Mysore MUDU Scam | ರಾಜ್ಯಪಾಲರ ನೋಟಿಸ್‌ಗೆ ಉತ್ತರ ನೀಡಿದ ಸಿಎಂ
x

Mysore MUDU Scam | ರಾಜ್ಯಪಾಲರ ನೋಟಿಸ್‌ಗೆ ಉತ್ತರ ನೀಡಿದ ಸಿಎಂ


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಅಕ್ರಮವಾಗಿ ನಿವೇಶನ ಪಡೆದ ಆರೋಪಕ್ಕೆ ಸಂಬಂಧಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೀಡಿರುವ ಶೋಕಾಸ್ ನೋಟಿಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.

ಜೊತೆಗೆ‌ ರಾಜ್ಯಪಾಲರಿಗೆ ಸಮರ್ಪಕ ದಾಖಲೆ ಸಲ್ಲಿಕೆ ಮಾಡಿದ್ದಾರೆ. ಆದರೆ, ಅದರಲ್ಲಿ ರಾಜ್ಯಪಾಲರ ನೋಟಿಸ್‌ಗೆ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯವನ್ನು ಸೇರಿಸಿಲ್ಲ.

ಪ್ರತ್ಯೇಕವಾಗಿ, ವೈಯಕ್ತಿಕವಾಗಿ ದಾಖಲೆಗಳ ಸಮೇತ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರಿಗೆ ವಿವರಣೆ ನೀಡಿದ್ದಾರೆ. ತಮಗೇ ನೇರವಾಗಿ ನೋಟಿಸ್ ನೀಡಿದ ಪರಿಣಾಮ ರಾಜ್ಯಪಾಲರಿಗೆ ಖುದ್ದು ಸಿಎಂ ವಿವರಣೆ ನೀಡಿದ್ದಾರೆ. ಅಲ್ಲದೆ, ರಾಜ್ಯಪಾಲರು ನೋಟಿಸ್‌ನಲ್ಲಿ ಉಲ್ಲೇಖಸಿರುವ ಆರೋಪಗಳನ್ನು ಸಿಎಂ ನಿರಾಕರಿಸಿದ್ದಾರೆ.

ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ನನ್ನ ಪಾತ್ರವಿಲ್ಲ. ಯಾವುದೇ ಪ್ರಭಾವವನ್ನೂ ಬಳಸಿಲ್ಲ. ಕಾನೂನಾತ್ಮಕವಾಗಿಯೇ ಪತ್ನಿಗೆ ನಿವೇಶನ ಹಂಚಿಕೆಯಾಗಿದೆ ಎಂದಿರುವ ಸಿದ್ದರಾಮಯ್ಯ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಉತ್ತರದ ಜತೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಚಾರವಾಗಿ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ, ʻʻಮುಡಾ ನಿವೇಶನ ವಿಚಾರಕ್ಕೆ ಸಂಬಂಧಿಸಿ ಬದಲಿ ಭೂಮಿ ಕೊಡುವುದು ಬೇಡ ಎಂದು ನಾನು ಹೇಳಿದ್ದೆʼʼ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. "ನನ್ನ ಪತ್ನಿ ಬದಲಿ ನಿವೇಶನಕ್ಕೆ ಅರ್ಜಿ ಕೊಟ್ಟಾಗ ನಾನು ಸಿಎಂ ಆಗಿದ್ದೆ. ಸಿಎಂ ಆಗಿರುವ ತನಕ ಬದಲಿ ಭೂಮಿ ಕೊಡಬೇಡಿ ಎಂದು ನಾನು ಹೇಳಿದ್ದೆ. ಪ್ರಭಾವ ಬಳಸುವುದಿದ್ದರೆ ಅಂದೇ ಬಳಸುತ್ತಿದ್ದೆʼʼ ಎಂದೂ ಅವರು ಹೇಳಿದ್ದಾರೆ.

ʻʻಸಿಎಂ ಆಗಿ ಕೊಡಲು ಆಗಿತ್ತಿರಲಿಲ್ಲವಾ? ಬದಲಿ ಸೈಟ್‌ಗೆ ಮತ್ತೆ ನನ್ನ ಪತ್ನಿ 2021ರಲ್ಲಿ ಅರ್ಜಿ ಹಾಕಿದಾಗ ಬಿಜೆಪಿ ಸರ್ಕಾರ ಕಾನೂನಾತ್ಮಕವಾಗಿ ಭೂಮಿ ನೀಡಿದೆ. ಮುಡಾ ವಿಚಾರದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ, ಪ್ರಭಾವ ಬಳಸಿಲ್ಲ. ಬಿಎಸ್ ​ಯಡಿಯೂರಪ್ಪ ಜೈಲಿಗೆ ಹೋಗಿದ್ದ ಪ್ರಕರಣವೇ ಬೇರೆ, ಇದೇ ಬೇರೆ. ಯಡಿಯೂರಪ್ಪ ಡಿನೋಟಿಫೈ ಮಾಡಿದ್ದರು. ಚೆಕ್ ಮೂಲಕ ಹಣ ಪಡೆದಿದ್ದರು. ಇಲ್ಲಿ ನಾನು ಯಾವುದೇ ಹಣ ಪಡೆದಿಲ್ಲ, ಪ್ರಭಾವ ಬೀರಿಲ್ಲʼʼ ಎಂದು ಸ್ಪಷ್ಟನೆ ನೀಡಿದ್ದಾರೆ.

Read More
Next Story