ಮುಡಾ ಪಾದಯಾತ್ರೆ | ಎಚ್‌ಡಿಕೆ ಮನವೊಲಿಕೆ: ಜೆಡಿಎಸ್-ಬಿಜೆಪಿ ಬಿಕ್ಕಟ್ಟು ಶಮನ, ನಿಗದಿಯಂತೆ ಮೈಸೂರು ಚಲೋ
ಮುಖ್ಯಮಂತ್ರಿ ವಿರುದ್ಧದ ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಘೋಷಿಸಿದ್ದ ಪಾದಯಾತ್ರೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಆಕ್ಷೇಪವೆತ್ತಿದ್ದರು. ಆ ಹಿನ್ನೆಲೆಯಲ್ಲಿ ಗುರುವಾರ ದೆಹಲಿಯಲ್ಲಿ ನಡೆದ ಬಿಜೆಪಿ ನಾಯಕರು ಮತ್ತು ಎಚ್‌ಡಿಕೆ ನಡುವಿನ ಸಂಧಾನ ಸಭೆಯಲ್ಲಿ ಅವರನ್ನು ಮನವೊಲಿಸಲಾಗಿದೆ. ನಿಗದಿಯಂತೆ ಶನಿವಾರ ಪಾದಯಾತ್ರೆ ನಡೆಯಲಿದೆ ಎಂದು ಬಿಜೆಪಿ ನಾಯಕರು ಘೋಷಿಸಿದ್ದಾರೆ.
ವಾಲ್ಮೀಕಿ ಮತ್ತು ಮುಡಾ ಹಗರಣವನ್ನು ಖಂಡಿಸಿ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಆಗಸ್ಟ್ 3ರಂದು ಬೆಂಗಳೂರಿನಿಂದ ಮೈಸೂರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಆಕ್ಷೇಪವೆತ್ತಿದ ಬೆನ್ನಲ್ಲೇ ದೆಹಲಿಯಲ್ಲಿ ಗುರುವಾರ ನಡೆದ ಉಭಯ ಪಕ್ಷಗಳ ನಾಯಕರ ಸಭೆ ಎಚ್‌ಡಿಕೆ ಮನವೊಲಿಸಲು ಯಶಸ್ವಿಯಾಗಿದ್ದು, ನಿಗದಿಯಂತೆ ಶನಿವಾರ(ಆ.3) ಪಾದಯಾತ್ರೆ ನಡೆಯಲಿದೆ ಎಂದು ಬಿಜೆಪಿ ನಾಯಕರು ಘೋಷಿಸಿದ್ದಾರೆ.
ಈ ಬಗ್ಗೆ ದೆಹಲಿಯಲ್ಲಿ ಗುರುವಾರ(ಆ.1) ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್, ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಜಂಟಿ ಸದ್ದಿಗೋಷ್ಠಿ ನಡೆಸಿ, ಬೆಂಗಳೂರು ಟು ಮೈಸೂರು ಪಾದಯಾತ್ರೆ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಮಾತನಾಡಿ, "ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ-ಜೆಡಿಎಸ್ ನಾಯಕರು ಒಟ್ಟಾಗಿಯೇ ಪಾದಯಾತ್ರೆ ಮಾಡುತ್ತೇವೆ. ಆಗಸ್ಟ್ 3ರಿಂದ ಪಾದಯಾತ್ರೆ ಆರಂಭಿಸುತ್ತೇವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಡವರನ್ನು ಲೂಟಿ ಮಾಡುತ್ತಿದೆ. ಇದೇ ಕಾರಣಕ್ಕೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ. ಹಗಲು ದರೋಡೆ ಮೂಲಕ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅಕ್ರಮವಾಗಿ 14 ಸೈಟ್ಗಳನ್ನು ಪಡೆದಿದ್ದಾರೆ. ಮುಡಾದಲ್ಲಿ 4000 ಕೋಟಿಗೂ ಹೆಚ್ಚು ಹಗರಣವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಾಲ್ಮೀಕಿ ನಿಗಮದ ಆದಿವಾಸಿ ಹಣವನ್ನು ಲೂಟಿ ಮಾಡಿದೆ. ಆ ಹಣವನ್ನು ಚುನಾವಣೆಯಲ್ಲಿ ಬಳಕೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಜನರಲ್ಲಿ ಆಕ್ರೋಶವಿದೆ, ಯಾವಾಗ ಬೇಕಿದ್ರೂ ಕಟ್ಟೆ ಒಡೆಯಬಹುದು" ಎಂದು ಹೇಳಿದ್ದಾರೆ.
ಸಚಿವ ಪ್ರಲ್ಹಾದ ಜೋಷಿ ಅವರು, "ರಾಜ್ಯ ಕಾಂಗ್ರೆಸ್ ಅಕ್ರಮಗಳ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿಯೇ ಪಾದಯಾತ್ರೆ ನಡೆಸಲಿವೆ. ಈ ವಿಷಯದಲ್ಲಿ ಸಚಿವರಾದ ಕುಮಾರಸ್ವಾಮಿ ಅವರಿಗೆ ಕೆಲವು ಗೊಂದಲಗಳಿದ್ದವು. ಅವುಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಾಗಿದೆ. ಹಾಗಾಗಿ ಈಗ ಯಾವುದೇ ಗೊಂದಲವಿಲ್ಲದೆ ಒಗ್ಗಟ್ಟಿನಿಂದ ಕಾಂಗ್ರೆಸ್ ವಿರುದ್ಧ ಹೋರಾಟ ಮುಂದುವರಿಸಲಾಗುವುದು" ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿ, "ನಿಗದಿಯಂತೆ ಮೈಸೂರು ಚಲೋ ಪಾದಯಾತ್ರೆ ಶನಿವಾರ ಆಗಸ್ಟ್ 3ರಂದು ಬೆಂಗಳೂರಿನ ನೈಸ್ ರೋಡ್ ಜಂಕ್ಷನ್‌ನಿಂದ ಆರಂಭವಾಗಲಿದೆ. ಪಾದಯಾತ್ರೆಗೆ ಜೆಡಿಎಸ್ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಅವರೇ ಚಾಲನೆ ನೀಡಲಿದ್ದಾರೆ. ಈ ವೇಳೆ ಬಿಜೆಪಿ ಹಿರಿಯರಾದ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲಾ ಹಿರಿಯ ನಾಯಕರು, ಶಾಸಕರು ಹಾಗೂ ಸಂಸದರೂ ಭಾಗವಹಿಸಲಿದ್ದಾರೆ" ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಕಾರಣಕ್ಕಾಗಿ ಕೆಂಡಾಮಂಡಲರಾಗಿದ್ದ ಕುಮಾರಸ್ವಾಮಿ, ನಮ್ಮ ಕುಟುಂಬಕ್ಕೆ ವಿಷ ಹಾಕಿದವನ ನೇತೃತ್ವದಲ್ಲಿ ಪಾದಯಾತ್ರೆಗೆ ನಮ್ಮ ಬೆಂಬಲವಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ನಡೆಸಬೇಕಿದ್ದ ಮುಡಾ ನಿವೇಶನ ಹಂಚಿಕೆ ಪ್ರಕರಣ ಕುರಿತಾದ ಮೈಸೂರು ಚಲೋ ರದ್ದಾಗುವ ಸನ್ನಿವೇಶ ಸೃಷ್ಟಿಯಾಗಿತ್ತು.
ಇದೀಗ ಅಂತಿಮವಾಗಿ ವಿಜಯೇಂದ್ರ, ರಾಧಾಮೋಹನ್ ದಾಸ್, ಪ್ರಲ್ಹಾದ್ ಜೋಶಿ ಸಂಸತ್ ಭವನದಲ್ಲಿ ಕುಮಾರಸ್ವಾಮಿ ಜೊತೆ ಸಂಧಾನ ಸಭೆ ಮಾಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಕುಮಾರಸ್ವಾಮಿ ಅವರಿಂದಲೇ ಈ ಪಾದಯಾತ್ರೆಗೆ ಚಾಲನೆ ಕೊಡಿಸಲು ತೀರ್ಮಾನಿಸಿದ್ದಾರೆ.