Mysore Muda Case: ಇಡಿಯಿಂದ 300 ಕೋಟಿ ಮೌಲ್ಯದ 142 ಆಸ್ತಿ ಮುಟ್ಟುಗೋಲು; ಸಿದ್ದರಾಮಯ್ಯಗೆ ಕಂಟಕ?
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯವು 300 ಕೋಟಿ ರೂ. ಮೌಲ್ಯದ 142 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಏಜೆಂಟ್‌ಗಳ ಹೆಸರಿನಲ್ಲಿ ಸೈಟ್‌ಗಳು ನೋಂದಣಿಯಾಗಿದ್ದವು ಎಂದು ಇಡಿ ತಿಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯವು 300 ಕೋಟಿ ರೂ. ಮೌಲ್ಯದ 142 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಏಜೆಂಟ್‌ಗಳ ಹೆಸರಿನಲ್ಲಿ ಸೈಟ್‌ಗಳು ನೋಂದಣಿಯಾಗಿದ್ದವು ಎಂದು ಇಡಿ ತಿಳಿಸಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಇತರರ ವಿರುದ್ಧದ ಪ್ರಕರಣದ ಸಂಬಂಧ, ಹಣಕಾಸು ಅಕ್ರಮ ತಡೆ ಕಾಯ್ದೆ (PMLA), 2002 ಅಡಿಯಲ್ಲಿ 300 ಕೋಟಿ ರೂಪಾಯಿಯ (ಅಂದಾಜು) ಮಾರುಕಟ್ಟೆ ಮೌಲ್ಯದ 142 ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಈ ಆಸ್ತಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿತವಾಗಿವೆ ಎಂದು ಇಡಿ, ಬೆಂಗಳೂರು ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.
ಇದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಡಾ ಪ್ರಕರಣದಲ್ಲಿ ಕಂಟಕ ಎದುರಾಗಿದೆ ಎನ್ನಲಾಗಿದೆ.
ಇಡಿ ಪತ್ರ
ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಜಾರಿ ನಿರ್ದೇಶನಾಲಯ ಹಲವು ಸಾಕ್ಷ್ಯಾಧಾರಗಳನ್ನು ಡಿಸೆಂಬರ್ ತಿಂಗಳಲ್ಲಿ ಬಹಿರಂಗಪಡಿಸಿತ್ತು. ಈ ಸಂಬಂಧ ಲೋಕಾಯುಕ್ತ ಎಡಿಜಿಪಿಗೆ ಬರೆದಿರುವ ಪತ್ರದಲ್ಲಿ ಇಡಿ ತನ್ನ ತನಿಖೆಯ ಮಾಹಿತಿ ಹಂಚಿಕೊಂಡಿತ್ತು.
ಡಿ.5 ರಂದು ಲೋಕಾಯುಕ್ತರಿಗೆ ಇಡಿ ಬರೆದಿತ್ತು. ಕಾನೂನು ಬಾಹಿರವಾಗಿ 50:50 ಅನುಪಾತದಡಿ ಪರಿಹಾರದ ನಿವೇಶನ ಹಂಚಲಾಗಿದೆ. 1059 ನಿವೇಶನಗಳ ನಿಯಮಬಾಹಿರ ಹಂಚಿಕೆಯಿಂದ 700 ಕೋಟಿ ರೂ.ಗಳಿಗಿಂತ ಹೆಚ್ಚಿನ ಅಕ್ರಮ ನಡೆದಿದೆ. ಮುಡಾದಿಂದ ನಿವೇಶನ ಪಡೆದವರಲ್ಲಿ ಪ್ರಭಾವಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಫಲಾನುಭವಿಗಳಾಗಿದ್ದಾರೆ. ಇವರು ದುಬಾರಿ ಬೆಲೆಗೆ ನಿವೇಶನ ಮಾರಾಟ ಮಾಡಿ ಅನ್ಯಾಯದ ಮಾರ್ಗದಲ್ಲಿ ಲಾಭ ಸಂಪಾದಿಸಿದ್ದಾರೆ ಎಂಬುದನ್ನು ಇಡಿ ತನಿಖೆ ಬೊಟ್ಟು ಮಾಡಿತ್ತು.
ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ, ಭಾಮೈದ ಮಲ್ಲಿಕಾರ್ಜುನ ಸ್ವಾಮಿ , ಜಮೀನು ಮಾಲೀಕ ಎನ್ನಲಾದ ಜೆ. ದೇವರಾಜು ಹಾಗೂ ಇತರರ ವಿರುದ್ಧ ಲೋಕಾಯುಕ್ತ ಪೋಲೀಸರು ಸೆ.27 ರಂದು ಐಪಿಸಿ ಸೆಕ್ಷನ್ 120B, 166 ,403, 406, 420, 426, 465, 468, 340 ಹಾಗೂ 351, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 9 ಮತ್ತು 13, ಕರ್ನಾಟಕ ಬೇನಾಮಿ ವಹಿವಾಟು ಮತ್ತು ಅಕ್ರಮ ನಿಷೇಧ ಕಾಯ್ದೆಯ ಸೆಕ್ಷನ್ 3, 53 ಮತ್ತು 54, ರಡಿ ಪ್ರಕರಣ ದಾಖಲಿಸಿದ್ದರು. ಅಕ್ರಮ ಹಣ ವಹಿವಾಟು ಕಾಯ್ದೆ(PMLA) 2002 ಅಡಿ ಜಾರಿ ನಿರ್ದೇಶನಾಲಯವು ECIR ದಾಖಲಿಸಿ ತನಿಖೆ ನಡೆಸುತ್ತಿದೆ.
ತನಿಖಾ ಸಂದರ್ಭದಲ್ಲಿ ಎರಡು ಸ್ಥಳಗಳಲ್ಲಿ ನಡೆದ ಶೋಧ ಕಾರ್ಯಾಚರಣೆ ವೇಳೆ ಸಿಎಂ ಅವರ ಪತ್ನಿ ಪಾರ್ವತಿಯವರಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿರುವುದು ಪತ್ತೆಯಾಗಿದೆ ಎಂದು ಇಡಿ ಪತ್ರದಲ್ಲಿ ತಿಳಿಸಿತ್ತು.
ಕಂದಾಯ ಇಲಾಖೆ ಲೋಪ
ಕೃಷಿಯೇತರ ಉದ್ದೇಶಕ್ಕಾಗಿ ಭೂಮಿಯನ್ನು ಪರಿವರ್ತಿಸಲು ಕೈಗೊಂಡ ಸಂಪೂರ್ಣ ಪ್ರಕ್ರಿಯೆಯು ಕೇವಲ ನೆಪಪಾತ್ರವಾಗಿದೆ. ಇದು ನೆಲದ ಕಾನೂನನ್ನು ಆಧರಿಸಿಲ್ಲ. ಇಡೀ ಕಂದಾಯ ಇಲಾಖೆ ಕೈಗೊಂಡ ಕಾರ್ಯವಿಧಾನಗಳಲ್ಲೇ ಲೋಪ ಕಂಡುಬರುತ್ತದೆ. ಗ್ರಾಮ ಲೆಕ್ಕಾಧಿಕಾರಿ, ಭೂಮಾಪಕರು, ಕಂದಾಯ ನಿರೀಕ್ಷಕರು, ತಹಶೀಲ್ದಾರ್, ಜಿಲ್ಲಾಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಮುಡಾ ಕೈಗೊಂಡಿರುವ ಯಾವುದೇ ಕಾಮಗಾರಿ ಬಗ್ಗೆ ಉಲ್ಲೇಖಿಸಿಲ್ಲ. ಆದರೆ, ಉಪಗ್ರಹ ಚಿತ್ರಗಳು ಮತ್ತು ದಾಖಲೆಗಳಿಂದ ತಿಳಿದುಬಂದಂತೆ ಅವರೆಲ್ಲ ನೆಲದ ಮೇಲಿನ ಸತ್ಯಗಳಿಗೆ ಸಂಪೂರ್ಣವಾಗಿ ವಿರುದ್ಧವಾದ ವರದಿ ನೀಡಿದ್ದಾರೆ. ಇದು ಅಕ್ರಮವನ್ನು ಪುಷ್ಟೀಕರಿಸುವಂತಿದೆ ಎಂದು ಇಡಿ ಹೇಳಿತ್ತು.
ಇನ್ನು ನಷ್ಟ ಪರಿಹಾರ ಕೋರಿ ಬಿ.ಎಂ.ಮಲ್ಲಿಕಾರ್ಜುನ ಸ್ವಾಮಿ ಸಲ್ಲಿಸಿರುವ ಮನವಿಯಲ್ಲಿ ಯಾವುದೇ ಸಹಿ ಇಲ್ಲ. ಆದ್ದರಿಂದ ಈ ಎಲ್ಲಾ ಪ್ರಕ್ರಿಯೆಗಳು ಪ್ರಭಾವಕ್ಕೆ ಒಳಗಾಗಿವೆ ಎಂಬುದು ಸ್ಪಷ್ಟವಾಗಿ ಸೂಚಿಸುತ್ತದೆ. ಭೂಪರಿವರ್ತನೆ ಪ್ರಕ್ರಿಯೆ ಸಂದರ್ಭದಲ್ಲಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು.
ಶಾಸಕ ಯತೀಂದ್ರ ಪ್ರಭಾವ ಹೆಚ್ಚು
ಶಾಸಕ ಯತೀಂದ್ರ ಪರಿಹಾರದ ಪ್ರಕ್ರಿಯೆಯ ಉದ್ದಕ್ಕೂ ಅನಗತ್ಯ ಪ್ರಭಾವ ಬೀರಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಇನ್ನು ಯತೀಂದ್ರ ಆಪ್ತ ಸಹಾಯಕ ಎಸ್.ಜಿ.ದಿನೇಶ್ ಕುಮಾರ್ ಅರ್ಜಿದಾರರ ಪರ (ಬಿಎಂ ಪಾರ್ವತಿ) ವ್ಯವಹರಿಸಿದ್ದಾರೆ. ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಸಿದ್ದರಾಮಯ್ಯ ಅವರು ಅನಗತ್ಯ ಪ್ರಭಾವ ಬೀರಿದ್ದಾರೆ ಎಂಬುದನ್ನು ಎಸ್.ಜಿ.ದಿನೇಶ್ ಕುಮಾರ್ ಒಪ್ಪಿಕೊಂಡಿದ್ದಾರೆ. ದಿನೇಶ್ ಕುಮಾರ್ ಅವರು ಬಿ.ಎಂ.ಪಾರ್ವತಿಯವರಿಂದ ಯಾವುದೇ ಅನುಮತಿಯಿಲ್ಲದಿದ್ದರೂ ಖಾತಾ ಪತ್ರಕ್ಕೆ ಸಹಿ ಹಾಕಿದ್ದರು ಎಂಬುದನ್ನು ಪರಿಹಾರದ ಪ್ರಕರಣದಲ್ಲಿ ಕೇಸ್ ವರ್ಕರ್ ಆಗಿದ್ದ ಎನ್ ರವಿ ಹೇಳಿಕೆ ನೀಡಿದ್ದಾರೆ ಎಂದು ಇಡಿ ಹೇಳಿತ್ತು.
ಇದಲ್ಲದೇ ದಿನೇಶ್ ಕುಮಾರ್ ಅವರು ಮುಡಾ ಕೆಲಸಕ್ಕೆ ಸಂಬಂಧಿಸಿ ಮುಡಾ ಆಯುಕ್ತರಿಗೆ ಪಿಎ ಅವರೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದರಿಂದ ಪ್ರಭಾವದ ಮಟ್ಟವನ್ನು ಗಮನಿಸಬಹುದು. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕಳುಹಿಸಬೇಕಾದ ಕರಡು ಪತ್ರಕ್ಕೆ ಮುಡಾ ಆಯುಕ್ತರ ಪಿಎ ಅವರೇ ಸಹಿ ಹಾಕಿದ್ದರು ಎಂಬ ಮಾಹಿತಿಯನ್ನು ವಾಟ್ಸಾಪ್‌ನಿಂದ ರಿಟ್ರೀವ್ ಮಾಡಲಾಗಿತ್ತು ಎಂದು ಇಡಿ ಪತ್ರ ವಿವರಿಸಿತ್ತು.
ಸಂಬಂಧಿಕರು, ನಕಲಿ ವ್ಯಕ್ತಿಗಳಿಗೆ ನಿವೇಶನ ಹಂಚಿಕೆ
50:50 ಯೋಜನೆಯ ಅಡಿಯಲ್ಲಿ ನಿವೇಶನ ಹಂಚಿಕೆಯನ್ನು ನಿಲ್ಲಿಸಲು ಅಕ್ಟೋಬರ್ 2023 ರಲ್ಲಿ ಆದೇಶಿಸಲಾಗಿದೆ. ಆದಾಗ್ಯೂ, 252 ನಿವೇಶನಗಳನ್ನು ಮಾರ್ಚ್ 2024 ರ ನಂತರ ಯಾವುದೇ ಅನುಮೋದನೆಯಿಲ್ಲದೆ ಹಂಚಲಾಗಿದೆ. ಆಗಿನ ಅಧ್ಯಕ್ಷರಾದ ಕೆ ಮರಿಗೌಡ ಮೌಖಿಕ ಸೂಚನೆಯ ಮೇರೆಗೆ ಹಂಚಿಕೆಯನ್ನು ಮರು ಪ್ರಾರಂಭಿಸಲಾಯಿತು. ಈ ವೇಳೆ ಖಾಸಗಿ ವ್ಯಕ್ತಿಗಳು, ರಿಯಲ್ ಎಸ್ಟೇಟ್ ಏಜೆಂಟರು ಮುಡಾ ಅಧಿಕಾರಿಗಳೊಂದಿಗೆ ನಂಟು ಹೊಂದಿರುವ ಸಾಕ್ಷ್ಯಗಳು ಬಹಿರಂಗವಾಗಿವೆ. ವಿತ್ತೀಯ ಕೊರತೆ ಮತ್ತು ಇತರ ಪರಿಗಣನೆಗಳಿಗಾಗಿ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ನಿವೇಶನ ಹಂಚಿಕೆ ಮಾಡಲಾಗಿದೆ. ಈ ಪೈಕಿ ಕೆಲವು ಖಾಸಗಿ ವ್ಯಕ್ತಿಗಳು ಪ್ರಮುಖ ಮುಡಾ ಅಧಿಕಾರಿಗಳ ಸಂಬಂಧಿಗಳೂ ಆಗಿದ್ದರು. ಹಂಚಿಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಪ್ರಮುಖ ಉದ್ಯೋಗಿಗಳ ವಾಟ್ಸಾಪ್ ಚಾಟ್‌ಗಳನ್ನು ಪರಿಶೀಲಿಸಿದ್ದು, ನಿವೇಶನ ಹಂಚಿಕೆ ಮಾಡುವ ಸಲುವಾಗಿ ಜಿಟಿ ದಿನೇಶ್ ಕುಮಾರ್ ಮುಡಾ ಆಯುಕ್ತರಿಗೆ ಹಣ ಪಾವತಿಸಿದ್ದರು ಎಂಬುದು ತಿಳಿದುಬಂದಿದೆ ಎಂದು ಇಡಿ ಹೇಳಿತ್ತು.
ಒಟ್ಟಾರೆ ನಿವೇಶನ ಹಂಚಿಕೆಯಲ್ಲಿ ಕಾನೂನು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರಿಗೆ ಅಕ್ರಮವಾಗಿ 14 ನಿವೇಶನ ಹಂಚಿಕೆ ಮಾಡಲಾಗಿದೆ. ದಾಖಲೆ ತಿದ್ದುವಿಕೆ, ಕಚೇರಿ ಕಾರ್ಯವಿಧಾನಗಳ ಉಲ್ಲಂಘನೆ, ಪ್ರಭಾವ, ನಕಲಿ ಸಹಿ, ಸಾಕ್ಷ್ಯಗಳ ತಿರುಚುವಿಕೆ ಇತ್ಯಾದಿ ಅಂಶಗಳನ್ನು ಇಡಿ ದಾಖಲಿಸಿದೆ. ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ ಅವರು ಆ ಅವಧಿಯಲ್ಲಿ ಶಾಸಕರಾಗಿದ್ದರು. ನಿವೇಶನ ಹಂಚಿಕೆಯ ಅವಧಿಯಲ್ಲಿ ಮುಡಾ ಸದಸ್ಯರಾಗಿದ್ದರು. ಬಳಿಕ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ಈ ವೇಳೆ ಮುಡಾ ಕಚೇರಿಯಲ್ಲಿ ಸಿದ್ದರಾಮಯ್ಯ ಅನಗತ್ಯ ಪ್ರಭಾವ ಬೀರಿದ್ದರು ಎಂದು ಇಡಿ ಪತ್ರದಲ್ಲಿ ಹೇಳಿತ್ತು.