ಕಣ್ತಪ್ಪಿನಿಂದ ಅಫಿಡವಿಟ್‌ನಲ್ಲಿ ಕೆಸರೆ ಆಸ್ತಿ ವಿವರ ಸಲ್ಲಿಸಿಲ್ಲ: ತಪ್ಪು ಒಪ್ಪಿಕೊಂಡ ಸಿಎಂ ಸಿದ್ದರಾಮಯ್ಯ
x

ಕಣ್ತಪ್ಪಿನಿಂದ ಅಫಿಡವಿಟ್‌ನಲ್ಲಿ ಕೆಸರೆ ಆಸ್ತಿ ವಿವರ ಸಲ್ಲಿಸಿಲ್ಲ: ತಪ್ಪು ಒಪ್ಪಿಕೊಂಡ ಸಿಎಂ ಸಿದ್ದರಾಮಯ್ಯ


2013ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಮೈಸೂರಿನ ಕೆಸರೆ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ. ನನ್ನ ಕಣ್ತಪ್ಪಿನಿಂದ ಆ ಆಸ್ತಿ ವಿವರ ಬಿಟ್ಟುಹೋಗಿತ್ತು ಎಂದು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ.

ಮುಡಾ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಶುಕ್ರವಾರ(ಜು.26) ಸುದ್ದಿಗೋಷ್ಟಿ ನಡೆಸಿದ ಅವರು, ʻʻ2013 ರ ವಿಧಾನಸಭಾ ಚುನಾವಣೆಯ ಅಫಿಡವಿಟ್‌ನಲ್ಲಿ ಮೈಸೂರಿನ ಕೆಸರೆ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ. ನನ್ನ ಕಣ್ತಪ್ಪಿನಿಂದಾಗಿ ಆ ಆಸ್ತಿ ವಿವರ ಪ್ರಮಾಣಪತ್ರದಲ್ಲಿ ಬಿಟ್ಟುಹೋಗಿತ್ತು. ಆದರೆ ಲೋಕಾಯುಕ್ತಕ್ಕೆ ಆ ಆಸ್ತಿಯ ಕುರಿತಾದ ವಿವರವನ್ನು ಸಲ್ಲಿಕೆ ಮಾಡಿದ್ದೇನೆ. ಜನರ ಮನಸ್ಸಿನಲ್ಲಿ ಅನುಮಾನ ಬರಬಾರದು ಎಂದು ಈ ವಿಚಾರ ಸ್ಪಷ್ಟಪಡಿಸುತ್ತಿದ್ದೇನೆʼʼ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಇದು ಮುಡಾ ಹಗರಣದಲ್ಲಿ ಪ್ರತಿಪಕ್ಷಗಳು ಆರೋಪ ಮಾಡುತ್ತಿರುವ ಆಸ್ತಿಗೆ ಸಂಬಂಧಿಸಿದ್ದಾಗಿದೆ.

ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಅವರು, ಸಿದ್ಧರಾಮಯ್ಯ ಅವರ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ʻʻ2013 ರ ವಿಧಾನಸಭಾ ಚುನಾವಣೆಯ ಅಫಿಡವಿಟ್‌ನಲ್ಲಿ ಸಿದ್ದರಾಮಯ್ಯ ಅವರು ಮಾಹಿತಿ ಮುಚ್ಚಿಟ್ಟಿದ್ದಾರೆ. ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ 3 ಎಕರೆ 16 ಗುಂಟೆ ಕೃಷಿ ಭೂಮಿಯ ವಿವರವನ್ನು ಬಹಿರಂಗ ಪಡಿಸಿಲ್ಲʼʼ ಎಂದು ಆರೋಪಿಸಿದ್ದರು.

ದೂರಿನಲ್ಲಿ ಏನಿತ್ತು?

ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ 2010 ರಲ್ಲಿ ಈ ಜಾಗವನ್ನು ಗಿಫ್ಟ್‌ ಡೀಡ್‌ ಆಗಿ ನೋಂದಣಿ ಮಾಡಿದ್ದಾರೆ. ಈ ಜಾಗದ ಮೂಲ ಮಾಲೀಕರು ದೇವರಾಜು ಮತ್ತು ಕುಟುಂಬಸ್ಥರು ಆಗಿದ್ದು ಆಗಸ್ಟ್‌ 25, 2004 ರಂದು ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಈ ಜಾಗವನ್ನು ಮಾರಾಟ ಮಾಡಿದ್ದಾರೆ. ಈ ಅವಧಿಯಲ್ಲಿ ಸಿದ್ದರಾಮಯ್ಯನವರು ಜೆಡಿಎಸ್‌ ಪಕ್ಷದಲ್ಲಿದ್ದು ಕರ್ನಾಟಕ ಉಪ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು.

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಅವರ ಸಹೋದರ ಗಿಫ್ಟ್‌ ಡೀಡ್‌ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯನವರು ವರುಣಾ ಕ್ಷೇತ್ರದ ಶಾಸಕರು ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದರು. ಅಚ್ಚರಿಯ ವಿಷಯ ಏನೆಂದರೆ ಮಾರ್ಚ್‌ 31, 2013ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದ ವಾರ್ಷಿಕ ರಿಟರ್ನ್‌ ಲೋಕಾಯುಕ್ತಕ್ಕೆ ಸಲ್ಲಿಸುವ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಪತ್ನಿ ಬಳಿ ಇದ್ದ ನಿವೇಶನದ ವಿವರವನ್ನು ಉಲ್ಲೇಖಿಸಿದ್ದಾರೆ. ಆದರೆ 2013ರ ಚುನಾವಣೆಯ ಅಫಿಡವಿಟ್‌ ಸಲ್ಲಿಸುವಾಗ ಈ ವಿಚಾರವನ್ನು ಉದ್ದೇಶಪೂರ್ವಕವಾಗಿ ಉಲ್ಲೇಖ ಮಾಡಿಲ್ಲ.

ಕೃಷಿ ಭೂಮಿಯ ಬಗ್ಗೆಯ ಮಾಹಿತಿ ನೀಡದೇ ಸುಳ್ಳು ಅಫಿಡವಿಟ್ ಸಲ್ಲಿಸಿದ್ದು ಜನಪ್ರತಿ ನಿಧಿ ಕಾಯ್ದೆ ಸೆಕ್ಷನ್ 125 ಎ ಮತ್ತು ಸೆಕ್ಷನ್ 8 ಉಲ್ಲಂಘನೆ. ಸುಳ್ಳು ದಾಖಲೆ ಸಲ್ಲಿಸಿದ ಹಿನ್ನೆಲೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ 227, 229, 231, 236, 202 ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಟಿಜೆ ಅಬ್ರಹಾಂ ಮನವಿ ಮಾಡಿದ್ದರು.

Read More
Next Story