Mysore MUDA Scam | ರಾಜ್ಯಪಾಲರ ನೋಟಿಸ್‌: ಪ್ರತಿತಂತ್ರ ಹೆಣೆಯಲು ಆಪ್ತ ಸಚಿವರೊಂದಿಗೆ ಸಿಎಂ ಚರ್ಚೆ, ಸಂಪುಟ ಸಭೆ
x

Mysore MUDA Scam | ರಾಜ್ಯಪಾಲರ ನೋಟಿಸ್‌: ಪ್ರತಿತಂತ್ರ ಹೆಣೆಯಲು ಆಪ್ತ ಸಚಿವರೊಂದಿಗೆ ಸಿಎಂ ಚರ್ಚೆ, ಸಂಪುಟ ಸಭೆ


ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಬದಲಿ ನಿವೇಶನ ಹಂಚಿಕೆ ಹಗರಣದ ಉರುಳು ಬಿಗಿಯಾಗುತ್ತಿರುವಂತೆ ಕಾಣುತ್ತಿದ್ದು, ಮುಖ್ಯಮಂತ್ರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಜಾರಿ ಮಾಡಿದ್ದಾರೆ.

ರಾಜ್ಯಪಾಲರ ನೋಟಿಸ್ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಮುಖ್ಯಮಂತ್ರಿಗಳ ರಕ್ಷಣೆಗೆ ಏನೆಲ್ಲಾ ಕಾರ್ಯತಂತ್ರ ಹೆಣೆಯಬೇಕು ಎಂಬ ಬಗ್ಗೆ ಚರ್ಚಿಸಲು ಗುರುವಾರ ಸಿಎಂ ಆಪ್ತ ಸಚಿವರೊಂದಿಗೆ ಬೆಳಿಗ್ಗೆ ಉಪಾಹಾರ ಕೂಟ ನಡೆಸಿದ್ದಾರೆ. ಜೊತೆಗೆ ಉಪಾಹಾರ ಕೂಟದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ಸಭೆಯ ಕೂಡ ನಡೆದಿದೆ.

ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿ ವಕೀಲ ಟಿ ಜೆ ಅಬ್ರಹಾಂ ಅವರು 22 ಪುಟಗಳ ವಿವರ ಅರ್ಜಿಯನ್ನು ರಾಜ್ಯಪಾಲರಿಗೆ ಜು.26ರಂದು ಸಲ್ಲಿಸಿದ್ದರು. ಆ ಅರ್ಜಿಯಲ್ಲಿ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ರಾಜ್ಯಪಾಲರು, ಅರ್ಜಿ ಸ್ವೀಕರಿಸಿದ ಮಾರನೇ ದಿನ; ಅಂದರೆ ಜು.27ರಂದೇ ನೊಟೀಸ್ ನೀಡಿದ್ದಾರೆ.

“ಮುಖ್ಯಮಂತ್ರಿ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ಎಸಗಿದ್ದಾರೆ. ಆ ಅಕ್ರಮದಿಂದಾಗಿ ರಾಜ್ಯದ ಖಜಾನೆಗೆ 55.80 ಕೋಟಿ ರೂಪಾಯಿ ನಷ್ಟವಾಗಿದೆ. ಈ ಅಕ್ರಮದ ತನಿಖೆಗಾಗಿ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಭಾರತೀಯ ನ್ಯಾಯಸಂಹಿತೆ(ಬಿಎನ್ಎಸ್) ಅಡಿಯಲ್ಲಿ ದಾಖಲಿಸುವ ಅಗತ್ಯವಿದೆ. ಹಾಗಾಗಿ ತಾವು ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ನೀಡಬೇಕು” ಎಂದು ಅಬ್ರಹಾಂ ತಮ್ಮ ಅರ್ಜಿಯಲ್ಲಿ ಕೋರಿದ್ದರು.

ರಾಜ್ಯಪಾಲರನ್ನು ಖುದ್ದು ಭೇಟಿಯಾಗಿ ದೂರು ನೀಡಿದ್ದ ಅಬ್ರಹಾಂ ಅವರೊಂದಿಗೆ ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಿ ವಿವರ ಪಡೆದುಕೊಂಡಿದ್ದ ರಾಜ್ಯಪಾಲರು, ಕೆಲವು ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ಕೋರಿದ್ದರು. ಆ ಎಲ್ಲಾ ದಾಖಲೆಗಳನ್ನ ದೂರುಪ್ರತಿ ಸಹಿತ ಕಾನೂನು ಸಲಹೆಗಾರರಿಗೆ ಕಳಿಸಿದ್ದ ರಾಜ್ಯಪಾಲರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಾರನೇ ದಿನವೇ ಮುಖ್ಯಮಂತ್ರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಉಪಾಹಾರ ಕೂಟ- ಸಂಪುಟ ಸಭೆ

ಈ ಬೆಳವಣಿಗೆಯ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಅಧಿಕೃತ ನಿವಾಸ ʼಕಾವೇರಿʼಯಲ್ಲಿ ಗುರುವಾರ ಬೆಳಿಗ್ಗೆ ಸಂಪುಟ ಸಹೋದ್ಯೋಗಿಗಳೊಂದಿಗೆ ಉಪಾಹಾರ ಕೂಟ ನಡೆಸಿದರು. ಈ ವೇಳೆ ಮುಡಾ ಪ್ರಕರಣ ಮತ್ತು ರಾಜ್ಯಪಾಲರ ನಡೆಯ ಕುರಿತು ಚರ್ಚಿಸಲಾಗಿದೆ.

ಪ್ರಮುಖವಾಗಿ ಎರಡು ದಿನಗಳ ಹಿಂದಿನ ತಮ್ಮ ದೆಹಲಿ ಭೇಟಿಯ ವೇಳೆ ಪಕ್ಷದ ವರಿಷ್ಠರು ನೀಡಿದ ಸೂಚನೆ ಮತ್ತು ಸಲಹೆಯ ಆಧಾರದ ಮೇಲೆ ಮುಂದಿನ ನಡೆಯನ್ನು ನಿರ್ಧರಿಸಲು ಈ ಉಪಾಹಾರ ಕೂಟ ಆಯೋಜಿಸಲಾಗಿತ್ತು. ಸರ್ಕಾರ ಮತ್ತು ಸಿಎಂ ಸ್ಥಾನವನ್ನು ಈ ಸಂಕಷ್ಟದಿಂದ ಪಾರು ಮಾಡಲು ತಮ್ಮ ಆಪ್ತ ಸಚಿವರೊಂದಿಗೆ ಸಿಎಂ ಚರ್ಚಿಸಿದ್ದಾರೆ ಎನ್ನಲಾಗಿದೆ.

ಈ ಉಪಾಹಾರ ಕೂಟದ ಬೆನ್ನಲ್ಲೇ ಸಚಿವ ಸಂಪುಟ ಸಭೆಯನ್ನು ಕೂಡ ಕರೆಯಲಾಗಿದ್ದು, ರಾಜ್ಯಪಾಲರ ನೋಟಿಸ್ಗೆ ನೀಡಬೇಕಾದ ವಿವರಣೆ ಮತ್ತು ಸರ್ಕಾರವನ್ನು ಉರುಳಿಸಲು ಬಿಜೆಪಿ ರಾಜ್ಯಪಾಲರ ಮೂಲಕ ಪ್ರಯತ್ನಿಸುತ್ತಿದ್ದು, ಆ ನಿಟ್ಟಿನಲ್ಲಿ ಮುಂದಿನ ನಡೆ ಏನಾಗಬೇಕು ಎಂಬ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಸಂಪುಟ ಸಭೆಯಲ್ಲಿ ಖುದ್ದು ಸಿದ್ದರಾಮಯ್ಯ ಹಾಜರಿದ್ದರೂ, ರಾಜ್ಯಪಾಲರ ನೋಟಿಸ್ ಮೇಲಿನ ಚರ್ಚೆಯ ವೇಳೆ ಅವರು ಹೊರ ಉಳಿಯಲಿದ್ದಾರೆ. ಆ ಸಂದರ್ಭದಲ್ಲಿ ಹಿರಿಯ ಸಚಿವರೊಬ್ಬರ ಅಧ್ಯಕ್ಷತೆಯಲ್ಲಿ ಸಂಪುಟ ಸಭೆ ನಡೆಯಲಿದೆ ಎನ್ನಲಾಗಿದೆ.

Read More
Next Story