ಈ ಬಾರಿಯ ಮೈಸೂರು ದಸರಾದಲ್ಲಿ ವೈಮಾನಿಕ ಪ್ರದರ್ಶನ:  ಅನುಮತಿಗಾಗಿ ಸಿಎಂ ಡೆಲ್ಲಿಗೆ
x

ಈ ಬಾರಿಯ ಮೈಸೂರು ದಸರಾದಲ್ಲಿ ವೈಮಾನಿಕ ಪ್ರದರ್ಶನ: ಅನುಮತಿಗಾಗಿ ಸಿಎಂ ಡೆಲ್ಲಿಗೆ

ವಾಯುಪಡೆಯ ವಿಮಾನಗಳ ಮನಮೋಹಕ ಪ್ರದರ್ಶನವು ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಿ, ದಸರಾಕ್ಕೆ ಹೊಸ ಆಯಾಮ ನೀಡುತ್ತದೆ ಎಂಬ ನಿರೀಕ್ಷೆ ಇದೆ. ಹಿಂದಿನ ವರ್ಷಗಳಲ್ಲಿಯೂ ಇಂತಹ ಪ್ರದರ್ಶನಗಳು ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದವು.


ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳು ಈಗಾಗಲೇ ಬಿರುಸಿನಿಂದ ಸಾಗಿವೆ. ಈ ವರ್ಷದ ದಸರಾದಲ್ಲಿ ವೈಮಾನಿಕ ಪ್ರದರ್ಶನ (Air Show) ಆಯೋಜಿಸುವ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ (ಜುಲೈ 9) ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಈ ಮೂಲಕ ದಸರಾಕ್ಕೆ ಹೊಸ ಮೆರಗು ನೀಡುವ ಪ್ರಯತ್ನ ನಡೆದಿದೆ.

ರಕ್ಷಣಾ ಸಚಿವರೊಂದಿಗೆ ಮಹತ್ವದ ಸಭೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಬೆಳಗ್ಗೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಸಂಜೆ 4:30ಕ್ಕೆ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ದಸರಾ ಮಹೋತ್ಸವದಲ್ಲಿ ಭಾರತೀಯ ವಾಯುಪಡೆಯ ವೈಮಾನಿಕ ಪ್ರದರ್ಶನವನ್ನು ಆಯೋಜಿಸಲು ಅನುಮತಿ ಮತ್ತು ಸಹಕಾರ ಪಡೆಯುವುದು ಈ ಭೇಟಿಯ ಪ್ರಮುಖ ಉದ್ದೇಶ. ವಾಯುಪಡೆಯ ವಿಮಾನಗಳ ಮನಮೋಹಕ ಪ್ರದರ್ಶನವು ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸಿ, ದಸರಾಕ್ಕೆ ಹೊಸ ಆಯಾಮ ನೀಡುತ್ತದೆ ಎಂಬ ನಿರೀಕ್ಷೆ ಇದೆ. ಹಿಂದಿನ ವರ್ಷಗಳಲ್ಲಿಯೂ ಇಂತಹ ಪ್ರದರ್ಶನಗಳು ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದವು.

ದಸರಾ ಸಿದ್ಧತಾ ಸಭೆಯಲ್ಲಿ ಹಲವು ತೀರ್ಮಾನಗಳು

ಕೆಲವು ದಿನಗಳ ಹಿಂದಷ್ಟೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮೈಸೂರು ದಸರಾ ಮಹೋತ್ಸವ-2025ರ ಪೂರ್ವಭಾವಿ ಸಿದ್ಧತಾ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ದಸರಾ ಆಚರಣೆಯ ಕುರಿತು ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಈ ಬಾರಿ ದಸರಾ ಮಹೋತ್ಸವವನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 13 ರವರೆಗೆ (ವಿಜಯದಶಮಿ) ಆಚರಿಸಲು ನಿರ್ಧರಿಸಲಾಗಿದೆ. ಅಕ್ಟೋಬರ್ 3 ರಂದು ನಾಡದೇವಿ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ದಸರಾಕ್ಕೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಉದ್ಘಾಟಕರ ಆಯ್ಕೆ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ.

ದಸರಾ ಆಚರಣೆಗೆ ಅಗತ್ಯವಿರುವ ಅನುದಾನದ ಹಂಚಿಕೆ ಮತ್ತು ವಿವಿಧ ಸಮಿತಿಗಳಿಗೆ ಹಣಕಾಸು ಬಿಡುಗಡೆಯ ಕುರಿತು ಚರ್ಚಿಸಲಾಗಿದೆ. ಯಾವುದೇ ವಿಳಂಬವಿಲ್ಲದೆ ಹಣಕಾಸು ಲಭ್ಯವಾಗುವಂತೆ ಕ್ರಮ ಕೈಗೊಳ್ಳುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಗಳನ್ನು ಆಷಾಢ ಮಾಸದೊಳಗೆ ಅರಣ್ಯದಿಂದ ಮೈಸೂರಿಗೆ ಕರೆತರಲು ಯೋಜನೆ ರೂಪಿಸಲಾಗಿದೆ. ಆನೆಗಳ ಸ್ವಾಗತ, ಅವುಗಳಿಗೆ ನೀಡುವ ತರಬೇತಿ, ವೈದ್ಯಕೀಯ ಆರೈಕೆ ಮತ್ತು ಪೋಷಣೆಯ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ದಸರಾ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ದಸರಾ, ರೈತ ದಸರಾ, ಮಹಿಳಾ ದಸರಾ, ದಸರಾ ಆಹಾರ ಮೇಳ, ಮಕ್ಕಳ ದಸರಾ, ವಸ್ತು ಪ್ರದರ್ಶನ, ಸಾಹಸ ಕ್ರೀಡೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಯೋಜಿಸಲಾಗಿದೆ. ಈ ಬಾರಿ ಮತ್ತಷ್ಟು ಆಕರ್ಷಕ ಕಾರ್ಯಕ್ರಮಗಳನ್ನು ಸೇರಿಸಲು ಸಲಹೆಗಳನ್ನು ಪಡೆಯಲಾಗಿದೆ.

ದಸರಾ ವೇಳೆ ನಗರಕ್ಕೆ ಆಗಮಿಸುವ ಲಕ್ಷಾಂತರ ಪ್ರವಾಸಿಗರಿಗೆ ಅಗತ್ಯವಿರುವ ಭದ್ರತಾ ವ್ಯವಸ್ಥೆ, ವಸತಿ ಸೌಕರ್ಯ, ಸಾರಿಗೆ ವ್ಯವಸ್ಥೆ, ಕುಡಿಯುವ ನೀರು ಮತ್ತು ನೈರ್ಮಲ್ಯದ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗಿದೆ. ಜಂಬೂಸವಾರಿ ಮಾರ್ಗದಲ್ಲಿ ಬೆಳಕಿನ ವ್ಯವಸ್ಥೆ ಮತ್ತು ಸ್ವಚ್ಛತೆಗೂ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.

Read More
Next Story