Mysore MUDA Scam | ವಿಚಾರಣೆ ಸೆ.9ಕ್ಕೆ ಮುಂದೂಡಿಕೆ; ಸಿಎಂಗೆ ಮತ್ತೆ ರಿಲೀಫ್
x

Mysore MUDA Scam | ವಿಚಾರಣೆ ಸೆ.9ಕ್ಕೆ ಮುಂದೂಡಿಕೆ; ಸಿಎಂಗೆ ಮತ್ತೆ ರಿಲೀಫ್

ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ಮುಂದೂಡಿದ್ದು, ಸಿಎಂ ಗೆ ಮತ್ತೆ ರಿಲೀಫ್ ಸಿಕ್ಕಿದೆ.


ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮತ್ತೆ ಮುಂದೂಡಿದ್ದು, ಸಿಎಂ ಗೆ ಮತ್ತೆ ರಿಲೀಫ್ ಸಿಕ್ಕಿದೆ.

ಸೋಮವಾರ(ಸೆ.2) ಮಧ್ಯಾಹ್ನ ಆರಂಭವಾದ ಪ್ರಕರಣ ಮುಂದುವರಿದ ಸುದೀರ್ಘ ವಿಚಾರಣೆಯಲ್ಲಿ ದೂರುದಾರರಲ್ಲಿ ಒಬ್ಬರಾದ ಸ್ನೇಹಮಯಿ ಕೃಷ್ಣ ಪರ ವಕೀಲರು ವಾದ ಮಂಡಿಸಿದರು. ಅವರ ಸುದೀರ್ಘ ವಾದ ಆಲಿಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕವ್ಯಕ್ತಿ ಪೀಠ, ಸಿಎಂ ಪರ ವಕೀಲರು ಮತ್ತು ಸರ್ಕಾರದ ಪರ ಅಡ್ವೋಕೇಟ್ ಜನರಲ್ ಅವರ ವಾದ ಮಂಡನೆ ಕಾಲಾವಕಾಶ ಕೋರಿಕೆಯನ್ನು ಮನ್ನಿಸಿ ಪ್ರಕರಣದ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿತು. ಹಾಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೆ ಒಂದು ವಾರ ಕಾಲ ರಿಲೀಫ್ ಸಿಕ್ಕಂತಾಗಿದೆ.

ದೂರುದಾರ ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲ ಕೆ ಜಿ ರಾಘವನ್ ವಾದ ಮಂಡಿಸಿದರು. ಮುಖ್ಯವಾಗಿ ನಿವೇಶನದ ಭೂಸ್ವಾಧೀನ, ಡಿನೋಟಿಫಿಕೇಷನ್, ಬದಲಿ ನಿವೇಶನ ಹಂಚಿಕೆ, ಅಧಿಕಾರ ಮತ್ತು ಪ್ರಭಾವ ಬಳಕೆ, ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ವಿಷಯಗಳ ಸುತ್ತ ಅವರು ವಾದ ಮಂಡಿಸಿದರು.

ಪ್ರಭಾವ ಬಳಕೆಯ ಕುರಿತು ರಾಘವನ್ ಅವರು ಸೆಕ್ಷನ್ 7ಸಿ ಪ್ರಸ್ತಾಪಿಸಿ, ಅನಗತ್ಯ ಲಾಭ, ಅನುಕೂಲ ಪಡೆಯುವುದು ಕಾಯ್ದೆಯ ವ್ಯಾಪ್ತಿಯಲ್ಲಿದೆ ಎಂದರು. ಹಾಗೇ ಭ್ರಷ್ಟಾಚಾರ ತಡೆ ಕಾಯ್ದೆ ಉಲ್ಲೇಖಿಸಿ ಕಾನೂನು ಬಾಹಿರವಾಗಿಲ್ಲದಿದ್ದರೂ ಪ್ರಭಾವ ಬಳಸಿ ಲಾಭ ಪಡೆದರೆ ಅದು ಅಪರಾಧ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ನಾಗಪ್ರಸನ್ನ ಅವರು, ನಿಮ್ಮ ವಾದ ಸೆಲ್ಫ್ ಗೋಲ್ ಆಗಬಹುದು ಎಂದು ಎಚ್ಚರಿಸಿದರು.

ದೂರುದಾರರ ಪರ ವಕೀಲರ ವಾದ ಮುಗಿದ ಬಳಿಕ ಸರ್ಕಾರದ ಪರ ಅಡ್ವೋಕೇಟ್ ಜನರಲ್ (ಎಜಿ) ಶಶಿಕಿರಣ್ ಶೆಟ್ಟಿ ಅವರು ತಮ್ಮ ವಾದ ಮಂಡನೆಗೆ ಕಾಲಾವಕಾಶ ಕೋರಿದರು. ಸಚಿವ ಸಂಪುಟದ ನಿರ್ಣಯದ ಬಗ್ಗೆ ವಾದ ಮಂಡಿಸಬೇಕಿದೆ. ಅಡ್ವೊಕೆಟ್ ಜನರಲ್ ಅಭಿಪ್ರಾಯದ ಬಗ್ಗೆಯೂ ವಾದಿಸಬೇಕಿದೆ. ಆದರೆ ಈ ವಾರಾಂತ್ಯದಲ್ಲಿ ಹಬ್ಬದ ರಜೆಗಳಿವೆ. ಹೀಗಾಗಿ ಒಂದು ವಾರ ಕಾಲಾವಕಾಶ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಎಜಿ ಅವರ ಮನವಿಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, ಹಬ್ಬಕ್ಕೂ ಮೊದಲೇ ವಾದಮಂಡನೆ ಮುಗಿಸಿಬಿಡಿ ಎಂದರು. ಈ ನಡುವೆ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಎಜಿ ಅವರು ವಾದಿಸಿದ ಮೇಲೆ ನಾನು ವಾದಿಸುತ್ತೇನೆ. ಸೆ.9 ಅಥವಾ 21 ರಂದು ನಾನು ವಾದಿಸುತ್ತೇನೆ, ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಅದಕ್ಕೆ ಪೀಠ, ಅಷ್ಟು ದೂರದ ದಿನಾಂಕವನ್ನು ನೀಡಲು ಸಾಧ್ಯವಿಲ್ಲ. ನೀವುಗಳು ಹಲವು ಸಂಪುಟಗಳ ದಾಖಲೆ ನೀಡಿದ್ದೀರಿ. ನಾನು ಎಲ್ಲವನ್ನೂ ಪರಿಶೀಲಿಸಬೇಕಿದೆ. ಹಾಗಾಗಿ ಬೇಗ ವಾದಮಂಡನೆ ಮುಗಿಸಬೇಕು. ವಿಚಾರಣಾ ನ್ಯಾಯಾಲಯದ ಕಲಾಪ ಬಹಳ ಕಾಲ ಮುಂದೂಡುವುದು ಸೂಕ್ತವಲ್ಲ ಎಂದು ಹೇಳಿ ಸೆ.9ಕ್ಕೆ ವಿಚಾರಣೆ ಮುಂದೂಡಿದರು.

ಆಗ ಸಿಎಂ ಪರ ವಕೀಲ ಸಿಂಘ್ವಿ ಅವರು ಮತ್ತೆ ಮನವಿ ಮಾಡಿ, ಸೆ.12ರಂದು ವಾದಿಸಲು ಅವಕಾಶ ಕೋರಿದರು. ಅದಕ್ಕೆ ಸಮ್ಮಿತಿಸಿದ ಪೀಠ, ಸೆ.9ರಂದು ವಾದ ಮಂಡನೆ ಮುಗಿಸಿ, ಸೆ.12ರಂದು ಸಂಪೂರ್ಣ ವಿಚಾರಣೆ ಮುಗಿಸೋಣ ಎಂದು ಹೇಳಿ ಕಲಾಪವನ್ನು ಮುಂದೂಡಿತು.

ಹಾಗಾಗಿ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ನಡೆಯುತ್ತಿರುವ ಕಾನೂನು ಸಮರ ಸೆ.12ರವರೆಗೆ ಮುಂದುವರಿಯಲಿದೆ.

Read More
Next Story