Mysore MUDA Scam | ಮುಡಾ ಹಿಂದಿನ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಅಮಾನತು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತರಾಗಿದ್ದ ಅವಧಿಯಲ್ಲಿ ಅಕ್ರಮ ಎಸಗಿರುವ ಕೆಎಎಸ್ ಅಧಿಕಾರಿ ಜಿ ಟಿ ದಿನೇಶ್ ಕುಮಾರ್ ಅವರನ್ನು ರಾಜ್ಯ ಸರ್ಕಾರ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತರಾಗಿದ್ದ ಅವಧಿಯಲ್ಲಿ ಅಕ್ರಮ ಎಸಗಿರುವ ಆರೋಪದ ಮೇಲೆ ಕೆಎಎಸ್ ಅಧಿಕಾರಿ ಜಿ ಟಿ ದಿನೇಶ್ ಕುಮಾರ್ ಅವರನ್ನು ರಾಜ್ಯ ಸರ್ಕಾರ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ. ಆಗಸ್ಟ್ 31ರಂದೇ ಆದೇಶ ಹೊರಬಿದ್ದಿದ್ದು, ಆ. 28ರಂದು ಅವರನ್ನು ಸರ್ಕಾರವು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಹುದ್ದೆಗೆ ವರ್ಗಾವಣೆ ಮಾಡಿತ್ತು. ಕುಲಸಚಿವರಾಗಿ ನೇಮಕಗೊಂಡ ಬೆನ್ನಲ್ಲೇ ಅಮಾನತು ಆದೇಶ ಹೊರಬಿದ್ದಿದೆ.
'ಆಯುಕ್ತರ ಮೇಲಿನ ಆರೋಪಗಳ ಕುರಿತು ತಾಂತ್ರಿಕ ಸಮಿತಿಯು ನೀಡಿರುವ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ' ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶದಲ್ಲಿ ತಿಳಿಸಿದೆ.
'ಮುಡಾ ಸಭೆಗಳಲ್ಲಿ ಪ್ರಸ್ತಾಪಿಸಲಾದ ಬಹುತೇಕ ವಿಷಯಗಳಲ್ಲಿ ಸ್ಪಷ್ಟ ಅಭಿಪ್ರಾಯವನ್ನು ಮಂಡಿಸದಿರುವುದು, ಸರ್ಕಾರದ ನಿರ್ದೇಶನಗಳ ಉಲ್ಲಂಘನೆ, ವಿನ್ಯಾಸ ನಕ್ಷೆಗಳಿಗೆ ನಿಯಮಬಾಹಿರವಾಗಿ ಅನುಮೋದನೆ, ನಿಯಮ ಮೀರಿ ಭೂಸ್ವಾಧೀನ ಹಾಗೂ ಬದಲಿ ನಿವೇಶನಕ್ಕೆ ಶಿಫಾರಸು, ನಿಯಮ ಮೀರಿ 50:50 ಅನುಪಾತದಲ್ಲಿ ನಿವೇಶನಗಳ ವಿತರಣೆ ಮೊದಲಾದ ಲೋಪಗಳ ಆಧಾರದ ಮೇಲೆ ಅಮಾನತು ಮಾಡಲಾಗಿದೆ' ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಈ ಎಲ್ಲ ಲೋಪಗಳ ಕುರಿತು ಟಿ.ವಿ. ಮುರಳಿ ಅಧ್ಯಕ್ಷತೆಯ ಸಮಿತಿಯು 2023ರ ನವೆಂಬರ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಕ್ರಮಕ್ಕೆ ಶಿಫಾರಸು ಮಾಡಿತ್ತು. ಮುಡಾ ನಿವೇಶನ ಹಂಚಿಕೆ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ, ಹಿಂದಿನ ಆಯುಕ್ತರಾದ ಜಿ.ಟಿ. ದಿನೇಶ್ ಕುಮಾರ್ ಹಾಗೂ ಡಿ.ಬಿ.ನಟೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿತ್ತು. ಶಾಸಕ ಟಿ.ಎಸ್. ಶ್ರೀವತ್ಸ ಸೇರಿದಂತೆ ಹಲವರು ಲೋಕಾಯುಕ್ತ ಹಾಗೂ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಆದರೆ ನಟೇಶ್ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ.
ಮುಡಾದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ನಿವೇಶನ ಹಂಚಿಕೆ ಪ್ರಕರಣ ಕಳೆದೊಂದು ತಿಂಗಳಿನಿಂದ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಎಬ್ಬಿಸಿದೆ. ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ಮತ್ತು ಕಾನೂನು ಕ್ರಮಕ್ಕೆ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅನುಮತಿ ನೀಡಿದ್ದಾರೆ. ರಾಜ್ಯಪಾಲರ ನಿರ್ಧಾರವನ್ನು ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.