನನ್ನ ಸ್ವಂತ ವ್ಯಾಪಾರಕ್ಕಿಂತ ಹೆಚ್ಚು ಆದ್ಯತೆ ಕೊಟ್ಟು, ದಕ್ಷತೆ ಹೆಚ್ಚಿಸಿದ್ದೇನೆ. ಸಂಸ್ಥೆ ಸೊರಗಿದ್ದಾಗ ಏನೂ ಮಾತನಾಡದವರ ಕೆಂಗಣ್ಣು ಈಗ ಅದರ ಮೇಲೆ ಬಿದ್ದಿದೆ ಎಂದು ಟೀಕಿಸಿದ್ದಾರೆ.

ಹಿಂದಿ ನಟಿ ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯಾಗಿ ಮಾಡಿಕೊಂಡಿರುವುದರ ಹಿಂದೆ ವಾಣಿಜ್ಯಿಕ ಉದ್ದೇಶವಿದೆ. ನಾನು ಇದನ್ನು ಸ್ಪಷ್ಟಪಡಿಸಿದ ಮೇಲೆ ಕೆಲವು ಕನ್ನಡಪರ ಸಂಘಟನೆಗಳ ನಾಯಕರು, ಈ ವಿಚಾರ ತಮಗೆ ಗೊತ್ತಿರಲಿಲ್ಲ; ನೀವು ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ನನಗೆ ಹೇಳಿದ್ದಾರೆ. ನಾನು ಯಾರಿಂದಲೂ ಕನ್ನಡಾಭಿಮಾನವನ್ನು ಕಲಿಯುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸದ್ಯದಲ್ಲೇ ಸುಗಂಧದ್ರವ್ಯ ಬಿಡುಗಡೆ

ಕಳೆದ ಎರಡು ವರ್ಷಗಳಲ್ಲಿ ಕೆಎಸ್‌ಡಿಎಲ್‌ ವತಿಯಿಂದ 23 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ಡಿಶ್ ವಾಶರ್ ಮತ್ತು ಸುಗಂಧ ದ್ರವ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ವ್ಯಾಪಾರವನ್ನು ವ್ಯಾಪಾರವಾಗಿಯೇ ನೋಡಬೇಕು. ಮೈಸೂರು ಸ್ಯಾಂಡಲ್ ಸೋಪ್ ಅನ್ನು ಜಾಗತಿಕ ಬ್ಯಾಂಡ್ ಆಗಿ ಗುರುತಿಸಲು ವ್ಯಾಪಾರ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

Read More
Next Story