Mysore MUDA Case | ಸಿಎಂ ಆಪ್ತ ರಾಕೇಶ್ ಪಾಪಣ್ಣ ಮನೆ ಮೇಲೆ ಇಡಿ ದಾಳಿ
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ(ಇಡಿ), ಸೋಮವಾರ ಮೈಸೂರು ಮತ್ತು ಬೆಂಗಳೂರಿನ ಹಲವು ಕಡೆ ದಾಳಿ ನಡೆಸಿದೆ. ಪ್ರಮುಖವಾಗಿ ಮುಡಾ ಮಾಜಿ ಮೇಯರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ರಾಕೇಶ್ ಪಾಪಣ್ಣ ಅವರ ಮನೆಗಳ ಮೇಲೆ ದಾಳಿ ನಡೆದಿದೆ.
ಮೈಸೂರು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ, ಸಿಎಂ ಸಿದ್ದರಾಮಯ್ಯ ಆಪ್ತರಾಗಿರುವ ರಾಕೇಶ್ ಪಾಪಣ್ಣ ಅವರ ಮೈಸೂರಿನ ಹಿನ್ಕಲ್ ಗ್ರಾಮದ ಮನೆ ಮೇಲೆ ಇಡಿ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.
50-50 ನಿಯಮದಲ್ಲಿ 20ಕ್ಕೂ ಹೆಚ್ಚು ಮುಡಾ ನಿವೇಶನಗಳನ್ನು ಪಡೆದಿರುವ ಆರೋಪ ರಾಕೇಶ್ ಪಾಪಣ್ಣ ಅವರ ವಿರುದ್ಧ ಕೇಳಿಬಂದಿದೆ. ಹೀಗಾಗಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ರಾಕೇಶ್ ಪಾಪಣ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮುಡಾ 50-50 ನಿವೇಶನ ಹಗರಣದಲ್ಲಿ ರಾಕೇಶ್ ಪಾಪಣ್ಣ ಅವರ ಹೆಸರೂ ಕೇಳಿಬಂದಿತ್ತು. 50-50 ನಿಯಮದಲ್ಲಿ 20ಕ್ಕೂ ಹೆಚ್ಚು ನಿವೇಶನಗಳನ್ನು ಪಡೆದಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ಅಲ್ಲದೇ ವಿಜಯನಗರ ಎರಡನೇ ಹಂತದಲ್ಲಿ ಸಿದ್ದರಾಮಯ್ಯ ಪತ್ನಿ ನಿವೇಶನ ವಿಚಾರದಲ್ಲೂ ಪಾಪಣ್ಣ ಕುಟುಂಬದ ಹೆಸರು ಕೇಳಿ ಬಂದಿತ್ತು. ಸಿದ್ದರಾಮಯ್ಯ ಅವರು ಪಾಪಣ್ಣ ಕುಟುಂಬದಿಂದ 10 ಗುಂಟೆ ಜಾಗ ಪಡೆದು ಮನೆ ಕಟ್ಟಿದ್ದರು. ಈ ವಿಚಾರದಲ್ಲಿ ಅಕ್ರಮ ಆರೋಪ ಕೇಳಿ ಬಂದಿತ್ತು. ನಂತರ ಸಿದ್ದರಾಮಯ್ಯ ಆ ಮನೆಯನ್ನು ಮಾರಾಟ ಮಾಡಿದ್ದು, ಸದ್ಯ ಪ್ರಕರಣ ಸುಪ್ರೀಂಕೋರ್ಟ್ ಅಂಗಳದಲ್ಲಿದೆ.
ಈ ಎಲ್ಲಾ ಆರೋಪಗಳ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ರಾಕೇಶ್ ಪಾಪಣ್ಣ ಅವರ ಮನೆ ಮೇಲೆ ದಾಳಿ ಮಾಡಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಈ ಬಗ್ಗೆ ರಾಕೇಶ್ ಪಾಪಣ್ಣ ಅವರ ಬಳಿಯೂ ಮಾಹಿತಿ ಕಲೆಹಾಕುತ್ತಿದ್ದಾರೆ.
ಮಾಜಿ ಆಯುಕ್ತರುಗಳ ಮನೆ ಮೇಲೆ ದಾಳಿ
ಇದೇ ವೇಳೆ ಮುಡಾದ ಮಾಜಿ ಆಯುಕ್ತರುಗಳ ಮನೆಗಳ ಮೇಲೆಯೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಳಿಕ ಮುಡಾ ಮಾಜಿ ಆಯುಕ್ತ ನಟೇಶ್ ಮನೆ ಮೇಲೆ ಸಹ ದಾಳಿಯಾಗಿದ್ದು, ಮತ್ತೋರ್ವ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಮನೆ ಮೇಲೂ ದಾಳಿಯಾಗಿದೆ.
ದಿನೇಶ್ ಕುಮಾರ್ ಅವರ ಹೆಬ್ಬಾಳದ ಬಾಣಸವಾಡಿ ರಸ್ತೆಯಲ್ಲಿರುವ ದೀಪಿಕಾ ರಾಯಲ್ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆದಿದೆ. ಬೆಳಿಗ್ಗೆ ಇಡಿ ಅಧಿಕಾರಿಗಳು ದಾಳಿ ಮಾಡಿದಾಗ ದಿನೇಶ್ ಕುಮಾರ್ ಮನೆಯಿಂದ ಹೊರಹೋಗಿದ್ದರು.
ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಬಿಲ್ಡರ್ ಎನ್. ಮಂಜುನಾಥ್ ಮನೆ ಮೇಲೆ ಕೂಡ ಇಡಿ ದಾಳಿ ನಡೆದಿದೆ.