Mysore MUDA Scam | ರಾಜ್ಯಪಾಲರ ವಿರುದ್ಧ ಕಾನೂನು ಸಮರಕ್ಕೆ ಸಂಪುಟ ತೀರ್ಮಾನ
x

Mysore MUDA Scam | ರಾಜ್ಯಪಾಲರ ವಿರುದ್ಧ ಕಾನೂನು ಸಮರಕ್ಕೆ ಸಂಪುಟ ತೀರ್ಮಾನ


ಮೈಸೂರು ಮುಡಾ ನಿವೇಶನ ಹಂಚಿಕೆ ಪ್ರಕರಣದ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್‌ ಜಾರಿ ಮಾಡಿರುವ ರಾಜ್ಯಪಾಲರ ಕ್ರಮದ ವಿರುದ್ಧ ಕಾನೂನು ಸಮರ ಸಾರಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಗುರುವಾರ(ಆಗಸ್ಟ್ 01) ನಡೆದ ಸಂಪುಟ ಸಭೆ ಮಹತ್ವದ ನಿರ್ಣಯ ಕೈಗೊಂಡಿದೆ.

ಅಕ್ರಮ ನಿವೇಶನ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ನೋಟಿಸ್​ ಹಿಂಪಡೆಯುವಂತೆ ಒತ್ತಾಯಿಸುವುದು ಹಾಗೂ ರಾಜ್ಯಪಾಲರು ನೋಟಿಸ್‌ ಹಿಂಪಡೆಯದೇ ಹೋದಲ್ಲಿ ಕಾನೂನು ಹೋರಾಟ ನಡೆಸಲು ಮತ್ತು ಆ ಮೂಲಕ ಮುಖ್ಯಮಂತ್ರಿಗಳ ಪರ ದೃಢವಾಗಿ ನಿಲ್ಲಲು ಸಂಪುಟ ಸಭೆ ನಿರ್ಧರಿಸಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ(ಮುಡಾ) ನಡೆದಿದೆ ಎನ್ನಲಾದ ಅಕ್ರಮ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿದ್ದು, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣದ ದಾಖಲಿಸಲು ಅನುಮತಿ ಕೋರಿ ದೂರು ನೀಡಿದ ಬೆನ್ನಲ್ಲಿಯೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೊಟೀಸ್ ಜಾರಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಸಚಿವ ಸಂಪುಟ ಸಭೆ ನಡೆದಿದ್ದು, ಎರಡು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ರಾಜ್ಯಪಾಲರ ನೋಟಿಸ್‌ಗೆ ಸಚಿವ ಸಂಪುಟ ವಿರೋಧಿಸಿದ್ದು, ನೋಟಿಸ್‌ನಲ್ಲಿ ಬಳಸಿದ ಪದ ಮತ್ತು ಒಕ್ಕಣಿಕೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ ನೋಟಿಸ್​ ಹಿಂಪಡೆಯುವಂತೆ ನಿರ್ಣಯ ಕೈಗೊಂಡಿದೆ. ಇನ್ನು ಈ ಬಗ್ಗೆ ಕಾನೂನು ಹೋರಾಟ ನಡೆಸಲು ಸಹ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಈ ಹಿಂದೆ ಬಿಜೆಪಿ ನಾಯಕರ ವಿರುದ್ಧ ಹಲವು ದೂರು ದಾಖಲಾಗಿವೆ. ಆ ದೂರುಗಳ ಬಗ್ಗೆ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಮುಡಾ ಪ್ರಕರಣದಲ್ಲಿ ದೂರು ದಾಖಲು ಆಗಿರುವ ದಿನವೇ ನೋಟಿಸ್ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಲಾಗಿದೆ. ಯಾಕಿಷ್ಟು ಆತುರದಲ್ಲಿ ನೋಟಿಸ್ ನೀಡಿದ್ದಾರೆ? ಇದೊಂದು ರಾಜಕೀಯ ಪ್ರೇರಿತ ಕ್ರಮ ಎಂದು ಸಚಿವ ಸಂಪುಟ ಚರ್ಚಿಸಿದೆ.

ಕಳೆದ ಸರ್ಕಾರದ ಅವಧಿಯಲ್ಲಿ ಮೊಟ್ಟೆ ಹಗರಣಕ್ಕೆ ಸಂಬಂಧಿಸಿ ಇದೇ ರಾಜ್ಯಪಾಲರ ಮುಂದೆ ದೂರು ದಾಖಲಾಗಿತ್ತು. ಮೊಟ್ಟೆ ಪ್ರಕರಣದಲ್ಲಿ ದೂರು ನೀಡಿ ಮೂರು ತಿಂಗಳಾದರೂ ರಾಜ್ಯಪಾಲರು ಕ್ರಮ ಕೈಗೊಂಡಿರಲಿಲ್ಲ. ಹಿಂದೆ ಬಿಜೆಪಿಯವರ ವಿರುದ್ದ ಖಾಸಗಿ ದೂರು ದಾಖಲಾದಾಗ ಪ್ರಾಸಿಕ್ಯುಷನ್ ಗೂ ಅನುಮತಿ ನೀಡಿಲ್ಲ, ಶೋಕಾಸ್ ನೊಟೀಸ್ ಕೂಡ ನೀಡಿರಲಿಲ್ಲ. ಆದರೆ, ಈಗ ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಒತ್ತಡ ಹೇರುತ್ತಿರುವುದು ಸರಿಯಲ್ಲ ಎಂದು ಸಂಪುಟ ರಾಜ್ಯಪಾಲರ ಕ್ರಮವನ್ನು ಪಕ್ಷಪಾತಿ ಧೋರಣೆ ಎಂದು ಆಕ್ಷೇಪಿಸಿದೆ.

ಸಚಿವ ಸಂಪುಟ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಕೆ ಎನ್ ರಾಜಣ್ಣ, ʻʻಕೋಣನಿಗೆ ಕಾಯಿಲೆ ಬಂದರೆ ಎಮ್ಮೆಗೆ ಬರೆ ಹಾಕಿದ್ರಂತೆ. ಎಮ್ಮೆಗೆ ಕಾಯಿಲೆ ಬಂದ್ರೆ ಕೋಣನಿಗೆ ಬರೆ ಹಾಕಿದ್ರಂತೆ ಹಾಗಾಯ್ತು. 20 ವರ್ಷಗಳ ಹಿಂದೆಯೇ ಸಿಎಂ ಪತ್ನಿ ಸೈಟ್​ ಪಡೆದುಕೊಂಡಿದ್ದಾರೆ. ಕಾನೂನು ಪ್ರಕಾರವಾಗಿಯೇ ಮುಡಾ ಸೈಟ್​​ ಪಡೆದುಕೊಂಡಿದ್ದಾರೆ. ಈಗ ಗವರ್ನರ್ ಗೆಹ್ಲೋಟ್​ ಮುಂದೆ‌ ಎಷ್ಟು ಅರ್ಜಿಗಳು ಇವೆ? ಇದು ರಾಜಕೀಯ ಮಿಶ್ರಣ, ಇದು ಪೂರ್ಣ ರಾಜಕಾರಣʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ʻʻಈಗ ನೀಡಿದ ನೋಟಿಸ್ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ಶೋಕಾಸ್​ ನೋಟಿಸ್ ತಿರಸ್ಕರಿಸಲು ನಿರ್ಣಯ ಮಾಡಿದ್ದೇವೆ. ಗವರ್ನರ್ ಬಳಸಿಕೊಂಡು ಕೇಂದ್ರ ಸರ್ಕಾರ ಅಧಿಕಾರದ ದುರುಪಯೋಗ ಮಾಡಿಕೊಳ್ಳುತ್ತಿದೆ. ಮುಡಾ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ತನಿಖೆ ನಡೆಯುತ್ತಿದೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ಸರ್ಕಾರ, ರಾಜ್ಯಪಾಲರ ಮೂಲಕ ಹುನ್ನಾರ ನಡೆಸುತ್ತಿದೆʼʼ ಎಂದು ಆರೋಪಿಸಿದರು.

ಒಟ್ಟಾರೆ, ಮುಡಾ ಪ್ರಕರಣ ರಾಜ್ಯ ಕಾಂಗ್ರೆಸ್‌ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಮರವಾಗಿ ಮಾರ್ಪಡುವ ಸಾಧ್ಯತೆಗಳು ನಿಚ್ಚಳವಾಗಿವೆ.

Read More
Next Story