ಪ್ರಧಾನಿ ಮೋದಿಯಂತೆ ಯಾವ ಪ್ರಧಾನಿಯೂ ಟಿವಿಯಲ್ಲಿ ಬೊಗಳುತ್ತಿರಲಿಲ್ಲ: ಮಲ್ಲಿಕಾರ್ಜುನ ಖರ್ಗೆ
x

ಮೈಸೂರಿನಲ್ಲಿ ನಡೆಯುತ್ತಿರುವ ಸಾಧನ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಪಾಲ್ಗೊಂಡಿದ್ದಾರೆ. 

ಪ್ರಧಾನಿ ಮೋದಿಯಂತೆ ಯಾವ ಪ್ರಧಾನಿಯೂ ಟಿವಿಯಲ್ಲಿ ಬೊಗಳುತ್ತಿರಲಿಲ್ಲ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿಯವರು ಟೀಕಾಕಾರರು. ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡುವುದಿಲ್ಲ. ಅವರು ಮಾಡುವುದು ಭ್ರಷ್ಟಾಚಾರ ಒಂದೇ. ನಾವು ಮಾಡಿರುವ ಅಭಿವೃದ್ಧಿ ಜನರ ಕಣ್ಣ ಮುಂದಿದೆ. ಆದರೆ, ಮೋದಿ ಅವರು ಏನು ಮಾಡಿದ್ದಾರೆ ಎಂದು ಖರ್ಗೆ ಪ್ರಶ್ನಿಸಿದರು.


ಪ್ರಧಾನಿ ನರೇಂದ್ರ ಮೋದಿ ಅವರು ಮುಂಜಾನೆಯಿಂದ ಸಂಜೆವರೆಗೆ ಟಿವಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಅವರು ಟಿವಿಯಲ್ಲಿ ಕಾಣದ ಒಂದೇ ಒಂದು ದಿನವಿಲ್ಲ. ಈ ಹಿಂದೆ ಯಾವ ಪ್ರಧಾನಿಗಳು ದೂರದರ್ಶನ, ಸರ್ಕಾರಿ ಸ್ವಾಮ್ಯದ ವಾಹಿನಿಗಳಲ್ಲಿ ಮೋದಿಯಂತೆ ಬೊಗಳುತ್ತಿರಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಣಿಪುರದಲ್ಲಿ ಹಿಂಸಾಚಾರ, ಅತ್ಯಾಚಾರ, ಕೋಮು ಗಲಭೆ ನಡೆಯುತ್ತಿದ್ದರೂ ಮೋದಿ ಮಾತ್ರ ಭೇಟಿ ನೀಡಿಲ್ಲ. ಬದಲಿಗೆ ಟಿವಿಗಳಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚಾಗಿದೆ. ಮಣಿಪುರ ಹಿಂಸಾಚಾರ ನಿಯಂತ್ರಿಸಲು ಬಿಜೆಪಿ ಏನೂ ಮಾಡಿಲ್ಲ. ಪ್ರಧಾನಿ ಮೋದಿ ಅವರು 42 ದೇಶಕ್ಕೆ ಹೋಗಿ ಬಂದಿರುವುದೇ ದೊಡ್ಡ ಸಾಧನೆ. ದೇಶದಲ್ಲೇ ಇರುವ ಮಣಿಪುರಕ್ಕೆ ಹೋಗಿ ಬರಲು ಅವರಿಗೆ ಪುರುಸೊತ್ತಿಲ್ಲ ಎಂದು ಕಿಡಿಕಾರಿದರು.

ವಿದೇಶ ಪ್ರಯಾಣದಲ್ಲೇ ಕಾಲ ಕಳೆವ ಮೋದಿ

ದೇಶದ ಜನ ಹಿಂಸಾಚಾರ, ಕೋಮುಗಲಭೆಗಳಿಂದ ಸಾಯುತ್ತಿರುವಾಗ ಪ್ರಧಾನಿ ಮೋದಿ ಅವರು ಮಾತ್ರ ವಿದೇಶಗಳಲ್ಲಿ ಇರುತ್ತಾರೆ. ರಾಹುಲ್‌ ಗಾಂಧಿ ಎರಡು ಬಾರಿ ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ಜನರ ಕಷ್ಟಗಳಿಗೆ ಕಿವಿಯಾಗಿದ್ದಾರೆ. ಆದರೆ, ಬಿಜೆಪಿ ನಾಯಕರು ಮಾತ್ರ ಮಣಿಪುರ ಹಿಂಸಾಚಾರದ ಬಗ್ಗೆ ದನಿಯೆತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನರ ತೆರಿಗೆ ಹಣದಿಂದ ಕಟ್ಟಿದ ಕಾರ್ಖಾನೆಗಳನ್ನು ಅಂಬಾನಿ, ಅದಾನಿಗೆ ಮೋದಿ ಮಾರುತ್ತಿದ್ದಾರೆ. ಇಬ್ಬರನ್ನು ಮತ್ತಷ್ಟು ಶ್ರೀಮಂತರನ್ನಾಗಿಸಲು ದೇಶದ ಹಿತವನ್ನೇ ಬಲಿ ಕೊಡುತ್ತಿದ್ದಾರೆ ಎಂದು ದೂರಿದರು.

ಸಂವಿಧಾನ ಬದಲಿಸಬೇಕು ಎಂಬ ಬಿಜೆಪಿ, ಆರ್‌ಎಸ್‌ಎಸ್‌ನವರ ಕುತಂತ್ರ ಯಾವುದೇ ಕಾರಣಕ್ಕೂ ಫಲಿಸುವುದಿಲ್ಲ. ನೀವು ಎಷ್ಟೇ ತಿಪ್ಪರಲಾಗ ಹೊಡೆದರೂ ಜನ ಸಂವಿಧಾನ ಬದಲಾವಣೆಗೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಸಂವಿಧಾನ ಬದಲಾವಣೆಗೆ ಹೊರಟರೆ ನೀವು ಸತ್ತಿರಿ ಎಂದೇ ಅರ್ಥ ಎಂದು ಬಿಜೆಪಿ ನಾಯಕರಿಗೆ ನೇರ ಎಚ್ಚರಿಕೆ ನೀಡಿದರು.

ಬಾಬಾ ಸಾಹೇಬ ಅಂಬೇಡ್ಕರ್‌ ಅವರು ಕೊಟ್ಟಿರುವ ಸಂವಿಧಾನವನ್ನು ತೆಗೆದುಹಾಕಲು ಹೊರಟರೆ ನೀವು ಉಳಿಯುವುದಿಲ್ಲ, ಅಂಬೇಡ್ಕರ್‌ ರೂಪಿಸಿದ ಸಂವಿಧಾನದಿಂದಲೇ ನೀವು ಸಿಎಂ ಆಗಿದ್ದಿರಿ, ಈಗ ಪ್ರಧಾನಿಯಾಗಿದ್ದೀರಾ. ನಿಮಗೆ ರಾಜಕೀಯ ಅಧಿಕಾರ ನೀಡಿದ ಅದೇ ಸಂವಿಧಾನವನ್ನು ಹತ್ಯೆ ಮಾಡಲು ಮುಂದಾಗಿದ್ದೀರಿ ಎಂದು ಟೀಕಿಸಿದರು.

ದೇಶದ ಪ್ರತಿಯೊಬ್ಬ ಪ್ರಜೆಗೂ ಮತದ ಹಕ್ಕು ಕೊಟ್ಟವರು ಅಂಬೇಡ್ಕರ್, ನೆಹರು. ಅದರಿಂದಲೇ ನೀವು ಪ್ರಧಾನಿ ಆಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಬಡ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ಸಿದ್ದರಾಮಯ್ಯ ಅವರು ಯಾವುದೇ ಯೋಜನೆ ಬಂದರೂ ಮೊದಲ ಆದ್ಯತೆ ಕೊಡುವುದು ಮೈಸೂರಿಗೆ. ಇಲ್ಲಿನ ಅಭಿವೃದ್ಧಿಗೆ ಬದ್ಧರಿದ್ದಾರೆ. ಅವರು ಹಣಕಾಸು ಸಚಿವರಾಗಿ, ಸಿಎಂ ಆದಾಗಲೂ ಮೈಸೂರಿಗೆ ಹೆಚ್ಚಿನ ಅನುದಾನ ಹರಿಸಿದ್ದಾರೆ ಎಂದು ಹೇಳಿದರು.

ಬಿಜೆಪಿಯವರು ಟೀಕಾಕಾರರಷ್ಟೇ

ಬಿಜೆಪಿಯವರು ಟೀಕಾಕಾರರು. ಅವರು ಯಾವುದೇ ಅಭಿವೃದ್ಧಿ ಕೆಲಸ ಮಾಡುವುದಿಲ್ಲ. ಅವರು ಮಾಡುವುದು ಭ್ರಷ್ಟಾಚಾರ ಒಂದೇ. ನಾವು ಮಾಡಿರುವ ಅಭಿವೃದ್ಧಿ ಜನರ ಕಣ್ಣ ಮುಂದಿದೆ. ಆದರೆ, ಮೋದಿ ಅವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಎಚ್ ಎಂ.ಟಿ, ಎಚ್ ಎಎಲ್ ಸೇರಿ ಸಾಕಷ್ಟು ಕಾರ್ಖಾನೆಗಳನ್ನು ನೆಹರು ಕೊಟ್ಟಿದ್ದಾರೆ. ಮೈಸೂರು, ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು ಎಂದು ಕೇಳಿದರು.

ದೇಶದ ಉದ್ದಗಲಕ್ಕೂ ಇಂದು ಕಾಂಗ್ರೆಸ್ ಮಾಡಿರುವ ಕೆಲಸಗಳು ಉಳಿದಿವೆ. ಕಾಂಗ್ರೆಸ್ ಪಕ್ಷ ತನ್ನ ಮೂಲ ತತ್ವ ಬಿಡದೇ ಕೆಲಸ ಮಾಡುತ್ತಿದೆ. ನಾವು ಕೆಲವು ರಾಜ್ಯಗಳಲ್ಲಿ ಸೋತಿದ್ದೇವೆ. ಅಧಿಕಾರ ಕಳೆದುಕೊಂಡಿದ್ದೇವೆ ನಿಜ. ಆದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬುದು ಕೋಟ್ಯಾಂತರ ಜನರ ಅಭಿಲಾಷೆಯಾಗಿದೆ. ಪ್ರಧಾನಿ ಮೋದಿ ಅವರು ನಾನೂರು ಸೀಟು ಬರಲಿದೆ ಎಂದು ಹೇಳಿದ್ದ ಭವಿಷ್ಯ ಏನಾಯ್ತು ಎಂದು ಪ್ರಶ್ನಿಸಿದರು.

ಕಾಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಗಳು ದೇಶದಲ್ಲಿ ಪ್ರಖ್ಯಾತಿ ಪಡೆದಿವೆ. ಬಿಜೆಪಿಯಲ್ಲಿ ಮಾತನಾಡುವ ಜನ ಮಾತ್ರ ಇದ್ದಾರೆ. ನಮ್ಮಲ್ಲಿ ಕೆಲಸ ಮಾಡಿ ತೋರಿಸುವವರು ಇದ್ದಾರೆ. ಸಿದ್ದರಾಮಯ್ಯ ಅವರಿಗೆ ಎಲ್ಲರೂ ಸಹಕಾರ ಕೊಡುತ್ತಿದ್ದಾರೆ. ಇಂದಿರಾ ಗಾಂಧಿ ಇದ್ದಾಗ ಹತ್ತು ಅಂಶ, ಇಪ್ಪತ್ತು ಅಂಶದ ಕಾರ್ಯಕ್ರಮಗಳನ್ನು ನೀಡಿದ್ದೆವು. ದುರ್ದೈವ ಎಂದರೆ ನಮ್ಮ ಪಕ್ಷದ ಕೆಲವರೇ ನಮ್ಮೊಂದಿಗೆ ಮಾತನಾಡುವಾಗ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ನಾನು ಹೇಳುವುದು ನೀವು ಜನರ ಬಳಿಗೆ ಹೋಗಿ ಯೋಜನೆಗಳ ಮಹತ್ವದ ಬಗ್ಗೆ ಜನರಿಗೆ ಹೇಳಿ ಎಂದು ಸಲಹೆ ನೀಡಿದರು.

ಮೋದಿ ಗ್ಯಾರಂಟಿ ಸುಳ್ಳು

ನಿತಿನ್ ಗಡ್ಕರಿ ಅವರು ದೇಶದಲ್ಲಿ ಬಡತನ ಹೆಚ್ಚುತ್ತಿದೆ. ಕೆಲವೇ ಕೆಲವರ ಹತ್ತಿರ ಸಂಪತ್ತು ಸೇರುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ, ಪ್ರಧಾನಿ ಮೋದಿ ಮಾತ್ರ ಬಡತನ ಕಡಿಮೆ ಆಗುತ್ತಿದೆ ಎನ್ನುತ್ತಾರೆ. ಬಿಜೆಪಿ ನಾಯಕರ ಇಬ್ಬಗೆಯ ಧೋರಣೆಯನ್ನು ನಂಬುವುದು ಹೇಗೆ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ದೇಶದ ಒಂದು ಪರ್ಸೆಂಟ್ ಜನರ ಬಳಿ 40ಪರ್ಸೆಂಟ್ ಸಂಪತ್ತಿದೆ. ಹೀಗೆ ಅಂತರ ಹೆಚ್ಚುತ್ತಾ ಹೋದರೆ ಅಭಿವೃದ್ಧಿ ಹೇಗೆ ಆಗುತ್ತದೆ. ನೋಟ್ ಬ್ಯಾನ್ ಮಾಡಿ ಭ್ರಷ್ಟಾಚಾರ, ಉಗ್ರವಾದ ಕಡಿಮೆ ಮಾಡುತ್ತೇವೆ ಎಂದರು. ಇದು ಆಗಿದೆಯೇ ಎಂದು ವಾಗ್ದಾಳಿ ನಡೆಸಿದರು.

Read More
Next Story