ಮೈಮರೆಸುವ ʻದೇಸೀ ಹಾಸು ಆಟʼಗಳ ಮೈದಾನವಾಗಲಿರುವ  ಮೈಸೂರು
x

ಮೈಮರೆಸುವ ʻದೇಸೀ ಹಾಸು ಆಟʼಗಳ ಮೈದಾನವಾಗಲಿರುವ ಮೈಸೂರು


ಪಾರಂಪರಿಕ ಹಾಗೂ ಸಾಂಸ್ಕೃತಿಕ ನಗರವಾದ ಮೈಸೂರು, ಮೇ 17ರಿಂದ 30ರವರೆಗೆ ದೇಸಿ ಹಾಸು ಆಟದ ಮೈದಾನದ ರೂಪು ತಾಳಲಿದೆ. ಮೈಸೂರಿನ ಖ್ಯಾತ ಸಂಸ್ಥೆಯಾದ ರಾಮ್‌ಸನ್ಸ್‌ ಕಲಾ ಪ್ರತಿಷ್ಠಾನ ಆಯೋಜಿಸುತ್ತಿರುವ ಕ್ರೀಡಾ ಕೌಶಲ್ಯದ ದ್ವೈವಾರ್ಷಿಕ ಪ್ರದರ್ಶನದ 10ನೇ ಆವೃತ್ತಿ ಮೇ 17ರಂದು ಶುಕ್ರವಾರ ಅನಾವರಣಗೊಳ್ಳಲಿದೆ.

ಪ್ರಾಚೀನ ಪರಂಪರೆಯ, ಹಾಗೂ ಕರಕುಶಲ ಕಲೆಯ ಬಗ್ಗೆ ತನ್ನ ಸೇವೆ ಸಲ್ಲಿಸುತ್ತಿರುವ ರಾಮ್‍ಸನ್ಸ್ ಕಲಾ ಪ್ರತಿಷ್ಠಾನ ನಮ್ಮ ಅನೂಚಾನ ಪರಂಪರೆಯ ಅಂಗವಾದ ದೇಸೀ ಆಟಗಳಿಗೆ ಅಗತ್ಯವಾದ ಹಾಸುಗಳನ್ನು, ಅದಕ್ಕೆ ಬೇಕಾದ ಕಾಯಿ ಮತ್ತು ದಾಳಗಳನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಪ್ರಚಲಿತವಿರುವ ಕರಕುಶಲ ಕಲಾ ಪ್ರಕಾರಗಳಲ್ಲಿ ರೂಪಿಸಿದೆ. ಒಂದರ್ಥದಲ್ಲಿ ಈ ಹಾಸುಗಳು, ಕಾಯಿಗಳು ಅದನ್ನು ಹೊಂದಿರುವ ರಾಜ ಪರಂಪರೆಯ ಪ್ರತಿಷ್ಠೆಯ ಕುರುಹುಗಳೆಂದರೂ ತಪ್ಪಾಗಲಾರದು. ಕುಶಲಕಲಾವಿದರು ತಮ್ಮನ್ನು ಪೋಷಿಸುವ ರಾಜರನ್ನು ಚಕ್ರವರ್ತಿಗಳ ಕಲಾತ್ಮಕ ಚಿಂತನೆಗಳು, ವಿನ್ಯಾಸಗಳನ್ನು ಗಮನದಲ್ಲಿರಿಸಿಕೊಂಡು ಕಟೆದಿರುವ ಇತಿಹಾಸವೂ ಇದೆ.

ಹಾಸು ಆಟಕ್ಕೆ ಮೈಸೂರು ಅರಸರ ಕಾಣಿಕೆ

ಮೈಸೂರು ಈ ಹಾಸು ಆಟದ ಮೈದಾನವೆಂದು ಹೇಳಲು ಕಾರಣವೆಂದರೆ, ಮುಮ್ಮಡಿ ಕೃಷ್ಣರಾಜ ಒಡೆಯರ್‌ ಕಾಲಾವಧಿಯಲ್ಲಿ, ಈ ಹಾಸು ಆಟಗಳಿಗೆ. ಈ ಆಟಕ್ಕೆ ಬೇಕಾದ ಪರಿಕರಗಳ ಬಗ್ಗೆ ಅಪರಮಿತವಾದ ಪ್ರೀತಿ ಇರುವಂತೆ ಕಾಣಿಸುತ್ತದೆ. ಒಂದರ್ಥದಲ್ಲಿ ಆಗಿನ ಸಮಾಜದ ಕಲಾತ್ಮಕ ಪರಿಕಲ್ಪನೆಯ ರೂಪ ಈ ಆಟದ ಕಾಯಿ, ದಾಳಗಲ್ಲಿ ಮೂಡಿ ಬಂದಿದೆ ಎಂದು ಹೇಳಬಹುದು. ಈ ಮುಮ್ಮುಡಿ ಕೃಷ್ಣರಾಜ ಒಡೆಯರ್‌ ಅವಧಿಯಲ್ಲಿ ರಚಿತವಾದ ʻಶ್ರೀ ತತ್ವನಿಧಿʼ ಕೃತಿಯಲ್ಲಿಒಂದು ಮುಖ್ಯ ಅಧ್ಯಾಯ ಈ ಹಾಸು ಆಟಕ್ಕೆ ಮೀಸಲಾಗಿದೆ. ಇದರ ʼಕೌತುಕ ನಿಧಿʻ ಎಂಬ ಅಧ್ಯಾಯದಲ್ಲಿ ಈ ಆಟಗಳ ಕುರಿತು ವಿಸ್ತೃತ ವಿವರಣೆ ಇದೆ.

ಹಾಸು ಆಟ ವಿಶ್ವದ ಸಾಂಸ್ಕೃತಿಕ ಇತಿಹಾಸದಲ್ಲಿ ತನ್ನದೇ ಸ್ಥಾನಗಳಿಸಿಕೊಂಡಿದೆ. ವ್ಯಾಪಾರ ಮತ್ತು ಧರ್ಮದಷ್ಟೇ ವಿಶ್ವದ ವಿವಿಧ ದೇಶಗಳ ಸಾಂಸ್ಕೃತಿಕ ಕಲ್ಪನೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರೆ ತಪ್ಪಾಗಲಾರದು. ಭಾರತದ ಇತಿಹಾಸ, ಪುರಾಣಗಳ ಸಾಂಸ್ಕೃತಿಕ ಲೋಕದಲ್ಲಿ ಹಾಸು ಆಟಕ್ಕೆ ತನ್ನದೇ ಆದ ಸ್ಥಾನಮಾನವಿದೆ.

ಹಾಸು ಆಟದಲ್ಲಿ ಪಗಡೆ ಹಾಸಿನ ಪುರಾಣ, ಇತಿಹಾಸ, ಜನಪದ

ಈ ಹಾಸು ಆಟಗಳಲ್ಲಿ ಪಗಡೆಗೆ ತನ್ನದೇ ಆದ ಪ್ರಾಮುಖ್ಯವಿದೆ. ಭರತವರ್ಷದಲ್ಲಿ ಪಗಡೆಯಾಟದ ಸಂಪ್ರದಾಯ ಇಂದು ನಿನ್ನೆಯದಲ್ಲ. ಋಗ್ವೇದದಲ್ಲಿ ʻಅಕ್ಷʼ ಎಂಬ ಹೆಸರಿನಿಂದ ಈ ಆಟದ ಬಗ್ಗೆ ಪ್ರಸ್ತಾಪವಿದೆ. ಪಗಡೆ ದಾಳದೊಂದಿಗೆ ಅಪ್ಸರೆಯರು ನೃತ್ಯಮಾಡಿದರೆಂಬ ವರ್ಣನೆ ಅಥರ್ವಣ ವೇದದಲ್ಲಿದೆ. ಹರಹರ ಮಹದೇವನಿಗೂ ಪಗಡೆಯಾಟ ಅತ್ಯಂತ ಪ್ರಿಯವಾದ ಆಟ, ಶಿವೆಯೊಂದಿಗೆ ಶಿವ ಪಗಡೆಯಾಡುತ್ತಾನೆ. ಓಂಕಾರೇಶ್ವರದಂಥ ಶಿವಮಂದರಗಳಲ್ಲಿ ಶಯನಾರತಿಯ ಮೊದಲು ಪಗಡೆಯ ಪಟ್ಟವನ್ನು ಹಾಸಿಡುವ ಪದ್ಧತಿ ಇದೆ. ಮಹಾಭಾರತದ ದ್ಯೂತ (ಜೂಜು ಅಂದರೆ ಪಗಡೆ ಆಟ) ಇದಕ್ಕೆ ಸಾಕ್ಷಾತ್‌ ಪ್ರಮಾಣ.

ಆದರೆ, ಇತಿಹಾಸಕಾರರ ಪ್ರಕಾರ ಪಗಡೆ ಹಾಸನ್ನು ೧೪ನೇ ಶತಮಾನದಲ್ಲಿ ರಚಿಸಲಾಗಿದೆ. ಆಟದ ಹಾಸನ್ನು ಉಣ್ಣೆ ಅಥವ ಉತ್ಕೃಷ್ಟ ಬಟ್ಟೆಯಿಂದ ಹೊಲಿದು ಸಿದ್ಧಪಡಿಸಲಾಗುತ್ತದೆ. ಮರದ ಪ್ಯಾದೆಗಳು ಮತ್ತು ಆರು ಕೌರಿ ಚಿಪ್ಪುಗಳನ್ನು ಬಳಸಿ ʼಗರʼ ಬಿಳಿಸುವ ಮೂಲಕ ಕಾಯಿಗಳನ್ನ ನಡೆಸಲಾಗುತ್ತದೆ. ಮಹಾಭಾರತದಲ್ಲಿ ಈ ಪಗಡೆಯಾಟದಲ್ಲಿ ಧರ್ಮರಾಯ ತನ್ನ ಪತ್ನಿ ದ್ರೌಪದಿಯನ್ನು ಪಣಕ್ಕೋಡ್ಡುವುದರಿಂದ ಕುರುಕ್ಷೇತ್ರ ಯುದ್ಧಕ್ಕೇ ಕಾರಣವಾಗುತ್ತದೆ.

ಜಾನಪದ ಪಠ್ಯಗಳ ಪ್ರಕಾರ, ದುರ್ಯೋಧನ ದ್ರೌಪದಿಯೊಂದಿಗೆ ಪಗಡೆಯಾಡಲು ಒಪ್ಪಿಕೊಳ್ಳುತ್ತಾನೆ. ಆ ಆಟ ಹಮ್ಮಿನಿಂದಲೇ ನಡೆಯುತ್ತದೆ. ದುರ್ಯೋಧನ ಒಂದೋಂದೇ ಪಣಕ್ಕಿಟ್ಟು ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಇದು ದ್ರೌಪದಿಯ ಶಕ್ತಿ, ಸಾಮಾರ್ಥ್ಯ, ಪುರುಷಾಧಿಕಾರಕ್ಕೆ ತನಗಾದ ಅವಮಾನಕ್ಕೆ ತೋರಿದ ಪ್ರತಿಭಟನೆಯನ್ನು ಎತ್ತಿಹಿಡಿಯುತ್ತದೆ. ಜಾನಪದ ಕಾವ್ಯಗಳ ಪ್ರಕಾರ ಆಡ ನಡೆದಾಗ ಪಗಡೆ ದಾಳದಿಂದಲೇ ದುರ್ಯೋಧನನ ಹಣೆ ಒಡೆದು ಚಿಮ್ಮಿದ ರಕ್ತದಲ್ಲಿ ತನ್ನ ತಲೆಕೂದಲನ್ನು ಅದ್ದಿ ಮುಡಿ ಕಟ್ಟುತ್ತಾಳೆ. ಯಾವ ಪುರುಷನ ಸಹಾಯವೂ ಆಕೆಗೆ ಬೇಕಾಗುವುದಿಲ್ಲ. ಒಟ್ಟಾರೆಯಾಗಿ ಜನಪದ ಮಹಾಭಾರತದ ದ್ರೌಪದಿಯ ಮಾದರಿ ಶಿಷ್ಟ ಕಾವ್ಯಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ವಾರಣಾಸಿಯ ಕಲಾವಿದರು

ಈ ಹಾಸು ಆಟದ ಪ್ರದರ್ಶನದಲ್ಲಿ ವಾರಾಣಸಿಯ ಕಲಾವಿದರು ಮರದ ಅರಗು ಕಲೆಯಲ್ಲಿ ಉತ್ಕøಷ್ಟ ಚಿತ್ತಾರಗಳಿಂದ ಅಲಂಕೃತಗೊಂಡ ಕಾಯಿಗಳನ್ನು ರೂಪಿಸಿದರೆ ಮೈಸೂರಿನ ಕಲಾವಿದರ ಮರದ ಹುದುಗು ಕಲೆಯ ಆಟದ ಮೇಜುಗಳು ಕಣ್ಮನ ಸೆಳೆಯುತ್ತವೆ.

ಕಿನ್ನಾಳದ ಚೌಕಿಕಲೆಯಲ್ಲಿ ರೂಪುಗೊಂಡ ಆಟದ ಚೌಕಿಗಳು, ಜೈಪುರ್, ರಾಜಸ್ಥಾನದ ಮರದ - ಅಮೃತಶಿಲೆಯ ಚೌಕಿಗಳೊಡನೆ ಸ್ಪರ್ಧಿಸುತ್ತಿವೆ. ಸೋಲಾಪುರದ ಜಮಖಾನಗಳು ಬೆಂಗಳೂರಿನ ಚಾಪೆಕಲೆಗೆ ಸವಾಲೊಡ್ಡುತ್ತವೆ.

ತಿರುಪತಿಯ ಹತ್ತಿರವಿರುವ ಶ್ರೀಕಾಳಹಸ್ತಿ ಒಂದು ಪುಟ್ಟ ಪಟ್ಟಣ. ಇಲ್ಲಿನ ಶ್ರೀಕಾಳಹಸ್ತೀಶ್ವರ ದೇವಾಲಯದಷ್ಟೇ ಈ ಸ್ಥಳದ ಕಲಾವಿಶೇಷವು ಸುಪ್ರಸಿದ್ಧ. ಅದೇ ಕಲಮ್‍ಕಾರಿ. ಈ ಊರಿನ ಸುಮಾರು 200 ಕುಟುಂಬಗಳ ಮೂಲಕಸುಬು ಕಲಮ್‍ಕಾರಿ - ಬಟ್ಟೆಯ ಮೇಲೆ ಬಿದಿರಿನ `ಕಲಮ್' ಹಿಡಿದು ಚಿತ್ತಾರಗಳನ್ನು ರಚಿಸಿ ವಿವಿಧ ಮಜಲುಗಳಲ್ಲಿ ಬಣ್ಣಗಳನ್ನು ತುಂಬುವ ವಿಶಿಷ್ಟ ಕಲೆ.

ಕಲಂಕಾರಿ ಕಲೆ

ಕಲಮ್‍ಕಾರಿ ಕಲೆಯು ಆಟದ ಹಾಸು ತಯಾರಿಸುವಲ್ಲಿ ಅತ್ಯಂತ ಸೃಜನಶೀಲ ಮಾಧ್ಯಮ. ಪ್ರಕೃತಿಯಲ್ಲಿ ಹೇರಳವಾಗಿ ಸಿಗುವ ಬೇರು, ಬೀಜ, ಪರಾಗ, ಪುಷ್ಪಗಳಿಂದ ಮಾಡಿದ ಬಣ್ಣಗಳೇ ಇದರ ಜೀವಾಳ. ಕಲಮ್‍ಕಾರಿ ಕಲೆಯಲ್ಲಿ ರೂಪುಗೊಂಡಿರುವ ನೂರಾರು ಆಟದ ಹಾಸುಗಳು ತಮ್ಮ ವೈವಿಧ್ಯಮಯ, ವರ್ಣಮಯ ಅಲಂಕರಣಗಳೊಂದಿಗೆ ನೋಡುಗರ ಮನಸೂರೆಗೊಳ್ಳುವಲ್ಲಿ ಸಂಶಯವಿಲ್ಲ. ಹಾಸು ಆಟಗಳಿಗಾಗಿಯೇ ಈ ಕಲೆಯ ಆವಿರ್ಭಾವವಾಗಿದೆಯೇನೋ ಎಂಬಷ್ಟು ಸೊಗಸಾಗಿ ಮೂಡಿಬಂದಿವೆ.

ಹಾಸಬಹುದು, ಆಡಬಹುದು - ಈ ದ್ವಿ-ಉಪಯೋಗಿ ಸಾಧನಗಳು - ದೇಸೀ ಆಟಗಳನ್ನು ಜನರ ಬದುಕಿನ ಒಂದು ಭಾಗವಾಗಿ ರೂಪುಗೊಂಡಿರುವುದು ಒಂದು ವಿಶೇಷ. ಇದಕ್ಕೆ ತಕ್ಕ ಉದಾಹರಣೆ ಎಂದರೆ, ನವಲಗುಂದದ `ಚಾರ್ ಮೋರ್' ಜಮಖಾನಗಳು. ಈ ವಿಶಿಷ್ಟ ಜಮಖಾನಗಳ ಮಧ್ಯದಲ್ಲಿ ನಾಲ್ಕು ನವಿಲುಗಳು ನಾಲ್ಕು ಮೂಲೆಗಳಲ್ಲಿ ನರ್ತಿಸುತ್ತಿದ್ದರೆ ಅವುಗಳ ಮಧ್ಯೆ ಒಂದು ಸುಂದರ ಪಗಡೆಯ ಹಾಸು ರಾರಾಜಿಸುತ್ತಿರುತ್ತದೆ - ಈ ಜಮಖಾನವನ್ನು ಹುಡುಗಿಯು ತನ್ನ ಮದುವೆಯ ಗೃಹಸೌಪಸ್ಕರದೊಡನೆ ಕೊಂಡೊಯ್ಯಲು ತಾನೇ ನೇಯುತ್ತಾಳೆ. ಹುಬ್ಬಳ್ಳಿಯ ಹತ್ತಿರದ ನವಲಗುಂದದಲ್ಲಿ ಇಂದಿಗೂ ಈ ಸಂಪ್ರದಾಯ ಜೀವಂತ. ಮೈಸೂರು, ಬೆಂಗಳೂರು, ನವಲಗುಂದ, ಚನ್ನಪಟ್ಟಣ, ಕಿನ್ನಾಳ, ಹುಬ್ಬಳ್ಳಿ, ಸೋಲಾಪುರ, ಗುಡಗಾಂವ್, ವಾರಾಣಸಿ, ಸಹರನಪುರ, ಅಲೀಗಢ್, ಜೈಪುರ್, ಜೋಧಪುರ್, ಶ್ರೀಕಾಳಹಸ್ತಿ, ಎಟ್ಟಿಕೊಪ್ಪ, ರಘುರಾಜಪುರ, ಶಾಂತೀನಿಕೇತನ್ - ಸಮಗ್ರ ಭಾರತ ಕಲಾವಿದರ ಕಲಾಕೃತಿಗಳ ಸಿರಿಭಂಡಾರ.

“ಹತ್ತನೇ ದ್ವೈವಾರ್ಷಿಕ `ಕ್ರೀಡಾ ಕೌಶಲ್ಯ' ಪ್ರದರ್ಶನದ ವಿಶೇಷ - ಗುಜರಾತಿನ ದಾವೂದಿ ಬೋಹ್‍ರಾ ಪಂಗಡದವರು ಆಡುವ ಪಾರಂಪರಿಕ ಆಟ `ದಾದು' - ಇದನ್ನು ಹೊಸದಾಗಿ ಪರಿಚಯಿಸುತ್ತಿದ್ದೇವೆ” ಎನ್ನುತ್ತಾರೆ ಕಲಾ ಇತಿಹಾಸಕಾರ ಹಾಗೂ ರಾಮ್‌ಸನ್ಸ್ ಕಲಾ ಪ್ರತಿಷ್ಠಾನದ ಕ್ಯುರೇಟರ್‌ ಎಚ್‌ ಎಸ್‌ ಧರ್ಮೇಂದ್ರ.

ಇದರ ಜೊತೆಗೆ, ಉತ್ತರಾಖಂಡದ ಮಹಿಳೆಯರು ತಮ್ಮತಮ್ಮ ಮನೆಗಳಲ್ಲಿ ಪುಟ್ಟ ರತ್ನಗಂಬಳಿಗಳನ್ನು ಹೆಣೆಯುತ್ತಾರೆ - ಇದರಲ್ಲಿ ಮತ್ತು ಒಡೀಶಾ ಪಿಪಿಲಿಯ ಆಪ್ಲಿಕೇ ಕಲೆಗಳಲ್ಲಿ ಹಾಸುಆಟಗಳು ಮತ್ತು ನವನವೀನ ಮಾದರಿಯ ಮನಮೋಹಕ ಆಟದ ಕಾಯಿಗಳು ಈ ಸಂದರ್ಭದಲ್ಲಿ ನೋಡಲು ಲಭ್ಯ.

2024 ರ ಕ್ರೀಡಾಕೌಶಲ್ಯದ ವೈಶಿಷ್ಟ್ಯ ಇಷ್ಟಕ್ಕೇ ಸೀಮಿತವಾಗಿಲ್ಲ. ಪಗಡೆ, ಅಳುಗುಳಿಮಣೆ, ಆಡುಹುಲಿ ಕಟ್ಟಾಟ ಮೊದಲಾದ ಪ್ರಾಚೀನ ಆಟಗಳನ್ನು ಇಂದಿನ ಪೀಳಿಗೆಯವರಿಗೆ ಪರಿಚಯಿಸುವ ಸಲುವಾಗಿ, ಆಟಗಳ ವಿಧಾನಗಳನ್ನು ಹೇಳಿಕೊಡಲು ಮಾರ್ಗದರ್ಶಕರು ಇಲ್ಲಿ ಇದ್ದು, ನೋಡುಗರಿಗೆ ವಿವರಣೆ ನೀಡುತ್ತಾರೆ.

ರಾಮ್‍ಸನ್ಸ್ ಕಲಾ ಪ್ರತಿಷ್ಠಾನ ಪಾರಂಪರಿಕ ಆಟಗಳ ಬಗೆಗೆ ಹಾಗೂ ಅವುಗಳ ಪ್ರಾದೇಶಿಕ ವೈವಿಧ್ಯತೆಗಳ ಬಗೆಗೆ ದಾಖಲೀಕರಣದಲ್ಲಿ ಹಲವಾರು ವರ್ಷಗಳಿಂದ ತೊಡಗಿಕೊಂಡಿದೆ. ಈ ದಾಖಲೆಗಳನ್ನು ಒಳಗೊಂಡ ಒಂದು ಕಿರುಹೊತ್ತಗೆ ಲಭ್ಯ. ನಮ್ಮ ಪ್ರಾಚೀನ ಕ್ರೀಡಾ ಸಂಸ್ಕøತಿಯ ವೈಭವವನ್ನು, ನಮ್ಮ ರಾಷ್ಟ್ರದ ಕರಕುಶಲ ಕೌಶಲ್ಯವನ್ನು, ವೈವಿಧ್ಯತೆಯನ್ನು ಮನವರಿಕೆ ಮಾಡಿಕೊಳ್ಳಲು ನೆರವಾಗುವ ಒಂದು ಕಲಾತ್ಮಕ ಪ್ರದರ್ಶನ ಪಾರಂಪರಿಕ ಹಾಸು-ಆಟಗಳ ಪ್ರದರ್ಶನ ಎನ್ನುತ್ತಾರೆ ಧರ್ಮೇಂದ್ರ. ಈ ಪ್ರದರ್ಶನದಲ್ಲಿ ಯಾರು ಬೇಕಾದರೂ ಪಾಲುಗೊಳ್ಳಬಹುದು. ಇಲ್ಲಿ ಪ್ರವೇಶ ಉಚಿತ ಎಂದು ಧರ್ಮೇಂದ್ರ ಹೇಳುತ್ತಾರೆ.

Read More
Next Story