Mysore MUDA Scam | ʻಸಿದ್ದರಾಮಯ್ಯ ಕಂಗಾಲಾಗಿದ್ದಾರೆʼ: ಜಮೀನಿನ ದಾಖಲೆ ಬಿಡುಗಡೆ ಮಾಡಿದ ಆರ್ ಅಶೋಕ್
x

Mysore MUDA Scam | ʻಸಿದ್ದರಾಮಯ್ಯ ಕಂಗಾಲಾಗಿದ್ದಾರೆʼ: ಜಮೀನಿನ ದಾಖಲೆ ಬಿಡುಗಡೆ ಮಾಡಿದ ಆರ್ ಅಶೋಕ್


ʻʻಮೂಡಾ ಹಗರಣದಲ್ಲಿ ಭಾಗಿಯಾಗಿರುವ ಸಿಎಂ ಸಿದ್ಧರಾಮಯ್ಯ ಕಂಗಾಲಾಗಿರುವುದು ಸ್ಪಷ್ಟ. ಅದಕ್ಕಾಗಿಯೇ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷಗಳಿಗೆ ಉತ್ತರಿಸಲು ಸಾಧ್ಯವಾಗದೆ ಮುಖ ತೋರಿಸದೆ ಪಲಾಯನ ಮಾಡಿದರುʼʼ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್‌ ಆರೋಪ ಮಾಡಿದ್ದಾರೆ.

ಮುಡಾ ವಿಚಾರವಾಗಿ ಮಂಡ್ಯದಲ್ಲಿ ದಿಢೀರ್‌ ಸುದ್ದಿಗೋಷ್ಠಿ ನಡೆಸಿದ ಅವರು, ʻʻಪಿಕ್ ಅಂಡ್ ಚೂಸ್" ರೀತಿ ತಮಗೆ ಅನುಕೂಲ ಅನ್ನಿಸಿದ ಡಾಕ್ಯುಮೆಂಟ್‌ಗಳನ್ನು ಪ್ರದರ್ಶಿಸಿ ಸಮರ್ಥಿಸಿಕೊಳ್ಳಲು ವಿಫಲ ಯತ್ನ ನಡೆಸಿದರು. ಅವರು ಸತ್ಯವಂತರು, ಪ್ರಾಮಾಣಿಕರು. ಕಾನೂನು ಬಾಹಿರವಾಗಿ ಮೂಡಾದಲ್ಲಿ ಲಾಭ ಮಾಡಿಕೊಂಡಿಲ್ಲ ಎಂದಾದರೆ ಅಧಿವೇಶನದಲ್ಲೇ ಅದನ್ನೇ ಹೇಳಬಹುದಿತ್ತು. ಹಗರಣದಲ್ಲಿ ಸಂಪೂರ್ಣ ಮುಳುಗಿ ಹೋಗಿರುವ ಅವರಿಗೆ ಬಹುಶಃ ನೈತಿಕತೆ ಕಾಡುತ್ತಿರಬೇಕು. ಚರ್ಚೆಗೆ ಅವಕಾಶ ನೀಡಿದರೆ ತಾವು ಮಾಡಿರುವ ಅಕ್ರಮ ಕಡತಗಳಲ್ಲಿ ದಾಖಲಾಗಿ ಶಾಸಕಾಂಗದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿದುಹೋಗುತ್ತದೆ ಎಂದು ಹೆದರಿದ್ದಾರೆ ಎಂದು ಹೇಳಿದರು.

"40 ವರ್ಷದ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ, ನನ್ನ ಜೀವನ ತೆರದ ಪುಸ್ತಕ ಎಂದಿದ್ದಾರೆ. ಹಾಗಿದ್ದರೆ ಮೂಡಾ ಹಗರಣ ಏನು? ಅದು ಅವರ ಪಾಲಿಗೆ ರಾಷ್ಟ್ರಪತಿ ಪದಕವೇ? ಅದರ ಚರ್ಚೆಗೆ ಹೆದರಿ ಯಾಕೆ ಪಲಾಯನ ಮಾಡಿದರು? ತೆರೆದ ಪುಸ್ತಕದ ಕೊನೆ ಅಧ್ಯಾಯದಲ್ಲಿ ಅವರಾಗಿಯೇ ಮಸಿ ಬಳಿದುಕೊಂಡಿದ್ದಲ್ಲ ಸುರಿದುಕೊಂಡಿದ್ದಾರೆ. ಇದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ದಲಿತರಿಗೆ ನ್ಯಾಯಯುತವಾಗಿ ಸೇರಬೇಕಿದ್ದ ಜಮೀನನ್ನು ಸಿಎಂ ಕುಟುಂಬ ಅಕ್ರಮವಾಗಿ ಮಾಡಿಕೊಂಡಿದೆ ಎಂದು ಹೇಳಿದ್ದೇವೆ. ಆ ಹೇಳಿಕೆಗೆ ಈಗಲೂ ಬದ್ದ, ಅದಕ್ಕೆ ನಮ್ಮಲ್ಲಿ ದಾಖಲೆಗಳಿವೆ" ಎಂದರು.

ಕೆಸರೆ ಜಮೀನಿನ ವಿವರ ಬಿಚ್ಚಿಟ್ಟ ಆರ್ ಅಶೋಕ್

ಈ ವೇಳೆ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ ಆರ್‌ ಅಶೋಕ್, ʻʻಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಡಾದಲ್ಲಿ 3.16 ಎಕರೆ ಜಮೀನಿನ ಬದಲಾಗಿ 14 ನಿವೇಶನ ತೆಗೊಂಡಿದ್ದಾರೆ. ಇದು ನಿಂಗ ಎಂಬುವರಿಗೆ ಸೇರಿದ ಜಮೀನಾಗಿದೆ. ನಿಂಗ ಎಂಬುವರು 1935ರಲ್ಲಿ 1 ರೂಪಾಯಿಗೆ ಕೊಂಡುಕೊಂಡಿದ್ದರು. ಇದಾದ ನಂತರ ನಿಂಗ ಮೃತಪಟ್ಟರು. ನಿಂಗ ಅವರ ಪತ್ನಿ ನಿಂಗಮ್ಮ ಅವರು 1990ರಲ್ಲಿ ನಿಧನರಾದರು. ನಿಂಗ ಕುಟುಂಬಸ್ಥರ ವಂಶದಲ್ಲಿ 27 ಜನರು ಇದ್ದಾರೆʼʼ ಎಂದು ತಿಳಿಸಿದರು.

ʻʻಆ ನಂತರ 1968ರಲ್ಲಿ ಸರ್ವೆ ನಂಬರ್​ 464ರಲ್ಲಿನ ಇದೇ ಜಮೀನು ನಿಂಗಾ ಅವರ ಮತ್ತೋರ್ವ ಪುತ್ರ ಮಲ್ಲಯ್ಯ ಅವರ ಹೆಸರಿಗೆ ರಿಜಿಸ್ಟರ್​ ಆಗುತ್ತದೆ. ನಂತರ 1990ರಲ್ಲಿ ಸರ್ವೆ ನಂಬರ್​ 464 ಜಮೀನು ಸೇರಿದಂತೆ 462 ಎಕರೆ ಜಮೀನನ್ನು ದೇವನೂರು ಬಡವಾಣೆ ನಿರ್ಮಾಣಕ್ಕೆ ಮುಡಾ ಪ್ರಾಥಮಿಕ ಅಧಿಸೂಚನೆ ಹೊರಡಿಸುತ್ತದೆ. ನಂತರ ದೇವರಾಜು ಅವರಿಗೆ ಮುಡಾ 3 ಲಕ್ಷ ರೂ. ಅವಾರ್ಡ್​ ನೀಡುತ್ತಾರೆ. ಈ ಅವಾರ್ಡ್​ ನೋಟಿಸ್‌ಗೆ ಮಲ್ಲಯ್ಯ ಅವರು ಸಹಿ ಹಾಕುತ್ತಾರೆ. ನಂತರ 1998ರಲ್ಲಿ ಮುಡಾ ಸರ್ವೆ ನಂಬರ್​ 464ರ ಭೂಸ್ವಾಧೀನ ಕೈಬಿಡುತ್ತದೆʼʼ ಎಂದರು.

ʻʻಈ ಜಮೀನು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಡಿನೋಟಿಫಿಕೇಷನ್ ಆಗುತ್ತದೆ. ಅವಾರ್ಡ್​ ಆದ ಮೇಲೆ ಡಿನೋಟಿಫಿಕೇಷನ್​ ಆಗಲು ಸಾಧ್ಯವೇ ಇಲ್ಲ. ಆದರೂ ಹೇಗೆ ಡಿನೋಟಿಫಿಕೇಷನ್​ ಆಗುತ್ತದೆ? ಈ ವೇಳೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದರು. ​ಸಿದ್ದರಾಮಯ್ಯ ಅವರು ನಿಂಗಾ ಅವರ ಮೂವರು ಪುತ್ರರಲ್ಲಿ ದೇವರಾಜು ಎಂಬ ಓರ್ವ ಪುತ್ರನಿಂದ ಸಹಿ ಹಾಕಿಸಿಕೊಂಡಿದ್ದಾರೆ. ಆದರೆ, ಸುಪ್ರಿಂ ಕೋರ್ಟ್​ ಆದೇಶದ ಪ್ರಕಾರ ಇದು ನಿಯಮ ಬಾಹಿರವಾಗಿದೆ. ಒಬ್ಬರ ಕೈಯಿಂದ ಸಹಿ ಹಾಕಿಸಿಕೊಂಡು ರಿಜಿಸ್ಟರ್ ಮಾಡಿಕೊಳ್ಳಲು ಆಗಲ್ಲʼʼ ಎಂದು ತಿಳಿಸಿದರು.

ʻʻ2001ರಲ್ಲಿ ದೇವನೂರು ಬಡಾವಣೆ 3ನೇ ಹಂತ ಅಭಿವೃದ್ಧಿಗೆ 11.68 ಕೋಟಿ ಹಣ ಬಿಡುಗಡೆ ಆಯಿತು. ನಂತರ ದೇವರಾಜು ಅವರ ಹೆಸರಿನಲ್ಲಿ ಡಿ-ನೋಟಿಫಿಕೇಷನ್​​ ಮಾಡಲಾಗುತ್ತದೆ. 2004ರಲ್ಲಿ 3.16 ಎಕರೆ ಜಮೀನು ದೇವರಾಜು ಅವರಿಂದ ಸಿದ್ದರಾಮಯ್ಯ ಅವರ ಬಾಮೈದ ಹೆಸರಿಗೆ ಕ್ರಯ ಮಾಡಿಕೊಳ್ಳಲಾಗುತ್ತದೆ. ಬಡಾವಣೆ ಕೆಲಸ ನಡೆಯುತ್ತಿರುವ ವೇಳೆ 2005 ರಿಂದ ವ್ಯವಸಾಯ ಭೂಮಿಯಿಂದ ನಿವೇಶನದ ಭೂಮಿಯಾಗಿ‌ ಪರಿವರ್ತನೆ ಆಗುತ್ತೆ. ಈ ವೇಳೆ ಜಿಲ್ಲಾಧಿಕಾರಿ, ತಹಶಿಲ್ದಾರ್ ಎಲ್ಲರೂ ಸ್ಥಳ ಪರಿಶೀಲನೆ ಮಾಡಿದ್ದಾರೆ. ಆದರೂ ಯಾವುದೆ ಕ್ರಮ ಕೈಗೊಂಡಿಲ್ಲ. 2005ರಲ್ಲಿ ಮೂಡಾ ಇಲ್ಲಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ ಎಂದು ಆದೇಶ ಮಾಡುತ್ತದೆʼʼ ಎಂದು ಹೇಳಿದರು.

ʻʻ2010ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಅವರ ಅಣ್ಣ ಅರಿಶಿಣ ಕುಂಕುಮ ರೂಪದಲ್ಲಿ 3.16 ಎಕರೆ ಜಮೀನು ನೀಡುತ್ತಾರೆ. 2014ರಲ್ಲಿ ಪಾರ್ವತಿ ಅವರು ಮೂಡಾಗೆ ಪತ್ರ ಬರೆದಿದ್ದು, ನನಗೆ ಬಂದ ಜಮೀನಿನಲ್ಲಿ ನೀವು ಬಡಾವಣೆ ಮಾಡಿದ್ದೀರಿ, ಬದಲಿ ಜಾಗವನ್ನು ನನಗೆ ನೀಡಿ ಎಂದು ಕೋರುತ್ತಾರೆ. 2014 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು, ಆಗ 50:50 ಅನುಮಾತದಲ್ಲಿ ಹಂಚಿಕೆ ಮಾಡಲಾಗುತ್ತದೆ ಎಂಬ ನಿಯಮ ಜಾರಿಗೆ ತಂದರು. 2017ರಲ್ಲಿ ಮುಡಾದಲ್ಲಿ ಪಾರ್ವತಿ ಅವರ ಜಾಮೀನಿನ ವಿಚಾರ ಚರ್ಚೆಗೆ ಬರುತ್ತದೆ. ಆಗ 50:50 ಅನುಪಾತದಲ್ಲಿ ಬದಲಿ ನಿವೇಶನ ಕೊಡಲು ನಿರ್ಧಾರ ಮಾಡಲಾಗುತ್ತದೆʼʼ ಎಂದು ಆರ್ ಅಶೋಕ್ ವಿವರಿಸಿದರು.

Read More
Next Story