Mysore MUDA Scam | ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್: ಕುಮಾರಸ್ವಾಮಿ ಆರೋಪ
x

Mysore MUDA Scam | ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್: ಕುಮಾರಸ್ವಾಮಿ ಆರೋಪ

"ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮುಖ್ಯಮಂತ್ರಿಗಳ ಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ ಸ್ವತ್ತು. ಡಿನೋಟಿಫಿಕೇಷನ್ ಬಳಿಕ ನಾಲ್ಕು ವರ್ಷ ಏನೂ ಬೆಳವಣಿಗೆಯೇ ಆಗಿಲ್ಲ. ಸತ್ತವರ ಹೆಸರಿನಲ್ಲಿ ಜಮೀನು ಡಿನೋಟಿಫಿಕೇಷನ್ ಆಗಿದೆ" ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.


"ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮುಖ್ಯಮಂತ್ರಿಗಳ ಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ ಸ್ವತ್ತು. ಡಿನೋಟಿಫಿಕೇಷನ್ ಬಳಿಕ ನಾಲ್ಕು ವರ್ಷ ಏನೂ ಬೆಳವಣಿಗೆಯೇ ಆಗಿಲ್ಲ. ಸತ್ತವರ ಹೆಸರಿನಲ್ಲಿ ಜಮೀನು ಡಿನೋಟಿಫಿಕೇಷನ್ ಆಗಿದೆ" ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಜೆಡಿಎಸ್​ ಪಕ್ಷದ ಕಚೇರಿಯಲ್ಲಿ ಶನಿವಾರ(ಜು.13) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಮೈದ ಖರೀದಿ ಮಾಡಿರುವ ಮೈಸೂರಿನ ಕೆಸರೆ ಜಮೀನಿಗೆ ಮುಡಾ ಭೂಸ್ವಾಧೀನ ಮಾಡಿ ಪರಿಹಾರ ನೀಡಲಾಗಿದೆ. ಹೀಗಿರುವಾಗ ಇದು ಮುಡಾಗೆ ಸೇರಿದ ಜಮೀನು ಆಗುತ್ತದೆ. ಈ ಜಮೀನನ್ನು ಡಿ-ನೋಟಿಫಿಕೇಷನ್ ಮಾಡಿ ಖರೀದಿಸಲಾಗಿದೆ. ಇದು ಕಾನೂನುಬಾಹಿರʼʼ ಎಂದು ಕೆಲ ದಾಖಲೆಗಳನ್ನೂ ಬಿಡುಗಡೆ ಮಾಡಿದರು.

ʻʻಸಿಎಂ ಸಿದ್ದರಾಮಯ್ಯ ಪತ್ನಿಗೆ ದಾನ ಮಾಡಿದಾಗ ಕೃಷಿ ಭೂಮಿ ಎಂದು ತೋರಿಸುತ್ತಾರೆ. ಆದರೆ, ಆ ಜಾಗ ಭೂಪರಿವರ್ತನೆ ಆಗಿತ್ತು. ಜಮೀನಿನ ಹಿನ್ನಲೆಯನ್ನು ಯಾರೂ ಪರಿಶೀಲಿಸಲಿಲ್ಲವೆ?, ಭೂಮಿ ಬದಲಾವಣೆಯಾದಾಗ ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದರು?ʼʼ ಎಂದು ಪ್ರಶ್ನೆ ಮಾಡಿದರು.

ʻʻಈ ಜಮೀನಿನ ಮೂಲ ಮಾಲೀಕ ಲಿಂಗ ಅಲಿಯಾಸ್ ಜವರ ಎಂದಿದೆ. ಈ ಜಮೀನನ್ನು 1992ರಲ್ಲಿ ಮುಡಾ ವಶಕ್ಕೆ ಪಡೆಯುವ ನೋಟಿಫಿಕೇಷನ್ ಹೊರಡಿಸಿತ್ತು. 1995ರಲ್ಲಿ ಜಮೀನಿನ ಅಂತಿಮ ಭೂಸ್ವಾದೀನ ನೋಟಿಫಿಕೇಷನ್ ಆಗಿದೆ. 3 ಎಕರೆ 16 ಗುಂಟೆ ಜಮೀನಿಗೆ 1992ರಲ್ಲೇ ಮುಡಾದಿಂದ ಕೋರ್ಟ್‌ಗೆ ಹಣ ಸಂದಾಯ ಆಗಿದೆ. ಜಮೀನಿನ ಪೋತಿ ಖಾತೆಯೂ ಆಗಿದೆ. ಆದರೂ 1998ರಲ್ಲಿ ಲಿಂಗನ ಹೆಸರು ಬರುತ್ತದೆ. ಡಿ-ನೋಟಿಫಿಕೇಷನ್ ಆಗುತ್ತದೆ. ಈ ಜಮೀನು ಡಿನೋಟಿಫಿಕೇಷನ್ ಆದಾಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದರುʼʼ ಎಂದು ವಿವರಿಸಿದರು.

ʻʻ1998ರಲ್ಲಿ ಲಿಂಗ ಅಲಿಯಾಸ್ ಜವರ ಹೆಸರಿನಲ್ಲಿ ಡಿನೋಟಿಫಿಕೇಷನ್ ಆಗಿದೆ. 2004ರಲ್ಲಿ ಮಲ್ಲಿಕಾರ್ಜುನಸ್ವಾಮಿ ಜಮೀನು ಖರೀದಿ ಮಾಡುತ್ತಾರೆ. 2005ರಲ್ಲಿ ಮಲ್ಲಿಕಾರ್ಜುನಸ್ವಾಮಿ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸುತ್ತಾರೆ. ಆಗ ಸಿದ್ದರಾಮಯ್ಯನವರೇ ಉಪಮುಖ್ಯಮಂತ್ರಿ ಆಗಿದ್ದರು. ಭೂ ಪರಿವರ್ತನೆ ಅರ್ಜಿ ಹಾಕಿದಾಗ ಜಿಲ್ಲಾಧಿಕಾರಿ ಏನು ಮಾಡುತ್ತಿದ್ದರು? ಜಮೀನಿನ ಹಿನ್ನಲೆ ಪರಿಶೀಲಿಸಲಿಲ್ಲವೆ?ʼʼ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ʻʻಜಾಗದ ಬದಲಿಗೆ ಮುಡಾದಿಂದ ತಮಗೆ 62 ಕೋಟಿ ರೂ. ಪರಿಹಾರ ಬರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಯಾರಪ್ಪನ ಆಸ್ತಿ ಎಂದು 62 ಕೋಟಿ ರೂ. ಕೊಡಬೇಕು? ಇದು ಪಿತಾರ್ಜಿತ ಆಸ್ತಿನಾ?, ಯಾರ ಬಳಿ ಖರೀದಿ ಮಾಡಿದ್ದಾರೆ ಎಲ್ಲವೂ ಗೊತ್ತಿದೆ, ಎಲ್ಲ ದಾಖಲೆ ಇದೆ. ಇದು ಹಿಟ್ ಅಂಡ್ ರನ್ ಅಲ್ಲʼʼ ಎಂದು ದಾಖಲೆಗಳನ್ನು ಪ್ರದರ್ಶಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.

Read More
Next Story