
ಡಿ.ಕೆ ಸುರೇಶ್
ನ್ಯಾಯಾಲಯದ ತೀರ್ಪಿಗೆ ತಲೆಬಾಗಲೇಬೇಕು': ಪ್ರಜ್ವಲ್ ರೇವಣ್ಣ ತೀರ್ಪಿನ ಬಗ್ಗೆ ಡಿ.ಕೆ. ಸುರೇಶ್ ಪ್ರತಿಕ್ರಿಯೆ
ಪ್ರಣಬ್ ಮೊಹಂತಿ ಅವರು ಸದ್ಯ ಮಂಗಳೂರಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸೇವೆಗೆ ನಿಯೋಜನೆಗೊಳ್ಳಲು ತನ್ನದೇ ಆದ ಪ್ರಕ್ರಿಯೆಗಳಿದ್ದು, ಅದಕ್ಕೆ ಆರೇಳು ತಿಂಗಳು ಡಿ.ಕೆ. ಸುರೇಶ್ ಬೇಕಾಗುತ್ತದೆ.
ಧರ್ಮಸ್ಥಳ ಅಸ್ಥಿಪಂಜರ ಪ್ರಕರಣದ ತನಿಖೆ, ಪ್ರಜ್ವಲ್ ರೇವಣ್ಣ ದೋಷಿ ಎಂದು ಸಾಬೀತಾದ ತೀರ್ಪು ಹಾಗೂ ಚುನಾವಣಾ ಅಕ್ರಮಗಳ ವಿರುದ್ಧ ರಾಹುಲ್ ಗಾಂಧಿ ನಡೆಸುತ್ತಿರುವ ಪ್ರತಿಭಟನೆಗಳ ಕುರಿತು ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಇಂದು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆಯ ಬಗ್ಗೆ ಮಾತನಾಡಿದ ಸುರೇಶ್, "ಎಸ್‌ಐಟಿ ತಂಡವು 13 ಸ್ಥಳಗಳನ್ನು ಗುರುತಿಸಿದ್ದು, ಈಗಾಗಲೇ ಎಂಟು ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದೆ. ತನಿಖೆ ಮುಂದುವರಿದಿದೆ," ಎಂದು ತಿಳಿಸಿದರು.
ತನಿಖಾಧಿಕಾರಿ ಪ್ರಣಬ್ ಮೊಹಂತಿ ಅವರ ಕೇಂದ್ರ ಸೇವಾ ನಿಯೋಜನೆಯ ವದಂತಿಗಳ ಕುರಿತು ಸ್ಪಷ್ಟನೆ ನೀಡಿದ ಅವರು, "ಆ ರೀತಿಯ ಯಾವುದೇ ಬೆಳವಣಿಗೆ ನಡೆದಿಲ್ಲ. ಪ್ರಣಬ್ ಮೊಹಂತಿ ಅವರು ಸದ್ಯ ಮಂಗಳೂರಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸೇವೆಗೆ ನಿಯೋಜನೆಗೊಳ್ಳಲು ತನ್ನದೇ ಆದ ಪ್ರಕ್ರಿಯೆಗಳಿದ್ದು, ಅದಕ್ಕೆ ಆರೇಳು ತಿಂಗಳು ಬೇಕಾಗುತ್ತದೆ. ಈ ಬಗ್ಗೆ ಗೃಹ ಸಚಿವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ," ಎಂದು ತಿಳಿಸಿದರು.
ಪ್ರಜ್ವಲ್ ರೇವಣ್ಣ ತೀರ್ಪಿನ ಬಗ್ಗೆ
ಪ್ರಜ್ವಲ್ ರೇವಣ್ಣ ಅವರನ್ನು ನ್ಯಾಯಾಲಯ ದೋಷಿ ಎಂದು ಘೋಷಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ಅದು ನ್ಯಾಯಾಲಯದ ತೀರ್ಪು, ನಮ್ಮ ತೀರ್ಪಲ್ಲ. ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು," ಎಂದು ಹೇಳಿದರು.
ರಾಹುಲ್ ಗಾಂಧಿ ಪ್ರತಿಭಟನೆಗೆ ಬೆಂಬಲ
ಚುನಾವಣಾ ಅಕ್ರಮಗಳ ವಿರುದ್ಧ ರಾಹುಲ್ ಗಾಂಧಿ ನಡೆಸುತ್ತಿರುವ ಪ್ರತಿಭಟನೆಯನ್ನು ಬಲವಾಗಿ ಸಮರ್ಥಿಸಿಕೊಂಡ ಸುರೇಶ್, "ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ ಈ ಪ್ರತಿಭಟನೆ ನಡೆಯುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮತಗಳ್ಳತನ ಮತ್ತು ದುರುಪಯೋಗ ಹೆಚ್ಚಾಗಿದೆ. ಬಿಹಾರದಲ್ಲಿ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣಾ ಆಯೋಗವು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ," ಎಂದು ಗಂಭೀರ ಆರೋಪ ಮಾಡಿದರು.
"ಕರ್ನಾಟಕದಲ್ಲಿಯೂ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದು, ಸೇರಿಸುವುದು ನಡೆದಿದೆ. 'ಚಿಲುಮೆ' ಸಂಸ್ಥೆಯ ಅಕ್ರಮಗಳು ಈಗಾಗಲೇ ಬಯಲಾಗಿವೆ. ಇಂತಹ ಅಕ್ರಮಗಳ ವಿರುದ್ಧವೇ ರಾಹುಲ್ ಗಾಂಧಿ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಬಿಜೆಪಿಗೆ ಏಕೆ ಭಯ? ಚುನಾವಣಾ ಆಯೋಗದಂತಹ ಸ್ವತಂತ್ರ ಸಂಸ್ಥೆಗಳು ಇಂದು ಬಿಜೆಪಿ ಕೈಗೊಂಬೆಯಾಗಿದ್ದು, ಸುಪ್ರೀಂಕೋರ್ಟ್ ಎಷ್ಟು ಬಾರಿ ಛೀಮಾರಿ ಹಾಕಿದರೂ ಅವರಿಗೆ ಮಾನ-ಮರ್ಯಾದೆ ಇಲ್ಲ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.