ರಸ್ತೆ ನಾಮಕರಣ ವಿವಾದ | ಮಾಜಿ ಸಂಸದ ಪ್ರತಾಪ್‌ ಸಿಂಹ ಯೂಟರ್ನ್
x

ರಸ್ತೆ ನಾಮಕರಣ ವಿವಾದ | ಮಾಜಿ ಸಂಸದ ಪ್ರತಾಪ್‌ ಸಿಂಹ ಯೂಟರ್ನ್


ಮೈಸೂರಿನ ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯ ಅವರ ಹೆಸರು ಇಡುವ ವಿಷಯದಲ್ಲಿ ಮಾಜಿ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಈ ಮೊದಲು “ಸಿದ್ದರಾಮಯ್ಯ ಅವರೂ ಮೈಸೂರು ನಗರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅವರ ಹೆಸರನ್ನು ರಸ್ತೆಗೆ ಇಟ್ಟರೆ ಅದರಲ್ಲಿ ತಪ್ಪೇನು” ಎಂದು ಹೇಳಿಕೆ ನೀಡಿ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರತಾಪ್‌ ಸಿಂಹ, ಇದೀಗ ವರಸೆ ಬದಲಿಸಿದ್ದಾರೆ.

ತಮ್ಮ ಹೇಳಿಕೆಯ ಹಿನ್ನೆಲೆಯಲ್ಲಿ ಪ್ರತಾಪ್‌ ಸಿಂಹ ಅವರು ಕಾಂಗ್ರೆಸ್‌ ಸೇರುವ ತಯಾರಿಯಲ್ಲಿದ್ದಾರೆ ಎಂಬ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಅವರು, ಸಿದ್ದರಾಮಯ್ಯ ಅವರ ವಿಷಯದಲ್ಲಿ ಸೈದ್ಧಾಂತಿಕ ವಿರೋಧ ಮತ್ತು ಕಾಂಗ್ರೆಸ್‌ ವಿರುದ್ಧದ ಧೋರಣೆಯಲ್ಲಿ ಯಾವ ಬದಲಾವಣೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಸೋಮವಾರ ಆ ಕುರಿತು ಮಾತನಾಡಿರುವ ಅವರು, ನಾನು ಕಾಂಗ್ರೆಸ್ ಸೇರುತ್ತೇನೆ, ಸಿದ್ದರಾಮಯ್ಯ ಪರವಾಗಿ ಪ್ರತಾಪ ಸಿಂಹ ಸಾಫ್ಟ್ ಆಗಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಎಲ್ಲರಿಗೂ ಸ್ಪಷ್ಟವಾಗಿ ಹೇಳುತ್ತೇನೆ. ಕಳೆದ 11 ವರ್ಷಗಳಿಂದ ಸಿದ್ದರಾಮಯ್ಯ ಅವರನ್ನು ಸೈದ್ದಾಂತಿಕವಾಗಿ ಧರ್ಮದ ವಿಚಾರವಾಗಿ ವಿರೋಧ ಮಾಡುತ್ತಾ ಬಂದಿದ್ದೇನೆ. ಸಿದ್ದರಾಮಯ್ಯ ಜಾತಿವಾದದ ಬಗ್ಗೆ ಖಡಾಖಂಡಿತವಾಗಿ ವಿರೋಧ ಮಾಡಿದವನು ಪ್ರತಾಪ ಸಿಂಹ ಒಬ್ಬನೇ. ಸಿದ್ದರಾಮಯ್ಯರ ಕೆಲ ವಿಚಾರಗಳಿಗೆ ಆಕ್ಷೇಪ ಮಾಡಿದ್ದೇನೆ ಎಂದು ಹೇಳಿದರು

"ಸಿದ್ದರಾಮಯ್ಯ ಹೆಸರಿಡಲು ಮಹಾನಗರ ಪಾಲಿಕೆ ಮುಂದಾಗಿದೆ ಎಂಬ ವಿಚಾರ ತಿಳಿದು ಪಾಲಿಕೆಯಲ್ಲಿ ವಿಚಾರಿಸಿದೆ. ಪಾಲಿಕೆ ಅಸ್ತಿತ್ವಕ್ಕೆ ಬಂದ ಮೇಲೆ ರಸ್ತೆಗೆ ಯಾವ ಹೆಸರನ್ನು ಇಟ್ಟಿಲ್ಲ ಎಂದು ಹೇಳಿದ್ದರು. ಹೀಗಾಗಿ ಸಿದ್ದರಾಮಯ್ಯ ಹೆಸರು ಇಟ್ಕೊಳ್ಳಲಿ ಬಿಡಿ ಅಂಥ ಹೇಳಿದೆ" ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಜಾಫರ್ ಷರೀಫ್ ರೈಲಿಗೆ ಟಿಪ್ಪು ಹೆಸರಿಟ್ಟಿದ್ದರು. ಇದಕ್ಕೆ ಯಾರು ವಿರೋಧ ಮಾಡಿರಲಿಲ್ಲ. ನಾನು ಸಂಸದನಾದ ಮೇಲೆ ಹೆಸರನ್ನು ಬದಲಾವಣೆ ಮಾಡಿಸಿದೆ. ಭಾರತೀಯ ರೈಲ್ವೆ ಇತಿಹಾಸದಲ್ಲೇ ಯಾರು ಈ ಕೆಲಸವನ್ನು ಮಾಡಿಲ್ಲ. ಇದಕ್ಕೆ ಅರಮನೆಯಿಂದಲೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ‌. ಒಡೆಯರ್ ಎಕ್ಸ್ ಪ್ರೆಸ್ ಹೆಸರಿಡಿಸಿದ್ದು ನಾನು. ಮಹಿಷ ದಸರಾಗೆ ವಿರೋಧ ಮಾಡಿದ್ದು ನಾನೊಬ್ಬನೇ‌. ಇದಕ್ಕೆ ನಮ್ಮ ಪಕ್ಷದ ನಾಯಕರೇ ನನ್ನ ಜೊತೆಗೆ ಬರಲಿಲ್ಲ. ಇದು ನನ್ನ ಬದ್ದತೆ‌. ಮೈಸೂರಿನಲ್ಲಿ ಜನರು ಈಗಾಗಲೇ ಇಟ್ಟಿರುವ ಹೆಸರನ್ನು ಯಾರು ಬಳಸುವುದಿಲ್ಲ. ರೂಢಿಗತವಾದ ಹೆಸರನ್ನು ಬಳಸುತ್ತಾರೆ ಎಂದು ಹೇಳಿದರು.

ದಾಖಲೆಗಳಲ್ಲಿ ಪ್ರಿನ್ಸೆಸ್ ರಸ್ತೆ ಎಂದು ಹೆಸರಿದ್ದರೆ ಬದಲಾವಣೆ ಮಾಡುವುದು ಬೇಡ. ಕೆಆರ್‌ಎಸ್ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂದು ಮಹಾರಾಜರ ಕಾಲದಲ್ಲೇ ಹೆಸರಿತ್ತು ಎನ್ನುವುದಾದರೆ ದಯವಿಟ್ಟು ಬದಲಾವಣೆ ಮಾಡುವುದು ಬೇಡ. ಇದಕ್ಕೆ ತಕರಾರು ಇಲ್ಲ. ಹೆಸರು ಬದಲಾವಣೆ ಮಾಡುವುದು ಬೇಡ‌. ಸ್ಥಳೀಯ ಶಾಸಕ ಹರೀಶ್ ಗೌಡರಿಗೆ ನಾನೇ ಈ ಬಗ್ಗೆ ಮನವಿ ಮಾಡುತ್ತೇನೆ. ಮಹಾರಾಣಿಯವರ ಹೆಸರಿದ್ದರೆ ಬದಲಾವಣೆ ಮಾಡುವುದು ಬೇಡ‌. ಹೆಸರಿಲ್ಲದೆ ಖಾಲಿ‌ ಇದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಅವರ ಹೆಸರನ್ನು ಇಡಬಹುದು ಎಂದು ಹೇಳಿದ್ದೆ. ದಯವಿಟ್ಟು ನೋಟಿಫಿಕೇಷನ್ ವಾಪಸ್ ತೆಗೆದುಕೊಳ್ಳಿ. ತಕರಾರು ಸಲ್ಲಿಸುವವರು ಕೂಡ ದಾಖಲೆಯನ್ನು ಒದಗಿಸಿ. ಕಾಂಟ್ರವರ್ಸಿಯನ್ನು ಇಲ್ಲಿಗೆ ಮುಗಿಸೋಣ ಎಂದು ಮಾಧ್ಯಮಗಳಿಗೆ ಹೇಳಿದರು.

Read More
Next Story