Mysore MUDA Scam | ಸಿಎಂಗೆ ತಾತ್ಕಾಲಿಕ ರಿಲೀಫ್: ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ಮುಂದೂಡಿದ ಹೈಕೋರ್ಟ್‌
x

Mysore MUDA Scam | ಸಿಎಂಗೆ ತಾತ್ಕಾಲಿಕ ರಿಲೀಫ್: ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ಮುಂದೂಡಿದ ಹೈಕೋರ್ಟ್‌


ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ತನಿಖೆ ನಡೆಸಲು ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್, ಆಗಸ್ಟ್ 29ಕ್ಕೆ ಮುಂದೂಡಿದೆ.

ಸಿಎಂ ಸಿದ್ದರಾಮಯ್ಯ ಪರ ವಕೀಲರು ಸೋಮವಾರ (ಆಗಸ್ಟ್​ 19) ಸಲ್ಲಿಸಿದ್ದ 712 ಪುಟಗಳ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ಆಗಸ್ಟ್ 29ಕ್ಕೆ ಅರ್ಜಿ ವಿಚಾರಣೆ ಮುಂದೂಡಿದೆ. ಅಲ್ಲದೇ ಆ. 20 (ಮಂಗಳವಾರ ) ಕ್ಕೆ ನಿಗದಿಯಾಗಿದ್ದ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶವನ್ನು ಆ.29ಕ್ಕೆ ಮುಂದೂಡುವಂತೆ ಸೂಚಿಸಿದೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಂತಾಗಿದೆ.

ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿತು. ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರೆ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪರ ವಕೀಲ, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ವಾದ ಮಂಡಿಸಿದರು.

ಈ ವೇಳೆ ತುಷಾರ್ ಮೆಹ್ತಾ ಅವರು ನಾಳೆ ಅರ್ಜಿಯ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದಾಗ, ನಾಳೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ವಿಚಾರಣೆ ಇದೆ. ಮಧ್ಯಂತರ ಆದೇಶ ಬೇಕಿರುವುದರಿಂದ ಇಂದೇ ವಿಚಾರಣೆ ನಡೆಸಬೇಕು. ರಾಜ್ಯಪಾಲರ ಕಚೇರಿಗೆ ಅರ್ಜಿಯ ಪ್ರತಿ ನೀಡಿದ ಮಾತ್ರಕ್ಕೆ ಅವರ ವಾದ ಕೇಳಬೇಕಿಲ್ಲ ಎಂದು ಸಿಎಂ ಪರ ಅಭಿಷೇಕ್ ಮನು ಸಿಂಗ್ವಿ ವಾದಿಸಿದರು.

ರಾಜಪಾಲರ ಶೋಕಾಸ್ ನೋಟಿಸ್‌ಗೆ ಉತ್ತರ ನೀಡಲಾಗಿತ್ತು. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ದೂರುಗಳು ಉದ್ದೇಶಪೂರಿತ. ಶೋಕಾಸ್ ನೋಟಿಸ್‌ಗೆ ಕ್ಯಾಬಿನೆಟ್ ಸಲಹೆ ಕೂಡ ಕೊಟ್ಟಿದೆ. ಕ್ಯಾಬಿನೆಟ್ ಸಲಹೆ ಪರಿಗಣಿಸದೆ, ರಾಜ್ಯಪಾಲರು 100 ಪುಟಗಳ ಕ್ಯಾಬಿನೆಟ್ ಸಲಹೆಗೆ ಎರಡು ಪುಟಗಳ ಉತ್ತರ ಕೊಟ್ಟಿದ್ದಾರೆ ಎಂದು ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.

ಸರ್ಕಾರವನ್ನು ಅಸ್ಥಿರಗೊಳಿಸಲು ಇಂತಹ ಕ್ರಮವಾಗುತ್ತಿದೆ. ರಾಜೀನಾಮೆ ಪಡೆಯಲು ಈಗ ರಾಷ್ಟ್ರಪತಿ ಆಳ್ವಿಕೆ ಅಗತ್ಯವಿಲ್ಲ. ಕೇವಲ ಇಂತಹ ದೂರುಗಳ ಮೂಲಕ ಉದ್ದೇಶ ಈಡೇರುತ್ತಿದೆ. ಸರ್ಕಾರಿ ಸೇವಕನಾಗಿ ಸಿಎಂ ಯಾವುದೇ ಶಿಫಾರಸ್ಸು ಮಾಡಿಲ್ಲ. ಮುಡಾ ಫೈಲ್ ಸಂಬಂಧ ಯಾವುದೇ ನಿರ್ಧಾರ ಸಿಎಂ ಮಾಡಿಲ್ಲ ಎಂದು ವಾದಿಸಿದರು.

ಹೊಸ ಬಿಎನ್‌ಎಸ್ ಕಾಯಿದೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ತಮ್ಮ ಕರ್ತವ್ಯದ ಭಾಗವಾಗಿ ಸಿಎಂ ನಿರ್ಧಾರ ಕೈಗೊಂಡಿಲ್ಲ. ಆದರೂ ವಿವೇಚನಾ ರಹಿತವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಕ್ಯಾಬಿನೆಟ್ ಸಲಹೆಯನ್ನು ತಿರಸ್ಕರಿಸಿ ಆದೇಶ ನೀಡುವ ಹಾಗಿಲ್ಲ ಎಂದು ವಾದಿಸಿದ ಮನು ಸಿಂಘ್ವಿ, ಅದಕ್ಕೆ ವಿವರಣೆಯಾಗಿ ಮಧ್ಯಪ್ರದೇಶದ ತೀರ್ಪನ್ನು ಕೂಡ ಉಲ್ಲೇಖಿಸಿದರು.

Read More
Next Story